ಬೆಂಗಳೂರು, ಮಾ.12 www.bengaluruwire.com: ಬೆಂಗಳೂರು ನೀರಿನ ಸಮಸ್ಯೆ ಹಿನ್ನೆಲೆ ದೊಡ್ಡಗಾತ್ರದ ಪ್ರಮುಖ ಗ್ರಾಹಕರ ನೀರಿನ ಪೂರೈಕೆಯಲ್ಲಿ ಶೇ.20ರಷ್ಟು ನೀರನ್ನು ಕಡಿತಗೊಳಿಸಲು ನಿರ್ಧರಿಸಲಾಗಿದ್ದು, ಮಾ.15ರಿಂದ ಹಂತಹಂತವಾಗಿ ಮಂಡಳಿಯಿಂದ ಪೂರೈಸಲಾಗುತ್ತಿರುವ ಕಾವೇರಿ ನೀರನ್ನು ಕಡಿತಗೊಳಿಸಲಾಗುವುದು ಎಂದು ಬೆಂಗಳೂರು ಜಲಮಂಡಳಿ ಅಧ್ಯಕ್ಷ ಡಾ.ವಿ.ರಾಮ್ ಪ್ರಸಾತ್ ಮನೋಹರ್ ತಿಳಿಸಿದ್ದಾರೆ.
ಬೆಂಗಳೂರು ಜಲಮಂಡಳಿಯ ವತಿಯಿಂದ ದೊಡ್ಡಗಾತ್ರದ ನೀರಿನ ಸಂಪರ್ಕ ಪಡೆದಿರುವ ಪ್ರಮುಖ ಗ್ರಾಹಕರುಗಳೊಂದಿಗೆ ಮಂಡಳಿ ಅಧ್ಯಕ್ಷ ಡಾ.ವಿ.ರಾಮ್ ಪ್ರಸಾತ್ ಮನೋಹರ್ ಅವರು ಮಂಗಳವಾರ ಮಂಡಳಿಯ ಸಭಾಂಗಣದಲ್ಲಿ ಮಂಗಳವಾರ ಸಭೆ ನಡೆಸಿದರು.
ಸದ್ಯ ಬೆಂಗಳೂರಿಗೆ ನೀರಿನ ಸಮಸ್ಯೆ ಎದುರಾಗಿದೆ. ಬೆಂಗಳೂರಿನಲ್ಲಿ 1.40ಕೋಟಿ ಜನಸಂಖ್ಯೆ ಇದ್ದು,ಈ ಸಂದರ್ಭದಲ್ಲಿ ನೀರು ಒದಗಿಸುವುದು ಸವಾಲಾಗಿದೆ. ಮಂಡಳಿ ಬೆಂಗಳೂರಿಗರಿಗೆ ಅಗತ್ಯ ನೀರು ಒದಗಿಸಲು ಎಲ್ಲ ರೀತಿಯ ಕ್ರಮಗಳನ್ನು ಕೈಗೊಳ್ಳುತ್ತಿದೆ. ಬೆಂಗಳೂರಿನಲ್ಲಿ ದೊಡ್ಡಗಾತ್ರದ ನೀರಿನ ಸಂಪರ್ಕ ಪಡೆದಿರುವವರು 3 ಲಕ್ಷ ಜನರಿದ್ದು, ತಾವುಗಳು 1.40ಕೋಟಿ ಜನರ ಹಿತದೃಷ್ಟಿಯಿಂದ ಏ.1ರಿಂದ ಶೇ.20ರಷ್ಟು ನೀರನ್ನು ದೊಡ್ಡ ಗಾತ್ರದ ಗ್ರಾಹಕರಿಗೆ ಕಡಿತಗೊಳಿಸಲಾಗುವುದು. ಮಂಡಳಿ ಕೈಗೊಂಡಿರುವ ಈ ನಿರ್ಧಾರದ ಜೊತೆ ಗ್ರಾಹಕರು ಕೈಜೋಡಿಸಬೇಕು ಎಂದು ಹೇಳಿದರು.
ದೊಡ್ಡಗಾತ್ರದ ನೀರಿನ ಸಂಪರ್ಕ ಪಡೆದಿರುವ 38 ಪ್ರಮುಖ ಗ್ರಾಹಕರ ಪೈಕಿ ನಿಮ್ಹಾನ್ಸ್, ವಿಕ್ಟೋರಿಯಾ ಆಸ್ಪತ್ರೆ, ಏರ್ ಫೋರ್ಸ್ ಕಮಾಂಡಿಂಗ್ ಆಸ್ಪತ್ರೆ ಹೊರತುಪಡಿಸಿ ಉಳಿದ 35 ಗ್ರಾಹಕರಿಗೆ ಮಂಡಳಿ ವತಿಯಿಂದ ಇದುವರೆಗೆ ಶೇ.95ರಿಂದ ಶೇ.100ರಷ್ಟು ಪೂರೈಸಲಾಗುತ್ತಿದ್ದು, ಇದರಲ್ಲಿ ಇನ್ಮುಂದೆ ಶೇ.20ರಷ್ಟು ನೀರು ಪೂರೈಕೆ ಕಡಿತಗೊಳಿಸಲಾಗುವುದು ಎಂದು ರಾಮ್ ಪ್ರಸಾತ್ ಮನೋಹರ್ ತಿಳಿಸಿದರು.
