ನವದೆಹಲಿ/ಬೆಂಗಳೂರು, ಜೂ.21 www.bengaluruwire.com : ಹತ್ತನೇ ಅಂತಾರಾಷ್ಟ್ರೀಯ ಯೋಗದಿನಾಚರಣೆ ನಿಮಿತ್ತ ಇಂದು ಕರ್ನಾಟಕ ಸೇರಿದಂತೆ ದೇಶಾದ್ಯಂತ ಸಾರ್ವಜನಿಕ ಸ್ಥಳ, ಸಂಘ- ಸಂಸ್ಥೆಗಳಲ್ಲಿ ಯೋಗ ದಿನಾಚರಣೆ ಪ್ರಯುಕ್ತ ಹಲವು ಯೋಗಾಭ್ಯಾಸ ಹಾಗೂ ಆ ಕುರಿತಂತೆ ಕಾರ್ಯಕ್ರಮಗಳು ನಡೆಯಿತು. ಜಮ್ಮು ಮತ್ತು ಕಾಶ್ಮೀರದಲ್ಲಿ ಏರ್ಪಡಿಸಿದ್ದ ಕಾರ್ಯಕ್ರಮದಲ್ಲಿ ಪ್ರಧಾನಿ ನರೇಂದ್ರ ಮೋದಿ ಭಾಗವಹಿಸಿದ್ದರು.
ಈ ಸಂದರ್ಭವನ್ನು ಉದ್ದೇಶಿಸಿ ಮಾತನಾಡಿದ ಪ್ರಧಾನಮಂತ್ರಿಯವರು, ಅಂತರಾಷ್ಟ್ರೀಯ ಯೋಗ ದಿನದ ಸಂದರ್ಭದಲ್ಲಿ ಯೋಗ ಮತ್ತು ಸಾಧನಾ ಭೂಮಿಯಾದ ಜಮ್ಮು ಮತ್ತು ಕಾಶ್ಮೀರದಲ್ಲಿ ಉಪಸ್ಥಿತರಿದ್ದಕ್ಕಾಗಿ ಕೃತಜ್ಞತೆಗಳನ್ನು ವ್ಯಕ್ತಪಡಿಸಿದರು. “ಯೋಗದ ವಾತಾವರಣ, ಶಕ್ತಿ ಮತ್ತು ಅನುಭವವನ್ನು ಇಂದು ಜಮ್ಮು ಮತ್ತು ಕಾಶ್ಮೀರದಲ್ಲಿ ಅನುಭವಿಸಬಹುದು” ಎಂದು ಶ್ರೀ ಮೋದಿ ಹೇಳಿದರು. ಅವರು ಎಲ್ಲಾ ನಾಗರಿಕರಿಗೆ ಮತ್ತು ಪ್ರಪಂಚದ ವಿವಿಧ ಭಾಗಗಳಲ್ಲಿ ಯೋಗವನ್ನು ಅಭ್ಯಾಸ ಮಾಡುವವರಿಗೆ ಅಂತರಾಷ್ಟ್ರೀಯ ಯೋಗ ದಿನದಂದು ತಮ್ಮ ಶುಭಾಶಯಗಳನ್ನು ತಿಳಿಸಿದರು.
ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಸಹ ಇಂದು ನಡೆದ ಅಂತರರಾಷ್ಟ್ರೀಯ ಯೋಗ ದಿನಾಚರಣೆಯಲ್ಲಿ ಪಾಲ್ಗೊಂಡು ಯೋಗಭ್ಯಾಸ ಮಾಡಿ, ಜನತೆಗೆ ಯೋಗದ ಮಹತ್ವದ ಬಗ್ಗೆ ತಿಳಿಸಿದರು.
ಇನ್ನು ರಾಜ್ಯದಲ್ಲಿ ವಿಧಾನಸೌಧದ ಮುಂಭಾಗ ಶುಕ್ರವಾರ ನಡೆದ ಯೋಗೋತ್ಸವದಲ್ಲಿ ರಾಜ್ಯಪಾಲರಾದ ಥಾವರ್ ಚಂದ್ ಗೆಹಲೊಟ್, ಡಿಸಿಎಂ ಡಿ ಕೆ ಶಿವಕುಮಾರ್, ವಿಧಾನ ಪರಿಷತ್ ಸಭಾಪತಿ ಬಸವರಾಜ ಹೊರಟ್ಟಿ, ಸಚಿವ ದಿನೇಶ್ ಗುಂಡೂರಾವ್, ವಿಧಾನ ಪರಿಷತ್ ಸದಸ್ಯ ಶರವಣ, ಕ್ರೀಡಾಪಟು ಅಶ್ವಿನಿ ನಾಚಪ್ಪ, ಕ್ರಿಕೆಟಿಗ ಮನೀಶ್ ಪಾಂಡೆ, ಚಿತ್ರನಟಿ ಅನು ಪ್ರಭಾಕರ್, ನಟ ಶರಣ್ ಮತ್ತಿತರರು ಭಾಗವಹಿಸಿದ್ದರು.
ಬಳ್ಳಾರಿಯ ಜೆಎಸ್ ಡಬ್ಲ್ಯು ಟೌನ್ ಶಿಪ್ ನಲ್ಲಿ ಸಂತೋಷ್ ಲಾಡ್ ಫೌಂಡೇಷನ್ ಮತ್ತು ಶ್ವಾಸ ಯೋಗ ಸಂಸ್ಥೆ ಆಯೋಜಿಸಿದ್ದ ಅಂತಾರಾಷ್ಟ್ರೀಯ ಯೋಗ ದಿನದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಭಾಗವಹಿಸಿದರು.
ಸಚಿವ ಸಂತೋಷ್ ಲಾಡ್, ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿ ಗೋವಿಂದರಾಜು, ಸಂಸದ ಈ.ತುಕಾರಾಂ, ಸರ್ಕಾರದ ಕಾರ್ಯದರ್ಶಿ ತ್ರಿಲೋಕ್ ಚಂದ್ರ, ನಟಿ ಶ್ರೀಲೀಲಾ, ವಚನಾನಂದ ಸ್ವಾಮೀಜಿ, ಶಾಸಕ ಶ್ರೀನಿವಾಸ್, ಕೆಎಂಎಫ್ ಅಧ್ಯಕ್ಷ ಭೀಮಾನಾಯ್ಕ್ ಸೇರಿ ಹಲವು ಮುಖಂಡರು ಉಪಸ್ಥಿತರಿದ್ದರು.
ಬೆಂಗಳೂರಿನ ಏರ್ ಫೋರ್ಸ್ ಸ್ಟೇಷನ್ ಇಕ್ವಿಪ್ಮೆಂಟ್ ಡಿಪೋದಲ್ಲಿ 10 ನೇ ಅಂತರಾಷ್ಟ್ರೀಯ ಯೋಗ ದಿನಾಚರಣೆಯನ್ನು ಆಚರಿಸಲಾಯಿತು. ಈ ಸಂದರ್ಭದಲ್ಲಿ ಏರ್ ಕಮಾಂಡರ್ ಮನೋಜ್ ಕುಮಾರ್, ಏರ್ ಫೋರ್ಸ್ ಫ್ಯಾಮಿಲೀಸ್ ವೆಲ್ಫೇರ್ ಅಸೋಸಿಯೇಶನ್ ಅಭಾ ಶರ್ಮಾ, ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು.