ಬೆಂಗಳೂರು, ಜೂ. 20 www.bengaluruwire.com : ವಿಧಾನಸೌಧದಲ್ಲಿ ಸಿಎಂ ಸಿದ್ದರಾಮಯ್ಯ ನೇತೃತ್ವದಲ್ಲಿ ಗುರುವಾರ ಸಂಪುಟ ಸಭೆ ನಡೆದಿದ್ದು, ಸಭೆಯಲ್ಲಿ ಗಣಿ ಗುತ್ತಿಗೆ ಅವಧಿ ಮುಗಿದ ಕೆಜಿಎಫ್ ಪ್ರದೇಶದಲ್ಲಿ ಕೇಂದ್ರದಿಂದ ಗಣಿ ಚಟುವಟಿಕೆ ಕೈಗೊಳ್ಳಲು ಅನುಮತಿ ಸೇರಿದಂತೆ ಒಟ್ಟು 20 ವಿಷಯಗಳ ಮೇಲೆ ಚರ್ಚೆ ಮಾಡಿ ನಿರ್ಣಯವನ್ನು ಕೈಗೊಳ್ಳಲಾಗಿದೆ.
ಸಂಪುಟ ಸಭೆ ನಂತರ ಕಾನೂನು ಸಚಿವ ಹೆಚ್.ಕೆ.ಪಾಟೀಲ್ ಪತ್ರಿಕಾಗೋಷ್ಠಿಯಲ್ಲಿ ಸಚಿವ ಸಂಪುಟದ ನಿರ್ಣಯಗಳ ಕುರಿತು ಮಾತನಾಡುತ್ತಾ, ವಾಣಿಜ್ಯ ಕೈಗಾರಿಕೆ ಇಲಾಖೆ ಗೆ ಸಂಬಂಧಿಸಿದಂತೆ ಗಣಿ ಗುತ್ತಿಗೆ ಅವಧಿ ಮುಗಿದ ಕೆಜಿಎಫ್ ಪ್ರದೇಶದಲ್ಲಿ ಕೇಂದ್ರದಿಂದ ಗಣಿ ಚಟುವಟಿಕೆ ಕೈಗೊಳ್ಳಲು ಅನುಮತಿ ನೀಡಲಾಗಿದೆ. ನಿಷ್ಕ್ರಿಯವಾಗಿದ್ದ 1003.4 ಎಕರೆ ಪ್ರದೇಶದಲ್ಲಿ ಗಣಿ ಗುತ್ತಿಗೆ ಚಟುವಟಿಕೆ ಮುಂದುವರಿಸಲು ಕೇಂದ್ರದ ಪ್ರಸ್ತಾವನೆಗೆ ರಾಜ್ಯ ಸರ್ಕಾರ ಸಹಮತಿಸಿದೆ. ಗಣಿ ಚಟುವಟಿಕೆಗಳ ಪ್ರಾರಂಭಕ್ಕೆ ಅನುಮತಿ ನೀಡಲು ಸಂಪುಟದಲ್ಲಿ ಹಸಿರು ನಿಶಾನೆ ತೋರಲಾಗಿದೆ.
ವಾಣಿಜ್ಯ ಕೈಗಾರಿಕೆ ಇಲಾಖೆ ಗೆ ಸಂಬಂಧಿಸಿದಂತೆ ಗಣಿ ಗುತ್ತಿಗೆ ಅವಧಿ ಮುಗಿದ ಕೆಜಿಎಫ್ ಪ್ರದೇಶದಲ್ಲಿ ಕೇಂದ್ರದಿಂದ ಗಣಿ ಚಟುವಟಿಕೆ ಕೈಗೊಳ್ಳಲು ಅನುಮತಿ ನೀಡಲಾಗಿದೆ. ನಿಷ್ಕ್ರಿಯವಾಗಿದ್ದ 1003.4 ಎಕರೆ ಪ್ರದೇಶದಲ್ಲಿ ಗಣಿ ಗುತ್ತಿಗೆ ಚಟುವಟಿಕೆ ಮುಂದುವರಿಸಲು ಕೇಂದ್ರದ ಪ್ರಸ್ತಾವನೆಗೆ ರಾಜ್ಯ ಸರ್ಕಾರ ಸಹಮತಿಸಿದೆ. ಗಣಿ ಚಟುವಟಿಕೆಗಳ ಪ್ರಾರಂಭಕ್ಕೆ ಅನುಮತಿ ನೀಡಲು ಸಂಪುಟ ಗ್ರೀನ್ ಸಿಗ್ನಲ್ ಸೂಚಿಸಿದೆ.
