ಬೆಂಗಳೂರು, ಮಾ.04 www.bengaluruwire.com : ಬಿಬಿಎಂಪಿಯ ರಾಜರಾಜೇಶ್ವರಿ ನಗರ ವಲಯದಲ್ಲಿ ಇತ್ತೀಚೆಗಷ್ಟೇ ಸಾರ್ವಜನಿಕರ ಆಸ್ತಿವಹಿಗಳ ಡಿಜಿಟಲ್ ಸ್ಕ್ಯಾನಿಂಗ್ ಸಂದರ್ಭದಲ್ಲಿ ಅಕ್ರಮದಲ್ಲಿ ಪಾಲಿಕೆ ಕಂದಾಯ ನೌಕರರ ವಿರುದ್ಧ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಈ ಘಟನೆ ಮಾಸುವ ಮುನ್ನವೇ ಇದೇ ವಲಯದ ಕೆಂಗೇರಿ ಉಪವಿಭಾಗದಲ್ಲಿ 200 ಸ್ವತ್ತುಗಳಿಗೆ ನಕಲಿ ಎ ಖಾತಾ ಸೃಷ್ಟಿಸಿ ಪಾಲಿಕೆ ನಷ್ಟ ಉಂಟು ಮಾಡಿರುವ ಬಗ್ಗೆ ಲೋಕಾಯುಕ್ತ ಹಾಗೂ ಮುಖ್ಯ ಆಯುಕ್ತ ಆಯುಕ್ತರ ಕಚೇರಿಯಲ್ಲಿ ಮಾ.4ರಂದು ದಾಖಲಾಗಿದೆ.
ಬೆಂಗಳೂರು ದಕ್ಷಿಣ ಜಿಲ್ಲಾ ಬಿಜೆಪಿ ಘಟಕದ ಮಾಜಿ ಅಧ್ಯಕ್ಷ ಎನ್.ಆರ್.ರಮೇಶ್ ಈ ಕುರಿತಂತೆ ಲೋಕಾಯುಕ್ತ ಕಚೇರಿ, ಬಿಬಿಎಂಪಿ ಆಡಳಿತಗಾರರು, ಮುಖ್ಯ ಆಯುಕ್ತರು, ಪಾಲಿಕೆ ಕಂದಾಯ ವಿಭಾಗದ ವಿಶೇಷ ಆಯುಕ್ತ ಮುನೀಷ್ ಮುದ್ಗಿಲ್ ಹಾಗೂ ರಾಜರಾಜೇಶ್ವರಿ ನಗರ ವಲಯ ಆಯುಕ್ತರಿಗೆ ಈ ಸಂಬಂಧ ದಾಖಲೆ ಸಮೇತ ದೂರು ನೀಡಿದ್ದಾರೆ. ಈ ದೂರಿನಲ್ಲಿ ಅವರು, “ಬಿಬಿಎಂಪಿಯ ಯಶವಂತಪುರ ವಿಧಾನಸಭಾ ಕ್ಷೇತ್ರದ ಕೆಂಗೇರಿ ಉಪ ವಿಭಾಗದ ವ್ಯಾಪ್ತಿಗೆ ಬರುವ ವಾರ್ಡ್ ನಂಬರ್ 198 (ಹೆಮ್ಮಿಗೆಪುರ ವಾರ್ಡ್) ರ ವ್ಯಾಪ್ತಿಯಲ್ಲಿ 2024 ರ ಫೆಬ್ರವರಿ ತಿಂಗಳಿನಲ್ಲಿ ಒಟ್ಟು 200 ಸ್ವತ್ತುಗಳ ಖಾತಾಗಳಿಗೆ ಸಂಬಂಧಿಸಿದಂತೆ ನಕಲಿ `ಎ’ ಖಾತಾಗಳನ್ನು ಮಾಡಿಕೊಡುವ ಮೂಲಕ ಸುಮಾರು ಐದು ಕೋಟಿ ರೂಪಾಯಿಗಳಿಗೂ ಹೆಚ್ಚು ಮೊತ್ತವನ್ನು ಪಾಲಿಕೆಗೆ ನಷ್ಟ ಉಂಟು ಮಾಡಿರುವ ಮತ್ತು ಅಪಾರ ಪ್ರಮಾಣದ ಭ್ರಷ್ಟಾಚಾರ ನಡೆಸಿರುವ ಕಾನೂನು ಬಾಹಿರ ಕಾರ್ಯ ನಡೆದಿದೆ.”
