ಬೆಂಗಳೂರು, ಮೇ.1 www.bengaluruwire.com : ಭಾರತೀಯ ವಿಜ್ಞಾನ ಸಂಸ್ಥೆಯ (ಐಐಎಸ್‌ಸಿ) ವಿಜ್ಞಾನಿಗಳ ಸಹಯೋಗದಲ್ಲಿ ಕೇವಲ ಎರಡು ವಾರಗಳ ಸಮಯದಲ್ಲಿ ಝೀರೋ ಬ್ಯಾಕ್ಟೀರಿಯಲ್ ಗುಣಮಟ್ಟದ ಸಂಸ್ಕರಣೆಯ ಸಾಮರ್ಥ್ಯದ ದೇಶಿ ತಂತ್ರಜ್ಞಾನವನ್ನು ಅಳವಡಿಸಿಕೊಳ್ಳುವಲ್ಲಿ ಜಲಮಂಡಳಿ ಯಶಸ್ವಿಯಾಗಿದೆ.
ಐಐಎಸ್‌ಸಿ ವಿಜ್ಞಾನಿಗಳ ಸಹಯೋಗ ಮತ್ತು ಮಾರ್ಗದರ್ಶನದಲ್ಲಿ ಜಲಮಂಡಳಿಯ ಇಂಜಿನಿಯರ್‌ಗಳು ತ್ಯಾಜ್ಯ ನೀರು ಸಂಸ್ಕರಣೆಯಲ್ಲಿ ದೇಶೀಯ ತಂತ್ರಜ್ಞಾನವನ್ನು ರೂಪಿಸಿದ್ದಾರೆ. ಈಗಾಗಲೇ ಜಲಮಂಡಳಿಯ ವ್ಯಾಪ್ತಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ತ್ಯಾಜ್ಯ ನೀರು ನಿರ್ವಹಣಾ ಘಟಕಗಳ ಮೂಲಸೌಲಭ್ಯವನ್ನು ಬಳಸಿಕೊಳ್ಳುವ ಮೂಲಕ ಕಡಿಮೆ ವೆಚ್ಚದಲ್ಲಿ ದೇಶಿಯ ತಾಂತ್ರಿಕತೆಯನ್ನು ಅಳವಡಿಸಿಕೊಂಡು ಉತ್ತಮ ಗುಣಮಟ್ಟದಲ್ಲಿ ತ್ಯಾಜ್ಯ ನೀರನ್ನು ಶುದ್ದೀಕರಿಸಿ ಝೀರೋ ಬ್ಯಾಕ್ಟೀರಿಯಲ್ ಸಂಸ್ಕರಿಸಿದ ನೀರು ಉತ್ಪಾದನೆಯನ್ನು ಸಾಧ್ಯವಾಗಿಸಿದೆ.
ನಗರದಲ್ಲಿ ನಿತ್ಯ ಅಂದಾಜು 1,800 ಎಂಎಲ್‌ಡಿ ಪ್ರಮಾಣದಷ್ಟು ತ್ಯಾಜ್ಯ ನೀರು ಉತ್ಪತ್ತಿಯಾಗುತ್ತಿದೆ. ಇದರಲ್ಲಿ ಜಲಮಂಡಳಿಯ ತ್ಯಾಜ್ಯ ನೀರು ನಿರ್ವಹಣಾ ಘಟಕಗಳ ಮೂಲಕ ನಿತ್ಯ 1,200 ಎಂಎಲ್ ಡಿ ನೀರಿನ ಸಂಸ್ಕರಣೆ ಮಾಡಲಾಗುತ್ತಿದೆ. ಈ ನೀರಿನಲ್ಲಿರುವಂತಹ ಸೂಕ್ಷ್ಮ ಬ್ಯಾಕ್ಟೀರಿಯಾ ಮಾನವರ ಸಂಪರ್ಕಕ್ಕೆ ಬಂದಲ್ಲಿ ಆರೋಗ್ಯದ ಮೇಲೆ ಪರಿಣಾಮ ಬೀರುವ ಸಾಧ್ಯತೆ ಇರುತ್ತದೆ. ಇದನ್ನ ತಪ್ಪಿಸುವ ನಿಟ್ಟಿನಲ್ಲಿ ಈ ನೀರನ್ನು ಗೃಹಪಯೋಗಿ ಬಳಕೆಗೆ ಬಳಸಬಾರದು ಹಾಗೂ ಮಾನವ ಸಂಪರ್ಕವಿಲ್ಲದ ಕಾರ್ಯಕ್ಕೆ ಉಪಯೋಗಿಸಬೇಕು ಎಂಬ ಎಚ್ಚರಿಕೆ ನೀಡಲಾಗಿದೆ.
ನಿತ್ಯ 1 ಕೋಟಿ ಲೀ. ಉತ್ಪಾದನೆ ಸಾಮರ್ಥ್ಯ:
ಎರಡು ವಾರಗಳ ಹಿಂದೆ ಆರಂಭಿಸಲಾದ ಈ ಯೋಜನೆಯ ಮೂಲಕ ಪ್ರಸ್ತುತ ನಿತ್ಯ 1 ಕೋಟಿ ಲೀ. ಝೀರೋ ಬ್ಯಾಕ್ಟೀರಿಯಲ್ ಸಂಸ್ಕರಿಸಿದ ನೀರು ಉತ್ಪಾದನೆಯ ಸಾಮರ್ಥ್ಯವನ್ನು ಜಲಮಂಡಳಿ ಅಳವಡಿಸಿಕೊಂಡಿದೆ. ಇದೀಗ ನಗರದ ಅಗರ, ಕೆ.ಸಿ ವ್ಯಾಲಿ ಮತ್ತು ಬೆಳ್ಳಂದೂರು ಎಸ್‌ಟಿಪಿಗಳಲ್ಲಿ ಈ ಹೊಸ ತಂತ್ರಜ್ಞಾನವನ್ನು ಅಳವಡಿಸಿಕೊಳ್ಳಲಾಗಿದೆ ಎಂದು ಜಲಮಂಡಲಿ ಅಧ್ಯಕ್ಷ ಡಾ. ರಾಮ್ ಪ್ರಸಾತ್ ಮನೋಹರ್ ತಿಳಿಸಿದ್ದಾರೆ.
