ಬೆಂಗಳೂರು, ಫೆ.17 www.bengaluruwire.com : ರಾಜಕಾಲುವೆ ಹೂಳೆತ್ತುವುದು ಹಾಗೂ ಅದರ ವಾರ್ಷಿಕ ನಿರ್ವಹಣೆ ಎಂಬದು ಬಿಬಿಎಂಪಿಯ ಬೃಹತ್ ನೀರುಗಾಲುವೆ ಎಂಜಿನಿಯರ್ ಹಾಗೂ ಗುತ್ತಿಗೆದಾರರಿಗೆ ಸಾರ್ವಜನಿಕರ ಹಣ ಬಾಚಲು ಇರುವ ದೊಡ್ಡ ತಿಜೋರಿ ಎಂಬುದು ಬಹಿರಂಗವಾಗಿದೆ. ಬೆಂಗಳೂರು ವೈರ್ ವಿಜಯನಗರ ಹಾಗೂ ಬಸವನಗುಡಿ ವಿಧಾನಸಭಾ ಕ್ಷೇತ್ರಗಳಲ್ಲಿ ಕೈಗೊಂಡ ತನಿಖೆ ಹಾಗೂ ಟಿವಿಸಿಸಿ ನಡೆಸಿದ ಸ್ಥಳ ಪರಿಶೀಲನೆಯಿಂದ ಗುತ್ತಿಗೆದಾರರು ಸರಿಯಾಗಿ ಕೆಲಸ ಮಾಡದೆ ಬಿಲ್ ಸಲ್ಲಿಸಿದರೂ ಅದನ್ನು ಬೃಹತ್ ನೀರುಗಾಲುವೆ ಅಧಿಕಾರಿಗಳು ಅನುಮೋದಿಸಿ ಭ್ರಷ್ಟಾಚಾರಕ್ಕೆ ಕೈಜೋಡಿಸಿರುವುದು ಕಂಡು ಬಂದಿದೆ.
ಎರಡು ವಿಧಾನಸಭಾ ಕ್ಷೇತ್ರದ ಟೆಂಡರ್ ಒಬ್ಬ ಕಾಂಟ್ರಾಕ್ಟರ್ ಗೆ :
ವಿಜಯನಗರ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಮೂರು ವರ್ಷಗಳ ಕಾಲ 17.17 ಕಿ.ಮೀ ಉದ್ದದ 17 ವಿವಿಧ ಕಡೆಯ ರಾಜಕಾಲುವೆಗಳಲ್ಲಿ ವಾರ್ಷಿಕ ನಿರ್ವಹಣೆ ಮಾಡುವ 8.08 ಕೋಟಿ ರೂ. ಮೊತ್ತದ ಟೆಂಡರ್ ಹಾಗೂ ಬಸವನಗುಡಿ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ 12.2 ಕಿ.ಮೀ ಉದ್ದದ 8 ವಿವಿಧ ಕಡೆಗಳಲ್ಲಿನ ರಾಜಕಾಲುವೆಗಳಲ್ಲಿ 3.06 ಕೋಟಿ ರೂ. ಮೊತ್ತದ ಟೆಂಡರ್ ಪ್ಯಾಕೇಜ್ ಬಿ.ಎನ್.ಸಮಶೇಖರ್ ಎಂಬ ಗುತ್ತಿಗೆದಾರರಿಗೆ ಲಭಸಿತ್ತು. ಪ್ರತಿ ವರ್ಷ ನಾಲ್ಕು ಆವೃತ್ತಿಗಳಂತೆ (Cycles) ಮೂರು ವರ್ಷಗಳಲ್ಲಿ ಒಟ್ಟು 12 ಸೈಕಲ್ ಗಳಲ್ಲಿ ಕಾಮಗಾರಿ ಕೈಗೊಳ್ಳಬೇಕು ಎಂದು ಟೆಂಡರ್ ಮತ್ತು ಪರಸ್ಪರ ಒಡಂಬಡಿಕೆಗಳಲ್ಲಿ ಸ್ಪಷ್ಟವಾಗಿ ತಿಳಿಸಲಾಗಿದೆ.
ಬೆಂಗಳೂರು ವೈರ್ ತನಿಖೆಯ ರಿಯಾಲಿಟಿ ಚೆಕ್ :
(ಸ್ಥಳ : ಬಸವನಗುಡಿ ವಿಧಾನಸಭಾ ಕ್ಷೇತ್ರ)
ಟನ್ ಗಟ್ಟಲೆ ಘನತ್ಯಾಜ್ಯ, ಹೂಳು, ಪ್ಲಾಸ್ಟಿಕ್ ತ್ಯಾಜ್ಯ :
ಈ ಬಗ್ಗೆ ಬೆಂಗಳೂರು ವೈರ್ ವಾಸ್ತವವನ್ನು ತಿಳಿದುಕೊಳ್ಳಲು ಮೊದಲಿಗೆ ಬಸವನಗುಡಿ ವಿಧಾನಸಭಾ ಕ್ಷೇತ್ರ ಐತಿಹಾಸಿಕ ಕೆಂಪಾಂಬುದಿ ಕೆರೆಯ ಅಂಚಿನಲ್ಲಿನ ದ್ವಿತೀಯ ಹಂತದ ರಾಜಕಾಲುವೆಯಲ್ಲಿ ಸರಿಯಾಗಿ ಹೂಳು ತೆಗೆಯದೆ ಸರಾಗವಾಗಿ ಕೊಳಚೆ ನೀರು ಹರಿಯಲು ತೊಂದರೆಯಾಗುತ್ತಿರುವುದನ್ನು ಕಂಡುಕೊಂಡಿತು. ಬಳಿಕ ಶ್ರೀನಗರ ಬಸ್ ಸ್ಟ್ಯಾಂಡ್ ನಿಂದ ಕಾಳಿದಾಸ ಲೇಔಟ್ ತನಕ ಮುಚ್ಚಿರುವ ಡ್ರೈನ್ ಗಳನ್ನು ತೆಗೆದು ಕಾಂಟ್ರಾಕ್ಟರ್ ಹೂಳನ್ನು ತೆಗೆದ ಯಾವ ಕುರುಹು ಇರದಿರುವುದನ್ನು ಖುದ್ದು ಭೇಟಿ ನೀಡಿದಾಗ ತಿಳಿದು ಬಂದಿತು. ಬಳಿಕ ಕಾಳಿದಾಸ ಸರ್ಕಲ್ ಬಸ್ ಸ್ಟ್ಯಾಂಡ್ ನಿಂದ ನಾಗೇಂದ್ರ ಬ್ಲಾಕ್ ನರಿಹಳ್ಳಿ ತನಕದ ಮಳೆ ನೀರು ಮೋರಿಗಳಲ್ಲಿ ಪ್ಲಾಸ್ಟಿಕ್, ಮನೆಯ ಘನತ್ಯಾಜ್ಯ ವಸ್ತುಗಳು, ಹೂಳು ಇರುವುದನ್ನು ಜಿಪಿಎಸ್ ಆಧಾರಿತ ಫೊಟೋ ತೆಗೆದು ಖಚಿತಪಡಿಸಿಕೊಂಡಿತು.
