ಬೆಂಗಳೂರು, ಮಾ.17 www.bengaluruwire.com : ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (BBMP) ವ್ಯಾಪ್ತಿಯಲ್ಲಿ ಸೂಕ್ತ ರೀತಿ ಕಸ ವಿಂಗಡಣೆಯಾಗುತ್ತಿಲ್ಲ. ವರ್ಷಂಪ್ರತಿ ಕಸ ಸಂಗ್ರಹಣೆ, ಸಾಗಣೆ ಮತ್ತು ವಿಲೇವಾರಿಗಾಗಿ ಪಾಲಿಕೆ ನೂರಾರು ಕೋಟಿ ರೂಪಾಯಿ ಖರ್ಚು ಮಾಡಿದರೂ ನಗರದಲ್ಲಿ ಸೂಕ್ತ ರೀತಿಯಲ್ಲಿ ಹಸಿ ಕಸ, ಒಣಕಸ ಮತ್ತು ಸ್ಯಾನಿಟರಿ ಕಸ ವಿಂಗಡಣೆ ಸೂಕ್ತ ರೀತಿ ಆಗುತ್ತಿಲ್ಲ ಎಂಬ ಆಘಾತಕಾರಿ ಅಂಶವು ಪಾಲಿಕೆಯ ಘನತ್ಯಾಜ್ಯ ನಿರ್ವಹಣೆ ಕುರಿತಂತೆ ಫೆಬ್ರವರಿ ತಿಂಗಳ ದತ್ತಾಂಶವನ್ನು ಗಮನಿಸಿದಾಗ ಕಂಡು ಬಂದಿದೆ. ನಗರದಲ್ಲಿ ಕಸ ವಿಂಗಡಣೆ ಕಾರ್ಯ ಶೇ.37 ರಷ್ಟು ಮಾತ್ರ ಆಗುತ್ತಿದೆ.
ರಾಜಧಾನಿಯಲ್ಲಿ ದಿನಂಪ್ರತಿ 5500 ಮೆಟ್ರಿಕ್ ಟನ್ ಎಲ್ಲಾ ವಿಧವಾದ ಕಸ ಉತ್ಪತ್ತಿಯಾದರೂ ಅರ್ಧಕ್ಕಿಂತ ಹೆಚ್ಚು ಭಾಗ ಅಂದರೆ ಸರಾಸರಿ 3100 ರಿಂದ 3200 ಮೆಟ್ರಿಕ್ ಟನ್ ಮಿಶ್ರಿತ ಕಸ ಮಿಟಗಾನಹಳ್ಳಿ ಭೂಭರ್ತಿ ಘಟಕದ ಒಡಲು ಸೇರುತ್ತಿದೆ. ನೂರಾರು ಕೋಟಿ ಕರ್ಚು ಮಾಡಿ ಪಾಲಿಕೆ 6 ತ್ಯಾಜ್ಯ ಸಂಸ್ಕರಣಾ ಕೇಂದ್ರ ತೆರೆದರೂ ಒಟ್ಟಾರೆ 8 ಪ್ಲಾಂಟ್ ಗಳಿಗೆ ಪ್ರತಿದಿನ ಸರಾಸರಿ ಹೋಗ್ತಿರೋದು ಸರಾಸರಿ 1600 ಮೆಟ್ರಿಕ್ ಟನ್ ಕಸ ಮಾತ್ರ.
