ಬೆಂಗಳೂರು, ಮಾ.14 www.bengaluruwire.com : ರಾಜಧಾನಿಯ ಹೃದಯ ಭಾಗದ ಟ್ರಾಫಿಕ್ ಸುಗಮಗೊಳಿಸಲು ಪ್ರಮುಖವಾಗಿ ಮೆಜೆಸ್ಟಿಕ್, ಫ್ರೀಡಂ ಪಾರ್ಕ್ ಮತ್ತು ಸುತ್ತಮುತ್ತಲಿನ ಪ್ರದೇಶದಲ್ಲಿನ ವಾಹನಗಳ ನಿಲುಗಡೆ ಸಮಸ್ಯೆಯನ್ನು ಪರಿಹರಿಸಲೆಂದುನ 2015ನೇ ಇಸವಿಯಲ್ಲಿ ಪ್ರಾರಂಭಿಸಲಾಗಿದ್ದ ಗಾಂಧೀನಗರ ಫ್ರೀಡಮ್ ಪಾರ್ಕ್ ಬಳಿಯ ಮಲ್ಟಿಲೆವಲ್ ಕಾರ್ ಪಾರ್ಕಿಂಗ್ ಯೋಜನೆಯ ಕಾಮಗಾರಿ ಮುಗಿದರೂ ಇನ್ನು ಉದ್ಘಾಟನೆ ಭಾಗ್ಯ ಕೂಡಿ ಬಂದಿಲ್ಲ.
2015ರ ಡಿಸೆಂಬರ್ ನಲ್ಲಿ ಆರಂಭವಾಗಿ 2017ರಲ್ಲಿ ಕಾಮಗಾರಿ ಮುಗಿಯಬೇಕಿತ್ತು. ಆದರೆ ಕೆಎಂವಿ ಪ್ರಾಜೆಕ್ಟ್ಸ್ (KMV PROJECTS) ಗುತ್ತಿಗೆ ಕಂಪನಿಗೆ ಈವರೆಗೆ 10 ಬಾರಿ ಕಾಲಾವಧಿ ವಿಸ್ತರಣೆ ಮಾಡಿದ ಮೇಲೂ ತೀರ 2023ರಲ್ಲಿ ಕಾಮಗಾರಿ ಮುಗಿದಿದೆ. ತೀರ ತಡವಾಗಿ ಕಾಮಗಾರಿ ಮುಗಿಸಿದ ಈ ಸಂಸ್ಥೆಗೆ 8.38 ಕೋಟಿ ರೂ. ದಂಡವನ್ನು ಪಾಲಿಕೆ ಹಾಕಿದ್ದರೆ, ಕಾಣದ ಕೈಗಳ ಪ್ರಭಾವದಿಂದಾಗಿ ಆ ದಂಡವನ್ನೇ ಈಗಿನ ಎಂಜಿನಿಯರ್ ಚೀಫ್ ಹಾಗೂ ರಸ್ತೆ ಮತ್ತು ಮೂಲಭೂತ ಸೌಕರ್ಯ ವಿಭಾಗ ಚೀಫ್ ಎಂಜಿನಿಯರ್ ಬಿ.ಎಸ್.ಪ್ರಹ್ಲಾದ್ ಮನ್ನಾ ಮಾಡಿರುವ ಆಘಾತಕಾರಿ ಸುದ್ದಿ ಹೊರಬಿದ್ದಿದೆ. ಇದು ಸಾಲದೆಂಬಂತೆ ಕಾಮಗಾರಿಯನ್ನು ತಡವಾಗಿ ಮುಗಿಸಿದ ಅದೇ ಕಂಪನಿಗೆ 4 ರಿಂದ 5 ಕೋಟಿ ರೂಪಾಯಿ ಯೋಜನಾ ದರ (Price Escalation) ಹೆಚ್ಚಳದ ಲಾಭವನ್ನು ನೀಡಲಾಗಿದೆ ಎಂದು ತಿಳಿದು ಬಂದಿದೆ.
