ಬೆಂಗಳೂರು, ಜು.26 www.bengaluruwire.com : ಮಳೆಗಾಲದಲ್ಲಿ ಭೂರಮೆಯ ಶೃಂಗಾರ ವರ್ಣಿಸಲು ಸಾಧ್ಯವಿಲ್ಲ. ವಿಶ್ವವಿಖ್ಯಾತ ನಂದಿ ಗಿರಿಧಾಮ ಮಳೆ, ಮಂಜು, ಚುಮು ಚುಮು ಚಳಿಯಿಂದ ಪ್ರಕೃತಿಯ ಸೊಬಗು ಮೇರೆ ಮೀರಿದೆ. ವಾರಾಂತ್ಯದಲ್ಲಿ ಜನರ ಭೇಟಿ ಜಾಸ್ತಿಯಾಗಿದೆ. ವಾರದ ದಿನಗಳಲ್ಲೂ ಬೆಳಗ್ಗೆ ಹೊತ್ತು ಪ್ರವಾಸಿಗರ ಸಂಖ್ಯೆ ಕಡಿಮೆಯಾಗಿಲ್ಲ.
ದೇವನಹಳ್ಳಿ, ಚಿಕ್ಕಬಳ್ಳಾಪುರದ ಕಡೆ ಮಳೆ ತುಂತುರು ಮಳೆ ಹನಿ ಸುರಿಯುತ್ತಿದ್ದರೆ ಸಮುದ್ರ ಮಟ್ಟದಿಂದ 4851 ಅಡಿ ಮೇಲ್ಭಾಗದಲ್ಲಿ 90 ಎಕರೆ ಪ್ರದೇಶವಿರುವ ನಂದಿಬೆಟ್ಟದಲ್ಲಿ ಸುಯ್ಯನೆ ಬೀಸುವ ಗಾಳಿಯ ಪರಿಗೆ ಹಿಮ- ಮಂಜಿನ ನಡುವೆ ನೀಲಗಿರಿ ಮತ್ತಿತರ ಮರಗಳು ಬಾಗುತ್ತಾ, ಬಳಕುತ್ತಿರುವುದನ್ನು, ತೋಟಗಾರಿಕೆ ಇಲಾಖೆ ಉತ್ತಮವಾಗಿ ನಿರ್ವಹಿಸುತ್ತಿರುವ ಉದ್ಯಾನವನವನ್ನು ಅಲ್ಲಿಗೆ ಭೇಟಿ ಕೊಡುವ ಪ್ರವಾಸಿಗರು ನೋಡುತ್ತಾ ಕಣ್ತುಂಬಿಕೊಳ್ಳುತ್ತಿದ್ದಾರೆ.
ಒಂದೇ ಸಮನೆ ಮಳೆ ಗಾಳಿ, ಮಂಜಿಗೆ ನಂದಿಬೆಟ್ಟದಲ್ಲಿನ ಮಂಗಗಳು, ರಕ್ಷಣೆಗಾಗಿ ಗಿರಿಧಾಮದ ಅತಿಥಿ ಗೃಹದ ಮಾಡಿನ ಕೆಳಗೆ ಒಟ್ಟಿಗೇ ನೆಲೆಸಿ, ಬೆಚ್ಚನೆಯ ಅನುಭವ ಪಡೆಯುತ್ತಿವೆ.
ವಾರದ ದಿನಗಳಲ್ಲೂ ಬೆಳಗ್ಗೆ 6 ಗಂಟೆಗೆ ನಂದಿಬೆಟ್ಟ ಮೇಲ್ಭಾಗ ಪ್ರವೇಶಕ್ಕೆ ಮಳೆಯನ್ನೂ ಲೆಕ್ಕಿಸದೆ ಬೆಂಗಳೂರು ಸುತ್ತಮುತ್ತಲ ಭಾಗಗಳಿಂದ ವಿದ್ಯಾರ್ಥಿಗಳು, ಸ್ನೇಹಿತರು, ಪ್ರೇಮಿಗಳು ದ್ವಿಚಕ್ರ ವಾಹನ, ಕಾರುಗಳಿಂದ ಭೇಟಿ ನೀಡುವುದನ್ಙು ಮಾತ್ರ ನಿಲ್ಲಿಸುತ್ತಿಲ್ಲ. ಇನ್ನು ವಾರಾಂತ್ಯದಲ್ಲಿ ನಂದಿಬೆಟ್ಟದ ರಸ್ತೆಯಲ್ಲಿ ಟ್ರಾಫಿಕ್ ಜಾಮ್ ಎಂಬುದು ಸಾಮಾನ್ಯವಂತಾಗಿದೆ. ಇನ್ನು ರಸ್ತೆಯ ಎರಡು ಬದಿ ವಿರುದ್ಧ ದಿಕ್ಕಿನಲ್ಲೂ ವಾಹನಗಳು ನಿಂತು ನಂದಿಬೆಟ್ಟದಿಂದ ಅತ್ತ ವಾಪಾಸ್ ಬರುವವರು ಕೆಳಗೆ ಬರಲು ಆಗದೆ, ಇತ್ತ ಕೆಳಗಿಂದ ಮೇಲೆ ಹೋದವರು ವಾಪಸ್ ಸಹ ಬರಲಾಗದೆ ಪರದಾಡುವಂತಾಗಿದೆ.
