ಬೆಂಗಳೂರು, ಮಾ.10 www.bengaluruwire.com : ಕೃತಕ ಬಣ್ಣ ಬಣ್ಣ ಬಳಸಿ ಮಾಡುವ, ಯುವಜನರ ಬಾಯಲ್ಲಿ ನೀರೂರಿಸುವ ಗೋಬಿ ಮಂಚುರಿ ಹಾಗೂ ಮಕ್ಕಳ ಫೇವರೇಟ್ ಬಾಂಬೆ ಮಿಠಾಯಿಗೆ ರಾಜ್ಯ ಸರ್ಕಾರ ನಿಷೇಧ ಹೇರುವ ಸಾಧ್ಯತೆಯಿದೆ.
ಆಹಾರ ಸುರಕ್ಷತೆ ಆಯುಕ್ತಾಲಯ ಸಂಗ್ರಹಿಸಿದ ಬಾಂಬೆ ಮಿಠಾಯಿ (ಕಾಟನ್ ಕ್ಯಾಂಡಿ) ಹಾಗೂ ವಿವಿಧ ಬಗೆಯ ಬಣ್ಣ ಬಳಸಿ ತಯಾರಿಸಲಾದ ಗೋಬಿ ಮಂಚೂರಿ ಮಾದರಿಯ ಪರೀಕ್ಷಾ ವರದಿ ಆರೋಗ್ಯ ಇಲಾಖೆಗೆ ಸಲ್ಲಿಕೆಯಾಗಿದ್ದು, ರಾಜ್ಯದಲ್ಲಿಯೂ ಕೃತಕ ಬಣ್ಣ ಬಳಸಿ ತಯಾರಿಸುವ ಆಹಾರವನ್ನು ನಿಷೇಧಿಸುವ ಸಾಧ್ಯತೆಯಿದೆ.
ಈಗಾಗಲೇ ದಕ್ಷಿಣ ಭಾರತದಲ್ಲಿ ಪುದುಚೇರಿ, ತಮಿಳುನಾಡು ರಾಜ್ಯ ಸರ್ಕಾರಗಳು ಬಾಂಬೆ ಮಿಠಾಯಿ ಉತ್ಪಾದನೆ, ಮಾರಾಟವನ್ನು ನಿಷೇಧಿಸಿದೆ. ತಮಿಳುನಾಡಿನ ಸರ್ಕಾರಿ ಪ್ರಯೋಗಾಲಯದಲ್ಲಿ ನಡೆಸಲಾದ ಪರೀಕ್ಷೆಗಳಲ್ಲಿ ಬಾಂಬೆ ಮಿಠಾಯಿಯಲ್ಲಿ ‘ರೊಡಮೈನ್-ಬಿ’ ಅಂಶ ಇರುವುದು ಖಚಿತವಾಗಿತ್ತು. ಆದ್ದರಿಂದ, ಕರ್ನಾಟಕದ ಆಹಾರ ಸುರಕ್ಷತೆ ಆಯುಕ್ತಾಲಯ ಕೂಡ ಬಾಂಬೆ ಮಿಠಾಯಿ ಹಾಗೂ ಗೋಬಿ ಮಂಚುರಿ ಮಾದರಿಗಳನ್ನು ಸಂಗ್ರಹಿಸಿ, ಪ್ರಯೋಗಾಲಯಗಳಿಗೆ ಕಳುಹಿಸಿತ್ತು.
ಆ ಪ್ರಯೋಗಾಲಯಗಳು ನೀಡಿದ ವರದಿ ಗಂಭೀರ ಅಂಶಗಳನ್ನು ಒಳಗೊಂಡಿತ್ತು. ಬಾಂಬೆ ಮಿಠಾಯಿಯಲ್ಲಿ ಜತೆಗೆ 170ಕ್ಕೂ ಹೆಚ್ಚು ಗೋಬಿ ಮಂಚೂರಿ ಮಾದರಿಗಳನ್ನು ಪರೀಕ್ಷೆ ಮಾಡಲಾಗಿದೆ. ಅವುಗಳಲ್ಲಿ 100ಕ್ಕೂ ಅಧಿಕ ಮಾದರಿಗಳು ತಿನ್ನಲು ಯೋಗವಲ್ಲ ಎಂದು ವರದಿ ಉಲ್ಲೇಖಿಸಿದೆ. ಬಾಂಬೆ ಮಿಠಾಯಿ ಅಥವಾ ಕಾಟನ್ ಕ್ಯಾಂಡಿಯಲ್ಲಿ ರೊಡೊಮೇನ್ ಬಿ ಹಾನಿಕಾರಕ ಅಂಶ ಇರೋದು ಪತ್ತೆಯಾಗಿದೆ. ಗೋಬಿ ಮಂಚೂರಿ ಯಲ್ಲಿ ಸನ್ ಸೆಟ್ ಯಲ್ಲೋ ಹಾಗೂ ಟರ್ಟಾಜೈನ್ ಎಂಬ ಹಾನಿಕಾರಕ ಅಂಶ ಇರೋದು ಕಂಡುಬಂದಿದೆ. ಈ ರಾಸಾಯನಿಕ ಅಂಶಗಳನ್ನ ಬಳಕೆ ಮಾಡಿ ಆಹಾರ ತಯಾರಿಸದಂತೆ ರಾಜ್ಯ ಸರ್ಕಾರ ನಿರ್ಬಂಧ ವಿಧಿಸುವ ಸಾಧ್ಯತೆಗಳಿವೆ. ಒಂದೊಮ್ಮೆ ಈ ನಿಯಮವನ್ನು ಉಲ್ಲಂಘಿಸಿದರೆ ಆಹಾರ ಸುರಕ್ಷತಾ ಕಾಯ್ದೆಯಡಿ 10 ಲಕ್ಷ ರೂ. ತನಕ ದಂಡ ವಿಧಿಸುವ ಸಾಧ್ಯತೆಗಳಿವೆ.
ಆರೋಗ್ಯಕ್ಕೆ ಹಿತಕಾರಿಯಾಗುವ ಸಹಜ ಬಣ್ಣ ಬಳಸಿ ತಯಾರಿಸುವ ಗೋಬಿ ಮಂಚೂರಿಗೆ ಅವಕಾಶ ಇರಲಿದೆ. ಈ ಬಗ್ಗೆ ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಅವರು ನಾಳೆ ಸೋಮವಾರದಂದು ಅಧಿಕೃತವಾಗಿ ಪ್ರಯೋಗಾಲಯದ ವರದಿ ಯನ್ನು ಬಿಡುಗಡೆ ಮಾಡಲಿದ್ದಾರೆ ಎಂದು ಇಲಾಖೆ ಮೂಲಗಳು ತಿಳಿಸಿವೆ.