ಫೆಬ್ರವರಿ ತಿಂಗಳ 29ನೇ ತಾರೀಖಿನಂದು ಹಸಿಕಸ ತ್ಯಾಜ್ಯ ಸಂಸ್ಕರಣಾ ಘಟಕಗಳಾದ ಚಿಕ್ಕನಾಗಮಂಗಲ, ದೊಡ್ಡಬಿದರಕಲ್ಲು, ಕನ್ನಹಳ್ಳಿ, ಲಿಂಗಧೀರನಹಳ್ಳಿ, ಸೀಗೇಹಳ್ಳಿ, ಸುಬ್ಬರಾಯನಪಾಳ್ಯ, ಮಿಟಗಾನಹಳ್ಳಿ, ಕೆಸಿಡಿಸಿ ಹಾಗೂ ಎಂಎಸ್ ಜಿಪಿ ಘಟಕಗಳಲ್ಲಿ 1,678.76 ಮೆಟ್ರಿಕ್ ಟನ್ ಕಸ ಸಂಸ್ಕರಣೆಯಾದರೆ, ಅದೇ ದಿನ 2,866.73 ಮೆಟ್ರಿಕ್ ಟನ್ ಗಳಷ್ಟು ಮಿಶ್ರಿತ ಕಸ ಮಿಟಗಾನಹಳ್ಳಿ ಭೂಭರ್ತಿ ಘಟಕದ ಒಡಲು ಸೇರಿತ್ತು. ಅಂದರೆ 8 ಕಸ ಸಂಸ್ಕರಣಾ ಘಟಕಗಳಿಗೆ ಕೇವಲ 36.93% ರಷ್ಟು ಹಸಿಕಸ ಸಂಸ್ಕರಣೆ ಮಾಡಲಾಗಿತ್ತು. 63.06% ರಷ್ಟು ಕಸ ಮಿಟಗಾನಹಳ್ಳಿ ಕ್ವಾರಿಗೆ ಕಾಂಪ್ಯಾಕ್ಟರ್ ನಲ್ಲಿ ತಂದು ಸುರಿಯಲಾಗಿತ್ತು. ಇನ್ನು ಮಾ.17ರಂದು ಇದೇ 8 ಹಸಿಕಸ ತ್ಯಾಜ್ಯ ಸಂಸ್ಕರಣಾ ಪ್ಲಾಂಟ್ ಗಳಿಗೆ ಒಟ್ಟಾರೆ 1630.8 ಮೆಟ್ರಿಕ್ ಟನ್ ಕಸ (ಒಟ್ಟಾರೆ ಹಸಿ ಮತ್ತು ಮಿಶ್ರಿತ ಕಸದಲ್ಲಿ ಶೇ.35.75) ರವಾನೆಯಾದರೆ, ಮಿಟಗಾನಹಳ್ಳಿಗೆ 2,930.41 ಮೆಟ್ರಿಕ್ ಟನ್ ಕಸ (ಒಟ್ಟಾರೆ ಹಸಿ ಮತ್ತು ಮಿಶ್ರಿತ ಕಸದಲ್ಲಿ ಶೇ.64.25) ವರ್ಗಾವಣೆಯಾಗಿದೆ. ಅಂದರೆ ನಗರದಲ್ಲಿ ಸೂಕ್ತ ರೀತಿಯಲ್ಲಿ ಹಸಿಕಸ ವಿಂಗಡಣೆಯಾಗುತ್ತಿಲ್ಲ ಎಂದು ಈ ದತ್ತಾಂಶದಿಂದ ತಿಳಿದು ಬರುತ್ತಿದೆ.