“ಈ ಸಂಬಂಧ ಕೆಂಗೇರಿ ವಿಭಾಗದ ಕಂದಾಯ ಅಧಿಕಾರಿ ಡಾ.ಬಸವರಾಜ ಮಗ್ಗಿ, ಕೆಂಗೇರಿ ಉಪ ವಿಭಾಗದ ಸಹಾಯಕ ಕಂದಾಯ ಅಧಿಕಾರಿಯಾಗಿರುವ ದೇವರಾಜು, ರಾಜರಾಜೇಶ್ವರಿನಗರ ವಲಯದ ಉಪ ಆಯುಕ್ತರಾದ ಅಬ್ದುಲ್ ರಬ್, ರಾಜರಾಜೇಶ್ವರಿನಗರ ವಲಯದ ಜಂಟಿ ಆಯುಕ್ತರಾದ ಅಜಯ್ ವಿ. ರವರು ಮತ್ತು ಮೆರು ಇನ್ಫೋ ಸಲ್ಯೂಷನ್ಸ್ (Meru Info Solutions) ಎಂಬ ಸಂಸ್ಥೆಯ ಮುಖ್ಯಸ್ಥರು ಭಾಗಿಯಾಗಿದ್ದಾರೆ. ಇವರ ವಿರುದ್ಧ ಪಾಲಿಕೆ ವತಿಯಿಂದಲೇ ಪೊಲೀಸ್ ಠಾಣೆಗೆ ದೂರು ನೀಡಬೇಕು.” ಎಂದು ಅವರು ಆಗ್ರಹಿಸಿದ್ದಾರೆ.
ನಕಲಿ “ಎ” ಖಾತಾ ಹಿಂದೆ ಹಣ- ತೋಳ್ಬಲ ಪ್ರಭಾವ !!:
ಈ ನಕಲಿ “ಎ” ಖಾತಾಗಳು ಪ್ರಭಾವಿ ಜನಪ್ರತಿನಿಧಿಗಳ ಸಂಬಂಧಿಗಳು, ರಿಯಲ್ ಎಸ್ಟ್ಟೇಟ್ ಪ್ರಭಾವಿಗಳದ್ದಾಗಿದೆ ಎನ್ನಲಾಗಿದೆ. ಅಲ್ಲದೇ ಫೆಬ್ರವರಿ ತಿಂಗಳಲ್ಲಿ ಒಟ್ಟು 200 ಸ್ವತ್ತುಗಳಿಗೆ ನಕಲಿ “ಎ” ಖಾತಾ ದಾಖಲಿಸಿರುವ ಪ್ರಕರಣದ ಬಗ್ಗೆ ಸಾಮಾಜಿಕ ಹೋರಾಟಗಾರರೊಬ್ಬರು ಧ್ವನಿ ಎತ್ತಿದ್ದರು. ಆ ಬಗ್ಗೆ ಪಾಲಿಕೆ ಕಂದಾಯ ಇಲಾಖೆಯ ವಿಶೇಷ ಆಯುಕ್ತ ಮುನಿಷ್ ಮುದ್ಗಿಲ್ ಅವರಿಗೆ ದಾಖಲೆ ಸಮೇತ ದೂರು ನೀಡಿದ ಆ ವ್ಯಕ್ತಿಯ ವಿರುದ್ಧ ಬಿಬಿಎಂಪಿ ರಾಜರಾಜೇಶ್ವರಿ ನಗರ ವಲಯದಲ್ಲಿ ಕಂದಾಯ ವಿಭಾಗದ ಅಧಿಕಾರಿಯೊಬ್ಬರು, ಸರ್ಕಾರಿ ದಾಖಲೆ ಕಳವು ಸಂಬಂಧ ಹತ್ತಿರದ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆಂದು ತಿಳಿದು ಬಂದಿದೆ. ವಿಶೇಷ ಆಯುಕ್ತರಿಗೆ ದಾಖಲೆ ಸಮೇತ ದೂರು ನೀಡಿದ ವ್ಯಕ್ತಿಯನ್ನು ಬಂಧಿಸುವ ಸಂಬಂಧ ರಾಜಕಾರಣಿ ಮತ್ತು ಪ್ರಭಾವಿ ಬಿಲ್ಡರ್ ಗಳು ಪೊಲೀಸರ ಮೇಲೆ ಸಾಕಷ್ಟು ಒತ್ತಡ ಹೇರಿದ್ದರು ಎಂದು ಗೊತ್ತಾಗಿದೆ. ನಕಲಿ “ಎ” ಖಾತಾ ಸೃಷ್ಟಿಯ ಹಿಂದೆ ರಾಜರಾಜೇಶ್ವರಿ ನಗರ ವಲಯದ ಹಿರಿಯ ಅಧಿಕಾರಿಗಳು ಬೃಹತ್ ಪ್ರಮಾಣದಲ್ಲಿ ಲಂಚ ಪಡೆದಿದ್ದಾರೆ ಎಂಬ ಆರೋಪ ಕೇಳಿಬಂದಿದೆ.
