ಬೆಂಗಳೂರು, ಫೆ.29 www.bengaluruwire.com : ಕಳೆದ 9 ವರ್ಷಗಳಿಂದ ಸಂಚಲನ ಸೃಷ್ಟಿಸಿದ್ದ ಕರ್ನಾಟಕ ಜಾತಿಗಣತಿ ವರದಿ (ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆ 2015ರ ದತ್ತಾಂಶಗಳ ಅಧ್ಯಯನ ವರದಿ 2024)ಯು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಸ್ವೀಕಾರ ಮಾಡಿದ್ದಾರೆ.
ಇನ್ನು ಎರಡು ಬೃಹತ್ ಮೂಟೆಗಳಲ್ಲಿ ಜಾತಿ ಗಣತಿ ವರದಿಗಳ ಪ್ರತಿಯನ್ನು ವಿಧಾನಸೌಧಕ್ಕೆ ತರಲಾಗಿದ್ದು, ಅವುಗಳನ್ನು ಕರ್ನಾಟಕ ಹಿಂದುಳಿದ ವರ್ಗಗಳ ಆಯೋಗದ ಅಧ್ಯಕ್ಷ ಜಯಪ್ರಕಾಶ್ ಹೆಗಡೆ ಅವರು ಸಿಎಂ ಸಿದ್ದರಾಮಯ್ಯ ಅವರಿಗೆ ಹಸ್ತಾಂತರ ಮಾಡಿದರು.
ಬಳಿಕ ಮಾಧ್ಯಮದವರೊಂದಿಗೆ ಮಾತನಾಡಿದ ಜಯಪ್ರಕಾಶ್ ಹೆಗಡೆ, “2014-15ರಲ್ಲಿ ಜಿಲ್ಲಾಧಿಕಾರಿ ನೇತೃತ್ವದಲ್ಲಿ 1.33 ಶಿಕ್ಷಕರು, ಅಧಿಕಾರಿಗಳು ಸೇರಿ 1.60 ಲಕ್ಷ ಸಿಬ್ಬಂದಿ ದತ್ತಾಂಶ ಸಂಗ್ರಹ ಮಾಡಿದ್ದಾರೆ. ಇದರ ಆಧಾರದ ಮೇಲೆ ವರದಿ ತಯಾರಿಸಲಾಗಿದೆ. ಈ ಹಿಂದೆ ಕಾಂತರಾಜ್ ವರದಿ ಸಲ್ಲಿಕೆ ಮಾಡಬೇಕಿತ್ತು. ತಾಂತ್ರಿಕ ಕಾರಣದಿಂದ ಸಲ್ಲಿಕೆ ಆಗಲಿಲ್ಲ. ಇದೀಗ ನಾವು ವರದಿ ಸಲ್ಲಿಕೆ ಮಾಡಿದ್ದೇವೆ. ಕಾಂತರಾಜ ವರದಿಯಲ್ಲಿ ಬಿಟ್ಟ ಉಪಜಾತಿಗಳನ್ನು ಈ ವರದಿಯಲ್ಲಿ ಸೇರಿಸಲಾಗಿದೆ” ಎಂದು ಅವರು ಹೇಳಿದರು.
“ಜಾತಿಗಣತಿ ವರದಿ ಸೋರಿಕೆ ಆರೋಪ ಸುಳ್ಳು. ಇಡೀ ವರದಿ ಹೇಗೆ ಸೋರಿಕೆ ಆಗುತ್ತೆ? ಕೆಲವು ಅಂಶ ಸೋರಿಕೆ ಆಗಿರಬಹುದು. ಹೀಗೆ ಸೋರಿಕೆ ಆಗಿರುವುದರ ಕುರಿತು ಸಚಿವರೇ ಹೇಳಿದ್ದಾರೆ. ಅದರ ಬಗ್ಗೆ ಇದನ್ನು ಅವರ ಬಳಿ ಕೇಳಿ. ನಾನು ಈ ಬಗ್ಗೆ ಪ್ರತಿಕ್ರಿಯೆ ನೀಡಲಾರೆ” ಎಂದಷ್ಟೇ ಅವರು ಹೇಳಿದರು.