27 ವಿಭಾಗಗಳಲ್ಲಿ ಫೆಬ್ರವರಿ ತಿಂಗಳ ಕೇಸ್ ಸ್ಟಡಿ :
2024ರ ಫೆಬ್ರವರಿ ತಿಂಗಳು ನಗರದ 27 ವಿಭಾಗಗಳಲ್ಲಿನ 198 ವಾರ್ಡ್ ಗಳಲ್ಲಿ ಫೆಬ್ರವರಿ ತಿಂಗಳು ಸರಾಸರಿಯಾಗಿ 4,227 ಮೆಟ್ರಿಕ್ ಟನ್ ಕಸ ಸಂಗ್ರಹವಾದರೆ ಕೇವಲ ಶೇಕಡ 37.01ರಷ್ಟು ಕಸವನ್ನು ಮಾತ್ರ ವಿಂಗಡಿಸಲಾಗಿದೆ. ಉಳಿದೆಲ್ಲವೂ ಮಿಶ್ರಿತ ಕಸವಾಗಿದೆ ಎಂದರೆ ಬೆಂಗಳೂರು ಘನತ್ಯಾಜ್ಯ ವಿಲೇವಾರಿ ಕಂಪನಿ ಮತ್ತು ಬಿಬಿಎಂಪಿ ಘನತ್ಯಾಜ್ಯ ನಿರ್ವಹಣಾ ವಿಭಾಗ ತಿಂಗಳಿಗೆ ಕೋಟ್ಯಾಂತರ ರೂಪಾಯಿ ಸಾರ್ವಜನಿಕರ ತೆರಿಗೆ ಹಣವನ್ನು ಖರ್ಚು ಮಾಡಿದರೂ, ಹಸಿಕಸ, ಒಣಕಸ ಸಂಗ್ರಹದಲ್ಲಿ ಬಹುತೇಕ ವಿಫಲವಾಗಿರುವುದು ಈ ದತ್ತಾಂಶದಿಂದ ಕಂಡು ಬಂದಿದೆ. ಪಾಲಿಕೆಯಲ್ಲಿ 5500 ಆಟೋ ಟಿಪ್ಪರ್ ಗಳನ್ನು 750 ಮಂದಿಗೊಂದು ಕ್ಲಸ್ಟರ್ ನಂತೆ ನಿಯೋಜಿಸಲಾಗಿದೆ. ಈ ಆಟೋ ಟಿಪ್ಪರ್ ಗಳು ಪ್ರತಿಯೊಂದು ಮನೆಯಿಂದ ಪ್ರತಿದಿನ ಕಸ ಸಂಗ್ರಹಿಸಿ ಹತ್ತಿರದ ಟ್ರಾನ್ಸ್ ಫರ್ ಸ್ಟೇಷನ್ ಬಳಿ ಟಿಪ್ಪರ್ ಗಳಿಗೆ ಕಸವನ್ನು ನೀಡುತ್ತಿದೆ.
- ಮನೆಗಳಿಂದ ಕಸ ವಿಂಗಡಿಸಿ ನೀಡುತ್ತಿದ್ದಾರೆ
- ಅಂತಿಮವಾಗಿ ಕಾಂಪ್ಯಾಕ್ಟರ್ ಗೆ ಸಾಗಣೆ ಸಂದರ್ಭ ಮಿಕ್ಸಿಂಗ್
ರಾಜಧಾನಿಯಲ್ಲಿ ಮನೆಗಳಿಂದ ಹಸಿಕಸವನ್ನು ಸಾರ್ವಜನಿಕರಿಂದ ಪ್ರತ್ಯೇಕವಾಗಿ ಸಂಗ್ರಹಿಸಿ ಅದೇ ಹಸಿಕಸವನ್ನು ನಗರದ ಬೇರೆ ಬೇರೆ ಭಾಗದಲ್ಲಿರುವ ಪಾಲಿಕೆ, ಕೆಸಿಡಿಸಿ ಹಾಗೂ ಖಾಸಗಿ ಎಂಎಸ್ ಜಿಪಿಯಂತಹ ಹಸಿಕಸ ಸಂಸ್ಕರಣೆ ಮಾಡುವ ಸ್ಥಾವರಗಳಿಗೆ ಹೋಗುತ್ತಿದ್ದರೆ ಪ್ರತಿ ದಿನ ಕೇವಲ 1,650 ಮೆಟ್ರಿಕ್ ಟನ್ ಗಳಷ್ಟು ಮಾತ್ರ ಕಡಿಮೆ ಹಸಿಕಸ ಮಾತ್ರ ಸಂಸ್ಕರಣೆಯಾಗುತ್ತಿರಲಿಲ್ಲ. ಅದರ ಪ್ರಮಾಣ ಇನ್ನೂ ಹೆಚ್ಚಾಗುತ್ತಿತ್ತು. ಮೂಲದಲ್ಲೇ ಹಸಿಕಸ ಸಾರ್ವಜನಿಕರು ವಿಂಗಡಣೆ ಮಾಡಿ ಕೊಡುತ್ತಿದ್ದಾರೆ. ಆದರೆ ಅನಧಿಕೃತವಾಗಿ ಬೃಹತ್ ಕಸ ಉತ್ಪಾದಕರು ತಮ್ಮ ಘನತ್ಯಾಜ್ಯವನ್ನು ಮನೆ ಮನೆಯಿಂದ ಹಸಿಕಸ, ಒಣಕಸ ಸಂಗ್ರಹಿಸುವ ಬಿಬಿಎಂಪಿಯ ಆಟೋ ಟಿಪ್ಪರ್ ಗಳಿಗಾಗಲಿ ಅಥವಾ ಕಾಂಪ್ಯಾಕ್ಟರ್ ಗಳಿಗಾಗಲಿ ನೀಡುವಂತಿಲ್ಲ.