ಜೂನ್ ನಿಂದ ಜನವರಿ ತನಕ ಪ್ರವಾಸಿಗರ ಸೀಸನ್ :
ಮಳೆಗಾಲದಲ್ಲಿ ಜೂನ್ ನಿಂದ ಜನವರಿ ತನಕ ಬೆಳಗಿನ ಹೊತ್ತು ಜನ ಬರುತ್ತಾರೆ. ಮಂಜು ಮತ್ತು ಮಳೆ ನೋಡಲು ಪ್ರವಾಸಿಗರು ಇಲ್ಲಿಗೆ ಅಗಮಿಸುತ್ತಾರೆ. ವಾರದ ದಿನದಲ್ಲಿ 2,500 ನಿಂದ 3 ಸಾವಿರ ಜನ ಇರ್ತಾರೆ. ಒಂದು ಹಾಗೂ ನಾಲ್ಕನೇ ಶನಿವಾರ ರಜಾ ದಿನ ಬಂದರೆ ಅದರ ಹಿಂದಿನ ದಿನ ಶುಕ್ರವಾರ 3,500 – 4,000, ಶನಿವಾದರೆ 8 ರಿಂದ 10,000 ಜನ ಇಲ್ಲಿಗೆ . ಸಾಮಾನ್ಯ ದಿನಗಳಲ್ಲಿ ಶನಿವಾರ 7,000 ರಿಂದ 9,000, ಭಾನುವಾರ 12,000 ಜನ ಬರ್ತಾರೆ ಎಂದು ಹೇಳುತ್ತಾರೆ ನಂದಿ ಗಿರಿಧಾಮದ ಪ್ರವಾಸೋದ್ಯಮ ಅಭಿವೃದ್ಧಿ ನಿಗಮದ ವ್ಯವಸ್ಥಾಪಕ ಮನೋಜ್ ಹೇಳಿದ್ದಾರೆ.
ಗಿರಿಧಾಮದ ಪ್ರವೇಶದ್ವಾರದ ಹೊರಗೆ 300 ಕಾರಿಗೆ, 1,500 ಟೂವೀಲರ್ ನಿಲ್ಲಿಸಲು ಅವಕಾಶ ಕಲ್ಪಿಸಲಾಗಿದೆ. ಟೂ ವೀಲರ್ ನಲ್ಲಿ ಬರುವವರು ಜಾಸ್ತಿ. ಸೂರ್ಯೋದಯಕ್ಕೆ ವೀಕ್ಷಿಸಲೆಂದು ಬೆಳಗ್ಗೆ 5.30 ರಿಂದ 10ರ ತನಕ ಬರುವವರು ಜಾಸ್ತಿ. ಗಾಂಧಿ ಭವನ, ನೆಹರು ಅತಿಥಿ ಗೃಹಗಳಲ್ಲಿ 34 ಕೊಠಡಿಗಳಿರುತ್ತೆ. ವಾರಾಂತ್ಯ ಎಲ್ಲ ರೂಮು ಬುಕಿಂಗ್ ಇರುತ್ತೆ. ಸರ್ಕ್ಯೂಟ್ ಫಿಸಿಬಿಲಿಟಿ ಅಧ್ಯಯನ ಆಗುತ್ತಿದೆ ಎಂದು ಅವರು ತಿಳಿಸಿದ್ದಾರೆ.
