ಬೆಂಗಳೂರು, ಜೂ.27 www.bengaluruwire.com : ಕೆಂಪೇಗೌಡರು ಯಾವುದೇ ಜಾತಿಗೆ ಸೀಮಿತವಾದವರಲ್ಲ. ಜಾತ್ಯಾತೀತರಾಗಿ ಅವರು ಬದುಕಿದಂತೆ ಸಮಾಜದ ಎಲ್ಲಾ ಜನರು ಬದುಕಿ ಅವರನ್ನು ಸ್ಮರಿಸಬೇಕು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದರು.
ಅವರು ಇಂದು ನಾಡಪ್ರಭು ಕೆಂಪೇಗೌಡ ಪಾಪಂಪರಿಕ ತಾಣ ಅಭಿವೃದ್ಧಿ ಪ್ರಾಧಿಕಾರ, ಬಿಬಿಎಂಪಿ ಹಾಗೂ ಕನ್ನಡ ಸಂಸ್ಕೃತಿ ಇಲಾಖೆ ಕಂಠೀರವ ಒಳಾಂಗಣ ಕ್ರೀಡಾಂಗಣದಲ್ಲಿ ಆಯೋಜಿಸಲಾಗಿದ್ದ ನಾಡಪ್ರಭು ಕೆಂಪೇಗೌಡರ 515 ನೇ ಜಯಂತಿ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.
ನಾಡಿನ ಜನತೆ ಕೆಂಪೇಗೌಡರ ದಿನಾಚರಣೆಯನ್ನು ಆಚರಿಸಿ ಸಂಭ್ರಮಿಸುವುದಲ್ಲದೇ ಕೆಂಪೇಗೌಡರು ಸಮಾಜಮುಖಿಯಾಗಿ ಕೆಲಸ ಮಾಡಿದಂತೆ ಪ್ರತಿಯೊಬ್ಬರೂ ಇದೇ ದಾರಿಯಲ್ಲಿ ಸಾಗಿ, ವಿಶ್ವಮಾನವರಾಗಲು ಪ್ರಾಮಾಣಿಕ ಪ್ರಯತ್ನ ಮಾಡಬೇಕೆಂಬ ಕಾರಣದಿಂದ ಕೆಂಪೇಗೌಡರ ಜಯಂತಿ ಆಚರಿಸಲಾಗುತ್ತಿದೆ ಎಂದರು.
ಇದೇ ಸಂದರ್ಭದಲ್ಲಿ ಮುಖ್ಯಮಂತ್ರಿಗಳು ಕೆಂಪೇಗೌಡ ಪ್ರಶಸ್ತಿ ಪುರಸ್ಕೃತರನ್ನು ಅಭಿನಂದಿಸಿದರು. ಆದಿಚುಂಚನಗಿರಿ ಮಹಾಸಂಸ್ಥಾನದ ಮಠದ ನಿರ್ಮಲಾನಂದನಾಥ ಸ್ವಾಮೀಜಿ, ವಿಶ್ವ ಒಕ್ಕಲಿಗರ ಮಹಾಸಂಸ್ಥಾನದ ಚಂದ್ರಶೇಖರ್ ಸ್ವಾಮೀಜಿ , ಗುರುಗುಂಡ ಬ್ರಹ್ಮೇಶ್ವರ ಸ್ವಾಮಿ ಮಹಾಸಂಸ್ತಾನ ಮಠದ ನಂಜಾವಧೂತ ಸ್ವಾಮೀಜಿ, ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್, ಸಚಿವರಾದ ಶಿವರಾಜ್ ತಂಗಡಗಿ, ಕೆ.ಹೆಚ್ .ಮುನಿಯಪ್ಪ, ಕೃಷ್ಣಬೈರೇಗೌಡ, ಶಾಸಕ ರಿಜ್ವಾನ್ ಅರ್ಷದ್, ಮೇಲ್ಮನೆ ಸದಸ್ಯ ಸಲೀಂ ಅಹ್ಮದ್, ರಾಮೋಜಿ ಗೌಡ, ಪುಟ್ಟಣ್ಣ, ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿ ಗೋವಿಂದರಾಜು, ಶಾಸಕ ವಿಶ್ವನಾಥ್, ಒಕ್ಕಲಿಗರ ಸಂಘದ ಅಧ್ಯಕ್ಷ ಹನುಮಂತಯ್ಯ ಮೊದಲಾದವರು ಉಪಸ್ಥಿತರಿದ್ದರು.
ಸಿಎಂ ಇಂದು ದೆಹಲಿಗೆ ಪ್ರಯಾಣ :
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಇಂದು ದೆಹಲಿಗೆ ಪ್ರಯಾಣ ಬೆಳೆಸಿದ್ದು, ಜೂನ್ 29ರಂದು 8 ಗಂಟೆಗೆ ಪ್ರಧಾನಮಂತ್ರಿ ಪ್ರಧಾನಮಂತ್ರಿ ನರೇಂದ್ರ ಮೋದಿ ಭೇಟಿಗೆ ಸಮಯ ನಿಗದಿಯಾಗಿದೆ.
