ಬೆಂಗಳೂರು, ಜು.24 www.bengaluruwire.com : ಕೆಂಪೇಗೌಡ ಬಡಾವಣೆಯಲ್ಲಿ ಹಂಚಿಕೆಯಾದ ಸೈಟ್ ಗಳ ನಿವೇಶನದಾರರಿಂದ ನಿವೇಶನ ಮೌಲ್ಯದಲ್ಲಿ ಎಲ್ಲಾ ಶುಲ್ಕವನ್ನು ತೆಗೆದುಕೊಳ್ಳಲಾಗಿದೆ ಎಂದು ಸರ್ಕಾರವೇ ವಿಧಾನಸಭೆ ಅಧಿವೇಶನದಲ್ಲಿ ಇತ್ತೀಚೆಗೆ ಶಾಸಕ ಸುರೇಶ್ ಕುಮಾರ್ ಅವರ ಪ್ರಶ್ನಗೆ ಉತ್ತರಿಸುವ ಸಂದರ್ಭದಲ್ಲಿ ಹೇಳುತ್ತಿದೆ. ಆದರೆ ಬಿಡಿಎ ನಿವೇಶನದಾರರಿಂದ ದುಡ್ಡು ಮಾಡಲು ಮತ್ತೊಮ್ಮೆ ಅನವಶ್ಯಕವಾಗಿ ಹೊಸ ರೂಪದಲ್ಲಿ ಹೆಚ್ಚುವರಿ ಶುಲ್ಕ ಮಾಡುತ್ತಿರುವ ಬಗ್ಗೆ ಕೆಂಪೇಗೌಡ ಬಡಾವಣೆ ಮುಕ್ತ ವೇದಿಕೆ ವಿರೋಧ ವ್ಯಕ್ತಪಡಿಸಿದೆ.
ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ (BDA) ಕೆಂಪೇಗೌಡ ಬಡಾವಣೆ ಹಂಚಿಕೆದಾರರಿಂದ ನಿವೇಶನ ಅಲಾಟ್ ಮೆಂಟ್ ಮಾಡುವಾಗಲೇ ನಿವೇಶನದ ಮೌಲ್ಯ ಮತ್ತು ಅಭಿವೃದ್ಧಿ ಶುಲ್ಕಗಳನ್ನು ಸೇರಿಸಿ ಕಟ್ಟಿಸಿಕೊಂಡಿರುವುದಾಗಿ ವಿಧಾನಸಭೆ ಕಲಾಪದಲ್ಲಿ ಶಾಸಕ ಸುರೇಶ್ ಕುಮಾರ್ ಅವರ ಪ್ರಶ್ನೆಗೆ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಉತ್ತರಿಸಿದ್ದಾರೆ. ಇನ್ನೊಂದೆಡೆ ನಿವೇಶನದಾರರಿಂದ ಮೂಲ ಸೌಕರ್ಯ ಕಲ್ಪಿಸಲು ಹೆಚ್ಚುವರಿಯಾಗಿ ಶುಲ್ಕ ಸಂಗ್ರಹಿಸುತ್ತಿರುವುದನ್ನು ಒಪ್ಪಿಕೊಂಡಿದೆ. ಈ ಮೂಲಕ ಬಿಡಿಎನ ದ್ವಂಧ್ವ ನೀತಿ ಅನುಸರಿಸುತ್ತಿರುವುದು ಕಂಡು ಬಂದಿದೆ ಎಂದು ಮುಕ್ತ ವೇದಿಕೆ ಟೀಕಿಸಿದೆ.