ಮಿಕ್ಸೆಡ್ ಕಸಕ್ಕಾಗಿ ಅಪವಿತ್ರ ಮೈತ್ರಿ – ಕೋಟ್ಯಾಂತರ ರೂ. ಅವ್ಯಹಾರ :
ಅಂತಿಮವಾಗಿ ಪಾಲಿಕೆಯ ಘನತ್ಯಾಜ್ಯ ವಿಲೇವಾರಿಯ ಭ್ರಷ್ಟ ಎಂಜಿನಿಯರ್ ಗಳು, ಅಧಿಕಾರಿಗಳು ಮತ್ತು ಕಾಂಟ್ರಾಕ್ಟರ್ ಗಳ ಚಿತಾವಣೆಯಿಂದ ಆಟೋಗಳು ಮತ್ತು ಖಾಸಗಿ ಆಟೋಗಳು ತಮ್ಮ ವ್ಯಾಪ್ತಿಯಲ್ಲಿ ಬೃಹತ್ ಪ್ರಮಾಣದಲ್ಲಿ ಕಸ ಉತ್ಪಾದಿಸುವ ಅಪಾರ್ಟ್ ಮೆಂಟ್, ಹೋಟೆಲ್, ರೆಸ್ಟೋರೆಂಟ್, ಫ್ಯಾಕ್ಟರಿ ಮತ್ತಿತರ ಕಡೆಗಳಿಂದ ಮಿಶ್ರಿತ ಕಸವನ್ನು ದುಬಾರಿ ಹಣವನ್ನು ಅಕ್ರಮವಾಗಿ ಪಡೆದು, ಅದನ್ನು ಬಿಬಿಎಂಪಿಯ ಕಸದ ಕಾಂಪ್ಯಾಟರ್ ಗಳಿಗೆ ಹಸಿಕಸದೊಂದಿಗೆ, ಮಿಶ್ರಿತ ಕಸವನ್ನು ಅನಧಿಕೃತವಾಗಿ ಸೇರಿಸುತ್ತಿದ್ದಾರೆ ಎಂಬುದಕ್ಕೆ ಈ ಕೆಳಗಿನ 27 ವಿಭಾಗಗಳಲ್ಲಿ ನಡೆದಿರುವ ಕಸ ವಿಂಗಡಣೆ ವಿವರವೇ ಸಾಕ್ಷಿಯಾಗಿದೆ. ಒಂದು ವಾರ್ಡ್ ಅಲ್ಲ ಬರೋಬ್ಬರಿ 198 ವಾರ್ಡ್ ಗಳಲ್ಲಿ ಬಹುತೇಕ ಕಡೆ ಈ ಅವ್ಯವಹಾರ ದಂಧೆ ರೂಪದಲ್ಲಿ ನಡೆಯುತ್ತಿದೆ.
