ಬೆಂಗಳೂರು, ಮಾ.21 www.bengaluruwire.com : ರಾಜಧಾನಿ ಬೆಂಗಳೂರಿನ ಐದೂ ತಾಲೂಕುಗಳನ್ನು ರಾಜ್ಯ ಸರ್ಕಾರ ಬರಪೀಡಿತ ಎಂದು ಘೋಷಿಸಿದೆ. ಕಳೆದ ವರ್ಷದ ಮಳೆಯಿಲ್ಲದ ಕಾರಣ ಬೆಂಗಳೂರಿನಲ್ಲಿ ಬಿಬಿಎಂಪಿಗೆ ಸೇರಿದ 182 ಕೆರೆಗಳ ಪೈಕಿ 46 ಕೆರೆಗಳಲ್ಲಿ ನೀರಿಲ್ಲದೆ ಬತ್ತಿ ಹೋಗಿದೆ. ಒಟ್ಟಾರೆ 31,496.91 ದಶಲಕ್ಷ ಲೀಟರ್ ನೀರು ಸಂಗ್ರಹಣಾ ಸಾಮರ್ಥ್ಯವಿರುವ ಕೆರೆಗಳಲ್ಲಿ ಈಗ ಕೇವಲ ಶೇ.45.89 ರಷ್ಟು ಮಾತ್ರ ನೀರಿದೆ. ಹೀಗಾಗಿ ಸಿಲಿಕಾನ್ ಸಿಟಿಯ ಅಂತರ್ಜಲ ಮಟ್ಟ ವಿಪರೀತವಾಗಿ ಇಳಿಕೆಯಾಗಿದೆ.
ಮಾರ್ಚ್ ತಿಂಗಳಲ್ಲಿ ಬೇಸಿಗೆಯ ಬಿಸಿಯು ಒಂದೇ ಸಮನೆ ಏರಿಕೆಯಾಗುತ್ತಾ ಬಂದಿದೆ. ಇನ್ನೊಂದೆಡೆ ನಗರದ ಹೊರವಲಯಗಳಲ್ಲಿ ಕುಡಿಯುವ ನೀರಿಗಾಗಿ ಹಾಹಾಕಾರ ಶುರುವಾಗಿದೆ. ನಗರದ ಹಲವು ಭಾಗಗಳಲ್ಲಿ ಕೊಳವೆ ಬಾವಿಗಳಲ್ಲಿ ನೀರು ಇಂಗಿ ಹೋಗಿರುವ ಕಾರಣ ಸಾರ್ವಜನಿಕರು ನೀರಿಗಾಗಿ ಪರಿತಪಿಸುತ್ತಿದ್ದಾರೆ. ಶಾಲಾ- ಕಾಲೇಜು, ಕಾರ್ಪೊರೇಟ್ ಕಚೇರಿ, ಹೋಟೆಲ್ ಗಳು, ನೀರು ಆಧಾರಿತವಾಗಿರುವ ಕೈಗಾರಿಕೆಗಳು ಹನಿ ಹನಿ ನೀರಿಗಾಗಿ ಸಮಸ್ಯೆ ಎದುರಿಸುತ್ತಿದ್ದಾರೆ. ಕಳೆದ ವರ್ಷ ವಾಡಿಕೆಯಂತೆ ಬೆಂಗಳೂರು ಸೇರಿದಂತೆ ರಾಜ್ಯದಲ್ಲಿ ಮಳೆಯ ತೀವ್ರ ಕೊರತೆಯಾದ ಕಾರಣ ಬೆಂಗಳೂರಿನಲ್ಲಿನ ಬಿಬಿಎಂಪಿಯ 182 ಕೆರೆಗಳ ಪೈಕಿ 46 ಕೆರೆಗಳು ಬತ್ತಿಹೋಗಿದೆ. ಉಳಿದ 53 ಕರೆಗಳಲ್ಲಿ ಪಾಲಿಕೆಯ ಕೆರೆ ವಿಭಾಗದವರು ಅಭಿವೃದ್ಧಿ ಕಾರ್ಯ ಕೈಗೊಂಡಿರುವ ಕಾರಣಕ್ಕೆ ಅಲ್ಲೂ ಸಹ ಬಹಳಷ್ಟು ಭಾಗಗಳಲ್ಲಿ ನೀರಿನ ಪಸೆ ಮಾಯವಾಗಿದೆ. ಕಾಮಗಾರಿ ಕೈಗೊಂಡಿರುವ ಕೆಲವು ಕೆರೆಗಳಲ್ಲಿ ಮಾತ್ರ ಸ್ವಲ್ಪ ಮಟ್ಟಿಗೆ ನೀರಿದೆ. ಆದರೆ ನಗರದ ಬಹುತೇಕ ಕೆರೆಗಳಲ್ಲಿ 2022ರ ಇಸವಿಗೆ ಹೋಲಿಸಿದರೆ ನೀರಿನ ಪ್ರಮಾಣವು ಗಮನಾರ್ಹವಾಗಿ ಕುಸಿದಿದೆ.