ಹೆಚ್ಚುವರಿಯಾಗಿ 31 ಸಾವಿರ ರೂ. ಶುಲ್ಕ ಸಂಗ್ರಹಕ್ಕೆ ನಿವೇಶನದಾರರ ಬೇಸರ :
ಪ್ರಾಧಿಕಾರದ ಎಲ್ಲಾ ಹಳೆಯ ಬಡಾವಣೆಗಳಲ್ಲಿ ವಿದ್ಯುತ್, ನೀರು ಮತ್ತು ಒಳಚರಂಡಿಗಾಗಿ ರಸ್ತೆ ಅಗೆಯುವುದು ಅನಿವಾರ್ಯ. ಇದರಿಂದ ಹಾನಿಗೊಳಗಾಗುವ ರಸ್ತೆಯನ್ನು ಸುಸ್ಥಿತಿಗೆ ತರಲು ಮನೆ ಕಟ್ಟುವವರಿಂದ ಶುಲ್ಕವನ್ನು ಪಡೆಯುವುದು ಸರಿ. ಆದರೆ ರಸ್ತೆಯನ್ನು ಅಗೆಯಲು ತಡೆಯಲು ನಾಡಪ್ರಭು ಕೆಂಪೇಗೌಡ ಬಡಾವಣೆಯಲ್ಲಿ ಈಗಾಗಲೇ ಆ ಎಲ್ಲ ಸೌಲಭ್ಯಗಳಿಗಾಗಿ ಅಂತರ್ಗತ ಕಾಮಗಾರಿಗಳಿಗೆ ಆಗುವ ಎಲ್ಲಾ ಖರ್ಚುಗಳನ್ನು ಒಳಗೊಂಡಂತಹ ನಿವೇಶನದ ಬೆಲೆಯನ್ನು ನಿವೇಶನದಾರರಿಂದ ಪಡೆದು ಕೂಡ ಮತ್ತೊಮ್ಮೆ ಹೆಚ್ಚುವರಿ 31,000 ರೂಪಾಯಿಗಳನ್ನು ಪಡೆಯುತ್ತಿರುವುದು ಸರಿಯಲ್ಲ.
ಕಟ್ಟಡದ ನಿರ್ಮಾಣ ಯೋಜನೆ ಮಂಜೂರಾತಿಗಾಗಿ ನಮ್ಮ ಕೆಲವು ಸದಸ್ಯರು ಅಭಿಯಂತರ ವಿಭಾಗವನ್ನು ಸಂಪರ್ಕಿಸಿದಾಗ ಯೋಜನೆ ಅನುಮೋದನೆಗೆ ಮನೆ ನಿರ್ಮಾಣದ ಎಸ್ಟಿಮೇಶನ್ ಶೇ.1ರಷ್ಟು ಶುಲ್ಕಗಳೊಂದಿಗೆ ಹೆಚ್ಚುರಿಯಾಗಿ ಸುಮಾರು 31,000 ರೂ. ಅನ್ನು ರಸ್ತೆ ಕಟಿಂಗ್ ಶುಲ್ಕವನ್ನು ಪಾವತಿಸಬೇಕು ಎಂದು ಈ ನಡುವೆ ತಿಳಿಸುತ್ತಿದ್ದಾರೆ. ರಸ್ತೆ ಕಟಿಂಗ್ ಶುಲ್ಕವು ಈ ಮೊದಲು ಇದೇ ಬಡಾವಣೆಯಲ್ಲಿ ಅನುಮೋದನೆಗಳನ್ನು ಪಡೆದಿರುವ ನಿವೇಶನದಾರರಿಗೆ ಶುಲ್ಕ ವಿಧಿಸಿರುವುದಿಲ್ಲ ಎಂದು ಕೆಂಪೇಗೌಡ ಬಡಾವಣೆ ಮುಕ್ತ ವೇದಿಕೆ ಅಧ್ಯಕ್ಷ ಚನ್ನಬಸವರಾಜ ಅವರು ಬೆಂಗಳೂರು ವೈರ್ ಗೆ ತಿಳಿಸಿದ್ದಾರೆ.