(ಸ್ಥಳ : ವಿಜಯನಗರ ವಿಧಾನಸಭಾ ಕ್ಷೇತ್ರ)
ಗಾಳಿ ಆಂಜನೇಯಸ್ವಾಮಿ ದೇವಸ್ಥಾನದ ಮುಂದೆ ಟ್ರಕ್ ಗಟ್ಟಲೆ ಹೂಳು :
ಅದೇ ದಿನ ವಿಜಯನಗರ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿನ ಬಾಪೂಜಿ ನಗರ, ಗಾಳಿ ಆಂಜನೇಯ ಸ್ವಾಮಿ ದೇವಸ್ಥಾನದ ಮುಂದೆ ಹಾಗೂ ಅಕ್ಕಪಕ್ಕದ ಪ್ರಾಥಮಿಕ ರಾಜಕಾಲುವೆಗಳಲ್ಲಿ ರಿಯಾಲಿಟಿ ಚೆಕ್ ಮಾಡಿದಾಗ, ಟ್ರಕ್ ಗಟ್ಟಲೆ ಹೂಳು, ವೈದ್ಯಕೀಯ ತ್ಯಾಜ್ಯ, ಹಾಗೂ ಪ್ಲಾಸ್ಟಿಕ್ ಮತ್ತಿತರ ಘನತ್ಯಾಜ್ಯಗಳಿರುವುದನ್ನು ಪತ್ತೆಹಚ್ಚಿತು. 2023ರಲ್ಲಿ ಬೆಂಗಳೂರಿಗೆ ವಾಡಿಕೆಯಷ್ಟು ಮಳೆಯಾಗಿಲ್ಲ ಹಾಗೂ 2024ನೇ ಇಸವಿಯ ಆರಂಭದಲ್ಲೂ ಒಂದು ಹನಿ ಮಳೆಯಾಗಿಲ್ಲ. ವಿಷಯ ಹೀಗಿದ್ದರೂ ಈ ರಾಜಕಾಲುವೆಗಳಲ್ಲಿ ಮೆಟ್ರಿಕ್ ಟನ್ ಗಳಷ್ಟು ಹೂಳು ತುಂಬಿದ್ದರೂ ಪಾಲಿಕೆ ಬೃಹತ್ ನೀರುಗಾಲುವೆ ಚೀಫ್ ಎಂಜಿನಿಯರ್ ಗಾಗಲಿ, ದಕ್ಷಿಣ ವಲಯದ ಎಂಜಿನಿಯರ್ ಗಾಗಲಿ ಕಣ್ಣಿಗೆ ಕಾಣುವಂತೆ ಹೂಳು ತುಂಬಿದ್ದರೂ, ಕಾಂಟ್ರಾಕ್ಟರ್ ಮೂರು ತಿಂಗಳಿಗೊಮ್ಮೆಯಂತೆ ಒಟ್ಟಾರೆ ಎರಡು ವಿಧಾನಸಭಾ ಕ್ಷೇತ್ರಗಳ 2.52 ಕೋಟಿ ರೂ. ಮೊತ್ತದ ಸಬ್ ಮಿಟ್ ಮಾಡಿರುವ 7 ಬಿಲ್ ಗಳನ್ನು ಸರ್ಟಿಫೈ ಮಾಡಿರೋದು ನಿಜಕ್ಕೂ ಬೆಂಗಳೂರಿನ ನಾಗರೀಕರು ತಲೆತಗ್ಗಿಸಬೇಕಾದ ವಿಷಯ.
ಟಿವಿಸಿಸಿಯಿಂದಲೂ, ಕಾಮಗಾರಿಗಳಲ್ಲಿ ನ್ಯೂನ್ಯತೆ ಬಯಲು :
ಪ್ರಾಥಮಿಕ ಮತ್ತು ದ್ವಿತೀಯ ಹಂತದ ರಾಜಕಾಲುವೆಗಳಲ್ಲಿ ಸೂಕ್ತ ರೀತಿ ಹೂಳು, ಕಸವನ್ನು ಸ್ವಚ್ಛಗೊಳಿಸದೆ ಇದ್ದರೂ ಕಾಮಗಾರಿ ಕೈಗೊಂಡ ಬಗ್ಗೆ ಒಟ್ಟಾರೆ 2.93 ಕೋಟಿ ರೂ. ಮೊತ್ತಕ್ಕೆ ವಿವಿಧ ಬಿಲ್ ಗಳನ್ನು ಕಾಂಟ್ರಾಕ್ಟರ್ ಮಾಡಿದ್ದರೆ, ಇಲ್ಲಿ ಸಮರ್ಪಕವಾಗಿ ಕೆಲಸ ಮಾಡಲಾಗಿದೆ ಎಂದು ಬೃಹತ್ ನೀರುಗಾಲುವೆ ಸಹಾಯಕ ಕಾರ್ಯನಿರ್ವಾಹಕ ಎಂಜಿನಿಯರ್ ಎ.ಡಿ.ಜ್ಯೋತಿಯವರು ಪ್ರಾಮಾಣಿಕರಿಸಿದ್ದಾರೆ. ಈ ಎರಡು ಪ್ಯಾಕೇಜ್ ಗುತ್ತಿಗೆ ಕೆಲಸದ ಬಗ್ಗೆ ಮುಖ್ಯ ಆಯುಕ್ತರ ತಾಂತ್ರಿಕ ಜಾಗೃತಿ ಕೋಶ (ಟಿವಿಸಿಸಿ – TVCC)ದ ಎಂಜಿನಿಯರ್ ಗಳು, 2023ರ ಅಕ್ಟೋಬರ್ 03ರಂದು ವಿಜಯನಗರ ವಿಧಾನಸಭಾ ಕ್ಷೇತ್ರದ 14 ವಿವಿಧ ಮಳೆನೀರುಗಾಲುವೆಗಳಲ್ಲಿ ಪರಿಶೀಲನೆ ನಡೆಸಿತ್ತು. ಇನ್ನು ಬಸವನಗುಡಿ ವಿಧಾನಸಭಾ ಕ್ಷೇತ್ರಗಳಲ್ಲಿನ 8 ವಿವಿಧ ಮಳೆನೀರು ಮೋರಿಗಳಲ್ಲಿ ಪರಿಶೀಲನೆ ನಡೆಸಿ ಬೃಹತ್ ಮಳೆ ನೀರುಗಾಲುವೆ ಕಾಮಗಾರಿಗಳಲ್ಲಿ ಹಲವು ನ್ಯೂನತೆಗಳಿರುವುದನ್ನು ಪತ್ತೆ ಹಚ್ಚಿ ಮುಖ್ಯ ಆಯುಕ್ತರಿಗೆ ವರದಿ ಸಲ್ಲಿಸಿದೆ.
