ಬೆಂಗಳೂರು, ಜೂ.5 www.bengaluruwire.com : ದೇಶದಲ್ಲಿ ಪ್ರಸ್ತುತ ವರ್ಷಕ್ಕೆ, ಅತ್ಯಂತ ಭಾರವಾದ ಮತ್ತು ಅತ್ಯಂತ ಶಕ್ತಿಶಾಲಿ ಎಲ್ ವಿಎಮ್-3 (LVM3) ಎರಡು ರಾಕೆಟ್ ಗಳನ್ನು ಮಾತ್ರ ಸದ್ಯ ಉಡಾವಣೆ ಮಾಡಲಾಗುತ್ತಿದೆ. ಆದರೆ ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ISRO) ವರ್ಷಕ್ಕೆ 6 ರಾಕೆಟ್ ಉಡಾಯಿಸುವ ಅವಶ್ಯಕತೆಯಿದೆ. ಈ ಮಧ್ಯದ ಉತ್ಪಾದನಾ ಅಂತರ ಇನ್ನು ಮುಂದೆ ನಿವಾರಣೆಯಾಗಲಿದೆ.
ಏಕೆಂದರೆ ಹಿಂದೂಸ್ತಾನ್ ಏರೊನಾಟಿಕಲ್ ಲಿ.(HAL) ಸಂಸ್ಥೆಯು ಎಚ್‌ಎಎಲ್‌ನ ಏರೋಸ್ಪೇಸ್ ವಿಭಾಗದಲ್ಲಿ ಹೊಸದಾಗಿ ಅತ್ಯಾಧುನಿಕ ಪ್ರೊಪೆಲೆಂಟ್ ಟ್ಯಾಂಕ್ ಉತ್ಪಾದನೆ ಮತ್ತು ಸಿಎನ್‌ಸಿ ಯಂತ್ರ ಸೌಲಭ್ಯಗಳನ್ನು ಸ್ಥಾಪಿಸಿದೆ. ನೂತನವಾಗಿ ಸ್ಥಾಪಿಸಲಾದ ಈ ಸೌಲಭ್ಯಗಳಿಂದಾಗಿ ಇಸ್ರೋನ ಬೆಳೆಯುತ್ತಿರುವ ಉತ್ಪಾದನಾ ಅಗತ್ಯಗಳನ್ನು ಪೂರೈಸಲು ಎಚ್ಎಎಲ್ ಗೆ ಸಾಧ್ಯವಾಗಲಿದೆ. ಪ್ರಸ್ತುತ ದೇಶದಲ್ಲಿರುವ ಉಪಗ್ರಹ ಉಡಾವಣಾ ವಾಹಕ ಮಾರ್ಕ್-3 ದೇಶದ ಅತ್ಯಂತ ಶಕ್ತಿಶಾಲಿ ರಾಕೆಟ್ ಆಗಿದ್ದು, ಪ್ರಸ್ತುತ ವರ್ಷಕ್ಕೆ ಕೇವಲ 2 ಎಲ್ ವಿಎಮ್3 ರಾಕೆಟ್ ಲಾಂಚ್ ಮಾಡಲು ಸಾಧ್ಯವಾಗುತ್ತಿದೆ. ಈಗ ಹೊಸ ಪ್ರೊಪಲೆಂಟ್ ಟ್ಯಾಂಕ್ ಉತ್ಪಾದನೆ ಹಾಗೂ ಸಿಎನ್ ಸಿ ಯಂತ್ರ ಸೌಲಭ್ಯ ಸ್ಥಾಪನೆಯಿಂದ ಈ ಪ್ರಕಾರದ ಉಡಾವಣಾ ವಾಹಕಗಳ ಉತ್ಪಾದನೆ ಹೆಚ್ಚಾಗಲಿದೆ.
