ಬೆಂಗಳೂರು, ಫೆ.21 www.bengaluruwire.com : ಕಾಂಗ್ರೆಸ್ ಸರ್ಕಾರ ಬ್ರಾಂಡ್ ಬೆಂಗಳೂರು ಅಂತ ಜೋರಾಗಿ ಬೊಬ್ಬೆ ಹೊಡೆದಿದ್ದೇ ಬಂತು. ನಗರದಲ್ಲಿನ ಕಸದ ಸಮಸ್ಯೆಗೆ ಶಾಶ್ವತವಾಗಿ ಇತಿಶ್ರೀ ಹಾಕಲು ಸಾಧ್ಯವಾಗಿಲ್ಲ. ರಾಜಧಾನಿಯಲ್ಲಿ ದಿನಂಪ್ರತಿ 5500 ಮೆಟ್ರಿಕ್ ಟನ್ ಎಲ್ಲಾ ವಿಧವಾದ ಕಸ ಉತ್ಪತ್ತಿಯಾದರೂ ಅರ್ಧಕ್ಕಿಂತ ಹೆಚ್ಚು ಭಾಗ ಅಂದರೆ ಸರಾಸರಿ 3100 ರಿಂದ 3200 ಮೆಟ್ರಿಕ್ ಟನ್ ಮಿಶ್ರಿತ ಕಸ ಮಿಟಗಾನಹಳ್ಳಿ ಭೂಭರ್ತಿ ಘಟಕದ ಒಡಲು ಸೇರುತ್ತಿದೆ. ನೂರಾರು ಕೋಟಿ ಕರ್ಚು ಮಾಡಿ ಪಾಲಿಕೆ 6 ತ್ಯಾಜ್ಯ ಸಂಸ್ಕರಣಾ ಕೇಂದ್ರ ತೆರೆದರೂ ಒಟ್ಟಾರೆ 8 ಪ್ಲಾಂಟ್ ಗಳಿಗೆ ಪ್ರತಿದಿನ ಸರಾಸರಿ ಹೋಗ್ತಿರೋದು ಸರಾಸರಿ 1600 ಮೆಟ್ರಿಕ್ ಟನ್ ಕಸ ಮಾತ್ರ.
ಪಾಲಿಕೆಯು ನಗರದ ಸ್ವಚ್ಛತೆ ಮತ್ತು ಘನತ್ಯಾಜ್ಯ ವಿಲೇವಾರಿಗೆ 2023-24ನೇ ಸಾಲಿನಲ್ಲಿಟ್ಟ ಹಣ 1,643.72 ಕೋಟಿ ರೂ. ಪ್ರತಿ ವರ್ಷ ಒಂದಲ್ಲೊಂದು ರೀತಿಯಲ್ಲಿ ಹಲವು ಯೋಜನೆಗಳನ್ನು ಹಾಕಿಕೊಳ್ಳುತ್ತಲೇ ಇದೆ. ಅದು ಸಾಲದೆಂಬಂತೆ ಬೆಂಗಳೂರು ಘನತ್ಯಾಜ್ಯ ನಿರ್ವಹಣಾ ಕಂಪನಿ (BSWML) ಸ್ಥಾಪನೆಯಾದರೂ ನಗರದಲ್ಲಿ ಈವರೆಗೆ ಹಸಿಕಸ ಬೇರ್ಪಡಿಸಿ ವಿಲೇವಾರಿ ಮಾಡುತ್ತಿರೋದು ಶೇ.30ಕ್ಕಿಂತ ಹೆಚ್ಚಾಗಿಲ್ಲ. ಕೆಸಿಡಿಸಿ, ಎಸ್ ಜಿಪಿ ಹಸಿಕಸ ಸಂಸ್ಕರಣ ಹಾಗೂ ಬಿಬಿಎಂಪಿಯ 6 ಘನತ್ಯಾಜ್ಯ ಸಂಸ್ಕರಣಾ ಘಟಕವನ್ನು ಹಲವು ವರ್ಷಗಳ ಹಿಂದೆ ತೆರೆದಿದ್ದರೂ, ಅವುಗಳ ಸಾಮರ್ಥ್ಯದ ಶೇ.70 ರಿಂದ 79ರಷ್ಟು ಮಾತ್ರ ಹಸಿಕಸವನ್ನು ಸಂಸ್ಕರಣೆ ಮಾಡಲು ಸಾಧ್ಯವಾಗಿದೆ. ಕರೋನಾ ಸಾಂಕ್ರಾಮಿಕ, ಅದಕ್ಕೆ ಪೂರ್ವ ಹಾಗೂ ನಂತರದಲ್ಲಿ ಪಾಲಿಕೆಗೆ ಸೇರಿದ ಈ ಪ್ಲಾಂಟ್ ಗಳ ಒಟ್ಟಾರೆ ಸಂಸ್ಕರಣಾ ಸಾಮರ್ಥ್ಯ 1,220 ಮೆಟ್ರಿಕ್ ಟನ್ ಗಳಿದ್ರೂ ಅವುಗಳಲ್ಲಿ ಹಲವು ಘಟಕಗಳು ಸ್ಥಳೀಯರ ವಿರೋಧ, ಸೂಕ್ತ ರೀತಿಯಲ್ಲಿ ಹಸಿಕಸ ಪೂರೈಕೆ ಮತ್ತಿತರ ಕಾರಣಗಳಿಂದ ಸ್ಥಗಿತಗೊಂಡಿದ್ದವು.