ಚೆನ್ನಾಗಿ ನೀರಿರುವ ನಗರದ ದೊಡ್ಡ ಹಾಗೂ ಎಸ್ ಟಿಪಿ ಹೊಂದಿದ ಪ್ರಮುಖ ಕೆರೆಗಳು :
ಜಕ್ಕೂರು ಕೆರೆ (164.4 ಎಕರೆ ವಿಸ್ತೀರ್ಣದ ಕೆರೆ), ಸಾರಕ್ಕಿ ಕೆರೆ (82.24 ಎಕೆರೆ), ಅಲಸೂರು ಕೆರೆ (106 ಎಕರೆ), ಕಲ್ಕೆರೆ (186.38 ಎಕರೆ), ರಾಚೇನಹಳ್ಳಿ ಕೆರೆ (131.6 ಎಕೆರೆ), ಯಲಹಂಕ ಕೆರೆ (292.4 ಎಕೆರೆ). ಹೆಬ್ಬಾಳ ಕೆರೆ (192 ಎಕೆರೆ). ನಾಗವಾರ ಕೆರೆ (89.28 ಎಕರೆ), ಸ್ಯಾಂಕಿ ಕೆರೆ (40.24 ಎಕರೆ), ಕೆಂಪಾಂಬುದಿ ಕೆರೆ (47.7 ಎಕರೆ). ನಾಯಂಡಹಳ್ಳಿ ಕೆರೆ (15.8 ಎಕೆರೆ). ಬೇಗೂರು ಕೆರೆ (137.24 ಎಕರೆ), ಮಡಿವಾಳ ಕೆರೆ (268.2 ಎಕರೆ) ಪುಣ್ಯಕ್ಕೆ ತ್ಯಾಜ್ಯ ನೀರು ಸಂಸ್ಕರಣಾ ಘಟಕ (Sewage Treatment Plants – STP) ಗಳನ್ನು ಹೊಂದಿರುವ ಹಾಗೂ ಸೂಕ್ತ ರೀತಿ ನಿರ್ವಹಣೆ ಮಾಡಿರುವ ನಗರದ ದೊಡ್ಡ ಕೆರೆಗಳಲ್ಲಿ ನೀರಿರುವ ಕಾರಣಕ್ಕೆ ಆ ಕೆರೆಗಳ ಸುತ್ತಮುತ್ತಲ ಪ್ರದೇಶಗಳಲ್ಲಿ ಅಂತರ್ಜಲ ನೀರಿನ ಮಟ್ಟ ವಿಪರೀತವಾಗಿ ಕುಸಿತವಾಗಿಲ್ಲ.