ಇಸ್ರೋ ಅಧ್ಯಕ್ಷರಾದ ಎಸ್. ಸೋಮನಾಥ್ ಅವರು ಇಂದು ಎಚ್ ಎಎಲ್ ಬೆಂಗಳೂರಿನ ತನ್ನ ಕೇಂದ್ರದಲ್ಲಿ ಮುಖ್ಯ ವ್ಯವಸ್ಥಾಪಕ ನಿರ್ದೇಶಕ (CMD- Additional Charge) ಸಿ ಬಿ ಅನಂತಕೃಷ್ಣನ್ ಅವರ ಸಮ್ಮುಖದಲ್ಲಿ ಈ ಹೊಸ ಸೌಲಭ್ಯಗಳನ್ನು ಉದ್ಘಾಟಿಸಿದರು. ನಂತರ ಮಾತನಾಡಿದ ಅವರು, ಎಚ್ಎಎಲ್‌ನ ಪ್ರಯತ್ನಗಳನ್ನು ಶ್ಲಾಘಿಸಿದರು. ಎಚ್‌ಎಎಲ್ ಅಗಾಧ ಸಾಮರ್ಥ್ಯಗಳನ್ನು ಹೊಂದಿದೆ ಮತ್ತು ಈ ಸಾಮರ್ಥ್ಯವನ್ನು ಎರಡೂ ಸಂಸ್ಥೆಗಳ ದೊಡ್ಡ ಹಿತಾಸಕ್ತಿಯಲ್ಲಿ ಅನ್ವೇಷಿಸಬೇಕು. ಇಸ್ರೋದ ಭವಿಷ್ಯದ ಕಾರ್ಯಾಚರಣೆಗಳಲ್ಲಿ ಎಚ್‌ಎಎಲ್ ದೊಡ್ಡ ಪಾತ್ರವನ್ನು ವಹಿಸುತ್ತದೆ. ಆದ್ದರಿಂದ ಉದಯೋನ್ಮುಖ ತಂತ್ರಜ್ಞಾನಗಳ ಮೇಲೆ ಗಮನಹರಿಸಬೇಕು. ಸವಾಲುಗಳನ್ನುಎದುರಿಸುವ ನಿಟ್ಟಿನಲ್ಲಿ ಉತ್ಪಾದನೆಯನ್ನು ವಿನ್ಯಾಸಗೊಳಿಸಬೇಕು ಮತ್ತು ಇಸ್ರೋ ಮೇಲಿನ ಒತ್ತಡವನ್ನು ಕಡಿಮೆ ಮಾಡಲು ಎಂಡ್-ಟು-ಎಂಡ್ ಕಾರ್ಯಗಳನ್ನು ತೆಗೆದುಕೊಳ್ಳಬೇಕು ಎಂದು ಅವರು ಎಚ್ಎಎಲ್ ಅಧಿಕಾರಿಗಳಿಗೆ ಮನವಿ ಮಾಡಿದರು.
ಇಸ್ರೋ ಜೊತೆಗಿನ ಸಹಯೋಗವು ಮಾನವ ಬಾಹ್ಯಾಕಾಶ ಯಾನಗಳನ್ನು ಮತ್ತು ಮುಂದಿನ ಪೀಳಿಗೆಯ ಉಡಾವಣಾ ವಾಹನಗಳ (NGLV) ಅಭಿವೃದ್ಧಿಯನ್ನು ವೇಗಗೊಳಿಸುತ್ತದೆ. ಇಸ್ರೋ ನೊಂದಿಗೆ ಕೆಲಸ ಮಾಡಲು ಗಮನಾರ್ಹ ಅವಕಾಶಗಳಿವೆ ಮತ್ತು ಬಾಹ್ಯಾಕಾಶ ಕಾರ್ಯಕ್ರಮಗಳಲ್ಲಿ ಪೂರ್ಣ ಸಾಮರ್ಥ್ಯವನ್ನು ಬಳಸಿಕೊಳ್ಳಲು ಮತ್ತಷ್ಟು ಹೂಡಿಕೆ ಮಾಡಲು ಎಚ್ಎಎಲ್ ಬದ್ಧವಾಗಿದೆ. ಬಾಹ್ಯಾಕಾಶವು ಎಚ್‌ಎಎಲ್‌ನ ಪ್ರಮುಖ ಗುರಿಯಾಗುವ ದಿನ ದೂರವಿಲ್ಲ ಎಂದು ಎಂದು ಎಚ್ಎಎಲ್ ಸಿ.ಬಿ.ಅನಂತಕೃಷ್ಣನ್ ಹೇಳಿದರು.
ಕಾರ್ಯಕ್ರಮದ ಸಮಯದಲ್ಲಿ, ಸಾಂಕೇತಿಕವಾಗಿ, ಮೊದಲ ಗಗನಯಾನದ ವಿನ್ಯಾಸದ ಮಾದರಿಯನ್ನು ಮತ್ತು ಎಲ್ ವಿಎಮ್3 (LVM3 ½ U) ಐಸೊಗ್ರಿಡ್ ಆವೃತ್ತಿಯ ಹಾರ್ಡ್‌ವೇರ್ ಅನ್ನು ಸಹ ಇಸ್ರೋಗೆ ಹಸ್ತಾಂತರಿಸಲಾಯಿತು.