ಯಾವೆಲ್ಲಾ ರೀತಿಯಲ್ಲಿ ಖಾತಾ ಅಕ್ರಮ ನಡೆದಿದೆ ಎಂದು ಎನ್.ಆರ್.ರಮೇಶ್ ತಮ್ಮ ದೂರಿನಲ್ಲಿ ಸವಿವರವಾಗಿ ವಿವರಿಸಿದ್ದಾರೆ :
• ಹತ್ತಾರು ನಿವೇಶನಗಳನ್ನೊಳಗೊಂಡ ಖಾಸಗಿ ಬಡಾವಣೆಯ ಬಿಡಿ ನಿವೇಶನಗಳ ಖಾತಾ ಮಾಡಲು ಕಾನೂನು ರೀತ್ಯಾ ಅವಕಾಶವಿರುವುದಿಲ್ಲ.
• ಈ ದೂರಿನ ಪತ್ರದೊಂದಿಗೆ ನೀಡಲಾಗಿರುವ ದಾಖಲೆಗಳಲ್ಲಿ ಇರುವಂತಹ 200 ಸ್ವತ್ತುಗಳ ಖಾತಾಗಳಿಗೆ ಸಂಬಂಧಿಸಿದಂತೆ ಯಾವುದೇ ಸ್ವತ್ತಿಗೆ ಯಾವುದೇ ಮಾಲೀಕನೂ ಸಹ ಖಾತಾ ಮಾಡಿಕೊಡುವಂತೆ ಅರ್ಜಿಗಳನ್ನೇ ಸಲ್ಲಿಸಿರುವುದಿಲ್ಲ.
• ವಾರ್ಡ್ ನಂಬರ್ 198 ರ `ಎ’ ವಹಿ ಪುಸ್ತಕ (‘A’ Assessment Register) ದಲ್ಲಿ ವಿಷಯ ನಿರ್ವಾಹಕ (Case Worker) ಮತ್ತು ವ್ಯವಸ್ಥಾಪಕರು (Manager) ರವರು ತಮ್ಮ ಸಹಿಗಳನ್ನೇ ಹಾಕಿರುವುದಿಲ್ಲ.
• ಈ `ಎ’ ವಹಿ ಪುಸ್ತಕವು ಯಾವ ದಿನಾಂಕದಿಂದ ಜಾರಿಗೆ ಬಂದಿದೆ ಎಂಬ ಬಗ್ಗೆ ದಾಖಲೆಗಳೇ ಇರುವುದಿಲ್ಲ.
• ಯಾವುದೇ ಸ್ವತ್ತಿಗೆ ಖಾತಾಗಳನ್ನು ಮಾಡಿಕೊಡುವ ಮೊದಲು ಕಡ್ಡಾಯವಾಗಿ ಇರಬೇಕಾದ Revenue Inspector Report (ಕಂದಾಯ ಪರಿವೀಕ್ಷಕರ ವರದಿ) ಅನ್ನು ಈ ಪ್ರಕರಣದಲ್ಲಿ ಒಂದಕ್ಕೂ ಬರೆದಿರುವುದಿಲ್ಲ.