ಇನ್ನು ಈ ಹಿಂದೆ ನಗರದ ಅರ್ಧಕ್ಕರ್ಧ ಮಿಶ್ರಿತ ಕಸ ಬೆಳ್ಳಳ್ಳಿ ಕ್ವಾರಿಗೆ ತಂದು ಸುರಿಯಲಾಗುತ್ತಿತ್ತು. ಆನಂತರ ಈ ಲ್ಯಾಂಡ್ ಫಿಲ್ ಘಟಕ ಪೂರ್ತಿಯಾದ ಮೇಲೆ ಮಿಟಗಾನಹಳ್ಳಿ ಕ್ವಾರಿಯಲ್ಲಿ ಸೆಪ್ಟೆಂಬರ್ 2019ರಿಂದ ನಗರದ ಮಿಶ್ರಿತ ಕಸವನ್ನು ತಂದು ಸುರಿಯಲಾಗುತ್ತಿದೆ. ವೈಜ್ಞಾನಿಕ ರೀತಿಯಲ್ಲಿ ಕಸ ಭೂಭರ್ತಿ ಘಟಕದಲ್ಲಿ ಹಾಕದ ಕಾರಣಕ್ಕೆ ಆಗಾಗ ಮಿಟಗಾನಹಳ್ಳಿ ಸುತ್ತಮುತ್ತಲಿನ ಗ್ರಾಮಸ್ಥರು ಕಸದ ಟ್ರಕ್ ಗಳು ರಸ್ತೆಯಲ್ಲೆಲ್ಲಾ ಘನತ್ಯಾಜ್ಯದ ಕೊಳಕು ರಸವು ಬೀಳಿಸಿಕೊಂಡು ಹೋಗುತ್ತಿರುವ ಕಾರಣಕ್ಕೆ ನೊಣ, ದುರ್ವಾಸನೆಯ ಕಾರಣಕ್ಕೆ ಕಸದ ಟ್ರಕ್ ಗಳನ್ನು ತಡೆದು ತಮ್ಮ ಆಕ್ರೋಶ ಹೊರಹಾಕುತ್ತಿರೋದು ನಿಂತಿಲ್ಲ. ಫೆ.18 ಮತ್ತು 19ರಂದು ಈ ಲ್ಯಾಂಡ್ ಫಿಲ್ ಜಾಗಕ್ಕೆ ಬರುತ್ತಿದ್ದ ಬೆಂಗಳೂರಿನ ಕಸದ ಟ್ರಕ್ ಗಳನ್ನು ತಡೆದು ಗ್ರಾಮಸ್ಥರು ಪ್ರತಿಭಟನೆ ನಡೆಸಿದ್ದರು.
ವೈಜ್ಞಾನಿಕವಾಗಿ ಭೂಭರ್ತಿ ಪೂರ್ಣ ಪ್ರಮಾಣದಲ್ಲಿಲ್ಲ
ಭೂಭರ್ತಿ ಘಟಕ, ತ್ಯಾಜ್ಯ ಸಂಸ್ಕರಣಾ ಘಟಕ ಸುತ್ತ ಹಳ್ಳಿಗಳ ಅಭಿವೃದ್ಧಿ
ಹಳ್ಳಿಗಳ ಸುತ್ತಮುತ್ತ ಅಭಿವೃದ್ಧಿ ಹೆಸರಿನಲ್ಲಿ 6 ವರ್ಷಗಳಲ್ಲಿ 1052 ಕೋಟಿ ರೂ. ಬಿಡುಗಡೆ
ಅಸಮರ್ಪಕ ಕಾರ್ಯನಿರ್ವಹಣೆ, ನಕಲಿ ಬಿಲ್ ಸಾಧ್ಯತೆ!!?
ಬೆಂಗಳೂರಿನ ಭೂಭರ್ತಿ ಘಟಕ ಹಾಗೂ ಘನತ್ಯಾಜ್ಯ ಸಂಸ್ಕರಣಾ ಘಟಕದ ಸುತ್ತಮುತ್ತಲಿನ ಗ್ರಾಮಸ್ಥರು ಪ್ರತಿಭಟನೆ ನಡೆಸದಂತೆ ತಡೆಯಲು ಬಿಬಿಎಂಪಿ ಘನತ್ಯಾಜ್ಯ ನಿರ್ವಹಣಾ ವಿಭಾಗದ ಅಧಿಕಾರಿಗಳು ಆ ಹಳ್ಳಿಗಳಲ್ಲಿ ಅಭಿವೃದ್ಧಿ ಕಾಮಗಾರಿ ಮಾಡುತ್ತೇವೆ ಎಂಬ ಹೊಸ ಯೋಜನೆಯನ್ನು ತಂದರು. ಆದರೆ ಸರಿಯಾಗಿ ಅಲ್ಲಿ ಅಭಿವೃದ್ಧಿ ಕಾಮಗಾರಿಗಳನ್ನು ಮಾಡದಿದ್ದರೂ, ನೂರಾರು ಕೋಟಿ ಬಿಲ್ ಮಾಡಿದ ಗುತ್ತಿಗೆದಾರರು, ಅಧಿಕಾರಿಗಳ ಜೋಬಿಗೆ ಹಣ ಹೋಯಿತೇ ವಿನಃ ಹಳ್ಳಿಗಳ ಅಭಿವೃದ್ಧಿಯಾಗಲಿಲ್ಲ. ಒಂದು ಅಧಿಕೃತ ಮಾಹಿತಿಯ ಪ್ರಕಾರ 2016-17ನೇ ಸಾಲಿನಿಂದ 2021-22ನೇ ಸಾಲಿನ ವರೆಗೆ ಸೀಗೇಹಳ್ಳಿ, ದೊಡ್ಡಬಿದರಕಲ್ಲು, ಕನ್ನಹಳ್ಳಿ, ಲಿಂಗಧೀರನಹಳ್ಳಿ ಸುಬ್ಬರಾಯನಪಾಳ್ಯ, ಕೆಸಿಡಿಪಿ ಪ್ಲಾಂಟ್, ಚಿಕ್ಕನಾಗಮಂಗಲ, ಮಾವಳ್ಳಿಪುರ, ಬೆಲ್ಲಹಳ್ಳಿ ಭೂಭರ್ತಿ ಘಟಕ, ಬಾಗಲೂರು ಭೂಭರ್ತಿ ಘಟಕ, ಮಿಟಗಾನಹಳ್ಳಿ, ಟೆರ್ರಾಫಾರ್ಮ, ಎಂಎಸ್ ಜಿಪಿಯಂತಹ ಭೂಭರ್ತಿ ಘಟಕ ಹಾಗೂ ಘನತ್ಯಾಜ್ಯ ವಿಲೇವಾರಿ ಘಟಕದ ಸುತ್ತಮುತ್ತಲಿನ ಹಳ್ಳಿಗಳ ಅಭಿವೃದ್ಧಿ ಹೆಸರಿನಲ್ಲಿ ಈತನಕ 1,051.84 ಕೋಟಿ ರೂಪಾಯಿ ವಿವಿಧ ಅಭಿವೃದ್ಧಿ ಕಾಮಗಾರಿಗಳ ಹೆಸರಿನಲ್ಲಿ ಹಣ ಬಿಡುಗಡೆಯಾಗಿದೆ.
ಇವುಗಳನ್ನು ಸೂಕ್ಷ್ಮವಾಗಿ ಗಮನಿಸಿದರೆ ವಾಸ್ತವವಾಗಿ ಕಾಮಗಾರಿಗಳು ಸರಿಯಾಗಿ ನಡೆದಿಲ್ಲ. ಕೆಲವು ಕಡೆ ಆಗದ ಕೆಲಸಗಳಿಗೆ ಬಿಲ್ ಆಗಿವೆ, ಕೆಲವು ಕಡೆಗಳಲ್ಲಿ ಗುಣಮಟ್ಟದ ಕಾಮಾಗತಿಗಳು ನಡೆದಿಲ್ಲ. ತೊಂದರೆಗೊಳಗಾದ ಹಳ್ಳಿಗಳ ವ್ಯಾಪ್ತಿಯಿಂದ ಹೊರಗೆ ಬೇರೆ ಸ್ಥಳಗಳ ಜನರಿರುವ ಕಡೆ ಕಾಮಗಾರಿ ನಡೆಸಿದ್ದಾರೆ ಎಂಬ ಆರೋಪಗಳಿವೆ. ಮಿಟಗಾನಹಳ್ಳಿ ಭೂಭರ್ತಿ ಘಟಕವನ್ನು ಒಂದು ಉದಾಹರಣೆಯಾಗಿ ನೋಡುವುದಾದರೆ, ಅಲ್ಲಿ ಸಂಪೂರ್ಣವಾಗಿ ವೈಜ್ಞಾನಿಕವಾಗಿ ಕಸದ ವಿಲೇವಾರಿ ಆಗುತ್ತಿಲ್ಲ. ರಸ್ತೆ ಅಭಿವೃದ್ಧಿಯು ಸರಿಯಾಗಿ ಆಗಿಲ್ಲ. ಹಳ್ಳಿಗಳ ಅಭಿವೃದ್ಧಿ ಯೋಜನೆಯಡಿ ಸರಿಯಾಗಿ ಕೆಲಸ ಮಾಡಿಲ್ಲ. ಈ ಕಾರಣಕ್ಕೆ ಮಿಟಗಾನಹಳ್ಳಿಯಲ್ಲಿ ಆಗಾಗ ಗ್ರಾಮಸ್ಥರು ಹಾಳಾದ ರಸ್ತೆ, ಕಸದ ದುರ್ವಾಸನೆ, ನೊಣದ ಕಾಟ, ಶುದ್ಧ ಕುಡಿಯುವ ನೀರಿನ ಸಮಸ್ಯೆ ಹೀಗೆ ನಾನಾ ಸಮಸ್ಯೆಗಳಿಂದ ತೊಂದರೆಗೊಳಗಾಗಿ ಅನಿವಾರ್ಯವಾಗಿ ಪ್ರತಿಭಟನೆಯ ಹಾದಿ ತುಳಿಯುತ್ತಿದ್ದಾರೆ ಎನ್ನಲಾಗಿದೆ.
