ಬೆಂಗಳೂರು, ಮಾ.12 www.bengaluruwire.com : ಪೀಣ್ಯದ ರಾಜಗೋಪಾಲ್ ನಗರದ ಬಳಿಯ ಗುಜರಿ ಗೋದಾಮಿನಲ್ಲಿ ಸೋಮವಾರ ರಾತ್ರಿ ಭಾರಿ ಬೆಂಕಿ ಕಾಣಿಸಿಕೊಂಡಿದ್ದು, ನಿವಾಸಿಗಳಲ್ಲಿ ಆತಂಕವನ್ನುಂಟು ಮಾಡಿತ್ತು. ಬಳಿಕ ಅಗ್ನಿಶಾಮಕ ಸಿಬ್ಬಂದಿ ದಳಗಳು ಬೆಂಕಿಯನ್ನು ತಹಬಂದಿಗೆ ತರುವಲ್ಲಿ ಯಶಸ್ವಿಯಾದರು.
ಹೆಗ್ಗನಹಳ್ಳಿ ವಾರ್ಡ್ ನ ಕರೀಂ ಸಾಹೇಬ್ ಲೇಔಟ್ ಮುಖ್ಯರಸ್ತೆ ಬಳಿಯ ಗುಜರಿ ಗೋದಾಮಿನಲ್ಲಿ ಶಾರ್ಟ್ ಸರ್ಕ್ಯೂಟ್ ನಿಂದ ಬೆಂಕಿ ಕಾಣಿಸಿಕೊಂಡಿತ್ತು. ಬೆಂಕಿಯು ಹತ್ತಿರದ ಮನೆಗಳಿಗೆ ಹರಡಿ ಹಾನಿಯನ್ನುಂಟು ಮಾಡಿತು. ರಾತ್ರಿ 10.15ರ ಸುಮಾರಿಗೆ ಈ ಘಟನೆ ನಡೆದಿದೆ. ತಮ್ಮ ತಮ್ಮ ಮನೆಗಳಿಗೆ ಬೆಂಕಿ ಹರಡುತ್ತಿದ್ದಂತೆ ಮನೆಯಲ್ಲಿದ್ದ ಎಲ್ಲರೂ ಹೊರ ಬಂದು ಕಿರುಚಾಡಲು ಶುರು ಮಾಡಿದರು. ಘಟನೆಯಿಂದ ಕೆಲ ಮನೆಗಳಿಗೆ ಹಾನಿ ಉಂಟಾಗಿದೆ. ಇನ್ನು ಅಗ್ನಿ ಅವಘಡದಲ್ಲಿ ಅದೃಷ್ಟವಶಾತ್ ಯಾವುದೇ ಪ್ರಾಣ ಹಾನಿ ಆಗಿಲ್ಲ.
ರಾಜಗೋಪಾಲನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದ್ದು, 8 ಅಗ್ನಿಶಾಮಕ ವಾಹನಗಳ ಸಿಬ್ಬಂದಿ ಬೆಂಕಿ ನಂದಿಸಲು ಹರಸಾಹಸ ಪಟ್ಟರು. ಗುಜರಿ ಅಂಗಡಿಗೆ ಬೆಂಕಿ ಹತ್ತಿಕೊಂಡು ಅದರ ಹೊಗೆ ಮುಗಿಲೆತ್ತರಕ್ಕೆ ವ್ಯಾಪಿಸಿದ್ದ ಕಾರಣ ದೂರದ ವಿಜಯನಗರ, ರಾಜಾಜಿನಗರ ಸುತ್ತಮುತ್ತಲ ಜನರಿಗೂ ಕಾಣಿಸಿದ ಕಾರಣ ಅವರೂ ಕೂಡ ಗಾಬರಿಗೊಂಡಿದ್ದರು. ಗುಜರಿ ಗೋದಾಮಿನಲ್ಲಿನ ತ್ಯಾಜ್ಯ ವಸ್ತುಗಳಿಂದ ಬೆಂಕಿ ವೇಗವಾಗಿ ವ್ಯಾಪಕವಾಗಿ ಹರಡಿತ್ತು. ಆದರೆ ಅಗ್ನಿಶಾಮಕ ಇಲಾಖೆ ಅಧಿಕಾರಿಗಳು ತಕ್ಷಣ ಕಾರ್ಯಪ್ರವೃತ್ತರಾಗಿ, ಅಗ್ನಿಶಾಮಕ ಸಿಬ್ಬಂದಿಯ ಮೂಲಕ ಬೆಂಕಿಯನ್ನು ನಂದಿಸುವಲ್ಲಿ ಯಶಸ್ವಿಯಾದರು.
ಮಾರ್ಚ್ 9ರಂದು ಬೆಂಗಳೂರಿನ ಮಾಗಡಿ ರಸ್ತೆ ಪೊಲೀಸ್ ಠಾಣೆ ವ್ಯಾಪ್ತಿಯ ವೆಸ್ಟ್ ಆಫ್ ಕಾರ್ಡ್ ರಸ್ತೆಯಲ್ಲಿ ಮೋಟಾರು ಗ್ಯಾರೇಜ್‌ನಲ್ಲಿ ಆಕಸ್ಮಿಕ ಸ್ಫೋಟ ಸಂಭವಿಸಿತ್ತು. ಈ ಘಟನೆಯಲ್ಲಿ ನಾಲ್ವರು ಗಾಯಗೊಂಡಿದ್ದರು. ವೆಲ್ಡಿಂಗ್ ಕೆಲಸಕ್ಕೆ ಬಳಸುವ ಗ್ಯಾಸ್ ಟ್ಯಾಂಕ್ ಸ್ಫೋಟಗೊಂಡಿದ್ದರಿಂದ ಈ ಘಟನೆ ಸಂಭವಿಸಿದೆ ಎಂದು ಶಂಕಿಸಲಾಗಿತ್ತು.