ನಿವೇಶನಗಳಿಗೆ ಮಾರುಕಟ್ಟೆ ದರಕ್ಕಿಂತ ಹೆಚ್ಚಿನ ದರ ಸಂಗ್ರಹಿಸಿದೆ ಬಿಡಿಎ :
ಪ್ರಾಧಿಕಾರವು ನಾಡಪ್ರಭು ಕೆಂಪೇಗೌಡ ಬಡಾವಣೆ ಯೋಜನೆಯು ಅತ್ಯಾಧುನಿಕ ಮೂಲಭೂತ ಸೌಕರ್ಯಗಳನ್ನು ಒಳಗೊಂಡ ಬಡಾವಣೆಯಾಗಿ ನಿರ್ಮಿಸುವ ದ್ಯೆಯೋದ್ದೇಶಗಳಿಂದ ಬಡಾವಣೆಯ ಯೋಜಿತ ಎಲ್ಲಾ ಅಂತರ್ಗತ ಮೂಲಭೂತ ಸೌಕರ್ಯಗಳಿಗೆ ತಗಲುವ ವೆಚ್ಚಗಳೊಂದಿಗೆ ಮತ್ತಿತರ ಎಲ್ಲಾ ವೆಚ್ಚಗಳನ್ನು ಸೇರಿಸಿ ನಿವೇಶನಗಳಿಗೆ ಮಾರುಕಟ್ಟೆ ದರಕ್ಕಿಂತ ಹೆಚ್ಚಿನ ದರವನ್ನು ನಿಗದಿಪಡಿಸಿ 2016, 2018ರ ಇಸವಿಯಲ್ಲಿಯೇ ಮುಂಚಿತವಾಗಿ ನಿವೇಶನದಾರರಿಂದ ಪಡೆದುಕೊಳ್ಳಲಾಗಿತ್ತು.
ರಸ್ತೆಯನ್ನು ಅಗೆದು ಹಾಳು ಮಾಡುವುದನ್ನು ತಪ್ಪಿಸಲು ಪ್ರತಿಯೊಂದು ನಿವೇಶನಗಳಿಗೂ ಭೂಗತ ವಿದ್ಯುತ್, ನೀರು, ಒಳಚರಂಡಿ ಸಂಪರ್ಕಗಳನ್ನು ಒದಗಿಸುವ ಕಾಮಗಾರಿಗಳನ್ನು ಮಾಡಲಾಗಿರುತ್ತದೆ.ಇದರಿಂದಾಗಿ ಕಟ್ಟಡ ನಿರ್ಮಿಸುವವರು ಈ ಮೂಲಭೂತ ಸೌಕರ್ಯಗಳ ಸಂಪರ್ಕಗಳಿಗಾಗಿ ರಸ್ತೆ ಅಗೆಯುವ ಅವಶ್ಯಕತೆ , ಪ್ರಮೇಯವೇ ಬರುವುದಿಲ್ಲ. ಆದರೆ ಈ ನಡುವೆ ರಸ್ತೆ ಪುನಶ್ಚೇತನಕ್ಕೆ ಎಂದು ಹೆಚ್ಚುವರಿಯಾಗಿ 31,000 ರೂಪಾಯಿಗಳನ್ನು ಪಡೆಯುತ್ತಿರುವುದು ಖಂಡನಾರ್ಹ ಎಂದು ಅವರು ಹೇಳಿದ್ದಾರೆ.
ಬಿಡಿಎ ಹೆಚ್ಚುವರಿ ಶುಲ್ಕ ಸಂಗ್ರಹ ಪಡೆಯದಂತೆ ಸಿಎಂಗೆ ಮನವಿ :
ಈ ಮಧ್ಯೆ ಕೆಂಪೇಗೌಡ ಬಡಾವಣೆಯ ನಿವೇಶನ ಹಂಚಿಕೆದಾರರಿಂದ ಮೂಲಸೌಕರ್ಯ ಕಲ್ಪಿಸಿದ್ದಕ್ಕಾಗಿ ಹೆಚ್ಚುವರಿ ಶುಲ್ಕವನ್ನು ಪಡೆಯುವುದನ್ನು ನಿಲ್ಲಿಸುವಂತೆ ಹಾಗೂ ಎಂಟು ವರ್ಷಗಳ ನಂತರ ಬಿಡಿಎ ಅನಗತ್ಯ ಶುಲ್ಕಗಳನ್ನು ಹಂಚಿಕೆದಾರಿಗೆ ವಿಧಿಸಬಾರದೆಂದು ಸಂಬಂಧಿಸಿದ ಅಧಿಕಾರಿಗಳಿಗೆ ನಿರ್ದೇಶಸುವಂತೆ ಮುಕ್ತ ವೇದಿಕೆಯು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಇದೇ ಮೇ 14ರಂದು ಪತ್ರ ಬರೆದು ಮನವಿ ಮಾಡಿತ್ತು. ಈ ಮಧ್ಯೆ ನಾಡಪ್ರಭು ಕೆಂಪೇಗೌಡ ಬಡಾವಣೆಯಲ್ಲಿ ಹೆಚ್ಚುವರಿ ಶುಲ್ಕ ಸಂಗ್ರಹದ ಬಗ್ಗೆ ಬಡಾವಣೆಯ ನಾಗರೀಕರೊಬ್ಬರು ಆರ್ ಟಿಐ ಮೂಲಕ ಕೇಳಿದ ಮಾಹಿತಿಗೆ ಬಿಡಿಎ ಅಧಿಕಾರಿಗಳು ಹೆಚ್ಚುವರಿ ಶುಲ್ಕ ಸಂಗ್ರಹ ಮಾಡುವುದನ್ನು ಸಮರ್ಥಿಸಿಕೊಂಡಿದ್ದಾರೆ.