ಜಾತಿಗಣತಿಯಲ್ಲಿ ಏನೆಲ್ಲಾ ಅಂಶಗಳಿವೆ?:
1) ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆ- 2015 ಸಮಗ್ರ ರಾಜ್ಯ ವರದಿ
2) ಜಾತಿವಾರು ಜನಸಂಖ್ಯೆ ವಿವರ – 1 ಸಂಪುಟ
3) ಜಾತಿ / ವರ್ಗಗಳ ಪ್ರಮುಖ ಲಕ್ಷಣಗಳು (ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳನ್ನ ಹೊರತು ಪಡಿಸಿ) 8 ಸಂಪುಟಗಳು
4) ಜಾತಿ / ವರ್ಗಗಳ ಪ್ರಮುಖ ಲಕ್ಷಣಗಳು (ಪರಿಶಿಷ್ಟ ಜಾತಿಗಳು) -1 ಸಂಪುಟ
5) ಜಾತಿ ವರ್ಗಗಳ ಪ್ರಮುಖ ಲಕ್ಷಣಗಳು (ಪರಿಶಿಷ್ಟ ಪಂಗಡಗಳು) – 1 ಸಂಪುಟ
6) ವಿಧಾನಸಭಾ ಕ್ಷೇತ್ರಗಳ ಜಾತಿವಾರು ಅಂಕಿ ಅಂಶಗಳು (02 ಸಿಡಿಗಳು)
7) ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆ 2015ರ ದತ್ತಾಂಶಗಳ ಅಧ್ಯಯನ ವರದಿ- 2024
ಜಾತಿ ಗಣತಿ ವರದಿಯಲ್ಲಿ ಇರೋದಾದ್ರು ಏನು? :
ಹಿಂದುಳಿದ ವರ್ಗಗಳ ಆಯೋಗದ ಅಧ್ಯಕ್ಷ ಜಯಪ್ರಕಾಶ್ ಹೆಗಡೆ ಅವರಿಂದ ಸಲ್ಲಿಕೆಯಾದ ಜಾತಿ ಗಣತಿ ವರದಿಯಲ್ಲಿ ಒಟ್ಟು 13 ಪ್ರತಿಗಳನ್ನು ಸಿದ್ಧಪಡಿಸಲಾಗಿದೆ. ಎಲ್ಲ ಪ್ರತಿಗಳು ಕೂಡ ದೊಡ್ಡ ಸಂಪುಟಗಳಾಗಿವೆ. ಕೆಲವು ಸಂಪುಟಗಳನ್ನು ಎರಡು-ಮೂರು ಭಾಗಗಳಾಗಿ ಮಾಡಲಾಗಿದೆ. ಇನ್ನು ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ, ಹಿಂದುಳಿದ ವರ್ಗಗಳು ಹಾಗೂ ಎಲ್ಲ ವರ್ಗಗಳ ಶೈಕ್ಷಣಿಕ ಮತ್ತು ಸಾಮಾಜಿಕ ಸ್ಥಾನಮಾನಗಳ ಸಮೀಕ್ಷೆಯನ್ನು ವರದಿಯು ಒಳಗೊಂಡಿದೆ.
ವರದಿ ತಯಾರಿಕೆಗೆ 154 ಕೋಟಿ ರೂ. ವೆಚ್ಚ :
ಈ ಜಾತಿ ಗಣತಿ ವರದಿಯನ್ನು ಬರೋಬ್ಬರಿ 154 ಕೋಟಿ ರೂ. ವೆಚ್ಚದಲ್ಲಿ ಸಿದ್ಧಪಡಿಸಲಾಗಿದೆ. ಕಾಂಗ್ರೆಸ್ ಸ್ವಪಕ್ಷೀಯ ನಾಯಕರು ಹಾಗೂ ಬಿಜೆಪಿ ನಾಯಕರ ವಿರೋಧದ ನಡುವೆಯೂ ಸಿಎಂ ಸಿದ್ದರಾಮಯ್ಯ ಈ ವರದಿ ಸ್ವೀಕಾರ ಮಾಡಿದ್ದಾರೆ.
