ನವದೆಹಲಿ, ಜೂ.26 www.bengaluruwire.com : ಹದಿನೆಂಟನೇ ಲೋಕಸಭೆಯ ನೂತನ ಸ್ಪೀಕರ್ ಆಗಿ ಬಿಜೆಪಿ ಸಂಸದ ಓಂ ಬಿರ್ಲಾ ಆಯ್ಕೆಯಾಗಿದ್ದಾರೆ. ಈ ಮೂಲಕ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಮೊದಲ ಅಧಿವೇಶನದ ಆರಂಭದಲ್ಲೇ ಸೋಲಿನ ರುಚಿ ತೋರಿಸುವ ‘ಇಂಡಿಯಾ’ ಪ್ರಯತ್ನ ಕೈಕೊಟ್ಟಂತಾಗಿದೆ.
ಬುಧವಾರ ಸ್ಪೀಕರ್ ಆಯ್ಕೆ ಪ್ರಕ್ರಿಯೆ ನಡೆಯಿತು. ಬಿಜೆಪಿ ಸಂಸದ ಓಂ ಬಿರ್ಲಾ ಹಾಗೂ ಕಾಂಗ್ರೆಸ್‌ನ ಹಿರಿಯ ಸಂಸದ ಕೆ.ಸುರೇಶ್ ನಡುವೆ ಸ್ಪರ್ಧೆ ಏರ್ಪಟ್ಟಿತ್ತು. ಆದರೆ ಬಹುಮತವಿರುವ ಆಡಳಿತಾರೂಢ ಎನ್ ಡಿಎ (NDA) ಅಭ್ಯರ್ಥಿ ಓಂ ಬಿರ್ಲಾ ಅವರು ಧ್ವನಿ ಮತದ ಮೂಲಕ ಗೆದ್ದು ಎರಡನೇ ಅವಧಿಗೆ ಸ್ಪೀಕರ್ ಆಗಿ ಆಯ್ಕೆಯಾದರು.
ಓಂ ಬಿರ್ಲಾ ಅವರು ಸ್ಪೀಕರ್ ಆಗಿ ಚುನಾಯಿತರಾಗುತ್ತಿದ್ದಂತೆ ಪ್ರಧಾನಿ ನರೇಂದ್ರ ಮೋದಿ ಮತ್ತು ವಿಪಕ್ಷ ನಾಯಕರ ರಾಹುಲ್ ಗಾಂಧಿ ತಮ್ಮ ತಮ್ಮ ಸ್ಥಾನಗಳಿಂದ ಎದ್ದು ಬಂದು ಓಂ ಬಿರ್ಲಾ ಅವರನ್ನು ಸ್ವಾಗತಿಸಿದರು. ಈ ವೇಳೆ ಪರಸ್ಪರ ಶೇಕ್ ಹ್ಯಾಂಡ್ ಮಾಡಿಕೊಂಡರು. ಬಳಿಕ ಓಂ ಬಿರ್ಲಾ ಅವರನ್ನು ಅವರ ಸೀಟ್‌ವರೆಗೆ ಕರೆದೊಯ್ದರು. ಇದೀಗ ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ.
ನೂತನ ಸಭಾಧ್ಯಕ್ಷರಿಗೆ ಪ್ರಧಾನಿ ಮೋದಿ ಅವರು ಸೇರಿದಂತೆ ಸಂಪುಟ ಸದಸ್ಯರು, ಸಂಸದರು ಅಭಿನಂಧಿಸಿದರು. ಓಂ ಬಿರ್ಲಾ ಅವರು ರಾಜಸ್ಥಾನದ ಕೋಟಾದಿಂದ ಮೂರು ಬಾರಿ ಸಂಸದರಾಗಿ ಆಯ್ಕೆಯಾಗಿದ್ದಾರೆ. ಕಳೆದ ಲೋಕಸಭೆಯಲ್ಲೂ ಅವರು ಸ್ಪೀಕರ್ ಆಗಿ ಸದನವನ್ನು ಮುನ್ನಡೆಸಿದ್ದರು.