2015 ಡಿಸೆಂಬರ್ ನಲ್ಲಿ ಆರಂಭವಾಗಿ 2023ರಲ್ಲಿ ಗುತ್ತಿಗೆದಾರರಿಗೆ 16-08-2022ರಿಂದ 15-06-2023ರ ತನಕ 10ನೇ ಬಾರಿ ಕಾಲಾವಧಿ ವಿಸ್ತರಣೆ ನೀಡಿ ಸುಧೀರ್ಘ 7.5 ವರ್ಷಗಳಿಗೂ ಹೆಚ್ಚು ಕಾಲ ನಡೆದ ಈ ಯೋಜನೆಗೆ ಹಿಡಿದ ಗ್ರಹಣ ಇನ್ನೂ ನಿವಾರಣೆಯಾಗಿಲ್ಲ. ಈವರೆಗೂ ಇನ್ನೂ ಉದ್ಘಾಟನೆಯಾಗದೇ ಮೂಲೆಗುಂಪಾಗಿಸಲು ಕಾರಣಕರ್ತವಾದ ಕಂಪನಿಯ ಪರ ಪಾಲಿಕೆಯ ಹಿರಿಯ ಎಂಜಿನಿಯರ್ ಗಳ ಬೆನ್ನಿಗೆ ನಿಂತಿರುವುದು ತಡವಾಗಿ ಬೆಳಕಿಗೆ ಬಂದಿದೆ. ಮಲ್ಟಿಲೆವೆಲ್ ಕಾರ್ ಪಾರ್ಕಿಂಗ್ ಕಟ್ಟಡ ನಿರ್ಮಿಸಲು ಬಿಬಿಎಂಪಿ ಟೆಂಡರ್ ಮೂಲಕ ಹೈದರಾಬಾದ್ ಮೂಲದ ಕಂಪನಿ ಪ್ರಾಜೆಕ್ಟ್ಸ್ ಲಿಮಿಟೆಡ್ ಗೆ ನೀಡಿತ್ತು. ಟೆಂಡರ್ ಪ್ರಕಾರವಾಗಿ ಯೋಜನೆ ಪೂರ್ಣಗೊಳಿಸಲು 24 ತಿಂಗಳು ಗಡುವು ನಿಗದಿಪಡಿಸಲಾಗಿತ್ತು. ನಗರೋತ್ಥಾನ ಯೋಜನೆಯಡಿ 79.81 ಕೋಟಿ ರೂ. ವೆಚ್ಚದಲ್ಲಿ ಡಿಸೆಂಬರ್ 2015 ರಲ್ಲಿ ಕೆಲಸ ಪ್ರಾರಂಭವಾಯಿತು ಮತ್ತು ಜುಲೈ 2017 ರಲ್ಲಿ ಪೂರ್ಣಗೊಳಿಸಲು ಗಡುವು ನೀಡಲಾಗಿತ್ತು.
ಆದರೆ ಕೋವಿಡ್ ಸಾಂಕ್ರಾಮಿಕ ರೋಗ, ಅಕಾಲಿಕ ಮಳೆಯನ್ನು ಹೊರತುಪಡಿಸಿ, ಕೆಎಂವಿ ಪ್ರಾಜೆಕ್ಟ್ಸ್ ಕಂಪನಿಯ ನಿರ್ಲಕ್ಷ ಹಾಗೂ ಅವೈಜ್ಞಾನಿಕ ಕೆಲಸದಿಂದಾಗಿ, ಗುತ್ತಿಗೆದಾರ ಕಂಪನಿ ಯೋಜನೆಯನ್ನು ಸಕಾಲದಲ್ಲಿ ಪೂರ್ಣಗೊಳಿಸಲು ವಿಫಲವಾಯಿತು. ಕಾಮಗಾರಿ ಪೂರ್ಣಗೊಳಿಸಲು ಬಿಬಿಎಂಪಿಗೆ ಈ ಗುತ್ತಿಗೆ ಕಂಪನಿಯು ಸಮಯವನ್ನು ವಿಸ್ತರಿಸಲು (EOT) ವಿನಂತಿಸಿದ್ದರು. ಬರೊಬ್ಬರಿ ಒಟ್ಟು 10 ಬಾರಿ ಗಡುವು ವಿಸ್ತರಿಸಿದ ಬಳಿಕ ಅಂತಿಮವಾಗಿ 2023ರ ಮಧ್ಯಭಾಗದಲ್ಲಿ ಈ ಯೋಜನೆಯನ್ನು ಪೂರ್ಣಗೊಳಿಸಿ ಬಿಬಿಎಂಪಿಗೆ ಹಸ್ತಾಂತರಿಸಿದರು.