ಹೇಗಿದೆ ಎಚ್ಎಎಲ್ ನೋದಕ ಟ್ಯಾಂಕ್ ಉತ್ಪಾದನಾ ಸೌಲಭ್ಯ? :
ಪ್ರೊಪೆಲ್ಲಂಟ್ ಟ್ಯಾಂಕ್ ಉತ್ಪಾದನಾ ಸೌಲಭ್ಯವು ಉನ್ನತ ಕಾರ್ಯಕ್ಷಮತೆಯ ಇಂಧನ ಮತ್ತು ಆಕ್ಸಿಡೈಸರ್ ಟ್ಯಾಂಕ್‌ಗಳ ತಯಾರಿಕೆಯಲ್ಲಿ ಪರಿಣತಿಯನ್ನು ಹೊಂದಿದೆ. ಎಲ್ ವಿಎಮ್3 ಉಡಾವಣಾ ವಾಹನಕ್ಕೆ 4ಮೀಟರ್ ವ್ಯಾಸದ ಮತ್ತು 15 ಮೀಟರ್ ಉದ್ದದವರೆಗಿನ ಪ್ರಮುಖ ಘಟಕಗಳು. ಸಿಎನ್ ಸಿ (CNC) ಮೆಷಿನಿಂಗ್ ಫೆಸಿಲಿಟಿಯು 4.5 ಮೀಟರ್ ಕ್ಲಾಸ್ ರಿಂಗ್ಸ್ ಮತ್ತು ಎಲ್ ವಿಎಮ್ 3 ನ ಪ್ರೊಪೆಲ್ಲಂಟ್ ಟ್ಯಾಂಕ್ ಡೋಮ್‌ಗಳ ಉನ್ನತ ಹಾಗೂ ನಿಖರವಾದ ಫ್ಯಾಬ್ರಿಕೇಶನ್ ಅನ್ನು ನಿರ್ವಹಿಸಲು ಸುಧಾರಿತ ಕಂಪ್ಯೂಟರ್ ನ್ಯೂಮರಿಕಲ್ ಕಂಟ್ರೋಲ್ (CNC) ಯಂತ್ರಗಳನ್ನು ಎಚ್ಎಎಲ್ ಹೊಂದಿದೆ.
ಲಿಕ್ವಿಡ್ ಪ್ರೊಪಲ್ಷನ್ ಸಿಸ್ಟಮ್ಸ್ ಸೆಂಟರ್ (ಎಲ್‌ಪಿಎಸ್‌ಸಿ) ನಿರ್ದೇಶಕ ಡಾ ವಿ ನಾರಾಯಣನ್, ಹ್ಯೂಮನ್ ಸ್ಪೇಸ್ ಫ್ಲೈಟ್ ಸೆಂಟರ್ (ಎಚ್‌ಎಸ್‌ಎಫ್‌ಸಿ) ನಿರ್ದೇಶಕ ಎಂ ಮೋಹನ್, ಎಚ್‌ಎಎಲ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ (ಬೆಂಗಳೂರು ಕಾಂಪ್ಲೆಕ್ಸ್) ಮಿಹಿರ್ ಕಾಂತಿ ಮಿಶ್ರಾ ಮತ್ತು ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಎಸ್ ಅನ್ಬುವೇಲನ್ (ಹೆಲಿಕಾಪ್ಟರ್ ಕಾಂಪ್ಲೆಕ್ಸ್) ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.
“ಬೆಂಗಳೂರು ವೈರ್” ಡಿಜಿಟಲ್ ವೆಬ್ ನ್ಯೂಸ್ ಪೋರ್ಟೆಲ್ಲಿನ ಸೋಶಿಯಲ್ ಮೀಡಿಯಾ ಪೇಜ್ ಹಾಗೂ Google News ಗಳಿಗೆ ಉಚಿತವಾಗಿ Subscribe ಆಗಲು Facebook, Telegram, Twitter, Dailyhunt, Youtube, Whatsup Channel ಗೆ ಜಾಯಿನ್ ಆಗಲು ಇವುಗಳ ಲಿಂಕ್ ಮೇಲೆ ಕ್ಲಿಕ್ ಮಾಡಿ.