ಯಾವೆಲ್ಲಾ ನ್ಯೂನತೆಗಳನ್ನು ಟಿವಿಸಿಸಿ ಪತ್ತೆಹಚ್ಚಿದೆ?:
ಬಸವನಗುಡಿ ಹಾಗೂ ವಿಜಯನಗರ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಟಿವಿಸಿಸಿ ವಿಭಾಗದ ಎಇಇ ಹಾಗೂ ಇಇ ಅಧಿಕಾರಿಗಳು ಪರಿಶೀಲನೆ ನಡೆಸಿದ ಸಂದರ್ಭದಲ್ಲಿ ಕಂಡು ಬಂದ ನ್ಯೂನ್ಯತೆಗಳನ್ನು ಎರಡು ವಿಧಾನಸಭಾ ಕ್ಷೇತ್ರಕ್ಕೆ ಸಂಬಂಧಿಸಿದ ವರದಿಗಳನ್ನು ಪ್ರತ್ಯೇಕವಾಗಿ ಟಿವಿಸಿಸಿ ಸೂಪರಿಟೆಂಡೆಂಟ್ ಎಂಜಿನಿಯರ್ ಮತ್ತು ಮುಖ್ಯ ಎಂಜಿನಿಯರ್ ಗಳಿಗೆ ಸಲ್ಲಿಸಿದ್ದು, ಅವರು ಈ ವರದಿಯನ್ನು ಅನುಮೋದಿಸಿದ ಬಳಿಕ ಮುಖ್ಯ ಆಯುಕ್ತರಿಗೆ ಈ ವರದಿಯನ್ನು ಸಲ್ಲಿಸಲಾಗಿದೆ. ಈ ವರದಿಯಲ್ಲಿ ಟಿವಿಸಿಸಿ, “ತೆರೆದ ಮಳೆನೀರುಗಾಲುವೆಯ ತಳಭಾಗದಲ್ಲಿ ಸರಿಯಾಗಿ ಹೂಳು ತೆಗೆಯದೇ, ಸಂಪೂರ್ಣವಾಗಿ ಚರಂಡಿ ಸ್ವಚ್ಚ ಮಾಡಿಲ್ಲ. ಬಸವನಗುಡಿ ವಿಧಾನಸಭಾ ಕ್ಷೇತ್ರದಲ್ಲಿ 12.20 ಕಿ.ಮೀ ಉದ್ದ ಬೃಹತ್ ನೀರುಗಾಲುವೆಯ ಪೈಕಿ ಶೇ.90ರಷ್ಟು ಮುಚ್ಚಿದ ಚರಂಡಿಗಳಿದೆ. ಈ ಜಾಗದಲ್ಲಿ ಹೂಳು ತೆಗೆದಿರುವ ಬಗ್ಗೆ ಹೆಚ್ಚಿನ ಫೋಟೋಗಳನ್ನು ನೀಡಿಲ್ಲ. ಕೆಲವು ಭಾಗಗಳ ಮೋರಿಗಳಲ್ಲಿ ಸ್ವಚ್ಛಗೊಳಿಸಲು ಪ್ರೀಕ್ಯಾಸ್ಟ್ ಕವರಿಂಗ್ ಸ್ಲಾಬ್ ಗಳೇ ಇಲ್ಲ. ಹೀಗಾಗಿ ಮುಚ್ಚಿರುವ ಮಳೆನೀರು ಚರಂಡಿಯಲ್ಲಿ ಹೂಳು ತೆಗೆದಿರುವ ಬಗ್ಗೆ ಖಚಿತವಾಗಿ ವರದಿ ಮಾಡಲು ಸಾಧ್ಯವಾಗಿಲ್ಲ. ಸೇತುವೆ ಅಥವಾ ಕಲ್ವರ್ಟ್ ಕೆಳಗಡೆ ಹೂಳು ಇರುವುದು ಕಂಡು ಬಂದಿರುತ್ತದೆ.”