ಟೇನಿಂಗ್ ಡಂಪ್ಸ್ ಬಳಸಿ ಗಣಿ ಚಟುವಟಿಕೆ ಮುಂದುವರಿಸಲು ಅವಕಾಶ ನೀಡಲಾಗಿದ್ದು, 2230 ಎಕರೆ ಭೂಮಿ ಕೈಗಾರಿಕಾ ವಸಾಹತು ನಿರ್ಮಾಣಕ್ಕೆ ನೀಡಬೇಕು. 75.24 ಕೋಟಿ ರೂ. ಸರ್ಕಾರಕ್ಕೆ ಪಾವತಿ ಮಾಡುವುದು ಬಾಕಿ ಇದೆ. ಅದನ್ನೂ ಭರಿಸುವಂತೆ ಭಾರತ್ ಮೈನಿಂಗ್ಸ್ಗೆ ಸೂಚನೆ ನೀಡಲಾಗಿದೆ ಎಂದು ಅವರು ಹೇಳಿದರು.
ವಿಶ್ವ ವಿದ್ಯಾಲಯಗಳ ಅಭಿವೃದ್ದಿಗೆ 297.77 ಕೋಟಿ ರೂ. ಬಿಡುಗಡೆಗೆ ಕ್ಯಾಬಿನೆಟ್ ಅನುಮೋದಿಸಲಾಗಿದೆ. ಶಿಕ್ಷಣ ಇಲಾಖೆಯ ಎಲ್ಲ ಸರ್ಕಾರಿ ಶಾಲೆ ಹಾಗೂ ಪದವಿ ಕಾಲೇಜುಗಳಿಗೆ ಉಚಿತ ವಿದ್ಯುತ್ ಪೂರೈಕೆಗೆ ನಿರ್ಧಾರ ಮಾಡಲಾಗಿದ್ದು, 29.15 ಕೋಟಿ ರೂ. ಅಂದಾಜು ವೆಚ್ಚದಲ್ಲಿ 46,829 ಸರ್ಕಾರಿ ಶಾಲೆ, 1434 ಪದವಿಪೂರ್ವ ಕಾಲೇಜುಗಳಿಗೆ ಉಚಿತ ವಿದ್ಯುತ್ ಮತ್ತು ಉಚಿತ ನೀರಿನ ಸೌಲಭ್ಯ ಒದಗಿಸಲಾಗುತ್ತಿದೆ. ಕ್ರೈಸ್ ವಸತಿ ಶಾಲೆಗಳ ವಿದ್ಯಾರ್ಥಿಗಳಿಗೆ ಸಮಗ್ರ ವ್ಯಕ್ತಿತ್ವ ಅಭಿವೃದ್ಧಿ ಕಾರ್ಯಕ್ರಮಕ್ಕೆ ಅನುಮತಿ ನೀಡಲಾಗಿದೆ. ರೋಟರಿ ಸಂಸ್ಥೆಗೆ ಇದರ ಜವಾಬ್ದಾರಿ ನೀಡಲಾಗಿದೆ.