ಫೆಬ್ರವರಿ 18 ಹಾಗೂ 19ನೇ ತಾರೀಖಿನಂದು ಮಿಟಗಾನಹಳ್ಳಿಯಲ್ಲಿ ಬೆಂಗಳೂರಿನ ಮಿಕ್ಸೆಡ್ ಕಸ ಹಾಕುವ ಟ್ರಕ್ ಗಳನ್ನು ಗ್ರಾಮಸ್ಥರು ತಡೆದು ನಿಲ್ಲಿಸಿದ್ದರು. ಇದರಿಂದಾಗಿ ನಗರದ 500 ರಿಂದ 600 ಟ್ರಕ್ ಕಸ ಭೂಭರ್ತಿ ಘಟಕಕ್ಕೆ ಹಾಕಲಾಗದೆ, ನಗರದಲ್ಲಿ ಕಸ ವಿಲೇವಾರಿಯಾಗಿರಲಿಲ್ಲ. ಕೊನೆಗೆ ಬಿಎಸ್ ಡಬ್ಲ್ಯುಎಂಎಲ್ ಅಧಿಕಾರಿಗಳು ಸಂಧಾನ ನಡೆಸಿ ಗ್ರಾಮಸ್ಥರ ಮೂಗಿಗೆ ತುಪ್ಪ ಹಚ್ಚಿದ ಮೇಲೆ ಫೆ.20ರಂದು ಒಂದೇ ದಿನ ರಾತ್ರಿ 8 ಗಂಟೆಯವರೆಗೆ ಸುಮಾರು 600 ಟ್ರಕ್ ಗಳ ಕಸವನ್ನು ಅಲ್ಲಿ ಹಾಕಲಾಯ್ತು.
ಮಿಟಗಾನಹಳ್ಳಿ ಭೂಭರ್ತಿ ಘಟಕದ ಪರಿಸ್ಥಿತಿ ಈಗ ಹೇಗಿದೆ? :
ಮಿಟಗಾನಹಳ್ಳಿಯ ವಿವಿಧೆಡೆ ಒಟ್ಟಾರೆ 29 ಎಕರೆ ಜಾಗ ಲಭ್ಯವಿದ್ದು, ಆ ಪೈಕಿ ಈಗಾಗಲೇ ಬಿಬಿಎಂಪಿ 23 ರಿಂದ 24 ಎಕರೆ ಜಾಗದಲ್ಲಿ ನಗರದ ಮಿಶ್ರಿತ ಕಸವನ್ನು ಕಲ್ಲುಕ್ವಾರಿಯಲ್ಲಿ ತಂದು ಸುರಿದು ಅವುಗಳ ಭರ್ತಿಯಾಗಿದೆ. ಈ ಪೈಕಿ ಅತ್ಯಂತ ಹಳೆಯದಾದ 4 ರಿಂದ 5 ಎಕರೆ ಭರ್ತಿಯಾದ ಕ್ವಾರಿಯ ಮೇಲೆ ಹೊದಿಕೆ ಹಾಕಿ ಮಟ್ಟ ಮಾಡುವ ಕೆಲಸಕ್ಕಾಗಿ ಬಿಎಸ್ ಡಬ್ಲ್ಯುಎಂಎಲ್ ಟೆಂಡರ್ ಕರೆದಿದೆ. ಉಳಿದಂತೆ ಬೆಂಗಳೂರಿನ ಕಸವನ್ನು 4 ಎಕರೆ ಜಾಗದಲ್ಲಿ ಹಾಕಲು ಸೂಕ್ತ ನಿರ್ಮಾಣ ಕೆಲಸಗಳಿಗಾಗಿ ಕಂಪನಿಯು ಟೆಂಡರ್ ಇನ್ನಷ್ಟೇ ಕರೆಯಬೇಕಿದೆ. ಪ್ರತಿದಿನ ನಗರದ ವಿವಿಧ ಭಾಗಗಳಿಂದ 350 ಟ್ರಕ್ ಗಳಿಂದ 360 ಟ್ರಕ್ ಗಳು ವಿವಿಧ ಶಿಫ್ಟ್ ಗಳಲ್ಲಿ ನಗರದ ಮಿಶ್ರಿತ ಕಸವನ್ನು ತಂದು ಈ ಭೂಭರ್ತಿ ಘಟಕಕ್ಕೆ ಸುರಿದು ಹೋಗ್ತಿವೆ. ಹಬ್ಬ ಬಂತು ಅಂದ್ರೆ 50 ರಿಂದ 60 ಟ್ರಕ್ ಲೋಡ್ ಗಳು ಜಾಸ್ತಿಯಾಗುತ್ತವೆ.