ಬಿಬಿಎಂಪಿ ಯೋಜನಾ ವಿಭಾಗದ ಮುಖ್ಯ ಎಂಜಿನಿಯರ್ ಗುತ್ತಿಗೆದಾರರಿಗೆ ಎಂಟು ಇಒಟಿ ನೀಡಿದ್ದರೆ, ಬಳಿಕ ಈ ಯೋಜನೆಯನ್ನು ಪ್ರಧಾನ ಅಭಯಂತರರು ಹಾಗೂ ರಸ್ತೆ ಮತ್ತು ಮೂಲಭೂತ ಸೌಕರ್ಯ ವಿಭಾಗ ಹೊಣೆ ಹೊತ್ತಿರುವ ಪ್ರಹ್ಲಾದ್ ಬಿಬಿಎಂಪಿ ಕೇಂದ್ರ ಯೋಜನೆಯಿಂದ ತಮ್ಮ ರಸ್ತೆ ಮತ್ತು ಮೂಲಸೌಕರ್ಯ ವಿಭಾಗಕ್ಕೆ ಪಡೆದು ಎರಡು ಬಾರಿ ಇಒಟಿಯನ್ನು ಈ ಕೆಎಂವಿ ಕನ್ಸ್ ಸ್ಟ್ರಕ್ಷನ್ ಸಂಸ್ಥೆಗೆ ನೀಡಿದ್ದಾರೆ. ಮೊದಲ ಐದು ಬಾರಿಯ ಸಮಯ ವಿಸ್ತರಣೆಗೆ ಗುತ್ತಿಗೆದಾರರಿಗೆ ಯಾವುದೇ ದಂಡವಿಲ್ಲದೆ ಅವಕಾಶ ನೀಡಲಾಯಿತು. 6ನೇ ಬಾರಿಗೆ 2 ಲಕ್ಷ ರೂಪಾಯಿ ಹಣವನ್ನು ಬಿಲ್ ನಲ್ಲಿ ಕಟಾವು ಮಾಡಿಕೊಂಡು ದಂಡದೊಂದಿಗೆ ಇಒಟಿ ನೀಡಲಾಗಿದೆ. ನಂತರ 7ನೇ ಬಾರಿ ಇಒಟಿಗೆ 5 ಲಕ್ಷ ದಂಡ ವಿಧಿಸಲಾಗಿತ್ತು, ಆದರೆ ಟೆಂಡರ್ ನಿಯಮಗಳನ್ನಾಧರಿಸಿ ಬಳಿಕ 5 ಲಕ್ಷ ರೂ. ದಂಡವನ್ನು ಪರಿಷ್ಕರಿಸಿ ನೂತನ ದಂಡ ರೂ 1,18,89,000 ವಿಧಿಸಲಾಗಿತ್ತು. ಅಂತಿಮವಾಗಿ 8ನೇ ಇಒಟಿಯನ್ನು ಡಿಸೆಂಬರ್ 23, 2022 ರಂದು ಮಾಡಿದಾಗ ಬರೋಬ್ಬರಿ 8,38,83,000 (8.38 ಕೋಟಿ ರೂ.) ಹಣವನ್ನು ಗುತ್ತಿಗೆದಾರರಿಗೆ ದಂಡವಾಗಿ ವಿಧಿಸಿ ಬಿಲ್‌ನಲ್ಲಿ ಕಟಾವು ಮಾಡಿ ಗುತ್ತಿಗೆದಾರರಿಗೆ ಕಾಮಗಾರಿಯನ್ನು ಪೂರ್ಣಗೊಳಿಸಲು ಅವಕಾಶ ಮಾಡಿಕೊಟ್ಟಿದ್ದರು.
ಗುತ್ತಿಗೆದಾರರಿಗೆ ವಿಧಿಸಿದ್ದ 8.38 ಕೋಟಿ ರೂ. ದಂಡ EIC ಪ್ರಹ್ಲಾದ್ ನಿಂದ ಮನ್ನಾ :
ಆದರೆ ಬಿಬಿಎಂಪಿಯ ಪ್ರಧಾನ ಅಭಿಯಂತರ (Engineer-in-Chief) ಬಿ.ಎಸ್ ಪ್ರಹ್ಲಾದ್ ಏಪ್ರಿಲ್ 12, 2023 ರಂದು 8,38,83,000 ರೂ.ಗಳ ದಂಡವನ್ನು ಮನ್ನಾ ಮಾಡಿ ಪಾಲಿಕೆ ಮುಖ್ಯ ಅಭಿಯಂತರರ ಆದೇಶ ರದ್ದು ಮಾಡಿದ್ದಾರೆ. ಈ ಯೋಜನೆಯ ಬಗ್ಗೆ ತಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸಿ ಬಿಎಸ್ ಪ್ರಹ್ಲಾದ್ ತಮ್ಮ ಕಡತದಲ್ಲಿ “This is one the most revenue fetching projects of BBMP. It is unknown how EOT could not be extended and how for four months Rs 8,38.83,000 fine could be levied. The orders of EOT dated December 23,2022 of the then Chief Engineer (Projects) is withdrawn and cancelled.”
(ಇದು ಬಿಬಿಎಂಪಿಗೆ ಹೆಚ್ಚು ಆದಾಯ ತರುವ ಯೋಜನೆಯಾಗಿದೆ. EOT ಅನ್ನು ಹೇಗೆ ವಿಸ್ತರಿಸಲು ಸಾಧ್ಯವಿಲ್ಲ ಮತ್ತು ನಾಲ್ಕು ತಿಂಗಳವರೆಗೆ 8,38,83,000 ರೂ. ದಂಡವನ್ನು ಹೇಗೆ ವಿಧಿಸಬಹುದು ಎಂಬುದು ತಿಳಿದಿಲ್ಲ. ಆಗಿನ ಮುಖ್ಯ ಇಂಜಿನಿಯರ್ (ಪ್ರಾಜೆಕ್ಟ್‌ಗಳು) ಡಿಸೆಂಬರ್ 23,2022 ರ ಇಒಟಿಯ ಆದೇಶಗಳನ್ನು ಹಿಂಪಡೆಯಲಾಗಿದೆ ಮತ್ತು ರದ್ದುಗೊಳಿಸಲಾಗಿದೆ.) ಎಂದು ಟಿಪ್ಪಣಿ ಹಾಳೆಯಲ್ಲಿ ಬರೆದು ಯೋಜನಾ ವಿಭಾಗದ ಚೀಫ್ ಎಂಜಿನಿಯರ್ ಲೋಕೇಶ್ ಅವರು ಗುತ್ತಿಗೆದಾರರಿಗೆ ಹಾಕಿದ ದಂಡವನ್ನು ಸಾರಾ ಸಗಟಾಗಿ ಇಂಜಿನಿಯರಿಂಗ್ ಚೀಫ್ ಪ್ರಹ್ಲಾದ್ ರದ್ದು ಮಾಡಿದ್ದರ ಹಿಂದೆ ಭಾರೀ “ವ್ಯವಹಾರ” ನಡೆದಿರುವ ಶಂಕೆ ವ್ಯಕ್ತವಾಗಿದೆ.