ರಾಜ್ಯದಿಂದ ಗೆದ್ದಿರುವ ಎಲ್ಲಾ ಲೋಕಸಭಾ ಹಾಗು ರಾಜ್ಯಸಭಾ ಸದಸ್ಯರನ್ನು ಹಾಗೂ ಕೇಂದ್ರದ ಮಂತ್ರಿಗಳನ್ನು ಭೇಟಿ ಮಾಡಲಾಗುವುದು. ಕೇಂದ್ರದಲ್ಲಿ ರಾಜ್ಯ ಸರ್ಕಾರದ ಯೋಜನೆಗಳ ಪಟ್ಟಿ ನೀಡಿ ರಾಜ್ಯ ಸರ್ಕಾರದ ಪರವಾಗಿ ಎಲ್ಲರೂ ಈ ಯೋಜನೆಗಳನ್ನು ಮಂಜೂರು ಮಾಡಿಸುವುದು, ಹಣ ಬಿಡುಗಡೆ ಮಾಡಿಸುವುದು, ಸಂಪನ್ಮೂಲ ಹೆಚ್ಚು ಮಾಡಲು ಪ್ರಯತ್ನಪಡಬೇಕೆಂದು ತಿಳಿಸಲು ನೂತನ ಸಂಸದರನ್ನು ಭೇಟಿ ಮಾಡಲಾಗುವುದು ಎಂದರು.
ಕೇಂದ್ರ ಸಚಿವರ ಭೇಟಿ :
ವಿಶೇಷವಾಗಿ ನಮ್ಮ ಸಚಿವರೂ ಕೂಡ ಜೊತೆಗೂಡಿದ್ದು, ಪ್ರಧಾನಮಂತ್ರಿ ಭೂಸಾರಿಗೆ ಸಚಿವರು, ರೈಲ್ವೆ, ನೀರಾವರಿ, ಗೃಹ ಸಚಿವರು ಹಾಗೂ ಹಣಕಾಸು ಸಚಿವರನ್ನು ಭೇಟಿ ಮಾಡಲಿರುವುದಾಗಿ ಹೇಳಿದರು. ಗೃಹಸಚಿವರ ಭೇಟಿಗೆ ಇನ್ನೂ ಸಮಯ ನಿಗದಿಮಾಡಿಲ್ಲ. ಶೀಘ್ರವೇ ಮಾಡುತ್ತಾರೆ. ನಿತಿನ್ ಗಡ್ಕರಿಯವರು ಸಮಯ ನಿಗದಿ ಮಾಡಿದ್ದಾರೆ ಎಂದು ಹೇಳಿದರು.
ರಾಜ್ಯದಲ್ಲಿನ ಕೆಲಸಗಳ ಪಟ್ಟಿ ಕಳುಹಿಸಲಾಗಿದೆ :
ಹೊಸ ಸರ್ಕಾರದಿಂದ ಮಂಡಿಸಲಾಗುವ ಬಜೆಟ್ ನಲ್ಲಿ ಕರ್ನಾಟಕ ನಿರೀಕ್ಷೆ ಮಾಡುವ ಕೆಲಸಗಳ ಪಟ್ಟಿಯನ್ನು ಕಂದಾಯ ಸಚಿವರು ಈಗಾಗಲೇ ಮಂಡಿಸಿದ್ದಾರೆ ಎಂದು ತಿಳಿಸಿದರು.
ರಾಹುಲ್ ಗಾಂಧಿ ಜನರ ಧ್ವನಿಯಾಗಿ ಜವಾಬ್ದಾರಿ :
ರಾಹುಲ್ ಗಾಂಧಿ ಹಾಗೂ ಪ್ರಧಾನಿಗಳು ಮೊದಲ ಬಾರಿಗೆ ಲೋಕಸಭಾಧ್ಯಕ್ಷರನ್ನು ಒಟ್ಟಿಗೆ ಭೇಟಿ ಮಾಡಿರುವ ಬಗ್ಗೆ ಪ್ರತಿಕ್ರಿಯೆ ನೀಡಿ ಪ್ರಧಾನಿಗಳು ಹಾಗು ವಿಪಕ್ಷ ನಾಯಕ ಜೊತೆಗೆ ಹೋಗಿ ಅವರ ಪೀಠದ ಮೇಲೆ ಕುಳ್ಳಿರಿಸಿ ಶುಭಾಶಯ ಹೇಳುವುದು ಮೊದಲಿನಿಂದಲೂ ನಡೆದುಬಂದಿರುವ ಸಂಪ್ರದಾಯ. ಅದರಂತೆ ನಡೆದುಕೊಂಡಿದ್ದಾರೆ. ನರೇಂದ್ರಮೋದಿ ಮೂರನೇ ಬಾರಿಗೆ ಪ್ರಧಾನಿಗಳಾಗಿದ್ದಾರೆ. ರಾಹುಲ್ ಗಾಂಧಿ ಇಡೀ ದೇಶವನ್ನು ಪಾದಯಾತ್ರೆ ಮೂಲಕ ಸುತ್ತಿದ್ದಾರೆ. ಅವರಿಗೆ ದೇಶದ ಸಮಸ್ಯೆಗಳ ಬಗ್ಗೆ ಅರಿವಿದೆ. ಈ ಸಮಸ್ಯೆಗಳನ್ನು ಪ್ರಸ್ತಾಪ ಮಾಡಿ, ಜನರ ಧ್ವನಿಯಾಗಿ ಸಮರ್ಥವಾಗಿ ಅವರ ಜವಾಬ್ದಾರಿಯನ್ನು ನಿಭಾಯಿಸುತ್ತಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.