ಇನ್ನು ಬೆಂಗಳೂರಿನ ಬಿಬಿಎಂಪಿ ವಲಯವಾರು ಕೆರೆಗಳ ಪರಿಸ್ಥಿತಿ ಏನಾಗಿದೆ ಎಂದು ತಿಳಿದುಕೊಳ್ಳುವುದಾದರೆ, ಅವುಗಳ ವಿವರ ಈ ಕೆಳಕಂಡಂತಿದೆ :
ಬಿಬಿಎಂಪಿಯ 182 ಕೆರೆಗಳ ಪ್ರಸ್ತುತ ಪರಿಸ್ಥಿತಿ (ಪಶ್ಚಿಮ ವಲಯ ಹೊರತುಪಡಿಸಿ) | ||||
ಒಟ್ಟು ಕೆರೆಗಳು | ಅಭಿವೃದ್ಧಿ ಕೆಲಸ ನಡೆಯುತ್ತಿರುವ ಕೆರೆಗಳ ಸಂಖ್ಯೆ | ಬತ್ತಿ ಹೋದ ಕೆರೆಗಳ ಸಂಖ್ಯೆ | ಒಟ್ಟಾರೆ ನೀರು ಸಂಗ್ರಹಣಾ ಸಾಮರ್ಥ್ಯ (ದಶಲಕ್ಷ ಲೀಟರ್ ಗಳಲ್ಲಿ) | ಪ್ರಸ್ತುತ ನೀರಿನ ಪ್ರಮಾಣ (ದಶಲಕ್ಷ ಲೀಟರ್ ಗಳಲ್ಲಿ) |
ಬೊಮ್ಮನಹಳ್ಳಿ ವಲಯ | ||||
45 | 19 | 10 | 6147.63 | 3,234.58 |
ದಕ್ಷಿಣ ವಲಯ | ||||
6 | 2 | 2 | 326.65 | 49.42 |
ಬೆಂಗಳೂರು ಪೂರ್ವ ವಲಯ | ||||
5 | 3 | 2 | 1351.15 | 550.56 |
ರಾಜರಾಜೇಶ್ವರಿ ನಗರ ವಲಯ | ||||
34 | 10 | 13 | 3035.99 | 632.38 |
ದಾಸರಹಳ್ಳಿ ವಲಯ | ||||
11 | 5 | 5 | 1740.31 | 760.51 |
ಒಟ್ಟಾರೆ (GRAND TOTAL) | ||||
182 | 53 | 46 | 31,496.91 | 14,456.85 |
ಒಟ್ಟಾರೆ 182 ಕೆರೆಗಳಲ್ಲಿ 31,496.91 ದಶಲಕ್ಷ ಲೀಟರ್ ನೀರು ಸಂಗ್ರಹಣಾ ಸಾಮರ್ಥ್ಯವಿರುವ ಕೆರೆಗಳಲ್ಲಿ ಈಗ ಕೇವಲ 14,456.85 ದಶಲಕ್ಷ ಲೀಟರ್ ಮಾತ್ರ ನೀರು ಸಂಗ್ರಹವಾಗಿದ್ದು ಅದರ ಪ್ರಮಾಣ ಶೇ.45.89 ರಷ್ಟು ಮಾತ್ರವಿದೆ. ಬೆಂಗಳೂರು ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿಯು ನಗರದಲ್ಲಿ ಕಂಡು ಬಂದಿರುವ ನೀರಿನ ಸಮಸ್ಯೆ ಹಿನ್ನಲೆಯಲ್ಲಿ ಹಲವು ವಿಧದಲ್ಲಿ ಅನಗತ್ಯವಾಗಿ ಕುಡಿಯು ನೀರು ಪೋಲು ಮಾಡುವುದನ್ನು, ಈಜುಕೊಳ ತುಂಬಿಸಲು, ವಾಹನ ತೊಳೆಯಲು ಮತ್ತಿತರ ಕಾರ್ಯಗಳಿಗೆ ಕುಡಿಯುವ ನೀರು ಬಳಕೆ ಮಾಡುವುದನ್ನು ನಿಷೇಧಿಸಿದೆ. ಇದಲ್ಲದೆ ಟ್ಯಾಂಕರ್ ನೀರನ್ನು ಹಲವು ಭಾಗಗಳಲ್ಲಿ ಉಚಿತವಾಗಿ ಪೂರೈಸುತ್ತಿದೆ. ಈ ಮಧ್ಯೆ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯು ತನ್ನ ಸುಪರ್ದಿಯಲ್ಲಿರುವ 26 ಕೆರೆಗಳಲ್ಲಿ 1 ದಶಲಕ್ಷ ಲೀಟರ್ ಸಾಮರ್ಥ್ಯದ ಎಸ್ ಟಿಪಿ ಗಳನ್ನು ಬೆಂಗಳೂರು ಜಲಮಂಡಳಿಗೆ ನಿರ್ವಹಣೆಗಾಗಿ ಹಸ್ತಾಂತರಿಸುವ ಪ್ರಕ್ರಿಯೆಯು ಚಾಲ್ತಿಯಲ್ಲಿದೆ. ಇದಲ್ಲದೆ ತೀವ್ರವಾಗಿ ನೀರಿನ ಅಭಾವ ಕಂಡು ಬಂದಿರುವ 10 ಸ್ಥಳಗಳಲ್ಲಿನ ಹತ್ತಿರದ ಕೆರೆ ಅಂಗಳದಲ್ಲಿ ಬೋರ್ ವೆಲ್ ಅನ್ನು ಕೊರೆಸಿ, ಅಲ್ಲಿಗೆ ಮೋಟರ್ ಅಳವಡಿಸಿ ನೀರು ಶುದ್ಧೀಕರಿಸಿ ಅದನ್ನೂ ಸ್ಥಳೀಯವಾಗಿ ಕುಡಿಯಲು ಸಾರ್ವಜನಿಕರಿಗೆ ಪೂರೈಸಲು ನಿರ್ಧರಿಸಿದೆ. ಕೆರೆಗಳ ನೀರು ಸಂಗ್ರಹಣಾ ಸಾಮರ್ಥ್ಯ ಹೆಚ್ಚಿಸುವ ನಿಟ್ಟಿನಲ್ಲಿ ನೀರಿನ ಸಂಗ್ರಹಕ್ಕೆ ಬಿಬಿಎಂಪಿಯ ಕೆರೆ ವಿಭಾಗದ ಎಂಜಿನಿಯರ್ ಗಳು ಹೆಚ್ಚು ಒತ್ತು ನೀಡಿ ಆ ನಿಟ್ಟಿನಲ್ಲಿ ಮುನ್ನಡೆಯಬೇಕಿದೆ.
ಬಿಬಿಎಂಪಿ ಕೆರೆ ವಿಭಾಗದ ಚೀಫ್ ಎಂಜಿನಿಯರ್ ಹೇಳಿದ್ದೇನು? :
ನಗರದ ಪಶ್ಚಿಮ ವಲಯ ಹೊರತುಪಡಿಸಿ ನಗರದ 182 ಕೆರೆಗಳಲ್ಲಿನ ನೀರಿನ ಪರಿಸ್ಥಿತಿ ಕುರಿತಂತೆ ಬಿಬಿಎಂಪಿ ಕೆರೆ ವಿಭಾಗದ ಮುಖ್ಯ ಎಂಜಿನಿಯರ್ ವಿಜಯ್ ಕುಮಾರ್ ಹರಿದಾಸ್ ಬೆಂಗಳೂರು ವೈರ್ ಜೊತೆ ಮಾತನಾಡಿ, “ನಗರದಲ್ಲಿ ಎಲ್ಲೆಲ್ಲಿ ಕೆರೆಗಳಿಗೆ ಎಸ್ ಟಿಪಿ ಅಳವಡಿಸಲಾಗಿದೆ ಅಲ್ಲೆಲ್ಲಾ ನೀರಿನ ಸಂಗ್ರಹಣೆ ಬೇರೆ ಕೆರೆಗಳಿಗೆ ಹೋಲಿಸಿದರೆ ಉತ್ತಮವಾಗಿದೆ. ಕೆಲವು ಕೆರೆಗಳಲ್ಲಿ ಅಭಿವೃದ್ಧಿ ಕೆಲಸಗಳು ನಡೆಯುತ್ತಿರುವುದರಿಂದ ಹಾಗೂ ಕಳೆದ ವರ್ಷ ಮಳೆಯ ಅಭಾವದ ಕಾರಣಕ್ಕೆ ಕೆರೆಗಳು ಬತ್ತಿ ಹೋಗಿವೆ” ಎಂದು ನಗರದ ಕೆರೆಗಳ ಪರಿಸ್ಥಿತಿಯನ್ನು ತೆರೆದಿಟ್ಟಿದ್ದಾರೆ.