ಬಿಬಿಎಂಪಿಯು ತನ್ನ ವ್ಯಾಪ್ತಿಯಲ್ಲಿ ಪ್ರತಿದಿನ ಉತ್ಪತ್ತಿಯಾಗುವ ಕಸದಲ್ಲಿ ಹಸಿ ಕಸವನ್ನು ಶೇ.100ಕ್ಕೆ 100ರಷ್ಟು ಬೇರ್ಪಡಿಸಿದ್ದರೆ ಒಟ್ಟಾರೆ 8 ತ್ಯಾಜ್ಯ ಸಂಸ್ಕರಣಾ ಘಟಕಗಳನ್ನು ಶೇ.100ಕ್ಕೆ 100ರಷ್ಟು ಬಳಸಿಕೊಂಡಿದ್ದರೆ ಪ್ರತಿದಿನ 2020 ಮೆಟ್ರಿಕ್ ಟನ್ ಗಳಷ್ಟು ಹಸಿಕಸ ವಿಲೇವಾರಿಯಾಗಿತ್ತು. ಆದರೆ ಕೆಲವು ಕಸದ ಗುತ್ತಿಗೆದಾರರಿಗೆ ಹಾಗೂ ಭ್ರಷ್ಟ ಜನಪ್ರತಿನಿಧಿಗಳಿಗೆ ನಗರದ ಕಸದ ಸಮಸ್ಯೆ ಸಂಪೂರ್ಣವಾಗಿ ನಿವಾರಣೆಯಾಗುವುದು ಬೇಕಿಲ್ಲ. ನಿವಾರಣೆಯಾದರೆ ಹಣ ಲೂಟಿ ಮಾಡಲು ಆಗದು ಎಂಬುದಾಗಿದೆ. ಮಿಟಗಾನಹಳ್ಳಿ ಭೂಭರ್ತಿ ಘಟಕವು ದುರ್ವಾಸನೆ ಬೀರುತ್ತಿದೆ ಎಂಬ ಕಾರಣಕ್ಕೆ ಈ ಹಿಂದೆ ಅಲ್ಲಿ ಕಸ ವಿಲೇವಾರಿ ಮಾಡಲು ಸ್ಥಳೀಯರು ವಿರೋಧ ವ್ಯಕ್ತಪಡಿಸಿದ್ದರು. 2017ರ ಸೆಪ್ಟೆಂಬರ್‌ನಿಂದ ಈ ಕ್ವಾರಿಯ ಬಳಕೆ ಸ್ಥಗಿತಗೊಳಿಸಲಾಗಿತ್ತು. ಆನಂತರ 2019ರ ಸೆಪ್ಟೆಂಬರ್ ನಿಂದ ಮಿಟಗಾನಹಳ್ಳಿ ನಗರದ ಮಿಶ್ರಿತ ಡಂಪ್ ಮಾಡಲಾಗುತ್ತಿದೆ.