ಕಸ ಸಾಗಣೆಗೆ ಕಾಂಟ್ರಾಕ್ಟರ್ ಒಂದೆಡೆ ಬಿಬಿಎಂಪಿಯಿಂದ ಬಿಲ್ ಪಡೆಯುವುದಲ್ಲದೆ, ಬಲ್ಕ್ ಜನರೇಟರ್ ಗಳಿಂದ ಮಿಕ್ಸೆಡ್ ಕಸ ಪಡೆದಿದ್ದಕ್ಕೆ ಅಲ್ಲಿಂದಲೂ ಹಣ ಪಡೆದು ಬಿಬಿಎಂಪಿ ಹಣದಲ್ಲಿ ಅದನ್ನು ಕಸದ ಕ್ವಾರಿಗೆ ಸಾಗಣೆ ಮಾಡಿ ಎರಡೆರಡು ಕಡೆ ತಿಂಗಳಿಗೆ ಲಕ್ಷಾಂತರ ರೂಪಾಯಿ ಕಮಾಯಿ ಮಾಡಿಕೊಳ್ಳುತ್ತಿದ್ದಾರೆ. ಒಟ್ಟಾರೆ ನೂರಾರು ಕೋಟಿ ಅವ್ಯವಹಾರ ಪಾಲಿಕೆಯಲ್ಲಿ ನಡೆದು ಹೋಗುತ್ತಿದೆ. ಇಲ್ಲದಿದ್ದರೆ ರಾಜಧಾನಿ ಬೆಂಗಳೂರಿನಲ್ಲಿ ಕಸ ವಿಂಗಡಣಾ ಕಾರ್ಯ ಕೇವಲ 37 ಪರ್ಸೆಂಟ್ ನಷ್ಟಾಗುತ್ತಿರಲಿಲ್ಲ. ಮಿಟಗಾನಹಳ್ಳಿ ಭೂಭರ್ತಿ ಘಟಕದ ಕಲ್ಲು ಕ್ವಾರಿಗೆ ಪ್ರತಿದಿನ 2800 ರಿಂದ 3500 ಮೆಟ್ರಿಕ್ ಟನ್ ಮಿಶ್ರಿತ ಕಸ ಭೂಮಿಯ ಒಡಲನ್ನು ಸೇರುತ್ತಿರಲಿಲ್ಲ.
2024ರ ಫೆಬ್ರವರಿ ತಿಂಗಳ ಬಿಬಿಎಂಪಿ ವಿಭಾಗವಾರು ಕಸ ವಿಂಗಡಣೆ ವಿವರ | ||
ವಿಭಾಗದ ಹೆಸರು | ಒಟ್ಟಾರೆ ಕಸ ಸಂಗ್ರಹ (ಹಸಿ ಕಸ+ಮಿಶ್ರಿತ ಕಸ) ಮೆಟ್ರಿಕ್ ಟನ್ ಗಳಲ್ಲಿ | ಒಟ್ಟಾರೆ ಕಸ ವಿಂಗಡಣೆ (ಶೇಕಡವಾರು) |
1) ಬಸವನಗುಡಿ | 106.64 | 34.63% |
2) ಬೆಂಗಳೂರು ದಕ್ಷಿಣ | 196.96 | 70.68% |
3) ಬಿಟಿಎಂ ಬಡಾವಣೆ | 117.84 | 40.67% |
4) ಬ್ಯಾಟರಾಯನಪುರ | 86.23 | 34.77% |
5) ಚಾಮರಾಜಪೇಟೆ | 114.58 | 39.40% |
6) ಚಿಕ್ಕಪೇಟೆ | 190.24 | 8.28% |
7) ಸಿ.ವಿ.ರಾಮನ್ ನಗರ | 123.53 | 38.06% |
8) ದಾಸರಹಳ್ಳಿ | 157.7 | 56.60% |
9) ಗಾಂಧಿನಗರ | 162.2 | 12.35% |
10) ಗೋವಿಂದರಾಜನಗರ | 137.6 | 40.65% |
