ಬೆಂಗಳೂರು, ಏ.28 www.bengaluruwire.com : ಹಾಸನ (Hassana)ಲ್ಲಿ ಅಶ್ಲೀಲ ವಿಡಿಯೋ ತುಣಕುಗಳು ಇದೆ ಎನ್ನಲಾದ ಪೆನ್ ಡ್ರೈವ್ ಪ್ರಕರಣ ತಾರಕ್ಕೆರುತ್ತಿದ್ದಂತೆ, ಲೋಕಸಭಾ ಕ್ಷೇತ್ರದ ಅಭ್ಯರ್ಥಿ ಪ್ರಜ್ವಲ್ ರೇವಣ್ಣ (Prajwal Revanna) ಮತದಾನ ಮುಗಿದ ಬಳಿಕ ಜರ್ಮನಿಗೆ ತೆರಳಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ.
ಲೋಕಸಭಾ ಚುನಾವಣಾ (Lok Sabha Election) ಸಮಯದಲ್ಲಿ ಅಶ್ಲೀಲ ವಿಡಿಯೋ ಪ್ರಕರಣ ದೊಡ್ಡ ಸದ್ದು ಮಾಡುತ್ತಿರುವ ಬೆನ್ನಲ್ಲೇ ಪ್ರಜ್ವಲ್ ರೇವಣ್ಣ ಶನಿವಾರ ಬೆಳಗ್ಗೆ 3:15ಕ್ಕೆ ಬೆಂಗಳೂರಿನಿಂದ ಜರ್ಮನಿಯ (Germany) ಫ್ರಂಕ್ಫರ್ಟ್ಗೆ ತೆರಳಿದ್ದಾರೆ ಎನ್ನಲಾಗಿದೆ. ಪ್ರಜ್ವಲ್ ರೇವಣ್ಣ ವಿದೇಶಕ್ಕೆ ತೆರಳಿರುವುದಾಗಿ ಪೊಲೀಸರು ತಿಳಿಸಿದ್ದಾರೆಂದು ಮುಖ್ಯಮಂತ್ರಿಗಳ ಮಾಧ್ಯಮ ಪ್ರಕಟಣೆಯು ಖಚಿತಪಡಿಸಿದೆ.
“ಪ್ರಜ್ವಲ್ ರೇವಣ್ಣ ಅವರ ಅಶ್ಲೀಲ ವಿಡಿಯೋ ಪ್ರಕರಣಕ್ಕೆ ಸಂಬಂಧಿಸಿದಂತೆ ವಿಶೇಷ ತನಿಖಾ ತಂಡ ರಚಿಸಲು ಸರ್ಕಾರ ತೀರ್ಮಾನಿಸಿದೆ. ಹಾಸನ ಜಿಲ್ಲೆಯಲ್ಲಿ ಅಶ್ಲೀಲ ವಿಡಿಯೋ ತುಣುಕುಗಳು ಹರಿದಾಡುತ್ತಿದ್ದು, ಮಹಿಳೆಯರ ಮೇಲೆ ಲೈಂಗಿಕ ದೌರ್ಜನ್ಯ ಎಸಗಿರುವುದು ಮೇಲ್ನೋಟಕ್ಕೆ ಕಂಡು ಬರುತ್ತಿದೆ. ಈ ಹಿನ್ನೆಲೆಯಲ್ಲಿ ಎಸ್.ಐ.ಟಿ ತನಿಖೆ ನಡೆಸುವಂತೆ ಮಹಿಳಾ ಆಯೋಗದ ಅಧ್ಯಕ್ಷರು ಸರ್ಕಾರಕ್ಕೆ ಪತ್ರ ಬರೆದಿದ್ದರು. ಅವರ ಮನವಿಗೆ ಸ್ಪಂದಿಸಿ ಈ ನಿರ್ಣಯ ಕೈಗೊಳ್ಳಲಾಗಿದೆ” ಎಂದು ಸಿಎಂ ಸಿದ್ದರಾಮಯ್ಯ (CM Siddaramaiah) ಎಕ್ಸ್ನಲ್ಲಿ ತಿಳಿಸಿದ್ದಾರೆ.
ಎಸ್ ಐಟಿ ತನಿಖಾ ತಂಡ ಹೀಗಿದೆ :
ಸರ್ಕಾರದ ಒಳಾಡಳಿತ ಇಲಾಖೆಯ ಅಧೀನ ಕಾರ್ಯದರ್ಶಿ ಎಸ್.ಅಂಬಿಕಾ ಅವರು ಏ.28ರಂದು ಸರ್ಕಾರದ ನಡುವಳಿಯಲ್ಲಿ ಸಿಐಡಿ ಪೊಲೀಸ್ ಮಹಾನಿರ್ದೇಶಕ ವಿಜಯ್ ಕುಮಾರ್ ಸಿಂಗ್ ಎಸ್.ಐ.ಟಿ ತನಿಖಾ ತಂಡದ ಮುಖ್ಯಸ್ಥರಾಗಿದ್ದರೆ, ಸಹಾಯಕ ಪೊಲೀಸ್ ಮಹಾನಿರೀಕ್ಷಕರಾದ ಸುಮನ್ ಡಿ ಪನ್ನೇಕರ್, ಮೈಸೂರು ಜಿಲ್ಲೆ ಪೊಲೀಸ್ ಅಧೀಕ್ಷಕಿ ಸೀಮಾ ಲಾಠ್ಕರ್ ಸದಸ್ಯರಾಗಿದ್ದಾರೆ. ರಾಜ್ಯದ ಇತರೆ ಪೊಲೀಸ್ ಠಾಣೆಗಳಲ್ಲಿ ದಾಖಲಾದ ಹಾಗೂ ದಾಖಲಾಗಬಹುದಾದ ಪ್ರಕರಣಗಳನ್ನು ಡಿಜಿ ಮತ್ತು ಐಜಿಪಿಯವರು ಈ ವಿಶೇಷ ತನಿಕಾ ತಂಡಕ್ಕೆ ವಹಿಸುವಂತೆ ಆದೇಶದಲ್ಲಿ ತಿಳಿಸಿದ್ದಾರೆ.
ಈ ಬಗ್ಗೆ ಇಂದು ಬೆಂಗಳೂರಿನಲ್ಲಿ ಮಾಹಿತಿ ನೀಡಿರುವ ಗೃಹ ಸಚಿವ ಡಾ ಜಿ ಪರಮೇಶ್ವರ್, ಎಸ್ ಐಟಿ ಇನ್ನು ಕೆಲವೇ ಹೊತ್ತಿನಲ್ಲಿ ತನಿಖೆ ಆರಂಭಿಸಲಿದೆ. ಪ್ರಜ್ವಲ್ ರೇವಣ್ಣ ಅವರಿಗೆ ನೊಟೀಸ್ ಜಾರಿ ಮಾಡುವುದು ಅಥವಾ ಬಿಡುವುದು ಎಸ್ ಐಟಿಗೆ ಬಿಟ್ಟ ತೀರ್ಮಾನ. ಸರ್ಕಾರ ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ್ದು ಯಾವುದೇ ಹಸ್ತಕ್ಷೇಪವಿಲ್ಲದೆ ತನಿಖೆ ನಡೆಯಲಿದೆ. ಪ್ರಜ್ವಲ್ ರೇವಣ್ಣ ಅವರು ವಿದೇಶಕ್ಕೆ ಹೋಗಿರುವ ಬಗ್ಗೆ ಮಾಹಿತಿ ಕೂಡ ಇದೆ ಎಂದು ಹೇಳಿದ್ದಾರೆ.