• ಈ 200 ಖಾತಾಗಳಿಗೆ ಸಂಬಂಧಿಸಿದ ಕಡತಗಳಿಗೆ KTR ಸಂಖ್ಯೆಗಳು ನೀಡಲಾಗಿಲ್ಲ ಮತ್ತು MR ಆಗಿರುವುದಿಲ್ಲ.
ಇದನ್ನೂ ಓದಿ : BBMP Revenue Digital Scanning | ಬಿಬಿಎಂಪಿ ಆರ್ ಆರ್ ನಗರ ವಲಯ ಆಸ್ತಿ ದಾಖಲೆ ಡಿಜಿಟಲ್ ಸ್ಕ್ಯಾನಿಂಗ್ ನಲ್ಲಿ ದೋಖಾ : ಎಫ್ ಐಆರ್ ದಾಖಲು
• ಪಟ್ಟಣಗೆರೆ ಸರ್ವೆ ನಂಬರ್ 10 ರಲ್ಲಿ ಪುಟ್ಟಮ್ಮ W/o ಮುನಿಯಪ್ಪ ರವರ ಹೆಸರಿಗೆ 72 ಖಾತೆಗಳು, UM ಕಾವಲು ಸರ್ವೆ ನಂಬರ್ 98/1 ರಲ್ಲಿ ಗಂಗಾಧರ್ ಜಿ.ಎಸ್ ರವರ ಹೆಸರಿಗೆ 30 ಖಾತೆಗಳು, ವಾಜರಹಳ್ಳಿ ಗ್ರಾಮದ ಸರ್ವೆ ನಂಬರ್ 09 ರಲ್ಲಿ ಪ್ರದೀಪ್ ಕೃಷ್ಣಪ್ಪ ರವರ ಹೆಸರಿನಲ್ಲಿ 02 ಎಕರೆ 25 ಗುಂಟೆ ಹಾಗೂ ಕೃಷ್ಣಪ್ಪ ಅವರ ಮಗಳಾದ ಜಯಮ್ಮ ರವರ ಹೆಸರಿಗೆ 01 ಎಕರೆ 23 ½ ಗುಂಟೆ ಮತ್ತು ಹೆಮ್ಮಿಗೆಪುರ ಸರ್ವೆ ನಂಬರ್ 19/P4, 19/P2, 19/P3, 22/1, 22/3, 22/2P1, 22/4 ಇತರೆ ಸರ್ವೆ ನಂಬರ್ ಗಳಲ್ಲಿ 96 ಖಾತೆಗಳನ್ನು ಉಪಕಾರ್ ಎಸ್ಟೇಟ್ ಅಂಡ್ ಪ್ರಾಪರ್ಟೀಸ್ ರವರ ಹೆಸರಿನಲ್ಲಿ ಅನಧಿಕೃತವಾಗಿ ಖಾತೆಗಳನ್ನು ನಮೂದಿಸಿರುತ್ತಾರೆ.
• ಪಟ್ಟಣಗೆರೆ ಸರ್ವೆ ನಂಬರ್ 10 ಕ್ಕೆ ಸಂಬಂಧಿಸಿದಂತೆ, ಈಗಾಗಲೇ ಉಚ್ಛ ನ್ಯಾಯಾಲಯದಲ್ಲಿ ದಾವೆ ಇರುತ್ತದೆ ಹಾಗೂ ಈ ಹಿಂದೆ ಪುಟ್ಟಮ್ಮ ರವರ ಹೆಸರಿನಲ್ಲಿ ಯಾವುದೇ ಖಾತೆ ದಾಖಲಾಗಿರುವುದು ಕಂಡುಬಂದಿರುವುದಿಲ್ಲ ಎಂದು ಮಾಹಿತಿ ಹಕ್ಕು ಅಧಿನಿಯಮದಡಿ ಮಾಹಿತಿ ನೀಡಿರುತ್ತಾರೆ. ಹಿಂದಿನ ನಗರ ಸಭೆಯಲ್ಲಿ ಖಾತೆ ದಾಖಲಾಗದೇ ಇದ್ದರೂ ಸಹ ಯಾವುದೇ ಕಡತದ ಸಂಖ್ಯೆ ನಮೂದಿಸದೇ ಹಾಗೂ ವಲಯ ಉಪ ಆಯುಕ್ತರು ಮತ್ತು ಜಂಟಿ ಆಯುಕ್ತರ ಅನುಮೋದನೆ ಪಡೆಯದೇ ಪುಟ್ಟಮ್ಮ ರವರ ಹೆಸರಿಗೆ ಖಾತೆ ದಾಖಲಿಸಿರುತ್ತಾರೆ.