ಏಕೆಂದರೆ ಗಾಂಧಿನಗರ ಸುತ್ತಮುತ್ತಲ ಪ್ರದೇಶದಲ್ಲಿ ವಾಹನ ದಟ್ಟಣೆ ಅತಿ ಹೆಚ್ಚಾಗಿದ್ದು, ವಾಹನಗಳಿಗೆ ಪಾರ್ಕಿಂಗ್ ಸಮಸ್ಯೆಯಿಂದಲೇ ಪ್ರತ್ಯಕ್ಷ ಮತ್ತು ಪರೋಕ್ಷವಾಗಿ ನಗರದ ಸುಗಮ ವಾಹನ ಸಂಚಾರಕ್ಕೆ ಅಡಚಣೆಯಾಗುತ್ತಿದೆ. ಹೀಗಿರುವಾಗ ಸಕಾಲಕ್ಕೆ ಕಾಮಗಾರಿಯನ್ನು ಪೂರ್ಣಗೊಳಿಸದೆ ಯೋಜನೆ ಅನುಷ್ಠಾನ ಮಾಡುವಲ್ಲಿ ವೃಥಾ ತಡ ಮಾಡಿದ ಸಂಸ್ಥೆಗೆ ಯೋಜನಾ ವಿಭಾಗದ ಚೀಫ್ ಎಂಜಿನಿಯರ್ ತಮಗಿದ್ದ ಅಧಿಕಾರವನ್ನು ಬಳಸಿ ಟೆಂಡರ್ ಷರತ್ತುಗಳಲ್ಲಿನ ಅಂಶಗಳನ್ನು ಉಲ್ಲಂಘಿಸಿದ ಕೆಎಂವಿ ಸಂಸ್ಥೆಗೆ ದಂಡವನ್ನು ವಿಧಿಸಿದ್ದರೆ, ಅದನ್ನು ಇಂಜಿನಿಯರಿಂಗ್ ಚೀಫ್ ಯಾವ ಆಧಾರದಲ್ಲಿ ಮತ್ತು ನಿಯಮಗಳಲ್ಲಿನ ಅವಕಾಶದ ಅಡಿಯಲ್ಲಿ ದಂಡವನ್ನು ರದ್ದುಪಡಿಸಿದರು ಎಂಬುದು ನಿಜಕ್ಕೂ ಹಲವು ಅನುಮಾನಗಳಿಗೆ ಕಾರಣವಾಗಿದೆ. ಸಾರ್ವಜನಿಕರ ತೆರಿಗೆ ಹಣವಾಗಿರುವ ಸುಮಾರು 80 ಕೋಟಿ ರೂಪಾಯಿ ಮೊತ್ತದ ಯೋಜನೆಯನ್ನು 24 ತಿಂಗಳಲ್ಲಿ ಮುಗಿಸಬಹುದಾಗಿದ್ದರೂ, ಸುಮಾರು 6 ವರ್ಷಗಳ ಕಾಲ ವಿಳಂಬ ಮಾಡಲಾಯಿತು.
ತಡೆ ಹಿಡಿದಿದ್ದ 25 ಲಕ್ಷ ಹಣವನ್ನು ಕೈಬಿಟ್ಟರು? :
ಮುಂದುವರೆದು ಇಐಸಿ ಪ್ರಹ್ಲಾದ್ ಅವರು ಟಿಪ್ಪಣಿ ದಾಖಲೆಯಲ್ಲಿ, ” A considerate opinion should be formed for imposition of penalty for delay. The actual value of work to be completed, Nature of work, PMC’s recommendations and issuance of Good for Construction drawings should be the basis for imposition of penalty. The project is very good and if properly utilized huge revenue can be expected. The Contractor may have also going slow in handing over the project to BBMP. Every month there is loss. As a warning to the contractor for not handing over the site to BBMP, an amount of Rs 25 Lakh may be withheld from the bills and other bills may be processed for payment accordingly” ಎಂದು ಬರೆದಿದ್ದಾರೆ.