ಮುಂದಿನ 20-25 ವರ್ಷಕ್ಕೆ ಕಸ ನಿರ್ವಹಣೆಗೆ ಪ್ಲಾನ್ :
ಬಿಬಿಎಂಪಿ ವ್ಯಾಪ್ತಿಯಲ್ಲಿ ಮುಂದಿನ 20-25 ವರ್ಷಗಳಲ್ಲಿ ನಿತ್ಯ 12,000 ದಿಂದ 13,000 ಟನ್ ಕಸ ಉತ್ಪತ್ತಿಯಾಗಬಹುದೆಂದು ನಿರೀಕ್ಷಿಸಲಾಗಿದ್ದು, ಹಸಿ, ಒಣ ಮತ್ತು ನೈರ್ಮಲ್ಯ ತ್ಯಾಜ್ಯ ನಿರ್ವಹಣೆಯ ಘಟಕಗಳನ್ನು ಒಂದೇ ಕಡೆ ನಿರ್ಮಿಸಲು ಉದ್ದೇಶಿಸಲಾಗಿದೆ. ಈ ಹಿನ್ನೆಲೆಯಲ್ಲಿ ನಗರದ ನಾಲ್ಕು ದಿಕ್ಕುಗಳಲ್ಲಿ ತಲಾ 100 ರಂತೆ 400 ಎಕರೆ ಜಮೀನು ಗುರುತಿಸಲಾಗುತ್ತಿದೆ. ಈ ಪ್ರಕ್ರಿಯೆ ಪೂರ್ಣಗೊಂಡು ಟೆಂಡರ್ ಕರೆದು ಬಯೋ ಗ್ಯಾಸ್ ಘಟಕ, ಗೊಬ್ಬರದ ಘಟಕ, ಕಸದಿಂದ ವಿದ್ಯುತ್ ಘಟಕ, ಒಣಕಸ ಪುನರ್ಬಳಕೆಯನ್ನು ಒಂದೇ ಸ್ಥಳದಲ್ಲಿ ನಿರ್ಮಿಸುವ ಉದ್ದೇಶವನ್ನು ಬಿಎಸ್ ಡಬ್ಲ್ಯುಎಂಎಲ್ ಕಂಪನಿ ಹೊಂದಿದೆ. ಏಜನ್ಸಿಗೆ ಬಿಬಿಎಂಪಿಯೇ ಕಸವನ್ನು ನೀಡಲಿದೆ. ಯಾವ ಸಂಸ್ಥೆಯು ಟನ್ ಗೆ ಅತಿ ಕಡಿಮೆ ಶುಲ್ಕವನ್ನು ಪಾಲಿಕೆಗೆ ನೀಡುವುದಾಗಿ ಟೆಂಡರ್ ನಲ್ಲಿ ಅತಿ ಕಡಿಮೆ ಬಿಡ್ ಮಾಡುತ್ತದೋ ಆ ಏಜನ್ಸಿಗೆ ಬಿಬಿಎಂಪಿಯು ಟೆಂಡರ್ ನೀಡಲಿದೆ. ಈ ಯಶಸ್ವಿ ಬಿಡ್ ದಾರರಾಗುವವರೇ ಸಾರ್ವಜನಿಕ- ಖಾಸಗಿ ಸಹಭಾಗಿತ್ವದಲ್ಲಿ ಪ್ಲಾಂಟ್ ನಿರ್ಮಾಣ ಮಾಡಲಿದೆ. ಸದ್ಯ ಬಿಎಸ್ ಡಬ್ಲ್ಯುಎಂಎಲ್ ಕಂಪನಿಯು ಗೊಲ್ಲಹಳ್ಳಿಯಲ್ಲಿ 170 ಎಕರೆ ಜಾಗವನ್ನು ಹಾಗೂ ಈ ಹಿಂದೆ ದೊಡ್ಡಬಳ್ಳಾಪುರದ ಬಳಿಯ ಟೆರ್ರಾಫಾರ್ಮ ಬಳಿ 100 ಎಕರೆ ಜಾಗವನ್ನು ಗುರ್ತಿಸಿದೆ. ಹಾಗೂ ಉಳಿದ ಎರಡು ಜಾಗಗಳನ್ನು ಹುಡುಕುವ ಕೆಲಸ ಮಾಡುತ್ತಿದೆ.