• ವಾಜರಹಳ್ಳಿ ಗ್ರಾಮದ ಸರ್ವೆ ನಂಬರ್ 09 ರಲ್ಲಿ 02 ಎಕರೆ 25 ಗುಂಟೆ ಪ್ರದೀಪ್ ಕೃಷ್ಣಪ್ಪ ರವರ ಹೆಸರಿಗೆ ಹಾಗೂ 01 ಎಕರೆ 23 ½ ಗುಂಟೆ ಕೃಷ್ಣಪ್ಪ ಅವರ ಮಗಳಾದ ಜಯಮ್ಮ ರವರ ಹೆಸರಿಗೆ ಅಕ್ರಮವಾಗಿ ಖಾತೆ ಮಾಡಿದ್ದು, ಈ ಸಂಬಂಧ ಆಯುಕ್ತರ ಸುತ್ತೋಲೆಯಂತೆ – ಚ. ಮೀ. ಗೆ 250 ರೂ. ಗಳಂತೆ ಅಭಿವೃದ್ಧಿ ಶುಲ್ಕ ಪಾವತಿಸಿಕೊಳ್ಳದೇ ಪಾಲಿಕೆಗೆ ಒಟ್ಟಾರೆ ₹. 42,63,500/- ಗಳಷ್ಟು ಆರ್ಥಿಕ ನಷ್ಟವನ್ನು ಕಂದಾಯ ಅಧಿಕಾರಿಯಾದ ಡಾ.ಬಸವರಾಜ ಮಗ್ಗಿ ಹಾಗೂ ಸಹಾಯಕ ಕಂದಾಯ ಅಧಿಕಾರಿ ದೇವರಾಜು ರವರು ಮಾಡಿರುತ್ತಾರೆ.
• ಈಗಾಗಲೇ ವಲಯ ಮಟ್ಟದಲ್ಲಿ ಖಾತಾ ವಹಿ (ಪುಸ್ತಕಗಳು) ಗಳ ಸೀಲಿಂಗ್ ಪ್ರಕ್ರಿಯೆ ನಡೆದಿದ್ದು, ದಿನಾಂಕ 10/11/2023 ರಂದು ರಾಜರಾಜೇಶ್ವರಿನಗರ ವಲಯದ ಜಂಟಿ ಆಯುಕ್ತರ ಕಛೇರಿಯಲ್ಲಿ ಹಿಂದಿನ ಕೆಂಗೇರಿಯ ಸಹಾಯಕ ಕಂದಾಯ ಅಧಿಕಾರಿರವರು ತಮ್ಮ ಕಛೇರಿಯ ವಾರ್ಡ್ ನಂಬರ್ 130, 159 & 198 ಈ ಮೂರು ವಾರ್ಡ್ ಗಳಿಂದ ಒಟ್ಟು 103 `ಎ’ ಖಾತಾ ವಹಿಗಳನ್ನು ಧೃಢೀಕರಿಸಿ ಕಚೇರಿಗೆ ನೀಡಿರುತ್ತಾರೆ. ಇದೇ ಸಂದರ್ಭದಲ್ಲಿ, ವಲಯ ಜಂಟಿ ಆಯುಕ್ತರು ದಿನಾಂಕ 04/11/2023 ರಂದು ಸಹಾಯಕ ಕಂದಾಯ ಅಧಿಕಾರಿ, ಕೆಂಗೇರಿ ಉಪವಿಭಾಗದ ಕಛೇರಿಯಲ್ಲಿ ಸಮರ್ಪಕವಾದ ದಾಖಲಾತಿಗಳಿಂದ `ಬಿ’ ಖಾತಾ ಸ್ವತ್ತುಗಳನ್ನು ನಿಯಮಬಾಹಿರವಾಗಿ `ಎ’ ಸ್ವತ್ತುಗಳ ವಹಿಯಲ್ಲಿ ದಾಖಲಿಸಿರುವ ಬಗ್ಗೆ ಪರಿಶೀಲಿಸಲು ವಾರ್ಡ್ ನಂಬರ್ 198 ರ 04 ಅಸೆಸ್ ಮೆಂಟ್ ವಹಿಗಳನ್ನು ಪಡೆದಿರುತ್ತಾರೆ.