(ವಿಳಂಬಕ್ಕಾಗಿ ದಂಡವನ್ನು ವಿಧಿಸಲು ಪರಿಗಣನೆಯ ಅಭಿಪ್ರಾಯವನ್ನು ರಚಿಸಬೇಕು. ಪೂರ್ಣಗೊಳಿಸಬೇಕಾದ ಕೆಲಸದ ನೈಜ ಮೌಲ್ಯ, ಕೆಲಸದ ಸ್ವರೂಪ, PMC ಯ ಶಿಫಾರಸ್ಸುಗಳು ಮತ್ತು ನಿರ್ಮಾಣಕ್ಕಾಗಿ ಉತ್ತಮ ರೇಖಾಚಿತ್ರಗಳ ಅಧ್ಯಾಯನದ ಬಳಿಕ ಈ ದಂಡವನ್ನು ವಿಧಿಸಲು ಆಧಾರವಾಗಿಸಬೇಕು. ಯೋಜನೆಯು ತುಂಬಾ ಚೆನ್ನಾಗಿದ್ದು, ಸರಿಯಾಗಿ ಬಳಸಿಕೊಂಡರೆ ದೊಡ್ಡ ಆದಾಯವನ್ನು ನಿರೀಕ್ಷಿಸಬಹುದು. ಗುತ್ತಿಗೆದಾರರು ಯೋಜನೆಯನ್ನು ಬಿಬಿಎಂಪಿಗೆ ಹಸ್ತಾಂತರಿಸುವಲ್ಲಿ ನಿಧಾನವಾಗಿರಬಹುದು. ಪ್ರತಿ ತಿಂಗಳು ನಷ್ಟವಾಗುತ್ತಿರಬಹುದು. ಬಿಬಿಎಂಪಿಗೆ ಕಟ್ಟಡ ಹಸ್ತಾಂತರಿಸದ ಗುತ್ತಿಗೆದಾರರಿಗೆ ಎಚ್ಚರಿಕೆಯಾಗಿ ರೂ 25 ಲಕ್ಷ ರೂಪಾಯಿ ಮೊತ್ತವನ್ನು ಬಿಲ್‌ಗಳಿಂದ ತಡೆಹಿಡಿಯಬಹುದು ಮತ್ತು ಅದರ ಪ್ರಕಾರ ಪಾವತಿಗಾಗಿ ಇತರ ಬಿಲ್‌ಗಳನ್ನು ಪ್ರಕ್ರಿಯೆಗೊಳಿಸಬಹುದು.”)
ಮೇ 19, 2023 ರಂದು, ಬಿಎಸ್ ಪ್ರಹ್ಲಾದ್ ಹಳೆಯ ಎಲ್ಲಾ ಬಿಲ್‌ಗಳನ್ನು ಡಿಲಿಟ್ ಮಾಡಿ ಮತ್ತು ಪಾವತಿಗಾಗಿ ಹೊಸ ಬಿಲ್‌ಗಳನ್ನು ಅಪ್ ಲೋಡ್ ಮಾಡಲು ಬಿಬಿಎಂಪಿ ಟ್ರಾಫಿಕ್ ಎಂಜಿನಿಯರಿಂಗ್ ಸೆಲ್ (ಟಿಇಸಿ) ಕಾರ್ಯನಿರ್ವಾಹಕ ಎಂಜಿನಿಯರ್‌ಗೆ ಸಲಹೆ ನೀಡಿದ್ದಾರೆ. ಅಲ್ಲದೆ, ತಾವೇ ವಿಧಿಸಿರುವ ರೂ 25 ಲಕ್ಷದ ಹಣವನ್ನು ಸಹ ಕೈಬಿಟ್ಟಿದ್ದಾರೆ. ಈ ಮೂಲಕ ಫೈಲ್ ಅನ್ನು ಮುಚ್ಚಿ, ಖಾಸಗಿ ಗುತ್ತಿಗೆದಾರನಿಗೆ ಹಣವನ್ನು ಬಿಡುಗಡೆಗೊಳಿಸಲು ಮುಂದಾಗಿರುವುದು ದೊಡ್ಡ ಮಟ್ಟದ “ವ್ಯವಹಾರ” ನಡೆದಿರುವ ಶಂಕೆ ವ್ಯಕ್ತವಾಗಿದೆ. ಇದೊಂದು ರೀತಿಯಲ್ಲಿ ಬೂದಿ ಮುಚ್ಚಿದ ಕೆಂಡದಂತಿದೆ.