“ನಾಡಪ್ರಭು ಕೆಂಪೇಗೌಡ ಬಡಾವಣೆಯಲ್ಲಿ ಹಂಚಿಕೆಯಾಗಿರುವ ನಿವೇಶನಗಳಲ್ಲಿ ಮನೆ ಕಟ್ಟಲು ಕುಡಿಯುವ ನೀರು, ಒಳಚರಂಡಿ ಹಾಗೂ ಶುದ್ದೀಕರಿಸಿದ ನೀರಿನ ಸಂಪರ್ಕ ಪಡೆಯಲು ನಿವೇಶನದಾರರು ಯಾವುದೇ ರಸ್ತೆ ಅಗೆತದ ಶುಲ್ಕಗಳನ್ನು ಪಾವತಿಸದಂತೆ ಈ ಯೋಜನೆಯಲ್ಲಿ ಎಲ್ಲಾ ಮೂಲಭೂತ ಸೌಕರ್ಯಗಳಿಗೆ ರಸ್ತೆ ಅಗೆತವಿಲ್ಲದೇ ಸಂಪರ್ಕವನ್ನು ನಿವೇಶನಕ್ಕೆ ಒದಗಿಸುವ ವ್ಯವಸ್ಥೆಯನ್ನು ಮಾಡಲಾಗಿರುತ್ತದೆ. ಈ ವ್ಯವಸ್ಥೆಗೆ ಪ್ರಾಧಿಕಾರದಿಂದ ಹಣವನ್ನು ವ್ಯಯಿಸಲಾಗಿರುತ್ತದೆ.”
“ಇದೇ ರಸ್ತೆಯು ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯ ವ್ಯಾಪ್ತಿಯಲ್ಲಿದ್ದರೆ ರಸ್ತೆಯ ಆಗೆತಕ್ಕಾಗಿ (ನೀರಿನ ವ್ಯವಸ್ಥೆ, ಶುದ್ದೀಕರಿಸಿದ ನೀರಿನ ವ್ಯವಸ್ಥೆ ಹಾಗೂ ಒಳಚರಂಡಿ ಸಂಪರ್ಕಕ್ಕೆ) ಬಿಬಿಎಂಪಿಗೆ ಸುಮಾರು ಅಂದಾಜು ರಸ್ತೆಗಳಿಗೆ ಅನುಗುಣವಾಗಿ 20,000 ರೂ. ಹಣವನ್ನು ಪಾವತಿಸಿ.