ಸಮಗ್ರ ಕಸ ಸಂಸ್ಕರಣಾ ಘಟಕ ಬರೋ ತನಕ ಭೂಭರ್ತಿ ಘಟಕವೇ ಗತಿ :
ನಗರದ ನಾಲ್ಕು ಕಡೆ ಸಮಗ್ರ ಕಸ ಸಂಸ್ಕರಣಾ ಘಟಕಗಳನ್ನು ಸ್ಥಾಪಿಸಲು ಕನಿಷ್ಠ ಪಕ್ಷ ಎರಡು ವರ್ಷಗಳು ಹಿಡಿಯಲಿದೆ. ಹೀಗಾಗಿ ಅಲ್ಲಿಯವರೆಗೆ ತ್ಯಾಜ್ಯ ನಿರ್ವಹಣೆಗೆ ಯಾವುದೇ ತೊಡಕಾಗದಂತೆ ಎಚ್ಚರ ವಹಿಸಲು ಭೂಭರ್ತಿ ಘಟಕಗಳನ್ನು ಸ್ಥಾಪಿಸಲಾಗುತ್ತಿದೆ. ಮಹದೇವಪುರ ವಿಧಾನಸಭಾ ಕ್ಷೇತ್ರದ ಕಾಡಅಗ್ರಹಾರ ಗ್ರಾಮದ ಸರ್ವೆ ನಂ. 34ರಲ್ಲಿನ 9 ಎಕರೆ, ಬ್ಯಾಟರಾಯಪುರ ವಿಧಾನಸಭಾ ಕ್ಷೇತ್ರದ ಬೈಯಪ್ಪನಹಳ್ಳಿ ಗ್ರಾಮದ ಸರ್ವೆ ನಂ. 80ರಲ್ಲಿನ 9 ಎಕರೆ ವಿಸ್ತೀರ್ಣದ ಅನುಪಯುಕ್ತ ಕಲ್ಲು ಕ್ವಾರಿಯಲ್ಲಿ ಮಿಶ್ರ ಕಸ ತುಂಬಲು ನಿರ್ಧರಿಸಲಾಗಿದೆ. ಇದಲ್ಲದೆ, ಬಾಗಲೂರಿನ 10 ಎಕರೆ ಮತ್ತು ಮಿಟಗಾನಹಳ್ಳಿಯ 4 ಎಕರೆ ಜಾಗದಲ್ಲೂ ಕಸ ವಿಲೇವಾರಿ ಮಾಡಲು ಉದ್ದೇಶಿಸಲಾಗಿದೆ. ಈ ಎರಡೂ ಕಡೆ ಈಗಾಗಲೇ ಭೂಭರ್ತಿ ಘಟಕಗಳನ್ನು ನಿರ್ಮಿಸಿ ಕಸ ಹಾಕಲಾಗಿದೆ. ಇದರ ಪಕ್ಕದಲ್ಲೇ ಇರುವ ಕ್ವಾರಿಗಳಲ್ಲಿ ಮತ್ತೆ ಕಸ ಹಾಕಲು ನಿರ್ಧರಿಸಲಾಗಿದೆ.
2 ರಿಂದ 6 ತಿಂಗಳ ಅವಧಿಯೊಳಗೆ ಘಟಕ ನಿರ್ಮಿಸಿ, ಕಾರ್ಯಾಚರಿಸಲು ಉದ್ದೇಶಿಸಲಾಗಿದೆ. ಬಳಿಕ ಆಯಾ ವಲಯದಲ್ಲಿ ಉತ್ಪತ್ತಿಯಾಗುವ ಕಸವನ್ನು ಸಮೀಪದ ಭೂಭರ್ತಿ ಘಟಕಗಳಲ್ಲಿ ವಿಲೇವಾರಿ ಮಾಡಲು ನಿರ್ಧರಿಸಲಾಗಿದೆ. ಬೈಯಪ್ಪನಹಳ್ಳಿ 19.99 ಕೋಟಿ ರೂ., ಕಾಡಅಗ್ರಹಾರ 39.11 ಕೋಟಿ ರೂ., ಬಾಗಲೂರು 39.42 ಕೋಟಿ ರೂ. ಹಾಗೂ ಮಿಟಗಾನಹಳ್ಳಿ ಭೂಭರ್ತಿ ಘಟಕಗಳ ನಿರ್ಮಾಣ, ನಿರ್ವಹಣೆ ಮತ್ತು ಕಾರ್ಯಾಚರಣೆಗೆ 19.99 ಕೋಟಿ ರೂ. ವೆಚ್ಚ ಮಾಡಲಾಗುತ್ತಿದೆ. ಒಟ್ಟಾರೆ ಈ ಭೂಭರ್ತಿ ಘಟಕಗಳಿಗಾಗಿ ಒಟ್ಟು 118.52 ಕೋಟಿ ರೂ. ಖರ್ಚು ಮಾಡಲಾಗುತ್ತಿದೆ. ಆದಷ್ಟು ಶೀಘ್ರವಾಗಿ ಭೂಭರ್ತಿ ಘಟಕಗಳನ್ನು ನಿರ್ಮಿಸುವ ಸಂಬಂಧ ಟೆಂಡರ್ ಪಡೆಯುವ ಗುತ್ತಿಗೆದಾರರಿಗೆ ಕಾಲಮಿತಿಯ ಷರತ್ತು ಹಾಕಲಾಗಿದೆ. ಪ್ರಸ್ತುತ ಕಂಪನಿಯು ಕಾಡಅಗ್ರಹಾರ ಮತ್ತು ಭೈಯ್ಯಪ್ಪನಹಳ್ಳಿ ಭೂಭರ್ತಿ ಘಟಕಗಳ ನಿರ್ಮಾಣಕ್ಕಾಗಿ ಟೆಂಡರ್ ಕರೆದಿದೆ.