ನಗರಾಭಿವೃದ್ಧಿ ಇಲಾಖೆಯ ವ್ಯಾಪ್ತಿಯಲ್ಲಿ ಬೆಳಗಾವಿ ಬಳಿಯಲ್ಲಿ ಬಡಾವಣೆ ನಿರ್ಮಾಣಕ್ಕೆ 137 ಕೋಟಿ ರೂ. ಅಂದಾಜು ವೆಚ್ಚಕ್ಕೆ ಕ್ಯಾಬಿನೆಟ್ ಅನುಮೋದನೆ ನೀಡಲಾಗಿದೆ. ನೀಟ್ ಪರೀಕ್ಷೆಯಲ್ಲಿ ನಡೆದಿರುವ ಅಕ್ರಮದ ಕುರಿತು ಸಚಿವ ಸಂಪುಟದಲ್ಲಿ ಕಳವಳ ವ್ಯಕ್ತವಾಗಿದ್ದು ಸರ್ಕಾರದ ನಿಲುವನ್ನು ಉನ್ನತ ಶಿಕ್ಷಣ ಸಚಿವರು ತಿಳಿಸಲಿದ್ದಾರೆ. ಏಳನೇ ವೇತನ ಆಯೋಗದ ಕುರಿತಂತೆ ಸಚಿವ ಸಂಪುಟ ಸಭೆಯಲ್ಲಿ ಯಾವುದೇ ಚರ್ಚೆಯಾಗಿಲ್ಲ ಎಂದು ಸಚಿವರು ತಿಳಿಸಿದರು.
ಸರ್ಕಾರಿ ಕಾರ್ಯಕ್ರಮದಲ್ಲಿ ಡಾ.ಬಿ.ಆರ್ ಅಂಬೇಡ್ಕರ್ ರವರ ಭಾವಚಿತ್ರ ಕಡ್ಡಾಯ :
ಜನವರಿ-26ರ ಗಣರಾಜ್ಯೋತ್ಸವ ದಿನದೊಂದಿಗೆ ಆಗಸ್ಟ್-15ರ ಸ್ವಾತಂತ್ರ್ಯ ದಿನಾಚರಣೆಯಂದು ಕೂಡ ರಾಜ್ಯದ ಎಲ್ಲಾ ಸರ್ಕಾರಿ ಕಛೇರಿಗಳು, ಸರ್ಕಾರಿ ಸ್ವಾಮ್ಯಕ್ಕೆ ಒಳಪಡುವ ಸಂಸ್ಥೆಗಳು ಹಾಗೂ ಶಾಲಾ ಕಾಲೇಜು ಸೇರಿದಂತೆ ಸರ್ಕಾರದ ವತಿಯಿಂದ ನಡೆಯುವ ಎಲ್ಲಾ ಸಮಾರಂಭಗಳಲ್ಲಿ ರಾಷ್ಟ್ರಪಿತ ಮಹಾತ್ಮ ಗಾಂಧೀಜಿಯವರ ಭಾವಚಿತ್ರದೊಂದಿಗೆ ಸಂವಿಧಾನದ ಪಿತಾಮಹ ಭಾರತ ರತ್ನ ಡಾ.ಬಿ.ಆರ್ ಅಂಬೇಡ್ಕರ್ ರವರ ಭಾವಚಿತ್ರವನ್ನು ಸಹ ಕಡ್ಡಾಯವಾಗಿ ಇಡಲು ಸೂಚಿಸಲು ಸಚಿವ ಸಂಪುಟ ನಿರ್ಧರಿಸಿದೆ. ಹಾಗೂ ನವೆಂಬರ್-26ರ ಸಂವಿಧಾನದ ದಿನಾಚರಣೆ ಸಂದರ್ಭದಲ್ಲಿ ಮೇಲ್ಕಂಡ ಎಲ್ಲಾ ಸಂಸ್ಥೆಗಳು, ಶಾಲಾ ಕಾಲೇಜು ಹಾಗೂ ಸರ್ಕಾರಿ ಕಛೇರಿಗಳಲ್ಲಿ ಭಾರತ ರತ್ನ ಡಾ.ಬಿ.ಆರ್ ಅಂಬೇಡ್ಕರ್ ರವರ ಭಾವಚಿತ್ರವನ್ನು ಇರಿಸಲು ಸಚಿವ ಸಂಪುಟ ನಿರ್ಧರಿಸಿದೆ.