ಈ 04 ವಹಿಗಳನ್ನು ದಿನಾಂಕ 10/11/2023 ರಂದು ತಮ್ಮ ಕಛೇರಿ ಆದೇಶದಲ್ಲಿ ನಮೂದಿಸಿ 04 ವಹಿಗಳನ್ನು ಸಹಾಯಕ ಕಂದಾಯ ಅಧಿಕಾರಿ, ಕೆಂಗೇರಿ ಉಪವಲಯ ಕಛೇರಿಗೆ ಹಿಂತಿರುಗಿಸಿರುತ್ತಾರೆ. ಇದರಂತೆ ಸಹಾಯಕ ಕಂದಾಯ ಅಧಿಕಾರಿ ಕೆಂಗೇರಿ ಕಛೇರಿಯಲ್ಲಿ ಒಟ್ಟು 107 `ಎ’ ಅಸೆಸ್ ಮೆಂಟ್ ವಹಿಗಳು ಇರುವುದು ಧೃಢೀಕೃತವಾಗಿರುತ್ತದೆ. ಈ 107 ಪುಸ್ತಕಗಳನ್ನು ದಿನಾಂಕ 02/12/2023 ರಂದು ಸಹಾಯಕ ಕಂದಾಯ ಅಧಿಕಾರಿ ಕೆಂಗೇರಿ ಕಛೇರಿಯಲ್ಲಿ ” Meru Info Solutions” ರವರಿಂದ ವಲಯ ಆಯುಕ್ತರ ಆದೇಶದಂತೆ ಸ್ಕ್ಯಾನಿಂಗ್ ಪ್ರಕ್ರಿಯೆಯನ್ನು ಪೂರ್ಣಗೊಳಿಸಲಾಗಿತ್ತು.
ಹೊಸ ವಹಿಯಲ್ಲಿ ಸಮರ್ಪಕ ಕಡತ ನಿರ್ವಹಣೆಯ ಸೂಚನೆ ಉಲ್ಲಂಘನೆ :
• ವಿಶೇಷ ಆಯುಕ್ತರ ಆದೇಶದಂತೆ, ಯಾವುದೇ ಖಾತೆ ವರ್ಗಾವಣೆ, ವಿಭಜನೆ, ಒಂದುಗೂಡಿಸುವಿಕೆ ಹಾಗೂ ನೊಂದಾವಣೆಗೆ ಸಂಬಂಧಿಸಿದಂತೆ ಪ್ರತಿ ವಾರ್ಡ್ ಗೆ ಒಂದರಂತೆ ಹೊಸ ವಹಿಯಲ್ಲಿ ನಮೂದಿಸಿ ಅದಕ್ಕೆ ಸಮರ್ಪಕವಾದ ಕಡತಗಳನ್ನು ನಿರ್ವಹಿಸಲು ಸೂಚಿಸಿರುತ್ತಾರೆ. ಆದರೆ, ಮೇಲ್ಕಂಡ ಅಧಿಕಾರಿಗಳು ವಿಶೇಷ ಆಯುಕ್ತರು (ಕಂದಾಯ) ರವರ ಆದೇಶವನ್ನು ಹಾಗೂ ಬಿಬಿಎಂಪಿ ಕಾನೂನುಗಳನ್ನು ಉಲ್ಲಂಘಿಸಿ ಹೊಸದಾಗಿ ಹಿಂದೆ ಇಲ್ಲದೇ ಇದ್ದ ವಹಿಯನ್ನು ಸೃಷ್ಟಿಸಿ 200 ಖಾತೆಗಳನ್ನು ನಮೂದಿಸಿ ಈ ಸಂಬಂಧ ವಾರ್ಡ್ ನ ವಿಷಯ ನಿರ್ವಾಹಕರ ಸಹಿಯಾಗಲೀ, ಕಡತದ ಸಂಖ್ಯೆಯನ್ನಾಗಲೀ ನಮೂದಿಸದೇ ಸಹಾಯಕ ಕಂದಾಯ ಅಧಿಕಾರಿ ದೇವರಾಜು ರವರು ಸಹಿಯನ್ನು ಮಾಡಿರುತ್ತಾರೆ. ಅಲ್ಲದೇ, ಮೆರು ಇನ್ಫೋ ಸೆಲ್ಯೂಶನ್ಸ್ ರವರೂ ಸಹ ಅಕ್ರಮವಾಗಿ ತೆರೆದಿರುವ ಹೊಸದಾದ ಅಸೆಸ್ ಮೆಂಟ್ ವಹಿಯನ್ನು ದಿನಾಂಕ 19/02/2024 ರಂದು ಸ್ಕ್ಯಾನಿಂಗ್ ಮಾಡಿ ಈ ದುಷ್ಕೃತ್ಯಕ್ಕೆ ಸಹಕಾರ ನೀಡಿರುತ್ತಾರೆ.
ರಿಯಲ್ ಎಸ್ಟೇಟ್ ಕಛೇರಿಯಾದ ಬಿಬಿಎಂಪಿ :
ಕಂದಾಯ ಅಧಿಕಾರಿಯಾದ ಡಾ.ಬಸವರಾಜ ಮಗ್ಗಿ ರವರು ಕೆಂಗೇರಿ ಉಪ ವಲಯದ ಕಂದಾಯ ಅಧಿಕಾರಿಯಾಗಿ ಪ್ರಭಾರ ಪಡೆದ ದಿನಾಂಕದಿಂದ ಈವರೆವಿಗೂ ಒಂದು ಬಾರಿಯೂ ಸಹ ಕಛೇರಿಯ ಸಮಯಕ್ಕೆ ಹಾಜರಾಗಿರುವುದಿಲ್ಲ. ಅವರ ಕಛೇರಿಯ ಸಮಯ ಸಂಜೆ 4:00 ರಿಂದ ರಾತ್ರಿ 11 ರವರೆಗೆ ಆಗಿರುತ್ತದೆ. ಕಂದಾಯ ಅಧಿಕಾರಿ ಕಛೇರಿಯನ್ನು ರಿಯಲ್ ಎಸ್ಟೇಟ್ ಕಛೇರಿಯನ್ನಾಗಿ ಪರಿವರ್ತಿಸಿರುತ್ತಾರೆ. ಇದಕ್ಕೆ ಸಾಕ್ಷಿ ಹೇರೋಹಳ್ಳಿ ಕಛೇರಿಯಲ್ಲಿರುವ ಸಿಸಿಟಿವಿ ಕ್ಯಾಮೆರಾಗಳು.
