ನವದೆಹಲಿ, ಮಾ.16 www.bengaluruwire.com : ಕೇಂದ್ರ ಚುನಾವಣಾ ಆಯೋಗ (Election Commission Of India – ECI)ವು 2024 ರ ಲೋಕಸಭಾ ಚುನಾವಣೆಯ ಮಾದರಿ ನೀತಿ ಸಂಹಿತೆಯು ತಕ್ಷಣದಿಂದಲೇ ಜಾರಿಗೆ ಬಂದಿದೆ. ಒಟ್ಟು 7 ಹಂತಗಳಲ್ಲಿ ಚುನಾವಣೆ ನಡೆಯಲಿದೆ. ಜೂ.4ರಂದು ದೇಶದೆಲ್ಲಡೆ ಮತ ಎಣಿಕೆ ನಡೆಯಲಿದೆ.
ಕರ್ನಾಟಕದಲ್ಲಿ ಏ.26 ಹಾಗೂ ಮೇ. 7 ಎರಡು ಹಂತದಲ್ಲಿ ಮತದಾನ ನಡೆಯಲಿದೆ. ಮೊದಲ ಹಂತದ ಮತದಾನಕ್ಕೆ ಮಾ.28 ನಾಮಪತ್ರ ಸಲ್ಲಿಕೆ ಆರಂಭ. ಎರಡು ಹಂತದ ಚುನಾವಣೆಗಳಲ್ಲಿ ತಲಾ 14 ಸ್ಥಾನಗಳಿಗೆ ಚುನಾವಣೆ ನಡೆಯಲಿದೆ.
ಕೇಂದ್ರ ಚುನಾವಣಾ ಆಯೋಗದ ಮುಖ್ಯ ಚುನಾವಣಾ ಆಯೋಗದ ಅಧ್ಯಕ್ಷ ರಾಜೀವ್ ಕುಮಾರ್ ಪತ್ರಿಕಾಗೋಷ್ಠಿ ಉದ್ದೇಶಿಸಿ ಮಾತನಾಡುತ್ತಾ, ಈ ಬಾರಿಯ ಸಾರ್ವತ್ರಿಕ ಲೋಕಸಭಾ ಚುನಾವಣೆಯಲ್ಲಿ 96.8 ಕೋಟಿ ಮತದಾರರಿದ್ದಾರೆ. ಆ ಪೈಕಿ 49.7 ಕೋಟಿ ಪುರುಷ ಮತದಾರರು ಹಾಗೂ 47.1 ಕೋಟಿ ಮಹಿಳಾ ಮತದಾರರಿದ್ದಾರೆ. ಇದೇ ಮೊದಲ ಬಾರಿಗೆ ಮತ ಚಲಾಯಿಸಲು 1.8 ಕೋಟಿ ಯುವ ಮತದಾರರಿದ್ದಾರೆ. ಏಪ್ರಿಲ್ 19ರಿಂದ ಜೂನ್ 1ನೇ ತಾರಿಖಿನವರೆಗೆ ಒಟ್ಟು 7 ಹಂತಗಳಲ್ಲಿ ಮತದಾನ ನಡೆಯುತ್ತೆ. ಮೊದಲ ಹಂತದ ಮತದಾನವು ಏ.19ರಂದು 21 ರಾಜ್ಯಗಳಲ್ಲಿ ಪಾರ್ಶ್ವ ಹಾಗೂ ಪೂರ್ಣ ಪ್ರಮಾಣದಲ್ಲಿ ನಡೆಯುವ ಮೂಲಕ ಚುನಾವಣೆ ನಡೆಯಲಿದೆ.
ಇಡೀ ದೇಶದಲ್ಲಿ 48,000 ಲಿಂಗತ್ವ ಅಲ್ಪಸಂಖ್ಯಾತ ಮತದಾರರಿದ್ದಾರೆ. 20 ರಿಂದ 29 ವಯೋಮಾನದ 19.74 ಕೋಟಿ ಮತದಾರರಿದ್ದಾರೆ. 10.48 ಲಕ್ಷ ಮತದಾನ ಕೇಂದ್ರದಲ್ಲಿ ವೋಟರ್ಸ್ ಗಾಗಿ ಕುಡಿಯಲು ನೀರು ಸೇರಿದಂತೆ ಕನಿಷ್ಠ ಸೌಕರ್ಯಗಳನ್ನು ಕಲ್ಪಿಸಲಾಗುತ್ತದೆ.