“ಚರಂಡಿಗಳ ಒಳಭಾಗಗಳಲ್ಲಿ ಗಿಡಗಂಟೆ, ಜೊಂಡು ಹುಲ್ಲು ಇರುವುದನ್ನು ಗಮನಿಸಲಾಗಿದ್ದು, ಇವುಗಳನ್ನು ಸ್ವಚ್ಛಗೊಳಿಸಬೇಕಾಗಿರುತ್ತದೆ. ತ್ರೈಮಾಸಿಕವಾಗಿ ರಾಜಕಾಲುವೆ ನಿರ್ವಹಣೆ ಕಾಮಗಾರಿ ಬಿಲ್ ಸಲ್ಲಿಸುತ್ತಿದ್ದರೂ, ಪರಿಶೀಲನೆ ಸಂದರ್ಭದಲ್ಲಿ ಮುಂದಿನ ಹಂತದ ನಿರ್ವಹಣೆ ಕಾಮಗಾರಿ ಚಾಲ್ತಿಯಲ್ಲಿದ್ದರೂ ಸಹ ಚರಂಡಿಯನ್ನು ಪೂರ್ಣ ಪ್ರಮಾಣದಲ್ಲಿ ಸ್ವಚ್ಚಗೊಂಡಿಲ್ಲ. ಕಾಮಗಾರಿ ಆರಂಭಕ್ಕೆ ಮುನ್ನ, ನಡೆಸುವ ಸಂದರ್ಭ ಹಾಗೂ ಕಾಮಗಾರಿ ಮುಗಿದ ಬಳಿಕದ ಛಾಯಚಿತ್ರವಾಗಲಿ, ಡ್ರೋನ್ ಕ್ಯಾಮರಾ ವಿಡಿಯೋ ಮಾಡಿರುವ ಬಗ್ಗೆ ದಾಖಲೆ ಲಭ್ಯವಿಲ್ಲ. ಬೃಹತ್ ಮಳೆ ನೀರಾಗಾಲುವೆಯಲ್ಲಿ ಹೂಳೆತ್ತಲು ಕನಿಷ್ಠ ಸಂಖ್ಯೆ ಯಂತ್ರ ಹಾಗೂ ವಾಹನಗಳನ್ನು ನಿಯೋಜಿಸಿರುವ ಬಗ್ಗೆ ಅಗತ್ಯ ದಾಖಲೆಗಳನ್ನು ಕಡತದಲ್ಲಿ ಲಗತ್ತಿಸಿಲ್ಲ. ಕಾಮಗಾರಿ ಸಂದರ್ಭದಲ್ಲಿ ನಿಗಧಿತ ಕಾರ್ಮಿಕರನ್ನು ಬಳಸಿಕೊಂಡ ಬಗ್ಗೆ ಕಡತದಲ್ಲಿ ವಿವರಗಳಿಲ್ಲ ಹಾಗೂ ಕಾರ್ಮಿಕರು ಸೂಕ್ತ ಸುರಕ್ಷಾ ಸಲಕರಣೆ ಬಳಸದೆ ಕಾರ್ಯನಿರ್ವಹಿಸುತ್ತಿರುವುದನ್ನು ಗಮನಿಸಲಾಗಿದೆ. ರಾಜಕಾಲುವೆಗಳಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಕಸದ ಮೂಟೆ ಇರುವುದು ಕಂಡು ಬಂದಿದೆ. ಕಸ ಹಾಕುವವರ ವಿರುದ್ಧ ಕ್ರಮ ಕೈಗೊಂಡ ದಾಖಲೆಗಳಿಲ್ಲ” ಎಂದು ಟಿವಿಸಿಸಿ ವರದಿಯಲ್ಲಿ ತಿಳಿಸಿದೆ. ಎರಡು ವರದಿಗಳು ಬಹುತೇಕ ಒಂದೇ ರೀತಿಯ ನ್ಯೂನ್ಯತೆಗಳನ್ನು ಒಳಗೊಂಡಿದೆ.
ಬಸವನಗುಡಿ ಶಾಸಕರು ಈ ಬಗ್ಗೆ ಏನಂತಾರೆ?:
“ಬಸವನಗುಡಿ ವಿಧಾನಸಭಾ ಕ್ಷೇತ್ರದಲ್ಲಿ ಬೃಹತ್ ಮಳೆನೀರುಗಾಲುವೆ ಹೂಳೆ ತೆಗೆಯುವಿಕೆ ಮತ್ತು ನಿರ್ವಹಣೆ ವಿಷಯದಲ್ಲಿ ಕಂಡು ಬಂದಿರುವ ನ್ಯೂನ್ಯತೆಗಳ ಬಗ್ಗೆ ಬೆಂಗಳೂರು ವೈರ್ ಹಾಗೂ ಟಿವಿಸಿಸಿ ವರದಿ ನೀಡಿರುವುದು ಇದೀಗ ಗಮನಕ್ಕೆ ಬಂದಿದೆ. ಈ ಹಿಂದೆ ನರಿಹಳ್ಳ ಭಾಗದಲ್ಲಿ ನೀರು ಸರಾಗವಾಗಿ ಹರಿಯದೇ ತೊಂದೆರೆಯಾಗಿತ್ತು. ನಮ್ಮ ಕ್ಷೇತ್ರದಲ್ಲಿ ಸೂಕ್ತ ರೀತಿ ಕಾಮಗಾರಿ ನಡೆಸದೆ ಬಿಲ್ ಮಾಡಿದ್ದರೆ ಅಂತಹ ಎಂಜಿನಿಯರ್ ಹಾಗೂ ಗುತ್ತಿಗೆದಾರರ ವಿರುದ್ಧ ಯಾವುದೇ ಮುಲಾಜಿಲ್ಲದೆ ಕಾನೂನು ಕ್ರಮ ಕೈಗೊಳ್ಳಲು ಹಿಂಜರಿಯುವುದಿಲ್ಲ.”