ಬೆಂಗಳೂರಿನಲ್ಲಿರೋ ಯಾವ ಕೆರೆಗಳೂ ಕುಡಿಯಲು ಯೋಗ್ಯವಿಲ್ಲ :
“ಬಿಬಿಎಂಪಿಯವರಾಗಲಿ ಅಥವಾ ಕೆರೆಯ ಸುಪರ್ದಿಯನ್ನು ಹೊಂದಿರುವ ಇನ್ಯಾವುದು ಇಲಾಖೆ, ಪ್ರಾಧಿಕಾರವಾಗಲಿ ಕಾಮಗಾರಿಗಳನ್ನು ಕೈಗೊಳ್ಳಲು ತೋರಿಸುವಷ್ಟು ಆಸಕ್ತಿಯನ್ನು ಕೆರೆ ಸಂರಕ್ಷಣೆಯಲ್ಲಿ ಪ್ರಮುಖವಾದ ಹೂಳೆತ್ತುವಿಕೆ, ಮಲಿನ ನೀರು ಕೆರೆಗೆ ಬರದಂತೆ ತಡೆಯಲು ಶೀಘ್ರ ಕಾಮಗಾರಿ ಕೈಗೊಂಡು ಅಭಿವೃದ್ಧಿ ಮಾಡುವುದಕ್ಕೆ ಹೆಚ್ಚು ಒತ್ತು ಕೊಡುತ್ತಿಲ್ಲ. ಹೀಗಾಗಿ ಮಳೆ ಬಂದಾಗಲೂ ಹೆಚ್ಚಿನ ಮಟ್ಟದಲ್ಲಿ ಕೆರೆಗೆ ಸೇರುವ ಮಳೆ ನೀರು ಭೂಮಿಯೊಳಗೆ ಇಂಗುತ್ತಿಲ್ಲ. ಈಗ ಬೆಂಗಳೂರಿಗರು ಬೋರ್ ವೆಲ್ ಮೂಲಕ ಕುಡಿಯುತ್ತಿರುವ ನೀರು 10 ಸಾವಿರ ವರ್ಷಗಳಷ್ಟು ಹಳೆಯ ನೀರಾಗಿದೆ. ಕೆರೆಗಳಲ್ಲಿ ವಾಯು ವಿಹಾರಕ್ಕೆ ಮಾರ್ಗ ನಿರ್ಮಿಸುವಾಗ, ಮಕ್ಕಳ ಆಟಿಕೆ, ತೆರೆದ ವ್ಯಾಯಾಮ ಉಪಕರಣಗಳನ್ನು ಹಾಕುವಾಗ ಅನಗತ್ಯವಾಗಿ ಕಾಂಕ್ರೀಟ್ ಹಾಕುವುದನ್ನು ಸಂಪೂರ್ಣವಾಗಿ ನಿಲ್ಲಿಸಬೇಕು. ನಗರದಲ್ಲಿ ಒಂದೇ ಒಂದು ಕೆರೆ ಕುಡಿಯಲು ಯೋಗ್ಯವಿಲ್ಲ. ಪ್ರಾಣಿಗಳು ಕುಡಿಯಲು ಬಳಸಲು ಆಗದ ಇ-ಕ್ಯಾಟಗರಿ ವರ್ಗದಲ್ಲಿರುವುದು ನಿಜಕ್ಕೂ ಶೋಚನೀಯ. ಕೆರೆಗಳ ಸಂರಕ್ಷಣೆಗೆ ಒತ್ತು ನೀಡದಿದ್ದಲ್ಲಿ ಬೆಂಗಳೂರಿನ ಭವಿಷ್ಯ ನಿಜಕ್ಕೂ ಆತಂಕಕಾರಿಯಾಗಲಿದೆ”
- ಮಾಧುರಿ, ಕೆರೆ ಸಂರಕ್ಷಣೆ ಹೋರಾಟಗಾರ್ತಿ
“ಬೆಂಗಳೂರು ವೈರ್” ಡಿಜಿಟಲ್ ವೆಬ್ ನ್ಯೂಸ್ ಪೋರ್ಟೆಲ್ಲಿನ ಸೋಶಿಯಲ್ ಮೀಡಿಯಾ ಪೇಜ್ ಹಾಗೂ Google News ಗಳಿಗೆ ಉಚಿತವಾಗಿ Subscribe ಆಗಲು Facebook, Telegram, Twitter, Youtube, Whatsup Channel ಗೆ ಜಾಯಿನ್ ಆಗಲು ಇವುಗಳ ಲಿಂಕ್ ಮೇಲೆ ಕ್ಲಿಕ್ ಮಾಡಿ.