ಬೆಂಗಳೂರು, ಫೆ.29 www.bengaluruwire.com : ಹಲವು ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಬಿಬಿಎಂಪಿ ಅಧಿಕಾರಿ ಮತ್ತು ನೌಕರರ ಸಂಘವು ಮಾ.1 ರಂದು ಪಾಲಿಕೆ ಕೆಲಸ ಕಾರ್ಯಗಳಿಗೆ ಸಾಮೂಹಿಕ ರಜೆ ಹಾಕಿ ಸ್ವಾತಂತ್ರ್ಯ ಉದ್ಯಾನವನದಲ್ಲಿ ಪ್ರತಿಭಟನೆ ನಡೆಸಲು ನಿರ್ಧರಿಸಿದೆ.
ಕಂದಾಯ ಇಲಾಖೆ ನೌಕರರು 2022-23ನೇ ಸಾಲಿನಲ್ಲಿ 3,339 ಕೋಟಿ ರೂ.ತೆರಿಗೆ ಸಂಗ್ರಹಿಸಿದ್ದಾರೆ. 2023-24ನೇ ಸಾಲಿನಲ್ಲಿ 3646 ಕೋಟಿ ರೂ. ತರಿಗೆ ಸಂಗ್ರಹಿಸಿದ್ದಾರೆ. ಆದರೂ ಪಾಲಿಕೆ ಕಂದಾಯ ಅಧಿಕಾರಿಗಳಿಗೆ ಕಂದಾಯ ವಿಶೇಷ ಆಯುಕ್ತ ಮುನೀಷ್ ಮುದ್ಗಿಲ್ ಅವರಿಂದ ಆಸ್ತಿ ತೆರಿಗೆ ಸಂಗ್ರಹ ವಿಚಾರದಲ್ಲಿ ನೌಕರರಿಗೆ ಸಾಕಷ್ಟು ಮಾನಸಿಕ ಹಿಂಸೆಯಾಗಿದೆ. 27 ಅಧಿಕಾರಿಗಳಿಗೆ ನೋಟಿಸ್ ಜಾರಿ ಮಾಡಿದ್ದಾರೆ.ಅದನ್ನು ಕೂಡಲೇ ಅವರು ಹಿಂಪಡೆಯಬೇಕು. ಇಲಾಖಾ ವಿಚಾರಣೆ ಜರುಗಿಸಲು ಹೊರಟಿರುವ ಆರೋಪ ಪಟ್ಟಿಯನ್ನು ಹಿಂಪಡೆಯಬೇಕು ಎಂಬು ಸೇರಿದಂತೆ ಹಲವು ಬೇಡಿಕೆಗಳ ಈಡೇರಿಕೆ ಆಗ್ರಹಿಸಿ ನಾಳೆ ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ ಎಂದು ಸಂಘದ ಅಧ್ಯಕ್ಷ ಎ.ಅಮೃತ್ ರಾಜ್ ಹೇಳಿದ್ದಾರೆ.
8 ತಿಂಗಳಾದರೂ ರಾಜ್ಯ ಸರ್ಕಾರದಲ್ಲಿ ಕೇವಲ ಮೂರು ಜನರಿಗೆ ಬಡ್ತಿ ಮಾಡಲಾಗಿದೆ. ಆದರೆ ಉಳಿದ 10 ಮಂದಿಗೆ ಇದುವರೆಗೂ ಸಹಾಯಕ ಕಂದಾಯ ಅಧಿಕಾರಿ/ ಕಂದಾಯ ಅಧಿಕಾರಿ ಹುದ್ದೆಗೆ ಮುಂಬಡ್ತಿ ಸಿಗುತ್ತಿಲ್ಲ. ಬಿಬಿಎಂಪಿಯಲ್ಲಿ 225 ವಾರ್ಡ್ ಆಗಿದೆ. ಎಇ, ಜೆಇ ಎಂಜಿನಿಯರ್ ಹುದ್ದೆ ಸೇರಿದಂತೆ ಅಗತ್ಯವಾದ ನೌಕರರ ನೇಮಕಾತಿ ಮಾಡಿಲ್ಲ. ಕೂಡಲೇ ನೇಮಕಾತಿ ಮಾಡಬೇಕು, ಬಿಬಿಎಂಪಿಯಲ್ಲಿ ಶೇ.80ರಷ್ಟು ಹುದ್ದೆಗಳು ಕಾರ್ಯಕಾರಿ ಹುದ್ದೆಯಾಗಿದೆ. ಹೀಗಾಗಿ ಪಾಲಿಕೆ ಅಧಿಕಾರಿ ಮತ್ತು ನೌಕರರಿಗೆ ಲಾಗ್ ಸೇಫ್ ಸಾಫ್ಟ್ ವೇರ್ ಮೂಲಕ ಎಂಬ ಹಾಜರಾತಿ ಪಡೆಯುವ ನಿಯಮವನ್ನು ಕೂಡಲೇ ಕೈಬಿಡಬೇಕು.
ಪಾಲಿಕೆಯಲ್ಲಿ ಸೂಕ್ತ ರೀತಿ ಅಧಿಕಾರ ಪ್ರತ್ಯೋಜನೆಯನ್ನು ಅನುಷ್ಠಾನ ಮಾಡಬೇಕು ಎಂಬುದು ಸೇರಿದಂತೆ ಹಲವು ಬೇಡಿಕೆಗಳನ್ನು ಈಡೇರಿಸುವಂತೆ ಸಂಘ ರಾಜ್ಯ ಸರ್ಕಾರ ಮತ್ತು ಬಿಬಿಎಂಪಿ ಮುಖ್ಯ ಆಯುಕ್ತರನ್ನು ಒತ್ತಾಯಿಸಿದೆ. ಹಲವು ದಿನಗಳಿಂದ ತಮ್ಮ ಬೇಡಿಕೆಗಳಿಗೆ ಪಾಲಿಕೆ ಅಧಿಕಾರಿಗಳಾಗಲಿ, ರಾಜ್ಯ ಸರ್ಕಾರ ಸೂಕ್ತ ರೀತಿ ಸ್ಪಂದಿಸದಿರುವುದರಿಂದ ಮಾ.1ರಂದು ಸಂಘದ ಸದಸ್ಯರು, ಅಧಿಕಾರಿ, ಸಿಬ್ಬಂದಿ ಸಾಮೂಹಿಕ ರಜೆ ಹಾಕಿ ಪ್ರತಿಭಟನೆ ನಡೆಸಲು ತೀರ್ಮಾನಿಸಿದೆ.