- ರವಿಸುಬ್ರಮಣ್ಯ, ಬಸವನಗುಡಿ ಕ್ಷೇತ್ರದ ಶಾಸಕರು
ಸೂಕ್ತ ಕಾಮಗಾರಿ ಮಾಡದಿದ್ದರೂ ತೃಪ್ತಿದಾಯಕ ಎಂಬ ಸರ್ಟಿಫಿಕೇಟ್ ಕೊಟ್ಟ ಎಇಇ
ಗುತ್ತಿಗೆದಾರರನ್ನು ಹಾಗೂ ತಮ್ಮ ಕಾರ್ಯವನ್ನು ಸಮರ್ಥಿಸಿಕೊಂಡ ಎಇಇ
ಬೆಂಗಳೂರು ವೈರ್ ವಿಜಯನಗರ ಹಾಗೂ ಬಸವನಗುಡಿ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಪ್ರಾಥಮಿಕ ಮತ್ತು ದ್ವಿತೀಯ ಕೆಲವೊಂದು ಕಡೆಯ ರಾಜಕಾಲುವೆಗಳಲ್ಲಿ ಭೇಟಿ ನೀಡಿ ಪರಿಶೀಲಿಸಿದಾಗ ಹಾಗೂ ಟಿವಿಸಿಸಿ ವರದಿಯಲ್ಲೂ ಕಾಂಟ್ರಾಕ್ಟರ್ ಸೂಕ್ತ ರೀತಿ ರಾಜಕಾಲುವೆ ಹೂಳೆತ್ತುವಿಕೆ, ಸ್ವಚ್ಛಗೊಳಿಸುವಿಕೆ ಮಾಡದ ಬಗ್ಗೆ ಕಂಡು ಬಂದಿದೆ. ಆದರೆ ಇಷ್ಟಾದರೂ ಕಾಮಗಾರಿ ನಡೆಸಿರುವ ಬಗ್ಗೆ ಗುತ್ತಿಗೆದಾರರು ಸಲ್ಲಿಸಿದ ಬಿಲ್ ಗೆ ಪೂರಕವಾಗುವಂತೆ ಅಳತೆ ಪುಸ್ತಕ (MEASUREMENT BOOK- MB) ದಲ್ಲಿ ಈ ಕಾಮಗಾರಿಗಳ ಕಾರ್ಯವು ತೃಪ್ತಿದಾಯಕವಾಗಿದೆ ಎಂದು ಎಸ್ ಡಬ್ಲ್ಯುಡಿ ದಕ್ಷಿಣ ವಲಯದ ವಿಭಾಗದ ಎಇಇ ಎ.ಡಿ.ಜ್ಯೋತಿ ತಿಳಿಸಿರೋದು ಅವರೂ ಸರಿಯಾಗಿ ನಿರ್ವಹಿಸದ ಕಾಮಗಾರಿಯ ಬಿಲ್ ಗಳನ್ನು ಅನುಮೋದಿಸಲು ಗುತ್ತಿಗೆದಾರರೊಂದಿಗೆ ಶಾಮಿಲಾಗಿದ್ದಾರಾ ಎಂಬು ಅನುಮಾನ ಮೂಡುತ್ತದೆ. ಏಕೆಂದರೆ ವಿಜಯನಗರ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿರುವ ಗಾಳಿ ಆಂಜನೇಯ ಸ್ವಾಮಿ ದೇವಸ್ಥಾನದ ಮುಂಭಾಗ ಮತ್ತು ಹತ್ತಿರದಲ್ಲೇ ಇರುವ ಬಾಪೂಜಿನಗರ ರಾಜಕಾಲುವೆಯಲ್ಲೂ ಹೂಳು ತೆಗೆಯದಿದ್ದರೂ ಸ್ಥಳದಿಂದ ಹೂಳು ತೆಗೆಯಲಾಗಿದೆ ಎಂದು ಪ್ರಾಮಾಣಿಕರಿಸಿದ್ದಾರೆ. ಈ ಬಗ್ಗೆ ಅವರನ್ನು ಕೇಳಿದಾಗ ಅವರು ಹೇಳಿದ್ದಿಷ್ಟು :
“ಬಸವನಗುಡಿ ಹಾಗೂ ವಿಜಯನಗರದಲ್ಲಿ ಬೃಹತ್ ಮಳೆನೀರುಗಾಲುವೆ ನಿರ್ವಹಣೆ ಸೂಕ್ತ ರೀತಿ ಆಗಿದೆ. ಗುತ್ತಿಗೆದಾರರು ಸಲ್ಲಿಸಿದ ಬಿಲ್ ಸರಿಯಾಗಿದೆ. ಹೀಗಾಗಿ ಸರ್ಟಿಫೈ ಮಾಡಿದ್ದೇವೆ. ಟಿವಿಸಿಸಿ ಕೊಟ್ಟ ವರದಿಗೆ ಸೂಕ್ತ ಅನುಪಾಲನಾ ವರದಿಯನ್ನು ನಿನ್ನೆ ಅವರಿಗೆ ಸಲ್ಲಿಕೆ ಮಾಡಿದ್ದೇವೆ. ಗಾಳಿ ಆಂಜನೇಯಸ್ವಾಮಿ ದೇವಸ್ಥಾನದಲ್ಲಿರುವ ಹೂಳನ್ನು ಹಿಂದಿನ ಗುತ್ತಿಗೆದಾರರ ತೆಗೆದಿಲ್ಲ. ಅವರಿಗೆ ನೋಟಿಸ್ ಕೊಟ್ಟಿದ್ದೇವೆ. ಹೀಗಾಗಿ ಈಗಿನ ಗುತ್ತಿಗೆದಾರರು ಆ ಹೂಳನ್ನು ತೆಗೆದಿಲ್ಲ. ಮಳೆನೀರುಗಾಲುವೆಗಳಲ್ಲಿ ಹೂಳು ತೆಗೆದಂತೆ ಬರುತ್ತಲೇ ಇರುತ್ತದೆ. ಅದಕ್ಕೆ ಏನು ಮಾಡಲು ಸಾಧ್ಯ?”