ಐಐಎಸ್‌ಸ್ಸಿಯಿಂದ ನೀರಿನ ಬಗ್ಗೆ ಧೃಢೀಕರಣ :
ಸುಧಾರಿತ ದೇಶೀಯ ತಂತ್ರಜ್ಞಾನ ಅಳವಡಿಕೆಯಿಂದ ಹೊರಬರುವಂತಹ ಝೀರೋ ಬ್ಯಾಕ್ಟೀರಿಯಲ್ ನೀರಿನ ಬಗ್ಗೆ ಭಾರತೀಯ ವಿಜ್ಞಾನ ಸಂಸ್ಥೆಯಿಂದ ಧೃಢೀಕರಣ ಪತ್ರವನ್ನು ಪಡೆದುಕೊಳ್ಳಲಾಗಿದೆ. ಐಐಎಸ್‌ಸ್ಸಿ ವಿಜ್ಞಾನಿಗಳು ಎಸ್‌ಟಿಪಿ ಟ್ರೀಟ್‌ಮೆಂಟ್ ಟ್ಯಾಂಕರ್‌ಗಳಿಂದ ಹೊರಬರುವ ಕಡೆಗಳಲ್ಲಿ ಹಾಗೂ ತಮ್ಮ ಪ್ರಯೋಗಶಾಲೆಗಳಲ್ಲಿ ಪರೀಕ್ಷೆಯನ್ನು ನಡೆಸಿದ್ದಾರೆ. ಪರೀಕ್ಷೆಯ ನಂತರ ಝೀರೋ ಬ್ಯಾಕ್ಟೀರಿಯಲ್ ಗುಣಮಟ್ಟದ ಬಗ್ಗೆ ಪ್ರಮಾಣೀಕರಿಸಲಾಗಿದೆ ಎಂದು ಜಲಮಂಡಳಿ ಅಧ್ಯಕ್ಷರು ತಿಳಿಸಿದ್ದಾರೆ.
ಬೆಂಗಳೂರು ಪೂರ್ವ ಭಾಗದಲ್ಲಿ ಬಳಕೆ:
ನಗರದ ಪೂರ್ವಭಾಗದಲ್ಲಿರುವ ವಿಪ್ರೋ, ಎಚ್‌ಎಎಲ್ ಸೇರಿ ಹವು ಐಟಿ ಕಂಪನಿಗಳು ಈಗಾಗಲೇ ಝೀರೋ ಬ್ಯಾಕ್ಟೀರಿಯಲ್ ನೀರಿಗೆ ಬೇಡಿಕೆ ಇಟ್ಟಿವೆ. ಸ್ವಚ್ಚತೆ, ಏರ್ ಕಂಡಿಷನಿಂಗ್ ಕೂಲಿಂಗ್ ಸೇರಿ ಇನ್ನಿತರ ಕಾರ್ಯಕ್ಕೆ ಇದನ್ನ ಬಳಸಬಹುದಾಗಿದೆ. ಬೇಡಿಕೆಯಿರುವ ಸ್ಥಳಗಳಿಗೆ ಜಲಮಂಡಳಿ ಈ ಸಂಸ್ಕರಿಸಿದ ನೀರನ್ನು ಸರಬರಾಜು ಮಾಡಲಿದೆ.
ಜಲಮಂಡಳಿ ಅಧ್ಯಕ್ಷರು ಏನಂತಾರೆ?:
ಸಂಸ್ಕರಿಸಿದ ನೀರಿನ ಬಳಕೆಯನ್ನು ಹೆಚ್ಚಿಸುವುದರಿಂದ ಕಾವೇರಿ ನೀರಿನ ಮೇಲೆ ಒತ್ತಡವನ್ನು ಬಹಳಷ್ಟು ಕಡಿಮೆ ಮಾಡಬಹುದು. ಈ ಸುಧಾರಿತ ತಂತ್ರಜ್ಞಾನವನ್ನು ಅಳವಡಿಸಿಕೊಳ್ಳುವಲ್ಲಿ ಐಐಎಸ್‌ಸ್ಸಿ ವಿಜ್ಞಾನಿಗಳು ಜಲಮಂಡಳಿಯೊಂದಿಗೆ ಕೈಜೋಡಿಸಿದ್ದು ಝೀರೋ ಬ್ಯಾಕ್ಟೀರಿಯಲ್ ಗುಣಮಟ್ಟದ ಸಂಸ್ಕರಿಸಿದ ನೀರು ಪಡೆಯಲು ಸಾಧ್ಯವಾಗಿದೆ. ಇದು ಜಲಮಂಡಳಿಯ ಇತಿಹಾಸದಲ್ಲಿ ಹೊಸ ಮೈಲುಗಲ್ಲಾಗಿದೆ. ಸಂಸ್ಕರಿತ ನೀರಿನ ಬಳಕೆಯಲ್ಲಿ ಜನರ ಮನಃಸ್ಥಿತಿ ಬದಲಾಗಬೇಕಿದೆ.
- ಡಾ. ರಾಮ್ ಪ್ರಸಾತ್ ಮನೋಹರ್, ಜಲಮಂಡಲಿ ಅಧ್ಯಕ್ಷ