ತೋಳ್ಬಲ, ಹಣ, ತಪ್ಪು ಮಾಹಿತಿ ಹಾಗೂ ಮಾದರಿ ನೀತಿಸಂಹಿತೆ ಉಲ್ಲಂಘನೆಗಳನ್ನು ನಿಯಂತ್ರಿಸುವ ನಿಟ್ಟಿನಲ್ಲಿ ಚುನಾವಣಾ ಆಯೋಗವು ಸೂಕ್ತ ಕ್ರಮ ಕೈಗೊಳ್ಳುತ್ತಿದೆ. ಚುನಾವಣಾ ಆಯೋಗವು ಅಂತರರಾಜ್ಯ ಗಡಿಯಲ್ಲಿ ತೀಕ್ಷ್ಣ ಪರಿಶೀಲನೆ, ಅಂತರರಾಷ್ಟ್ರೀಯ ಗಡಿಯಲ್ಕಿ ದ್ರೋಣ್ ಮೂಲಕ ವಿಚಕ್ಷಣೆ ಮಾಡಲಾಗುತ್ತದೆ.
2017-18 ರ ವಿಧಾನಸಭಾ ಚುನಾವಣೆಗೆ ಹೋಲಿಸಿದರೆ ರಾಜಸ್ತಾನ, ಕರ್ನಾಟಕ, ಮಧ್ಯಪ್ರದೇಶ ಸೇರಿದಂತೆ 11 ರಾಜ್ಯಗಳಲ್ಲಿ ವಶಪಡಿಸಿಕೊಂಡ ಹಣದ ಪ್ರಮಾಣವು 2022-23ಕ್ಕೆ ಹೋಲಿಸಿದರೆ ಶೇ.835 ಪಟ್ಟು ಅಂದರೆ 3400 ಕೋಟಿ ಹಣವನ್ನು ಆಯೋಗವು ವಿವಿಧ ಮೂಲಗಳಿಂದ ವಶಪಡಿಸಿಕೊಂಡಿದೆ. ರಸ್ತೆ, ರೈಲು, ವಿಮಾನ ನಿಲ್ದಾಣ, ಬ್ಯಾಂಕ್ ಗಳು ಸೇರಿದಂತೆ ಎಲ್ಲಾ ಕಡೆಗಳಲ್ಲಿ ನಿರಂತರ ತಪಾಸಣೆ ಕಾರ್ಯವು ನಡೆಯಲಿದೆ. ತಪ್ಪು ಮಾಹಿತಿ ನೀಡುವುದಕ್ಕೆ ನಿರ್ಬಂಧಿಸಲಾಗಿದೆ. ದೇಶಾದ್ಯಂತ 537 ಮಾನ್ಯತೆ ಇಲ್ಲದ ರಾಜಕೀಯ ಪಕ್ಷಗಳನ್ನು ತೆಗೆದು ಹಾಕಲಾಗಿದೆ. ಮಕ್ಕಳನ್ನು ಯಾವುದೇ ರಾಜಕೀಯ ಪಕ್ಷಗಳು ಚುನಾವಣಾ ಪ್ರಚಾರಕ್ಕೆ ಬಳಸದಂತೆ ಸೂಚಿಸಲಾಗಿದೆ. ಇದನ್ನು ಉಲ್ಲಂಘಿಸಿದಲ್ಲಿ ಕಠಿಣ ಕ್ರಮ ಕೈಗೊಳ್ಳಲಾಗುತ್ತದೆ.