ಅಕ್ರಮವಾಗಿ ಮಾಡಿರುವ ಎಲ್ಲಾ 200ಕ್ಕೂ ಹೆಚ್ಚು “ಎ” ಖಾತಾ ರದ್ದಿಗೆ ಆಗ್ರಹ :
ಈ ರೀತಿ ಕಾನೂನಿನ ಎಲ್ಲಾ ನಿಯಮಗಳನ್ನೂ ಗಾಳಿಗೆ ತೂರಿ 200 ಕ್ಕೂ ಹೆಚ್ಚು ಸ್ವತ್ತುಗಳಿಗೆ ಕೇವಲ 2024 ರ ಫೆಬ್ರವರಿ ತಿಂಗಳ ಒಂದರಲ್ಲೇ 200 ಕ್ಕೂ ಹೆಚ್ಚು `ಎ’ ಖಾತಾಗಳನ್ನು ಮಾಡಿರುವ ಮತ್ತು ಆ ಮೂಲಕ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಗೆ ಐದಾರು ಕೋಟಿ ನಷ್ಟ ಉಂಟು ಮಾಡಿದ್ದಾರೆ. ಆ ಮೂಲಕ ದೊಡ್ಡ ಮಟ್ಟದ ಭ್ರಷ್ಟಾಚಾರ ನಡೆಸಿರುವ ಕೆಂಗೇರಿ ವಿಭಾಗದ ಕಂದಾಯ ಅಧಿಕಾರಿ ಡಾ.ಬಸವರಾಜ ಮಗ್ಗಿ, ಕೆಂಗೇರಿ ಉಪ ವಿಭಾಗದ ಸಹಾಯಕ ಕಂದಾಯ ಅಧಿಕಾರಿ ದೇವರಾಜು, ರಾಜರಾಜೇಶ್ವರಿನಗರ ವಲಯದ ಉಪ ಆಯುಕ್ತರಾದ ಅಬ್ದುಲ್ ರಬ್, ರಾಜರಾಜೇಶ್ವರಿನಗರ ವಲಯದ ಜಂಟಿ ಆಯುಕ್ತರಾದ ಅಜಯ್ ವಿ. ರವರು ಮತ್ತು ಮೆರು ಇನ್ಫೋ ಸೆಲ್ಯೂಶನ್ಸ್ ಸಂಸ್ಥೆಯ ವಿರುದ್ಧ ಪಾಲಿಕೆಯ ವತಿಯಿಂದಲೇ ಪೋಲೀಸ್ ಠಾಣೆಯಲ್ಲಿ ಪ್ರಕರಣಗಳನ್ನು ದಾಖಲಿಸಬೇಕೆಂದು ಪಾಲಿಕೆ ಮಾಜಿ ಆಡಳಿತ ಪಕ್ಷದ ನಾಯಕ ಎನ್.ಆರ್.ರಮೇಶ್ ದಾಖಲೆಗಳ ಸಹಿತ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯ ಮಾನ್ಯ ಮುಖ್ಯ ಆಯುಕ್ತರು, ಆಡಳಿತಾಧಿಕಾರಿಗಳು, ವಿಶೇಷ ಆಯುಕ್ತರು (ಕಂದಾಯ) ಮತ್ತು ರಾಜರಾಜೇಶ್ವರಿನಗರ ವಲಯದ ವಲಯ ಆಯುಕ್ತರನ್ನು ಆಗ್ರಹಿಸಿದ್ದಾರೆ.
ಇವರುಗಳ ವಿರುದ್ಧ ಕೂಡಲೇ ಕಾನೂನು ರೀತ್ಯಾ ಕಠಿಣ ಕ್ರಮ ತೆಗೆದುಕೊಳ್ಳಬೇಕೆಂದು ಹಾಗೂ ಇವರುಗಳು ಮಾಡಿರುವ ಎಲ್ಲಾ 200 ಕ್ಕೂ ಹೆಚ್ಚು ಸ್ವತ್ತುಗಳ ನಕಲಿ `ಎ’ ಖಾತಾಗಳನ್ನು ರದ್ದುಪಡಿಸುವ ಸಂಬಂಧ ಸೂಕ್ತ ಕ್ರಮ ತೆಗೆದುಕೊಳ್ಳಬೇಕೆಂದು ಎಂದು ಸಂಪೂರ್ಣ ಆಗ್ರಹಿಸಲಾಗಿದೆ. ಹಾಗೆಯೇ, ಈ ಎಲ್ಲಾ ಆರೋಪಿತರ ವಿರುದ್ಧ ಭ್ರಷ್ಟಾಚಾರ, ವಂಚನೆ, ನಕಲಿ ದಾಖಲೆ ತಯಾರಿಕೆ ಮತ್ತು ಅಧಿಕಾರ ದುರುಪಯೋಗ ಪ್ರಕರಣಗಳನ್ನು ದಾಖಲಿಸಿಕೊಂಡು ಕಾನೂನು ರೀತ್ಯಾ ಕಠಿಣ ಕ್ರಮ ತೆಗೆದುಕೊಳ್ಳಬೇಕೆಂದು ಲೋಕಾಯುಕ್ತದಲ್ಲಿ ದೂರನ್ನೂ ಸಹ ದಾಖಲಿಸಲಾಗಿದೆ.