ಬೆಂಗಳೂರು, ಜೂ.19 www.bengaluruwire.com : ಮಂತ್ರಾಲಯದ ಶ್ರೀ ರಾಘವೇಂದ್ರ ಸ್ವಾಮಿಗಳ ಸನ್ನಿಧಿ ಬಳಿಯ ಮುಜರಾಯಿ ಇಲಾಖೆಯು 5 ಕೋಟಿ ರೂ. ವೆಚ್ಚದಲ್ಲಿ ನೂತನವಾಗಿ ನಿರ್ಮಿಸಿದ ಅತಿಥಿಗೃಹ ಕಟ್ಟಡ ನಿರ್ಮಾಣದಲ್ಲಿ ಕಳಪೆ ಕಾಮಗಾರಿ ನಡೆದಿರುವ ಕುರಿತಂತೆ ಮುಜರಾಯಿ ಸಚಿವ ರಾಮಲಿಂಗಾರೆಡ್ಡಿ ಲೋಕಾಯುಕ್ತ ತನಿಖೆಗೆ ನೀಡುವಂತೆ ಆದೇಶಿಸಿದ್ದಾರೆ. ಇದು “ಬೆಂಗಳೂರು ವೈರ್” ನಡೆಸಿದ ರಿಯಾಲಿಟಿ ಚೆಕ್ ವರದಿ ಪರಿಣಾಮ.
ಇಲ್ಲಿನ 50 ಕೊಠಡಿಗಳ ಅತಿಥಿಗೃಹ ನಿರ್ಮಾಣ ಕಾಮಗಾರಿಯು ಅತ್ಯಂತ ಕಳಪೆ ಮಟ್ಟದ್ದಾಗಿರುವುದಾಗಿ “ಬೆಂಗಳೂರು ವೈರ್” ಈ ಬಗ್ಗೆ ರಿಯಾಲಿಟಿ ಚೆಕ್ ನಡೆಸಿ ಜೂ.15ರಂದು ವಿಸ್ತ್ರತವಾಗಿ “BW Reality Check | Karnataka Guest House | ಮಂತ್ರಾಲಯದಲ್ಲಿ ಕರ್ನಾಟಕದ ಲೋಕೋಪಯೋಗಿ ಕಾಂಟ್ರಾಕ್ಟರ್ ಮಹಾತ್ಮೆ : ಮುಜರಾಯಿ ಇಲಾಖೆ ಕಳಪೆ ಅತಿಥಿಗೃಹ ಕಟ್ಟಡ ನಿರ್ಮಾಣದಲ್ಲಿ ಕೋಟಿ ಕೋಟಿ ಲೂಟಿ ಶಂಕೆ!!” ಹೆಸರಿನ ತಲೆಬರಹದಡಿ ಸುದ್ದಿ ಪ್ರಸಾರ ಮಾಡಿತ್ತು.
ನೂತನ ಕಟ್ಟಡದಲ್ಲಿ ನೂತನ ಕಟ್ಟಡದ ಅಡಿಪಾಯದಲ್ಲಿ ತೀಕ್ಷ್ಣವಾದ ಬಿರುಕು ಮೂಡಿದ್ದರೆ, ಕಟ್ಟಡದ ಕಿಟಕಿ ಭಾಗದ ಗೋಡೆಗಳು, ಥಾರಸಿ ಭಾಗದಲ್ಲಿ ನೀರು ಜಿನುಗುತ್ತಿದೆ. ಕಳಪೆ ಗುಣಮಟ್ಟದ ಪೇಯಿಂಟ್ ಹಾಕಿರುವುದು ಗಮನಕ್ಕೆ ಬರುತ್ತದೆ. ಕಟ್ಟಡದ ಆವರಣದಲ್ಲಿ ಗಿಡಗಂಟಿಗಳು ಬೆಳದಿದ್ದರೂ ಅದನ್ನು ತೆರವು ಮಾಡುವ ಗೋಜಿಗೆ ಇಲಾಖೆ ಸಿಬ್ಬಂದಿ ಗಮನ ಹರಿಸುತ್ತಿಲ್ಲ. ಅತಿಥಿಗೃಹದ ಹಲವು ಕೊಠಡಿಗಳಲ್ಲಿ ಕಿಟಕಿ ಗಾಜುಗಳು ಕಿತ್ತುಬಂದಿದೆ. ಕೆಲವು ಕಡೆ ಗಾಜುಗಳನ್ನೇ ಅಳವಡಿಸಿಲ್ಲ ಎಂದು ಚಿತ್ರ ಸಹಿತ “ಬೆಂಗಳೂರು ವೈರ್” ನಲ್ಲಿ ಮೊದಲಿಗೆ ಸುದ್ದಿ ಪ್ರಸಾರ ಮಾಡಲಾಗಿತ್ತು.
ಇದರಿಂದ ಎಚ್ಚೆತ್ತುಕೊಂಡ ರಾಜ್ಯ ಮುಜರಾಯಿ ಸಚಿವ ರಾಮಲಿಂಗಾರೆಡ್ಡಿಯವರು, “ಈ ರೀತಿಯ ಕಳಪೆ ಕಾಮಾಗಾರಿಯಿಂದಾಗಿ ಸರ್ಕಾರದ ಬೊಕ್ಕಸಕ್ಕೆ ಆರ್ಥಿಕ ನಷ್ಟವಾಗಿರುವುದಲ್ಲದೇ, ಸಾರ್ವಜನಿಕ ಹಣವನ್ನು ಪೋಲು ಮಾಡಿರುವುದು ಹಾಗೂ ಭಕ್ತಾಧಿಗಳಿಗೆ ಅನಾನೂಕೂಲವಾಗಲು ಕಾರಣವಾಗಿರುತ್ತದೆ.”