- ಎ.ಡಿ.ಜ್ಯೋತಿ, ಸಹಾಯಕ ಕಾರ್ಯನಿರ್ವಾಹಕ ಎಂಜಿನಿಯರ್, ಬೆಂಗಳೂರು ದಕ್ಷಿಣ ವಲಯ (ಎಸ್ ಡಬ್ಲ್ಯುಡಿ)
ಗಾಳಿ ಆಂಜನೇಯಸ್ವಾಮಿ ದೇವಸ್ಥಾನದ ಮುಂದೆ ಟ್ರಕ್ ಗಟ್ಟಲೆ ಹೂಳಿದ್ದರೂ, ಅವುಗಳ ಬಗ್ಗೆ ಕೇಳಿದ್ರೆ, ಅದು ಹಿಂದಿನ ಗುತ್ತಿಗೆದಾರರು ಕೆಲಸ ಮಾಡದೆ ಬಿಟ್ಟು ಹೋಗಿದ್ದಾರೆ. ಹೀಗಾಗಿ ಈಗಿನ ಗುತ್ತಿಗೆದಾರರು ಅದನ್ನು ತೆಗೆದಿಲ್ಲ ಎಂದು ಹೇಳ್ತಾರೆ ಎಸ್ ಡಬ್ಲ್ಯುಡಿ ದಕ್ಷಿಣ ವಲಯದ ವಿಭಾಗದ ಎಇಇ ಎ.ಡಿ.ಜ್ಯೋತಿ. ಹಾಗಾದ್ರೆ ಒಂದೊಮ್ಮೆ ಮೇಘಸ್ಪೋಟವಾಗಿ ಧಾರಾಕಾರ ಮಳೆಯಾಗಿ ಈ ತೆಗೆಯದ ಹೂಳಿನಿಂದ ಸರಿಯಾಗಿ ಮಳೆ ನೀರು ಕಾಲುವೆಯಲ್ಲಿ ಹರಿಯದೇ ಅವಾಂತರವಾದರೆ ಯಾರು ಜವಾಬ್ದಾರರು? ಸತ್ಯ ಕಣ್ಣ ಮುಂದಿದೆ. ಈ ಬಗ್ಗೆ ಸಮಗ್ರ ತನಿಖೆ ನಡೆಸಿ ತಪ್ಪಿತಸ್ಥರು ಎಂದು ಕಂಡುಬಂದಲ್ಲಿ ಅಧಿಕಾರಿ ಮತ್ತು ಗುತ್ತಿಗೆದಾರರ ವಿರುದ್ಧ ನಿರ್ದಾಕ್ಷಿಣ್ಯ ಕ್ರಮ ಕೈಗೊಳ್ಳಬೇಕಿದೆ.
ನಗರದಾದ್ಯಂತ 560 ಕಿ.ಮೀ ಉದ್ದದ ರಾಜಕಾಲುವೆ, ವಾರ್ಷಿಕ ನಿರ್ವಹಣೆ
3 ವರ್ಷಕ್ಕೆ 142 ಕೋಟಿ ರೂ. ಮೊತ್ತದ 30 ಪ್ಯಾಕೇಜ್ ಗಳಲ್ಲಿ ಟೆಂಡರ್ ನೀಡಿಕೆ
ವಾರ್ಷಿಕ ನಿರ್ವಹಣೆ ಗುತ್ತಿಗೆಯಲ್ಲಿ ಕೋಟ್ಯಾಂತರ ರೂ. ಹಗರಣ ನಡೆದಿರುವ ಸಾಧ್ಯತೆ
ಇದು ಬೆಂಗಳೂರಿನಾದ್ಯಂತ ಪಾಲಿಕೆ ಬೃಹತ್ ನೀರುಗಾಲುವೆಯಿಂದ ಟೆಂಡರ್ ಕರೆದು ವಾರ್ಷಿಕವಾಗಿ ರಾಜಕಾಲುವೆ ಹೂಳೆತ್ತುವಿಕೆ ಮತ್ತು ರಾಜಕಾಲುವೆ ನಿರ್ವಹಣೆಯಲ್ಲಾಗುತ್ತಿರುವ ಕೋಟ್ಯಂತರ ರೂಪಾಯಿ ಭ್ರಷ್ಟಾಚಾರಕ್ಕೆ ಹಿಡಿದ ಕೈಗನ್ನಡಿಯಂತಿದೆ. ಏಕೆಂದರೆ ಪಾಲಿಕೆ ವ್ಯಾಪ್ತಿಯಲ್ಲಿ ಒಟ್ಟು 859.78 ಕಿ.ಮೀ ಉದ್ದದ ರಾಜಕಾಲುವೆ ಮಾರ್ಗವಿದೆ. ಆ ಪೈಕಿ 233.67 ಕಿ.ಮೀ ಉದ್ದದ ಪ್ರಾಥಮಿಕ ಕಾಲುವೆ ಹಾಗೂ 626.11 ಕಿ.ಮೀ ದ್ವಿತೀಯ ಹಂತದ ರಾಜಕಾಲುವೆಯಿದೆ. ಇವುಗಳಲ್ಲಿ ಈಗಾಗಲೇ ರಾಜ್ಯ ಸರ್ಕಾರದ ವಿವಿಧ ಯೋಜನೆಗಳಡಿ ಒಟ್ಟಾರೆ 560 ಕಿ.ಮೀ ಉದ್ದದ ದ್ವಿತೀಯ ಮತ್ತು ಪ್ರಾಥಮಿಕ ಹಂತದ ರಾಜಕಾಲುವೆಗಳಲ್ಲಿ ಕಾಂಕ್ರೀಟ್ ತಡೆಗೋಡೆಗಳನ್ನು ನಿರ್ಮಾಣ ಮಾಡಲಾಗಿದೆ. ಉಳಿದವು ಇನ್ನೂ ಕಚ್ಚಾ ರಾಜಕಾಲುವೆಗಳಾಗಿದೆ. ಅವುಗಳಲ್ಲೂ ಕೂಡ ಕಾಂಕ್ರಿಟ್ ತಡೆಗೋಡೆ ನಿರ್ಮಾಣ ಮಾಡುವ ಕಾಮಗಾರಿ ಚಾಲ್ತಿಯಲ್ಲಿದೆ.
ನಗರದಲ್ಲಿ ಒಟ್ಟು 1920 ಕೋಟಿ ರೂ.ಗಳಿಗೆ 196.45 ಕಿ.ಮೀ ಉದ್ದ ರಾಜಕಾಲುವೆ ತಡೆಗೋಡೆ ಮತ್ತಿತರ ಕಾಮಗಾರಿಗಳಿಗಾಗಿ ರಾಜ್ಯ ಸರ್ಕಾರದ ಅನುದಾನ (1,500 ಕೋಟಿ ರೂ. ವೆಚ್ಚದಲ್ಲಿ 79 ಪ್ಯಾಕೇಜ್ ಗಳಲ್ಲಿ 360 ಕಾಮಗಾರಿ), ತುರ್ತು ಅನುದಾನ (313 ಕೋಟಿ ರೂ. ವೆಚ್ಚದಲ್ಲಿ 14 ಪ್ಯಾಕೇಜ್ ಗಳಲ್ಲಿ 36 ಕಾಮಗಾರಿ) ಹಾಗೂ ಅಮೃತ್ ನಗರೋತ್ಥಾನ ( 107 ಕೋಟಿ ರೂ. ವೆಚ್ಚದಲ್ಲಿ 6 ಪ್ಯಾಕೇಜ್ ಗಳಲ್ಲಿ 14 ಕಾಮಗಾರಿ) ದಲ್ಲಿ ವಿವಿಧ ಕಡೆಗಳಲ್ಲಿ ನಡೆಯುತ್ತಿದೆ. ಈ ಎಲ್ಲಾ ಕಾಮಗಾರಿಗಳನ್ನು ಸೂಕ್ಷ್ಮವಾಗಿ ಹದ್ದುಗಣ್ಣಿಡಬೇಕಾಗುತ್ತದೆ.