11) ಹೆಬ್ಬಾಳ | 148.33 | 41.82% |
12) ಜಯನಗರ | 132.06 | 43.98% |
13) ಕೆ.ಆರ್.ಪುರ | 276.39 | 30.88% |
14) ಮಹದೇವಪುರ | 280.72 | 41.68% |
15) ಮಹಾಲಕ್ಷ್ಮಿ ಲೇಔಟ್ | 129.75 | 42.94% |
16) ಮಲ್ಲೇಶ್ವರ | 125.64 | 26.32% |
17) ಪದ್ಮನಾಭನಗರ | 139.71 | 27.04% |
18) ಪುಲಕೇಶಿನಗರ | 143.17 | 23.76% |
19) ರಾಜಾಜಿನಗರ | 96.46 | 52.17% |
20) ರಾಜರಾಜೇಶ್ವರಿನಗರ | 233.41 | 40.37% |
21) ಸರ್ವಜ್ಞನಗರ | 187.86 | 31.64% |
22) ಶಾಂತಿನಗರ | 125.72 | 27.33% |
23) ಶಿವಾಜಿನಗರ | 191.3 | 22.83% |
24) ವಿಜಯನಗರ | 145.2 | 32.04% |
25) ಯಲಹಂಕ | 89.54 | 21.68% |
26) ಯಶವಂತಪುರ | 146.04 | 45.15% |
27) ಬೊಮ್ಮನಹಳ್ಳಿ | 242.04 | 71.75% |
ಒಟ್ಟು ಸರಾಸರಿ | 4227 | 37.01% |
ಯಾವ್ಯಾವ ವಿಭಾಗಗಳಲ್ಲಿ ಅತಿ ಕಡಿಮೆ ಕಸ ವಿಂಗಡಣೆ? :
ಇಡೀ ಬೆಂಗಳೂರಿನಲ್ಲಿ ಚಿಕ್ಕಪೇಟೆ ವಿಭಾಗದಲ್ಲಿ ಅತಿ ಕಡಿಮೆ ಅಂದರೆ ಕೇವಲ ಶೇ.8.28ರಷ್ಟು ಮಾತ್ರ ಕಸ ವಿಂಗಡಣೆ ಮಾಡಲಾಗುತ್ತಿದೆ. ಅದನ್ನು ಹೊರತುಪಡಿಸಿದರೆ ಗಾಂಧಿನಗರ ವಿಭಾಗದಲ್ಲಿ ಕೇವಲ ಶೇ.12.35ರಷ್ಟು ಕಸ ವಿಂಗಡಣೆಯಾಗುತ್ತಿದೆ. ಯಲಹಂಕದಲ್ಲಿ ಶೇ.21.68, ಶಿವಾಜಿನಗರದಲ್ಲಿ ಶೇ.22.83, ಪುಲಕೇಶಿನಗರದಲ್ಲಿ ಶೇ.23.76ರಷ್ಟು, ಮಲ್ಲೇಶ್ವರ ಶೇ.26.32, ಪದ್ಮನಾಭನಗರದಲ್ಲಿ ಶೇ.27.04ರಷ್ಟು ಹಾಗೂ ಶಾಂತಿನಗರದಲ್ಲಿ ಶೇ.27.33ರಷ್ಟು ಮಾತ್ರ ಕಸವನ್ನು ವಿಂಗಡಣೆ ಮಾಡಲಾಗುತ್ತಿದೆ.