ರಾಜಕೀಯ ಪಕ್ಷಗಳು ಚುನಾವಣಾ ಪ್ರಚಾರ ಸಂದರ್ಭದಲ್ಲಿ ವೈಯುಕ್ತಿಕ ನಿಂದನೆ, ಕೆಟ್ಟ ಶಬ್ದ ಬಳಕೆಯನ್ನು ಮಾಡದೆ ಪ್ರೀತಿಯಿಂದ ಚುನಾವಣೆ ಎದುರಿಸಿ. 17ನೇ ಲೋಕಸಭೆ ಅವಧಿಯು 16ನೇ ಜೂನ್ ರಂದು ಮುಗಿಯಲಿದೆ. 543 ಒಟ್ಟು ಲೋಕಸಭಾ ಸ್ಥಾನಗಳಲ್ಲಿ 412 ಸ್ಥಾನಗಳು ಸಾಮಾನ್ಯ ವರ್ಗಕ್ಕೆ, 84 ಎಸ್ ಸಿ ಹಾಗೂ 47 ಸ್ಥಾನಗಳು ಎಸ್ ಟಿ ವರ್ಗಕ್ಕೆ ಮೀಸಲಾಗಿದೆ. ದೇಶಾದ್ಯಂತ 26 ವಿಧಾನಸಭಾ ಕ್ಷೇತ್ರಗಳಿಗೆ ಉಪಚುನಾವಣೆ, ಆಂಧ್ರ ಪ್ರದೇಶ, ಅರುಣಾಚಲ ಪ್ರದೇಶ, ಒಡಿಶಾ, ಸಿಕ್ಕಿಂ, 4 ರಾಜ್ಯಗಳಲ್ಲಿ ಸಾರ್ವತ್ರಿಕ ವಿಧಾನಸಭಾ ಚುನಾವಣೆ ನಡೆಯಲಿದೆ. ಎಪಿಕ್ ಕಾರ್ಡ್ ನಂಬರ್ ಮೂಲಕ ಮತದಾರರು ವೆಬ್ ಸೈಟ್ ಮೂಲಕ ತಮ್ಮ ಮತದಾನದ ಕೇಂದ್ರವನ್ನು ಹುಡುಕಬಹುದು ಎಂದು ಕೇಂದ್ರ ಮುಖ್ಯ ಚುನಾವಣಾ ಆಯುಕ್ತ ರಾಜೀವ್ ಕುಮಾರ್ ಹೇಳಿದ್ದಾರೆ.
ಪತ್ರಿಕಾಗೋಷ್ಠಿಯಲ್ಲಿ ನೂತನ ಚುನಾವಣಾ ಆಯುಕ್ತರಾದ ಜ್ಞಾನೇಶ್ ಕುಮಾರ್ ಮತ್ತು ಸುಖ್ಬೀರ್ ಸಿಂಗ್ ಸಂಧು ಉಪಸ್ಥಿತರಿದ್ದರು.
ಕರ್ನಾಟಕದಲ್ಲಿ ಏಪ್ರಿಲ್ 26ಕ್ಕೆ ಎಲ್ಲೆಲ್ಲಿ ಮತದಾನ?
1) ಚಿತ್ರದುರ್ಗ
2) ಉಡುಪಿ-ಚಿಕ್ಕಮಗಳೂರು
3) ದಕ್ಷಿಣ ಕನ್ನಡ
4) ಹಾಸನ
5) ತುಮಕೂರು
6) ಚಿಕ್ಕಬಳ್ಳಾಪುರ
7) ಕೋಲಾರ
8) ಮಂಡ್ಯ
9) ಮೈಸೂರು-ಕೊಡಗು
10) ಚಾಮರಾಜನಗರ
11) ಬೆಂಗಳೂರು ಗ್ರಾಮಾಂತರ
12) ಬೆಂಗಳೂರು ದಕ್ಷಿಣ
13) ಬೆಂಗಳೂರು ಉತ್ತರ
14) ಬೆಂಗಳೂರು ಕೇಂದ್ರ
ಮೇ 7ರಂದು ಎಲ್ಲೆಲ್ಲಿ ಮತದಾನ?
1) ಬೆಳಗಾವಿ
2) ಬಳ್ಳಾರಿ
3) ಚಿಕ್ಕೋಡಿ
4) ಹಾವೇರಿ-ಗದಗ
5) ಕಲಬುರಗಿ
6) ಬೀದರ್
7) ಹುಬ್ಬಳಿ – ಧಾರವಾಡ
8) ಕೊಪ್ಪಳ
9) ರಾಯಚೂರು
10) ಉತ್ತರ ಕನ್ನಡ
11) ದಾವಣಗೆರೆ
12) ಶಿವಮೊಗ್ಗ
13) ಬಾಗಲಕೋಟೆ
14) ವಿಜಯಪುರ