ಬೆಂಗಳೂರು, ಮೇ.6 www.bengaluruwire.com : ನಮ್ಮ ಮೆಟ್ರೊ ರೈಲಿನ ಸೇವೆಯಿಂದ ನಗರದ ಸಾರಿಗೆ ವ್ಯವಸ್ಥೆಯ ಸ್ವರೂಪವೇ ಬದಲಾಗಿದೆ. ನಿಜ. ಇದರಿಂದ ರಾಜಧಾನಿಯ ಜನತೆಗೆ ಸಾಕಷ್ಟು ಅನುಕೂಲವಾಗಿದೆ. ಈ ಮಧ್ಯೆ ನಮ್ಮ ಮೆಟ್ರೊನಲ್ಲಿ ಸಹ ಪ್ರಯಾಣಿಕರೊಂದಿಗೆ ಅಸಭ್ಯವಾಗಿ ವರ್ತಿಸುವ ಘಟನೆಗಳು ಆಗಾಗ ವರದಿಯಾಗುತ್ತಿರುತ್ತೆ. ಇತ್ತೀಚೆಗೆ ಯುವಕ ಯುವತಿ ರೈಲಿನಲ್ಲೇ ಅಸಭ್ಯವಾಗಿ ವರ್ತಿಸಿರುವ ಬಗ್ಗೆ ಪ್ರಯಾಣಿಕರೊಬ್ಬರು ಬಿಎಂಆರ್ ಸಿಎಲ್ ಗೆ ದೂರು ನೀಡಿದ್ದಾರೆ.
ನಮ್ಮ ಮೆಟ್ರೋದ ಬಾಗಿಲು ಬಳಿ ಯುವಕ-ಯುವತಿ ನಿಂತು ಪರಸ್ಪರ ಅಪ್ಪಿಕೊಂಡು, ಯುವತಿ ಯುವಕನಿಗೆ ಮುತ್ತು ನೀಡುತ್ತಿರುವ ದೃಶ್ಯವನ್ನು ಪ್ರಯಾಣಿಕರೊಬ್ಬರು ವಿಡಿಯೋ ಮಾಡಿದ್ದಾರೆ. ಈ ವಿಡಿಯೋವನ್ನು KPSB 52 ಎಂಬ ಎಕ್ಸ್ (ಟ್ವಿಟರ್) ಖಾತೆ ಮೂಲಕ ಪೋಸ್ಟ್ ಮಾಡಲಾಗಿದ್ದು “ನಮ್ಮ ಮೆಟ್ರೋದಲ್ಲಿ ಇದೇನು ಅಸಭ್ಯವರ್ತನೆ” ಎಂದು ಪ್ರಶ್ನಿಸಿದ್ದಾರೆ.
ಅಲ್ಲದೆ “ಬೆಂಗಳೂರು ಮೆಟ್ರೋ ನಿಧಾನವಾಗಿ ದೆಹಲಿ ಮೆಟ್ರೋ ರೀತಿ ಆಗುತ್ತಿದೆ. ಯುವತಿ ಯುವಕನಿಗೆ ಮುತ್ತು ನೀಡುತ್ತಿದ್ದಾಳೆ. ಮೆಟ್ರೋದಲ್ಲಿ ಅಸಭ್ಯ ವರ್ತನೆ ವಿರುದ್ಧ ಕ್ರಮ ಕೈಗೊಳ್ಳಿ” ಎಂದು ಬಿಎಂಆರ್ಸಿಎಲ್, ನಗರ ಪೊಲೀಸರಿಗೆ ಟ್ಯಾಗ್ ಮಾಡಿ ಟ್ವೀಟ್ ಮಾಡಿದ್ದಾರೆ. ಆದರೆ ಈ ಘಟನೆ ಯಾವತ್ತು ಆಗಿರೋದು? ಎಲ್ಲಿ ಆಗಿದ್ದು ಎಂಬ ಬಗ್ಗೆ ನಿಖರವಾಗಿ ತಿಳಿಸಿಲ್ಲ.