“ಈ ಹಿನ್ನೆಲೆಯಲ್ಲಿ, ಈ ಕಳಪೆ ಕಾಮಗಾರಿಗೆ ಕಾರಣರಾದ ಅಧಿಕಾರಿಗಳ ವಿರುದ್ಧ ಸೂಕ್ತಕ್ರಮ ಹಾಗೂ ಕಳಪೆ ಕಾಮಗಾರಿಗೆ ಸಂಬಂಧಿಸಿದಂತೆ ತನಿಖೆಯನ್ನು ನಡೆಸಲು ಪ್ರಕರಣವನ್ನು ಲೋಕಾಯುಕ್ತರವರಿಗೆ ವಹಿಸಲು ಆದೇಶಿಸಿದೆ” ಎಂದು ಕಂದಾಯ ಇಲಾಖೆ ಪ್ರಧಾನ ಕಾರ್ಯದರ್ಶಿಯವರಿಗೆ ಸೂಕ್ತ ಕ್ರಮ ಕೈಗೊಳ್ಳುವಂತೆ ಟಿಪ್ಪಣಿಯಲ್ಲಿ ತಿಳಿಸಿದ್ದಾರೆ.
ಶ್ರೀ ಕ್ಷೇತ್ರ ಮಂತ್ರಾಲಯದಲ್ಲಿರುವ ಕರ್ನಾಟಕ ರಾಜ್ಯ ಛತ್ರದಲ್ಲಿ ರಾಜ್ಯದ ಭಕ್ತಾಧಿಗಳಿಗೆ ಅನುಕೂಲವಾಗುವಂತೆ 50 ಕೊಠಡಿಗಳ ಅತಿಥಿಗೃಹ ನಿರ್ಮಾಣ ಮಾಡಲು 5 ಕೋಟಿ ರೂ.ಗಳನ್ನು 2011ರ ಜು.14ರಂದು ಮಂಜೂರು ಮಾಡಲಾಗಿತ್ತು. ಈ ಕಟ್ಟಡ ನಿರ್ಮಾಣ ಕಾಮಗಾರಿಯನ್ನು ಪ್ರಾರಂಭಿಸಲು, ರಾಯಚೂರು ಜಿಲ್ಲೆ ಜಿಲ್ಲಾಧಿಕಾರಿಗಳನ್ನು ಮುಜರಾಯಿ ಇಲಾಖೆ ಅಧಿಕಾರಿಗಳು ಕೋರಿದ್ದರು. 2019ರ ನ.14 ರಂದು ಈ ಕಾಮಗಾರಿಯನ್ನು ಪೂರ್ಣಗೊಳಿಸಿ, ಕಟ್ಟಡವನ್ನು ಹಸ್ತಾಂತರಿಸಲಾಗಿತ್ತು. ಆದರೆ ಅನುದಾನದ ಕೊರತೆಯಿಂದ ಕಟ್ಟಡ ಪೀಠೋಪಕರಣ ಖರೀದಿ ಮತ್ತಿತರ ಕಾರ್ಯಗಳು ನೆನೆಗುದಿಗೆ ಬಿದ್ದಿದ್ದವು. 2022 ರಲ್ಲಿ ಎಲ್ಲಾ ಬಾಕಿ ಕಾಮಗಾರಿ, ಕಾರ್ಯಗಳು ನಡೆದು ಅಂದಿನ ಮುಜರಾಯಿ ಆಯುಕ್ತೆ ರೋಹಿಣಿ ಸಿಂಧೂರಿ ಈ ಕಟ್ಟಡವನ್ನು ಉದ್ಘಾಟಿಸಿದ್ದರು.
“ಬೆಂಗಳೂರು ವೈರ್” ರಿಯಾಲಿಟಿ ಚೆಕ್ ನಲ್ಲಿ ಜೂ.15ರಂದು ಮೊದಲಿಗೆ ಬಹಿರಂಗಗೊಂಡಿತ್ತು. ಇದೀಗ ರಾಜ್ಯ ಮುಜರಾಯಿ ಇಲಾಖೆಯು, ಲೋಕಾಯುಕ್ತ ತನಿಖೆಗೆ ಕಳಪೆ ಕಾಮಗಾರಿ ಪ್ರಕರಣವನ್ನು ವಹಿಸುತ್ತಿದೆ. ರಾಜ್ಯದಲ್ಲಿನ ಪ್ರಾದೇಶಿಕ ಎಲೆಕ್ಟ್ರಾನಿಕ್ ಮತ್ತು ಮುದ್ರಣ ಮಾಧ್ಯಮಗಳು ಈ ಸುದ್ದಿಯನ್ನು ಪ್ರಸಾರ ಮಾಡಿವೆ. ಇದು “ಬೆಂಗಳೂರು ವೈರ್” ಸ್ವತಂತ್ರ ಮತ್ತು ವಾಸ್ತವಿಕ ಸುದ್ದಿಗೆ ಹಿಡಿದ ಕೈಗನ್ನಡಿ. ದಾಖಲೆ ಮತ್ತು ನಿಖರ ಸುದ್ದಿಗಳನ್ನು ಪ್ರಸಾರ ಮಾಡುವ ಎಂದಿನ ಕರ್ತವ್ಯವನ್ನು ಹೀಗೆಯೇ ಮುಂದುವರೆಸುತ್ತೇವೆ. ನಿಮ್ಮ ಬೆಂಬಲ ಎಂದಿಗೂ ನಮ್ಮ ಜೊತೆಗಿರಲಿ.