ಪಾಟ್ನಾ, ಏ.29 www.bengaluruwire.com : ಕೇಂದ್ರ ಗೃಹ ಸಚಿವ ಅಮಿತ್ ಶಾ (Amit Shah) ಅವರಿದ್ದ ಹೆಲಿಕಾಪ್ಟರ್ (Helicoptor) ಬಿಹಾರದ ಬೆಗುಸರಾಯ್‌ನಲ್ಲಿ ನಿಯಂತ್ರಣ ಕಳೆದುಕೊಂಡಿದ್ದು, ಅಲ್ಪ ಅಂತರದಲ್ಲಿ ಅಪಾಯದಿಂದ ಪಾರಾಗಿದ್ದಾರೆ. ಲೋಕಸಭೆ ಚುನಾವಣೆ (Lok Sabha Election 2024) ಹಿನ್ನೆಲೆಯಲ್ಲಿ ಅಮಿತ್ ಶಾ ಅವರು ಬಿಹಾರದಲ್ಲಿ ರ‍್ಯಾಲಿ ನಡೆಸಿ, ಬೆಗುಸರಾಯ್‌ನಿಂದ ತೆರಳುವ ವೇಳೆ ಹೆಲಿಕಾಪ್ಟರ್ ನಿಯಂತ್ರಣ ಕಳೆದುಕೊಂಡಿದೆ.
ಅಮಿತ್ ಶಾ ಅವರಿದ್ದ ಹೆಲಿಕಾಪ್ಟರ್ ಇನ್ನೇನು ಟೇಕ್‌ಆಫ್ ಆಗಬೇಕು ಎನ್ನುವಷ್ಟರಲ್ಲಿಯೇ ಅದು ತನ್ನ ನಿಯಂತ್ರಣ ಕಳೆದುಕೊಂಡಿತ್ತು. ನೆಲದಿಂದ ಕೆಲವೇ ಅಡಿ ಮೇಲೆ ಹೋಗಿ, ಬಲಕ್ಕೆ ತಿರುಗುತ್ತಲೇ ನಿಯಂತ್ರಣ ಕಳೆದುಕೊಂಡಿದೆ. ಆ ಸಂದರ್ಭದಲ್ಲಿ ಹೆಲಿಕಾಪ್ಟರ್ ಸ್ವಲ್ಪ ಮಟ್ಟಿಗೆ ಅಲುಗಾಡಿದ ದೃಶ್ಯಗಳು ಕೂಡ ವಿಡಿಯೊದಲ್ಲಿ ಸೆರೆಯಾಗಿವೆ. ಇನ್ನೇನು ಹೆಲಿಕಾಪ್ಟರ್ ನಿಯಂತ್ರಣ ಕಳೆದುಕೊಂಡಿತು ಎನ್ನುವಷ್ಟರಲ್ಲಿ ಅದು ಸರಿಯಾದ ದಿಕ್ಕಿಗೆ ಹಾರಾಟ ಆರಂಭಿಸಿತು ಎನ್ನಲಾಗಿದೆ.
ಈ ವಿಡಿಯೊ ದೃಶ್ಯವು ಈಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಆದರೆ, ಅಮಿತ್ ಶಾ ಅವರಿಗೆ ಯಾವುದೇ ತೊಂದರೆಯಾಗಿಲ್ಲ ಎಂದು ಮಾಹಿತಿ ಲಭ್ಯವಾಗಿದೆ.
59 ವರ್ಷದ ಬಿಜೆಪಿ ನಾಯಕ ಲೋಕಸಭೆ ಚುನಾವಣೆ ಪ್ರಚಾರಕ್ಕಾಗಿ ಬಿಹಾರಕ್ಕೆ ಭೇಟಿ ನೀಡಿದ್ದರು. ಅಲ್ಲಿನ ರಾಜ್ಯ ಸರ್ಕಾರವು, ಅಮಿತ್ ಷಾ ಅವರಿದ್ದ ಹೆಲಿಕಾಪ್ಟರ್ ಟೇಕಾಫ್ ಸಂದರ್ಭದಲ್ಲಿ ಯಾವುದೇ ರೀತಿಯ ತಾಂತ್ರಿಕ ತೊಂದರೆಯಾಗಿಲ್ಲ. ಸುರಕ್ಷಿತವಾಗಿ ಹಾರಾಟ ನಡೆಸಿದೆ ಎಂದು ಸ್ಪಷ್ಟಪಡಿಸಿದೆ.