ಮುಖ್ಯ ಆಯುಕ್ತ ತುಷಾರ್ ಗಿರಿನಾಥ್ ಶೀಘ್ರ ಸಮಗ್ರ ತನಿಖೆ ನಡೆಸಿದರೆ ಸತ್ಯಾಂಶ ಬೆಳಕಿಗೆ :
ಹೀಗೆ ಕಾಂಕ್ರಿಟ್ ಹಾಕಿ ಸಿದ್ದಮಾಡಿದ ಈ ರಾಜಕಾಲುವೆಗಳಲ್ಲಿ ನಗರದಾದ್ಯಂತ ಬೃಹತ್ ನೀರುಗಾಲುವೆ ವಿಭಾಗ ಹೂಳೆತ್ತುವಿಕೆ ಮತ್ತು ರಾಜಕಾಲುವೆ ವಾರ್ಷಿಕ ನಿರ್ವಹಣೆಗಾಗಿ 142 ಕೋಟಿ ಮೊತ್ತದ 30 ಪ್ಯಾಕೇಜ್ ಗಳನ್ನು 2022-23, 2023-24 ಹಾಗೂ 2024-25ನೇ ಸಾಲಿಗಾಗಿ ಟೆಂಡರ್ ಕರೆದು ಗುತ್ತಿಗೆ ನೀಡಿದೆ. ಆದರೆ ಈ ರಾಜಕಾಲುವೆಗಳಲ್ಲಿ ವಾರ್ಷಿಕ ಹೂಳೆತ್ತುವಿಕೆ ಮತ್ತು ಕಾಲುವೆ ನಿರ್ವಹಣೆ ಹೆಸರಿನಲ್ಲಿ ಬ್ರಹ್ಮಾಂಡ ಭ್ರಷ್ಟಾಚಾರ ನಡೆಯುತ್ತಿರುವ ಬಗ್ಗೆ ಮೇಲಿನ ಪ್ರಕರಣಗಳಿಂದ ದಟ್ಟವಾದ ಅನುಮಾನ ಮೂಡಿದೆ. ಈ ಬಗ್ಗೆ ಮುಖ್ಯ ಆಯುಕ್ತ ತುಷಾರ್ ಗಿರಿನಾಥ್ ಕೇವಲ ವಿಜಯನಗರ, ಬಸವನಗುಡಿಯಲ್ಲದೇ ಇಡೀ ಬೆಂಗಳೂರಿನಲ್ಲಿ ನೀಡಿರುವ ಒಟ್ಟಾರೆ 30 ಕಾಮಗಾರಿಗಳ ಬಿಲ್ ಹಾಗೂ ನೀರುಗಾಲುವೆ ನಿರ್ವಹಣಾ ಕಾರ್ಯದ ಬಗ್ಗೆ ಕೂಡಲೇ ಸಮಗ್ರ ತನಿಖೆ ನಡೆಸಿದರೆ ಸತ್ಯಾಂಶ ಬೆಳಕಿಗೆ ಬರಲಿದೆ.
ರಾಜಕಾಲುವೆ ವಾರ್ಷಿಕ ನಿರ್ವಹಣೆ ಅಗ್ರಿಮೆಂಟ್ ನಲ್ಲೇನಿದೆ? :
ರಾಜಕಾಲುವೆ ಸ್ವಚ್ಛತೆ ಮತ್ತು ನಿರ್ವಹಣೆಯ ಗುತ್ತಿಗೆ ಪಡೆದ ಗುತ್ತಿಗೆದಾರರು ತಮ್ಮ ವ್ಯಾಪ್ತಿಯಲ್ಲಿನ ಬೃಹತ್ ಮಳೆ ನೀರುಗಾಲುವೆಗಳಲ್ಲಿರುವ ಹೂಳನ್ನು ತೆರೆದ ರಾಜಕಾಲುವೆಯಾದರೆ ಮೆಕಾನಿಕಲ್ ಯಂತ್ರದಿಂದ ಅಥವಾ ಕಾರ್ಮಿಕರಿಂದ ಹೂಳನ್ನು ತೆಗೆಯಬೇಕು ಹಾಗೂ ಜಾಲರಿ ಬೇಲಿ ಅಥವಾ ಕಾಂಕ್ರೀಟ್ ನಿಂದ ಮುಚ್ಚಿದ ಡ್ರೈನ್ ಗಳಾದರೆ ಅವುಗಳನ್ನು ತೆಗೆದು ಮೆಕಾನಿಕಲ್ ಎಕ್ಸಾವೇಟರ್ ಅಥವಾ ಸೂಕ್ತ ಯಂತ್ರದ ಮೂಲಕ ಕಾರ್ಮಿಕರನ್ನು ಬಳಸಿಕೊಂಡು ಹೂಳು ತೆಗೆಯಬೇಕು. ಹಾಗೂ ಆ ರಾಜಕಾಲುವೆ ಹಾಗೂ ಕಾಲುವೆ ಸೇತುವೆ ಕೆಳಗೆ ಬೆಳೆದಿರುವ ಮರ, ಜೊಂಡು ಹುಲ್ಲುಗಳನ್ನು ತೆಗೆದು ಸೂಕ್ತ ಒಪ್ಪಿಗೆ ಪಡೆದ ಸ್ಥಳಕ್ಕೆ ಕೊಂಡೊಯ್ದು ವಿವೇವಾರಿ ಮಾಡಬೇಕು. ಅದೇ ರೀತಿ ಈ ರಾಜಕಾಲುವೆಗಳಲ್ಲಿ ಹರಿದು ಬರುವ ಪ್ಲಾಸ್ಟಿಕ್ ಬಾಟೆಲ್, ಉತ್ಪನ್ನಗಳು, ಥರ್ಮಕೋಲ್, ಸತ್ತ ಪ್ರಾಣಿಗಳು, ವೈದ್ಯಕೀಯ ತ್ಯಾಜ್ಯ, ಹಳೆಯ ಬಟ್ಟೆ ಇತ್ಯಾದಿ ತ್ಯಾಜ್ಯಗಳನ್ನು ತೆಗೆದು ಪಾಲಿಕೆ ಒಣಕಸ, ಕ್ವಾರಿ ಅಥವಾ ತ್ಯಾಜ್ಯ ಸಂಸ್ಕರಣಾ ಘಟಕಗಳಿಗೆ ರವಾನೆ ಮಾಡಬೇಕು. ಹೂಳು ಅಥವಾ ಇನ್ಯಾವುದೇ ಘನತ್ಯಾಜ್ಯಗಳನ್ನು ತೆಗೆದ ಕೇವಲ 3 ದಿನಗಳ ಒಳಗಾಗಿ ಅವುಗಳನ್ನು ವಿಲೇವಾರಿ ಮಾಡಬೇಕು ಎಂದು ಅಗ್ರಿಮೆಂಟ್ ನಲ್ಲಿ ಸ್ಪಷ್ಟವಾಗಿ ತಿಳಿಸಲಾಗಿದೆ.