ಅತಿಹೆಚ್ಚು ನೀರು ಬಳಸುವ ಸಂಸ್ಥೆಗಳಾವುವು?:
ರೈಲ್ವೆ, ಎಚ್ಎಎಲ್,ಏರ್ ಪೋರ್ಸ್, ಡಿಫೆನ್ಸ್, ಸಿ.ಆರ್.ಪಿ.ಎಫ್,ಬಯೋಕಾನ್,ನಿಮ್ಹಾನ್ಸ್, ವಿಕ್ಟೋರಿಯಾ ಆಸ್ಪತ್ರೆ ಸೇರಿದಂತೆ ದೊಡ್ಡಗಾತ್ರದ ನೀರಿನ ಸಂಪರ್ಕ ಪಡೆದಿರುವ 38 ಪ್ರಮುಖ ಸಂಸ್ಥೆಗಳು ತಮ್ಮ ಕ್ಯಾಂಪಸ್ ನಲ್ಲಿ ನೀರಿನ ಪ್ರಾಮುಖ್ಯತೆ, ನೀರಿನ ಉಳಿತಾಯ ಕುರಿತು ಅರಿವು ಮೂಡಿಸಬೇಕು ಎಂದು ಸೂಚನೆ ನೀಡಿದ ಮಂಡಳಿ ಅಧ್ಯಕ್ಷ ರಾಮ್ ಪ್ರಸಾತ್ ಮನೋಹರ್ ಅವರು ತಮ್ಮ ಕ್ಯಾಂಪಸ್ ನಲ್ಲಿ ಈಜುಕೋಳಗಳಿದ್ದರೇ ಕೂಡಲೇ ಸ್ಥಗಿತಗೊಳಿಸಿ ಎಂದು ನಿರ್ದೇಶಿಸಿದರು.
ನಗರದಲ್ಲಿರುವ ಈಜುಕೊಳಗಳಲ್ಲಿ ಕುಡಿಯುವ ನೀರು ಬಳಸಲು ನಿಷೇಧ :
ನೀರಿನ ಸಮಸ್ಯೆ ಹಿನ್ನೆಲೆ ಬೆಂಗಳೂರು ನಗರದಲ್ಲಿರುವ ಎಲ್ಲ ಈಜುಕೋಳಗಳಿಗೆ ಕುಡಿಯುವ ನೀರಿನ ಬಳಕೆಯನ್ನು ಜಲಮಂಡಳಿಯು ನಿಷೇಧಿಸಿದೆ. ಹೀಗಾಗಿ ಈಜುಕೊಳ ಕಾರ್ಯನಿರ್ವಹಣೆ ಸ್ಥಗಿತಗೊಳಿಸುವ ನಿಟ್ಟಿನಲ್ಲಿ ಸೂಕ್ತ ಕ್ರಮ ಕೈಗೊಳ್ಳುವಂತೆ ಅಧಿಕಾರಿಗಳಿಗೆ ಸೂಚಿಸಿದರು. ಕುಡಿಯುವ ನೀರನ್ನು ಒಂದೊಮ್ಮೆ ಈಜುಕೊಳದ ಉದ್ದೇಶಕ್ಕೆ ಬಳಸಿದರೆ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಸಿದ್ದಾರೆ.
ದೊಡ್ಡಗಾತ್ರದ ನೀರಿನ ಸಂಪರ್ಕ ಪಡೆದ ಪ್ರಮುಖ ಗ್ರಾಹಕರ ನೀರಿನ ಪೂರೈಕೆಯಲ್ಲಿ ಶೇ.20ರಷ್ಟು ಕಡಿತಗೊಳಿಸಿದ ನೀರನ್ನು ಜನನೀಬಿಡ ಪ್ರದೇಶಗಳಿಗೆ, ಕೊಳಗೇರಿಗಳು ಹಾಗೂ ಬಡವರು ವಾಸಿಸುತ್ತಿರುವ ಪ್ರದೇಶಗಳಿಗೆ ಮತ್ತು ಅತ್ಯಂತ ಅವಶ್ಯವಿರುವ ಪ್ರದೇಶಗಳಿಗೆ ಪೂರೈಸುವಂತೆ ಎಂಜಿನಿಯರ್ ಗಳಿಗೆ ಸೂಚಿಸಿದರು.
ಕಾವೇರಿ-5ನೇ ಹಂತದ ಯೋಜನೆ ಮೇ 15ರೊಳಗೆ ಅನುಷ್ಠಾನಗೊಳ್ಳಲಿದ್ದು,ಅಲ್ಲಿಯವರೆಗೆ ಕೈಜೋಡಿಸಿ. ಸಂಸ್ಕರಿಸಿದ ನೀರನ್ನು ಇತರೇ ಉದ್ದೇಶಗಳಿಗೆ ಬಳಸುವಂತೆ ತಿಳಿಸಿದ ಅವರು ಅಗತ್ಯವಿದ್ದಲ್ಲಿ ಅಂತಹ ನೀರನ್ನು ಜಲಮಂಡಳಿಯು ಒದಗಿಸಲಿದೆ ಎಂದರು.
ಕೊಳವೆಬಾವಿ ಕೊರೆಯುವುದಕ್ಕೆ ಕೆಲವರು ಅನುಮತಿ ಕೋರಿದರು. ಇದನ್ನು ಆಲಿಸಿದ ಅಧ್ಯಕ್ಷರು ಅರ್ಜಿ ಸಲ್ಲಿಸಿ ಕೂಡಲೇ ಅನುಮತಿ ನೀಡಲಾಗುವುದು. ಈ ಸಭೆಯಲ್ಲಿ ದೊಡ್ಡಗಾತ್ರದ ನೀರಿನ ಸಂಪರ್ಕ ಪಡೆದ ಪ್ರಮುಖ ಸಂಸ್ಥೆಗಳ ಪ್ರತಿನಿಧಿಗಳು, ಮಂಡಳಿಯ ಮುಖ್ಯ ಎಂಜಿನಿಯರ್ ಗಳು ಮತ್ತಿತರ ಅಧಿಕಾರಿಗಳು ಇದ್ದರು.