ಯಾವ ಕಾನೂನಿನ ಆಧಾರದ ಮೇಲೆ ಸಿಇ ಆದೇಶ ರದ್ದು? :
ಇಷ್ಟು ದೊಡ್ಡ ಮೊತ್ತದ ಹಣವನ್ನು ಸಾರಾಸಗಟಾಗಿ ಯಾವ ಆಧಾರದ ಮೇಲೆ ಬಿಬಿಎಂಪಿಯ ಪ್ರಧಾನ ಅಭಿಯಂತರ ಬಿ.ಎಸ್ ಪ್ರಹ್ಲಾದ್ ತಳ್ಳಿಹಾಕಿದ್ದಾರೆ? ಕಾನೂನು ರೀತಿ ಸ್ಥಾಪನೆಯಾದ ಬಿಬಿಎಂಪಿಯಲ್ಲಿ, ಯೋಜನೆ ವಿಭಾಗದ ಮುಖ್ಯ ಅಭಿಯಂತರ ಲೋಕೇಶ್ ಅವರ ಆದೇಶಗಳಿಗೆ ಅವರ ಹಿರಿಯ ಅಧಿಕಾರಿಯೇ ಕಿಮ್ಮತ್ತು ನೀಡಿಲ್ಲ, ಎಂದಾದರೆ ಪಾಲಿಕೆ ವ್ಯಾಪ್ತಿಯಲ್ಲಿ ಯೋಜನೆಗಳನ್ನು ಕೈಗೊಂಡಿರುವ ಗುತ್ತಿಗೆದಾರರಿಗೆ ಪ್ರಹ್ಲಾದ್ ಅವರು ಕೈಗೊಂಡ ಭಾರೀ ಮೊತ್ತದ ದಂಡ ಮನ್ನಾ ರಿಯಾಯಿತು ಪ್ರೇರಣೆಯಾದರೆ, ಸಾರ್ವಜನಿಕರ ತೆರಿದೆ ದುಡ್ಡಿನಲ್ಲಿ ನಗರದಲ್ಲಿ ನಡೆಯುತ್ತಿರುವ ಸಾವಿರಾರು ಕೋಟಿ ರೂ. ಮೊತ್ತದ ಕಾಮಗಾರಿಗಳು ವಿಳಂಬವಾದರೆ ಅದಕ್ಕೆ ಯಾರು ಹೊಣೆ ಎಂಬ ಪ್ರಶ್ನೆ ಎದುರಾಗಿದೆ. ಹೀಗೆ ನೂರಾರು ಯೋಜನೆಗಳನ್ನು ವೃಥಾ ಕಾಲಹರಣ ಮಾಡಿದಾಗಲೆಲ್ಲ ಹಿರಿಯ ಅಧಿಕಾರಿಗಳು ಯೋಜನಾ ವೆಚ್ಚ ಹೆಚ್ಚಳ ಮಾಡಿದ್ರೆ ಅದರ ಹೊರೆ ಬಿಬಿಎಂಪಿಗೆ ಆಗಲ್ವಾ? ಇದಕ್ಕೆ ಇಂಜಿನಿಯರಿಂಗ್ ಚೀಫ್ ಪ್ರಹ್ಲಾದ್, ಯೋಜನಾ ವಿಭಾಗ ವಿಶೇಷ ಆಯುಕ್ತರಾದ ಹರೀಶ್ ಕುಮಾರ್, ಬಿಬಿಎಂಪಿ ಮುಖ್ಯ ಆಯುಕ್ತರಾದ ತುಷಾರ್ ಗಿರಿನಾಥ್ ಉತ್ತರಿಸಬೇಕಿದೆ.