ಮಾವಳ್ಳಿಪುರದಲ್ಲಿ ಬೆಟ್ಟದಷ್ಟು ಕಸ ಎತ್ತಲು 23.90 ಕೋಟಿ?:
ಯಲಹಂಕ ಸಮೀಪದ ಮಾವಳ್ಳಿಪುರದಲ್ಲಿ ಸುಮಾರು 43 ಎಕರೆ ಪ್ರದೇಶದಲ್ಲಿ ಬೆಟ್ಟದಂತೆ ರಾಶಿ ಬಿದ್ದಿರುವ ಕಸ ಕರಗಿಸಲು ನಿರ್ಧರಿಸಲಾಗಿದೆ. ಮಾವಳ್ಳಿಪುರ ಡಂಪಿಂಗ್‌ಯಾರ್ಡ್ ಅನ್ನು ಹಲವು ವರ್ಷಗಳ ಹಿಂದೆಯೇ ಸ್ಥಗಿತಗೊಳಿಸಲಾಗಿದ್ದು, ಇಲ್ಲಿ3,26,746 ಮೆಟ್ರಿಕ್ ಟನ್ ಕಸ ರಾಶಿ ಬಿದ್ದಿದೆ. ಈ ಕಸವನ್ನು ಕರಗಿಸಲು 23.90 ಕೋಟಿ ರೂ. ವೆಚ್ಚ ಮಾಡಲಾಗುತ್ತಿದೆ. ಪ್ರತಿ ಟನ್‌ಗೆ 731.71 ರೂ. ವ್ಯಯಿಸಲು ತೀರ್ಮಾನಿಸಲಾಗಿದೆ.
ಹಳ್ಳಿಗಳ ಅಭಿವೃದ್ಧಿ ಹೆಸರಿನಲ್ಲಿ ನಡೆಸಿರುವ ಕಾಮಗಾರಿಗಳ ಬಗ್ಗೆ ತನಿಖೆ ಅಗತ್ಯ :
ಒಟ್ಟಿನಲ್ಲಿ ಬೆಂಗಳೂರಿನ ಜನರ ತೆರಿಗೆ ಹಣ ನಗರದ ಘನತ್ಯಾಜ್ಯ ನಿರ್ವಹಣೆ ಹೆಸರಿನಲ್ಲಿ ಕರ್ಚಾಗ್ತಿದೆಯೇ ವಿನಃ ಪೂರ್ಣ ರೂಪದಲ್ಲಿ ಆ ಹಣ ಘನತ್ಯಾಜ್ಯ ನಿರ್ವಹಣೆಗೇ ಕರ್ಚಾಗಿದ್ದರೆ, ನಗರದಲ್ಲಿ ಈ ಪಾಟಿ ಕಸದ ಸಮಸ್ಯೆ, ಬ್ಲಾಕ್ ಸ್ಪಾಟ್ ಹಾವಳಿ, ರಾಜಕಾಲುವೆಗಳಲ್ಲಿ ಪ್ಲಾಸ್ಟಿಕ್, ಘನತ್ಯಾಜ್ಯಗಳನ್ನು ಎಸೆಯುವ ತಾಪತ್ರಯಗಳು ಇಲ್ಲದಾಗುತ್ತಿದ್ದವು. ಭೂಭರ್ತಿ ಘಟಕ ಹಾಗೂ ತ್ಯಾಜ್ಯ ಸಂಸ್ಕರಣಾ ಘಟಕದ ಸುತ್ತಮುತ್ತಲಿನ ಹಳ್ಳಿಗಳಲ್ಲಿ ಆಗಾಗ ಗ್ರಾಮಸ್ಥರು ಒಂದೊಮ್ಮೆ ಸಮರ್ಪಕವಾಗಿ ಬಿಬಿಎಂಪಿಯಿಂದ ಅಭಿವೃದ್ಧಿ ಕಾರ್ಯಗಳು ನಡೆದಿದ್ದರೆ ಆಗಾಗ ಪ್ರತಿಭಟನೆ ನಡೆಸುವ ಹಂತಕ್ಕೆ ಹೋಗುತ್ತಿರಲಿಲ್ಲ. ಹೀಗಾಗಿ 2016-17 ರಿಂದ 2021-22ರ ವರೆಗೆ ನಡೆದಿರುವ ಕಾಮಗಾರಿಗಳು ನಡೆಸಿರುವ ಅಸಲಿಯತ್ತಿನ ಬಗ್ಗೆ ಸ್ವತಂತ್ರ ನ್ಯಾಯಾಂಗ ತನಿಖೆ ಅಥವಾ ಸರ್ಕಾರದ ಮಟ್ಟದಲ್ಲಿ ಉನ್ನತ ತನಿಖೆಯಾಗುವ ಅಗತ್ಯತೆ ಕಂಡು ಬರುತ್ತಿದೆ.