ಕಸದ ವಿಂಗಡಣೆ ಕಾರ್ಯ ಕಡಿಮೆಯಿದ್ದ ಕಡೆ ಮಿಶ್ರಿತ ಕಸದ ಅಕ್ರಮ ಹೆಚ್ಚಿರುವ ಶಂಕೆ :
ಯಾವ್ಯಾವ ವಿಭಾಗಗಳಲ್ಲಿ ಕಸದ ವಿಂಗಡಣೆ ಕಾರ್ಯ ಕಡಿಮೆಯಿದೆ ಅಲ್ಲೆಲ್ಲಾ ಬೃಹತ್ ಕಸದ ಉತ್ಪಾದಕರ ಘನತ್ಯಾಜ್ಯ ಅಕ್ರಮವಾಗಿ ಪಾಲಿಕೆಯ ಕಾಂಪ್ಯಾಕ್ಟರ್ ಗೆ ಸೇರ್ಪಡೆಯಾಗಿರುವ ಸಾಧ್ಯತೆಯು ಹೆಚ್ಚಿರುತ್ತದೆ. ಉಳಿದ ವಿಭಾಗಗಳಲ್ಲಿ ಹಸಿಕಸದ ಜೊತೆಗೆ ಮಿಶ್ರಿತ ಕಸವನ್ನು ಮಿಶ್ರಣ ಮಾಡಲಾಗುತ್ತಿಲ್ಲ ಎಂದಲ್ಲ. ಅಲ್ಲೂ ಸಹ ಸಾರ್ವಜನಿಕರಿಂದ ಸಂಗ್ರಹವಾಗುವ ಕಸದ ಜೊತೆಗೆ ಬಲ್ಕ್ ಜನರೇಟರ್ ಕಸವನ್ನು ಮಿಶ್ರಿಣ ಮಾಡಿ ಮಿಟಗಾಟನಹಳ್ಳಿಗೆ ಸೈಲೆಂಟಾಗಿ ಸಾಗಿಸಲಾಗುತ್ತಿದೆ ಎಂದು ಎಂದು ಮೂಲಗಳು ಬೆಂಗಳೂರು ವೈರ್ ಗೆ ತಿಳಿಸಿದೆ. ಈ ಬಗ್ಗೆ ಮುಖ್ಯ ಆಯುಕ್ತ ತುಷಾರ್ ಗಿರಿನಾಥ್, ಬಿಬಿಎಂಪಿ ಘನತ್ಯಾಜ್ಯ ವಿಲೇವಾರಿ ವಿಭಾಗದ ವಿಶೇಷ ಆಯುಕ್ತ ಹರೀಶ್ ಕುಮಾರ್ ಸಮಗ್ರ ತನಿಖೆ ನಡೆಸಬೇಕಿದೆ. ಬಲ್ಕ್ ಜನರೇಟರ್, ಹಣ ಬಾಕ ಎಂಜಿನಿಯರ್ ಗಳು ಹಾಗೂ ಭ್ರಷ್ಟ ಗುತ್ತಿಗೆದಾರರ ನಡುವಿನ ಅಪವಿತ್ರ ಮೈತ್ರಿಯ ಸರಪಳಿಯನ್ನು ಮುರಿಯಬೇಕಿದೆ. ಆದರೆ ಈ ವಿಚಾರದಲ್ಲಿ ಎಷ್ಟರ ಮಟ್ಟಿಗೆ ಇವರು ಕ್ರಮ ಕೈಗೊಳ್ಳುತ್ತಾರೆ ಕಾದು ನೋಡಬೇಕಿದೆ.
“ಬೆಂಗಳೂರು ವೈರ್” ಡಿಜಿಟಲ್ ವೆಬ್ ನ್ಯೂಸ್ ಪೋರ್ಟೆಲ್ಲಿನ ಸೋಶಿಯಲ್ ಮೀಡಿಯಾ ಪೇಜ್ ಹಾಗೂ Google News ಗಳಿಗೆ ಉಚಿತವಾಗಿ Subscribe ಆಗಲು Facebook, Telegram, Twitter, Youtube, Whatsup Channel ಗೆ ಜಾಯಿನ್ ಆಗಲು ಇವುಗಳ ಲಿಂಕ್ ಮೇಲೆ ಕ್ಲಿಕ್ ಮಾಡಿ.