450 ದ್ವಿಚಕ್ರ ವಾಹನಗಳು ಹಾಗೂ 550 ಕಾರುಗಳನ್ನು ನಿಲ್ಲಿಸಲು ಅವಕಾಶವಿರುವ ಫ್ರೀಡಂ ಪಾರ್ಕ್ ಮಲ್ಟಿಲೆವೆಲ್ ಪಾರ್ಕಿಂಗ್ ನಿರ್ವಹಣೆಗಾಗಿ ಬಿಬಿಎಂಪಿಯು ಒಟ್ಟು ಐದು ಬಾರಿ ಟೆಂಡರ್ ಕರೆದರೂ ಬಹು ಹಂತದ ವಾಹನ ನಿಲ್ದಾಣ ಯೋಜನೆಯ ನಿರ್ವಹಣೆಗೆ ಗುತ್ತಿಗೆದಾರರೂ ಬಾರದೆ ಅಂತಿಮವಾಗಿ 6ನೆಯ ಬಾರಿ ಟೆಂಡರ್ ಆಗಿ, ಗುತ್ತಿಗೆದಾರರೊಬ್ಬರನ್ನು ಅಖೈರುಗೊಳಿಸಲಾಗಿದ್ದು, ಇದಕ್ಕೆ ಸರ್ಕಾರದಿಂದ ಅನುಮೋದನೆಯು ದೊರತಿದ್ದು, ಸದ್ಯದಲ್ಲೇ ಆ ಗುತ್ತಿಗೆದಾರರಿಗೆ ಕಾರ್ಯಾದೇಶ ಲಭಿಸಲಿದೆ ಎಂದು ಮೂಲಗಳು ತಿಳಿಸಿವೆ.
ಈ ಪ್ರಕರಣದ ಬಗ್ಗೆ ಸದ್ಯದಲ್ಲೇ ಲೋಕಾಯುಕ್ತಕ್ಕೆ ದೂರು :
“ಕಾನೂನು ಪ್ರಕಾರ ಪ್ರಾಜೆಕ್ಟ್ ಚೀಫ್ ಎಂಜಿನಿಯರ್ ಗಾಂಧಿನಗರ ಮಲ್ಟಿಲೆವೆಲ್ ಪಾರ್ಕಿಂಗ್ ಯೋಜನೆಯಲ್ಲಿ ವಿಳಂಬ ಮತ್ತಿತರ ಕಾರಣಕ್ಕೆ ವಿಧಿಸಿದ್ದ 8.38 ಕೋಟಿ ರೂ. ಮೊತ್ತದ ಬೃಹತ್ ಮೊತ್ತದ ದಂಡವನ್ನು ಮತ್ತೊಬ್ಬ ಅಧಿಕಾರಿಯು ಅದು ಯಾವ ನಿಯಮ ದಡಿಯಲ್ಲಿ ಹಿಂದಿನ ಚೀಫ್ ಎಂಜಿನಿಯರ್ ಆದೇಶವನ್ನು ರದ್ದುಗೊಳಿಸಿದ್ದಾರೆ. ಸುಮ್ಮ ಸುಮ್ಮನೆ ಅಷ್ಟು ದೊಡ್ಡ ಮೊತ್ತವನ್ನು ಯಾವ ಅಧಿಕಾರಿಯೂ ಹಾಕಲ್ಲ. ಆದರೂ ಇಷ್ಟು ದೊಡ್ಡ ಮೊತ್ತದ ದಂಡ ಹಾಕಿದ ಹಿಂದಿನ ಅಧಿಕಾರಿಯ ಆದೇಶವನ್ನು ಈ ಅಧಿಕಾರಿ ರದ್ದು ಮಾಡೋಕೆ ಆ ಕಾಂಟ್ರಾಕ್ಟರ್ ಇವರ ಸಂಬಂಧಿಯೇ? ಇದರಲ್ಲಿ 1.5 ಯಿಂದ 2 ಕೋಟಿ ರೂ. ಮೊತ್ತದ ಭ್ರಷ್ಟಾಚಾರ ನಡೆದಿದೆ. ಕಾನೂನು ಉಲ್ಲಂಘಿಸಿ ಇಲ್ಲಿ ಕೆಲಸ ಮಾಡಲಾಗಿದೆ. ಈ ಬಗ್ಗೆ ಪಾಲಿಕೆಯಲ್ಲಿ ಆರ್ ಟಿಐ ಹಾಕಿ ದಾಖಲೆ ಸಮೇತ ಲೋಕಾಯುಕ್ತ ಕಚೇರಿಗೆ ಸದ್ಯದಲ್ಲೇ ದೂರು ದಾಖಲಿಸುತ್ತೇನೆ.”
- ಎನ್.ಆರ್.ರಮೇಶ್, ಬಿಬಿಎಂಪಿ ಆಡಳಿತ ಪಕ್ಷದ ಮಾಜಿ ನಾಯಕರು