ಹೆಚ್ಚುವರಿಯಾಗಿ ಸಂಪರ್ಕಕ್ಕೆ ಸಂಬಂಧಿಸಿದ ಪೈಪ್ ಮತ್ತು ಇತರೆ ಸಾಮಾಗ್ರಿಗಳಿಗೆ ಹಣ ವ್ಯಯ ಮಾಡಬೇಕಾಗಿರುತ್ತದೆ. ಈ ವ್ಯವಸ್ಥೆಯನ್ನು ಪ್ರಾಧಿಕಾರದಿಂದ ಕಲ್ಪಿಸಲಾಗಿರುವುದರಿಂದ, ಈ ಹಣವನ್ನು ನಿವೇಶನದಾರರಿಂದ (ಮನೆ ಕಟ್ಟುವವರಿಂದ) ಪುನರ್ ಪಡೆಯುವ ಅವಶ್ಯಕತೆಯಿರುತ್ತದೆ ಹಾಗೂ ಈ ಹಣವನ್ನು ನಿವೇಶನದಾರರಿಗೆ ಒಂದು ಸಲದ ಸಂಪರ್ಕ ವ್ಯವಸ್ಥೆಗಾಗಿ 31,000 ರೂ.ಗಳನ್ನು ಹಾಗೂ ಪ್ರತ್ಯೇಕವಾಗಿ ಪ್ರೊರೇಟಾ ಚಾರ್ಜಸ್ (Prorate Charges) ಗಳನ್ನು ನಿವೇಶನಗಳ ಅಳತೆಗೆ ತಕ್ಕಂತೆ ಹಾಗೂ ನಿವೇಶನದ ಕಟ್ಟಡದ ವಿಸ್ತೀರ್ಣಗಳನ್ನು ಪರಿಗಣಿಸಿ, ಕಟ್ಟಡಕ್ಕೆ ಬೇಕಾಗಿರುವ ನೀರಿನ ಸಂಪರ್ಕದ ಆಳತೆಯ ಮೇಲೆ (Class of connection from Simm to 100mm) ಹಣವನ್ನು ಪಾವತಿಸಬೇಕಾಗಿರುತ್ತದೆ” ಎಂದು ಆರ್ ಟಿಐ ಗೆ ನೀಡಿದ ಉತ್ತರದಲ್ಲಿ ಬಿಡಿಎ ಮಾಹಿತಿ ನೀಡಿದೆ.
ನಾಡಪ್ರಭು ಕೆಂಪೇಗೌಡ ಬಡಾವಣೆಯಲ್ಲಿ ಇನ್ನೂ ಮೂಲಸೌಕರ್ಯ ಕಾಮಗಾರಿ ಪೂರ್ಣಗೊಂಡು ರಸ್ತೆಗಳ ಡಾಂಬರೀಕರಣ ಆಗಿರುವುದಿಲ್ಲ. ಆದರೆ ಬಿಡಿಎ ಫೆಬ್ರವರಿ 2024ರಿಂದ ಮೂಲ ಸೌಕರ್ಯದ ಭಾಗವಾಗಿರುವ ನೀರಿನ ಮತ್ತು ಒಳಚರಂಡಿ ಸಂಪರ್ಕಕ್ಕೆ ಹೊಸ ಶುಲ್ಕ ವಿಧಿಸುತ್ತಿದೆ. ಪ್ರಾಧಿಕಾರವು ಹೊಸ ಹೆಸರಿನಲ್ಲಿ ಶುಲ್ಕವನ್ನು ವಿಧಿಸಲು ಪ್ರಾರಂಭಿಸಿದರೆ ಪ್ರತಿ ವರ್ಷ ನಿವೇಶನ ಮಾಲೀಕರು ಕಟ್ಟುವ ತೆರಿಗೆಗಳು ಈಗಾಗಲೇ ಬಡಾವಣೆ ಮೂಲ ಸೌಕರ್ಯ ನಿರ್ವಹಣೆಗಾಗಿ ಅಲ್ಲವೇ? ಸೇವೆಯನ್ನೇ ನೀಡದೆ ಹಣ ಪಡೆಯುವುದು ಯಾವ ನ್ಯಾಯ? ಎಂದು ಮುಕ್ತ ವೇದಿಕೆಯ ಅಧ್ಯಕ್ಷ ಚನ್ನಬಸವರಾಜ ಪ್ರಶ್ನಸಿದ್ದಾರೆ.
ನೀರಿನ ಮೀಟರ್ ಅಳವಡಿಸುವುದಿಲ್ಲ, ನೀರು ಮತ್ತು ಒಳಚರಂಡಿ ಸಂಪರ್ಕಗಳನ್ನು ಮನೆ ಕಟ್ಟಿದ ನಂತರವೇ ಸಕ್ರಿಯಗೊಳಿಸಲಾಗುತ್ತ ಎಂದು ಹೇಳಲಾಗುತ್ತಿದೆ. ಆದರೆ ಸಂಪರ್ಕ ಶುಲ್ಕವನ್ನು ಮನೆ ಕಟ್ಟುವ ಯೋಜನೆಯ ಅನುಮೋದನೆಯ ಶುಲ್ಕದೊಂದಿಗೆ ಪಾವತಿಸಬೇಕು. ಈ ಕ್ರಮ ಸರಿಯಲ್ಲ ಎಂದು ಅವರು ಟೀಕಿಸಿದ್ದಾರೆ.