ರೋಪ್ ವೇ – ಸರ್ಕೀಟ್ ಪ್ರವಾಸ :
ವಿಶೇಷವಾಗಿ ನಂದಿಗಿರಿಧಾಮವನ್ನು ಕೇಂದ್ರವಾಗಿ ಇಟ್ಟುಕೊಂಡು ಪ್ರವಾಸೋದ್ಯಮ ಉತ್ತೇಜಿಸುವ ನಿಟ್ಟಿನಲ್ಲಿ ರೋಪ್ ವೇ ಹಾಗೂ ದೇವನಹಳ್ಳಿ ವಿಮಾನ ನಿಲ್ದಾಣದಿಂದ ನಂದಿಬೆಟ್ಟಕ್ಕೆ ಪ್ರವಾಸಿ ಸರ್ಕಿಟ್ ರೂಪಿಸಲು ಯೋಜನೆಗಳನ್ನು ಪ್ರವಾಸೋದ್ಯಮ ಇಲಾಖೆ ರೂಪಿಸುತ್ತಿವೆ ಅಲ್ಲದೆ ಸರ್ಕಾರ ರಚಿಸುತ್ತಿರುವ ನೂತನ ಪ್ರವಾಸೋದ್ಯಮ ನೀತಿಯಲ್ಲಿ ಈ ಅಂಶ ಅಡಕವಾಗಿದೆ ಎಂದು ಮೂಲಗಳು ತಿಳಿಸಿವೆ. ಈ ಪ್ರವಾಸಿ ಸರ್ಕಿಟ್‌ನಿಂದ ನಂದಿಗಿರಿಧಾಮವಷ್ಟೇ ಅಲ್ಲ ಚಿಕ್ಕಬಳ್ಳಾಪುರಕ್ಕೆ ಹೊಂದಿಕೊಂಡಿರುವ ಪ್ರವಾಸಿ ತಾಣಗಳು ಅಭಿವೃದ್ಧಿಗೊಳ್ಳುವ ಸಾಧ್ಯತೆ ಹೆಚ್ಚಿದೆ.
ಹೇಗಿರುತ್ತೆ ಪ್ರವಾಸಿ ಸರ್ಕಿಟ್? :
ವಿಮಾನ ನಿಲ್ದಾಣದಿಂದ ವಿವಿಧ ಕಡೆಗಳಿಗೆ ಪ್ರಯಾಣ ಬೆಳೆಸುವ ಪ್ರವಾಸಿಗರನ್ನು ದೃಷ್ಟಿಯಲ್ಲಿ ಇಟ್ಟುಕೊಂಡು ಎಂಟು ಮತ್ತು ನಾಲ್ಕು ಗಂಟೆಗಳ ಈ ಪ್ರವಾಸಿ ಸರ್ಕಿಟ್ ಯೋಜನೆ ಸಿದ್ಧವಾಗುತ್ತಿದೆ. ನಾಲ್ಕು ಗಂಟೆ ಪ್ರವಾಸಿ ಸರ್ಕಿಟ್ ಪ್ಯಾಕೇಜ್ ನಲ್ಲಿ ದೇವನಹಳ್ಳಿಯ ಟಿಪ್ಪು ಜನಿಸಿದ ಕೋಟೆ, ಸ್ಥಳದಿಂದ ಪ್ರವಾಸ ಆರಂಭವಾಗುತ್ತೆ. ಅಲ್ಲಿಂದ ನಂದಿ ಗಿರಿಧಾಮ, ನಂದಿ ಗ್ರಾಮದ ಭೋಗ ನಂದೀಶ್ವರ ದೇವಾಲಯ, ಕಣಿವೆ ಬಸವಣ್ಣ ಮತ್ತು ಭಾರತ ರತ್ನ ಸರ್.ಎಂ.ವಿಶ್ವೇಶ್ವರಯ್ಯ ಅವರ ಜನ್ಮಸ್ಥಳ ಮುದ್ದೇನಹಳ್ಳಿ ವೀಕ್ಷಿಸಬಹುದು. ಈ ಎಲ್ಲ ಸ್ಥಳಗಳಲ್ಲಿ ವೀಕ್ಷಿಸಿ ವಾಪಸ್ ವಿಮಾನ ನಿಲ್ದಾಣ ತಲುಪಲು ನಾಲ್ಕು ತಾಸುಗಳ ಕಾಲಮಿತಿ ಇರುತ್ತದೆ. ಇನ್ನು ಎಂಟು ಗಂಟೆಯ ಪ್ರವಾಸಿ ಸರ್ಕಿಟ್‌ನಲ್ಲಿ ಈ ಮೇಲಿನ ಸ್ಥಳಗಳ ಜೊತೆಗೆ ರಂಗಸ್ಥಳ, ಈಶ ಯೋಗ ಕೇಂದ್ರವೂ ಇರಲಿದೆ. ಯಾವಾಗ ಈ ವ್ಯವಸ್ಥೆ ಜಾರಿಗೆ ಬರುವುದೋ ಕಾದು ನೋಡಬೇಕು.