ನಗರ ಸ್ಥಳೀಯ ಸಂಸ್ಥೆ ಆಸ್ತಿ ತೆರಿಗೆ ವಸೂಲಿಗೆ ಸ್ವಸಹಾಯ ಗುಂಪುಗಳ ನೆರವು :
ಕರ್ನಾಟಕ ರಾಜ್ಯ ಸ್ಥಳೀಯ ಸಂಸ್ಥೆಗಳಲ್ಲಿನ ನೀರಿನ ಬಳಕೆ ಶುಲ್ಕದ ಹಿಂದಿನ ಬಾಕಿ ಮೊತ್ತ ಬಡ್ಡಿ ಸಹಿತವಾಗಿ ಮತ್ತು ನಗರ ಸ್ಥಳೀಯ ಸಂಸ್ಥೆಗಳ ಆಸ್ತಿ ತೆರಿಗೆ ಮೊತ್ತ 1860 ಕೋಟಿ ಬಾಕಿ ಇದ್ದು, ಈ ಮೊತ್ತವನ್ನು ವಸೂಲು ಮಾಡಲು ಸ್ವಸಹಾಯ ಗುಂಪುಗಳ ನೆರವು ಪಡೆಯಲು ತೀರ್ಮಾನಿಸಿದೆ. ಸ್ವ-ಸಹಾಯ ಗುಂಪುಗಳಿಗೆ ವಸೂಲಾದ ಮೊತ್ತದಲ್ಲಿನ ಶೇ.5 ರಷ್ಟನ್ನು ಪ್ರೊತ್ಸಾಹ ಧನ ರೂಪದಲ್ಲಿ ನೀಡಲು ಸಚಿವ ಸಂಪುಟ ನಿರ್ಧರಿಸಿದೆ.
ವಿಧಾನ ಮಂಡಲದ ಉಭಯ ಸದನಗಳ ಅಧಿವೇಶನವನ್ನು ಸಮಾವೇಶಗೊಳಿಸುವ ದಿನಾಂಕ, ಸ್ಥಳ ಮತ್ತು ವೇಳೆಯನ್ನು ನಿಗದಿಪಡಿಸಿ ಅಧಿವೇಶನವನ್ನು ಕರೆಯಲು ರಾಜ್ಯಪಾಲರಿಗೆ ಶಿಫಾರಸ್ಸು ಮಾಡಲು ಸಚಿವ ಸಂಪುಟ ನಿರ್ಧರಿಸಿದೆ. ದಿನಾಂಕ ಗೊತ್ತು ಮಾಡಲು ಮುಖ್ಯಮಂತ್ರಿಗಳಿಗೆ ಅಧಿಕಾರ ನೀಡಲಾಗಿದೆ.
ಒಳಾಡಳಿತ ಇಲಾಖೆಯಿಂದ ನಾಗರೀಕ ಹಕ್ಕು ಜಾರಿ ನಿರ್ದೇಶನಾಲಯದ ಒಟ್ಟು 33 ಘಟಕಗಳ ವಿಶೇಷ ಪೊಲೀಸ್ ಠಾಣೆಗಳೆಂದು ಘೋಷಣೆ ಮಾಡಲು ಸಚಿವ ಸಂಪುಟ ತಾತ್ವಿಕ ಒಪ್ಪಿಗೆ ನೀಡಿದೆ. ಈ ಮೂಲಕ ಪೋಲಿಸ್ ಠಾಣೆಗಳ ಮೇಲಿನ ಕೆಲಸದ ಹೊರೆಯನ್ನು ತಗ್ಗಿಸುವ ಉದ್ದೇಶವನ್ನು ಹೊಂದಿದೆ.