ಜಾತಿವಾರು ಜನಸಂಖ್ಯೆ ಎಷ್ಟಿದೆ? (ಲಭ್ಯವಾದ ಮಾಹಿತಿ):
* ಪರಿಶಿಷ್ಟ ಜಾತಿ(ಎಸ್’ಸಿ)ಯವರ ಸಂಖ್ಯೆ 1.08 ಕೋಟಿ
* ಪರಿಶಿಷ್ಟ ಪಂಗಡ(ಎಸ್’ಟಿ)ದವರ ಪ್ರಮಾಣ 40.45 ಲಕ್ಷ
* ಮುಸ್ಲಿಮರು 70 ಲಕ್ಷ ಜನಸಂಖ್ಯೆ
* ಲಿಂಗಾಯತ: 65 ಲಕ್ಷ
* ಒಕ್ಕಲಿಗ: 60 ಲಕ್ಷ
* ಕುರುಬರು 45 ಲಕ್ಷ
* ಈಡಿಗ: 15 ಲಕ್ಷ
* ವಿಶ್ವಕರ್ಮ: 15
* ಬೆಸ್ತ: 15 ಲಕ್ಷ
* ಬ್ರಾಹ್ಮಣ: 14 ಲಕ್ಷ
* ಗೊಲ್ಲ(ಯಾದವ) 10 ಲಕ್ಷ
* ಮಡಿವಾಳ ಸಮಾಜ: 6
* ಅರೆ ಅಲೆಮಾರಿ 6 ಲಕ್ಷ
* ಕುಂಬಾರ 5 ಲಕ್ಷ
* ಸವಿತಾ ಸಮಾಜ 5 ಲಕ್ಷ
ಜಾತಿ ಗಣತಿ ವರದಿ ಹೈಲೈಟ್ಸ್:
* ಒಟ್ಟು 5.98 ಕೋಟಿ ಮಂದಿಯ ಸಮೀಕ್ಷೆ
* ಸಮೀಕ್ಷೆಯಿಂದ ಹೊರಗುಳಿದವರ ಪ್ರಮಾಣ 32 ಲಕ್ಷ
* ರಾಜ್ಯ ಹಿಂದುಳಿದ ವರ್ಗಗಳ ಆಯೋಗವು ನಡೆಸಿದ ಶೈಕ್ಷಣಿಕ, ಸಾಮಾಜಿಕ ಮತ್ತು ಆರ್ಥಿಕ ಸಮೀಕ್ಷೆ
* ಕರ್ನಾಟಕದಲ್ಲಿ ದಲಿತರ ಪ್ರಮಾಣವೇ ಹೆಚ್ಚು
* ಕುರುಬರೇ ಅತ್ಯಂತ ಹಿಂದುಳಿದ ವರ್ಗ
* ಸಮೀಕ್ಷೆಗೊಳಪಟ್ಟ ಜಾತಿಗಳ ಸಂಖ್ಯೆ 1,351
* ಹೊಸದಾಗಿ ದಾಖಲಾದ ಜಾತಿಗಳ ಸಂಖ್ಯೆ 192
* ಸರಕಾರ ಗುರುತಿಸಿರುವ ಇತರೆ ಹಿಂದುಳಿದ ಜಾತಿಗಳು(ಓಬಿಸಿ) 816
* 10ಕ್ಕಿಂತ ಕಡಿಮೆ ಜನಸಂಖ್ಯೆ ದಾಖಲಾಗಿರುವ ಜಾತಿಗಳ ಪ್ರಮಾಣ 80