ಅದೇ ರೀತಿ ರಾಜಕಾಲುವೆಗೆ ಸಾರ್ವಜನಿಕರ ಅನಧಿಕೃತವಾಗಿ ಕಟ್ಟಡ ತ್ಯಾಜ್ಯ ಅಥವಾ ಘನತ್ಯಾಜ್ಯಗಳನ್ನು ತಂದು ಎಸೆಯದಂತೆ ಕ್ರಮ ಕೈಗೊಳ್ಳಬೇಕು. ಅಂತಹವರ ವಿರುದ್ಧ ಸಾರ್ವಜನಿಕ ಆಸ್ತಿಗಳಿಗೆ ಹಾನಿ ತಡೆಗಟ್ಟುವಿಕೆ ಕಾಯ್ದೆ 1984ರ ಕಲಂ 425ರಂತೆ ಸ್ಥಳೀಯ ಪೊಲೀಸ್ ಠಾಣೆಗಳಲ್ಲಿ ದೂರು ನೀಡಬೇಕು. ಬೃಹತ್ ಮಳೆನೀರುಗಾಲುವೆಗೆ ಸಂಪರ್ಕ ಕಲ್ಪಿಸುವ ರಸ್ತೆ ಬದಿ ಮೋರಿಗಳಲ್ಲಿ ನೀರು ಹರಿಯುವಿಕೆ ತೊಂದರೆಯಾಗುವ ಬೆಸ್ಕಾಂ ಕೇಬಲ್, ಬೆಂಗಳೂರು ಜಲಮಂಡಳಿ ಪೈಪ್ ಗಳನ್ನು ಗುರ್ತಿಸಬೇಕು. ಗುತ್ತಿಗೆದಾರನು ಕನಿಷ್ಠ ಪಕ್ಷ ತಲಾ ಒಂದೊಂದು ವೀಲ್ ಮೌಂಟೆಡ್ ಹೈಡ್ರಾಲಿಕ್ ಎಕ್ಸಾವೇಷನ್, ಹೈಡ್ರಾಲಿಕ್ ಎಕ್ಸಾವೇಟರ್ (ಚೈನ್ ಆಧಾರಿತ/ರೋಬೋಟಿಕ್ ಎಕ್ಸಾವೇಟರ್), ಹೈಡ್ರಾಲಿಕ್ ಡೋರ್ ಹಾಗೂ ಗ್ಯಾಸ್ಕೆಟ್ ಹೊಂದಿದ ಒಂದು ಟಿಪ್ಪರ್, 4 ಟ್ಯಾಕ್ಟರ್ ಹೊಂದಿರಬೇಕು ಎಂದು ಷರತ್ತಿನಲ್ಲಿ ನಮೂದಿಸಲಾಗಿದೆ.
ಕೆಲಸ ಮಾಡಿದಂತೆ ಸೇವಾ ಮಟ್ಟದ ಬೆಂಚ್ ಮಾರ್ಕ್ ನಂತೆ ಪ್ರತಿ ಮೂರು ತಿಂಗಳಿಗೊಮ್ಮೆ ಸಂಬಂಧಿತ ಗುತ್ತಿಗೆದಾರ ಕಾಮಗಾರಿ ಕೈಗೊಂಡ ಬಗ್ಗೆ ಸೂಕ್ತ ಫೋಟೋ, ದ್ರೋಣ್ ಮೂಲಕ ಮಾಡಿದ ವಿಡಿಯೋಗಳನ್ನು ಸಲ್ಲಿಕೆ ಮಾಡಬೇಕು. ಅದನ್ನು ಬೃಹತ್ ಮಳೆನೀರುಗಾಲುವೆ ಎಂಜಿನಿಯರ್ ಪ್ರಾಮಾಣಿಕರಿಸಬೇಕು ಎಂದು ತಿಳಿಸಲಾಗಿದೆ.
“ಬೆಂಗಳೂರು ವೈರ್” ಡಿಜಿಟಲ್ ವೆಬ್ ನ್ಯೂಸ್ ಪೋರ್ಟೆಲ್ಲಿನ ಸೋಶಿಯಲ್ ಮೀಡಿಯಾ ಪೇಜ್ ಹಾಗೂ Google News ಗಳಿಗೆ ಉಚಿತವಾಗಿ Subscribe ಆಗಲು Facebook, Telegram, Twitter, Youtube, Whatsup Channel ಗೆ ಜಾಯಿನ್ ಆಗಲು ಇವುಗಳ ಲಿಂಕ್ ಮೇಲೆ ಕ್ಲಿಕ್ ಮಾಡಿ.