ಬೆಂಗಳೂರು, ಫೆ.7 www.bengaluruwire.com : ರಾಜ್ಯದ ವಿದ್ಯುತ್ ಗ್ರಾಹಕರು ತಮ್ಮ ಬಾಡಿಗೆ ಮನೆಯನ್ನು ಬದಲಾಯಿಸಿದಂತಹ ಸಂದರ್ಭದಲ್ಲಿ ಹಾಗೂ ಇತರೆ ಸಂದರ್ಭಗಳಲ್ಲಿ ಈಗಾಗಲೇ “ಗೃಹಜ್ಯೋತಿ” ಯೋಜನೆಯ ಸೌಲಭ್ಯ ಪಡೆಯುತ್ತಿರುವ ಸ್ಥಾವರದಿಂದ ಸ್ಥಗಿತಗೊಳಿಸಿ ಮತ್ತೊಂದು ಸ್ಥಾವರಕ್ಕೆ ಹೊಸದಾಗಿ ನೋಂದಣಿ ಮಾಡಿಕೊಳ್ಳುವ ಸೌಲಭ್ಯ ಕಲ್ಪಿಸಲು ಸೇವಾಸಿಂಧು ತಂತ್ರಾಂಶದಲ್ಲಿ ಡಿ-ಲಿಂಕ್ (De-Link) ಮಾಡಲು ಸರ್ಕಾರ ಅವಕಾಶ ಕಲ್ಪಿಸಿದೆ.
ಈ ಆದೇಶದಂತೆ ಇನ್ನು ಮುಂದೆ ಬಾಡಿಗೆ ಮನೆಯಲ್ಲಿ ವಾಸಿಸುವ ಜನರು ಸೇವಾಸಿಂಧು ಪೋರ್ಟಲ್ ಮೂಲಕವೇ ಮನೆಯನ್ನು ಖಾಲಿ ಮಾಡುವಾಗ ಗೃಹಜ್ಯೋತಿ ಯೋಜನೆ ರದ್ದುಪಡಿಸಿ, ಹೊಸ ಬಾಡಿಗೆ ಮನೆಗೆ ಲಿಂಕ್ ಮಾಡಬಹುದಾಗಿದೆ. ಆದ್ದರಿಂದ, ಎಲ್ಲಾ ವಿದ್ಯುತ್ ಸರಬರಾಜು ಕಂಪನಿಗಳು ಈ ಸಂಬಂಧ, ಮುಂದಿನ ಅಗತ್ಯ ಕ್ರಮ ತೆಗೆದುಕೊಳ್ಳುವಂತೆ ಇಂಧನ ಇಲಾಖೆ ಅಪರ ಕಾರ್ಯದರ್ಶಿಗಳು ಫೆ.5 ರಂದು ಹೊರಡಿಸಿದ ಸುತ್ತೋಲೆಯಲ್ಲಿ ತಿಳಿಸಿದ್ದಾರೆ.
ಬಾಡಿಗೆ ಮನೆ ಬದಲಾಯಿಸಿದಾಗ ನೋಂದಣಿ ಪ್ರಕ್ರಿಯೆ ಹೇಗಿತ್ತು ಮೊದಲು? :
ಪ್ರಸ್ತುತ ಬಾಡಿಗೆ ಮನೆಗಳಲ್ಲಿ ವಾಸ ಮಾಡುವವರು ಗೃಹಜ್ಯೋತಿ ಯೋಜನೆಯಡಿ ಆಧಾರ್ ನಂಬರ್ ನೀಡಿ ನೋಂದಣಿ ಮಾಡಿಸುತ್ತಿದ್ದಾರೆ. ಆದರೆ ಮನೆಯನ್ನು ಖಾಲಿ ಮಾಡುವಾಗ ಅವರು ಆನ್‌ಲೈನ್ ಮೂಲಕ ಹಳೆಯ ಮನೆ ನೋಂದಣಿ ರದ್ದುಗೊಳಿಸಲು ಅವಕಾಶವಿರಲಿಲ್ಲ. ಇದಕ್ಕಾಗಿ ಅವರು ಹತ್ತಿರದ ವಿದ್ಯುತ್ ಕಛೇರಿಗಳಿಗೆ ಹೋಗಿ ಅರ್ಜಿ ಸಲ್ಲಿಸಬೇಕಿತ್ತು. ಅವರ ಹೆಸರಿನ ಆಧಾರ್ ನಂಬರ್‌ನಲ್ಲಿ ನೋಂದಣಿಯಾದ ಗೃಹಜ್ಯೋತಿ ಯೋಜನೆ ರದ್ದಾದ ಬಳಿಕವಷ್ಟೆ ಪುನಃ ಹೊಸ ಮನೆಯ ನಂಬರ್ ನೀಡಿ ನೋಂದಣಿ ಮಾಡಿಕೊಳ್ಳಬೇಕು. ಇದರಿಂದ ಒಂದು ಬಾಡಿಗೆ ಮನೆಯಿಂದ ಮತ್ತೊಂದು ಬಾಡಿಗೆ ಮನೆಗೆ ಹೋದ ಗ್ರಾಹಕರಿಗೆ ಕಷ್ಟವಾಗಿತ್ತು.
ಆದ್ದರಿಂದ ಆನ್‌ಲೈನ್ ಮೂಲಕವೇ ಹಳೆಯ ಸ್ಥಾವರದ ನೋಂದಣಿಯನ್ನು ರದ್ದತಿ ಮಾಡಲು ಅರ್ಜಿ ಸಲ್ಲಿಕೆ ಮಾಡಿ, ಹೊಸ ಸ್ಥಾವರಕ್ಕೆ ನೋಂದಣಿ ಮಾಡಲು ಅವಕಾಶ ನೀಡಬೇಕು ಎಂದು ಬೇಡಿಕೆ ಇಡಲಾಗಿತ್ತು. ಅದನ್ನೀಗ ಸರ್ಕಾರ ಮಾನ್ಯ ಮಾಡಿ ಈ ಡಿ-ಲಿಂಕ್ ಅವಕಾಶವನ್ನು ತಂತ್ರಾಂಶದಲ್ಲಿ ಕಲ್ಪಿಸಿದೆ.
ಗೃಹಜ್ಯೋತಿ ಯೋಜನೆ 2023ರ ಕರ್ನಾಟಕ ವಿಧಾನಸಭೆ ಚುನಾವಣೆ ಸಂದರ್ಭದಲ್ಲಿ ಕರ್ನಾಟಕದ ಕಾಂಗ್ರೆಸ್ ನೀಡಿದ 5 ಗ್ಯಾರಂಟಿಗಳಲ್ಲಿ ಗೃಹಜ್ಯೋತಿ ಸಹ ಒಂದು. ಸರ್ಕಾರ 2023ರ ಜೂನ್ 18ರಂದು ಗೃಹಜ್ಯೋತಿ ಯೋಜನೆಯಡಿ ಫಲಾನುಭವಿಗಳ ನೊಂದಣಿಗೆ ಚಾಲನೆ ನೀಡಿತ್ತು. ಈ ಯೋಜನೆಯಡಿ ರಾಜ್ಯದಲ್ಲಿನ ಪ್ರತಿ ಮನೆಗೆ ಪ್ರತಿ ತಿಂಗಳಿಗೆ ಗರಿಷ್ಠ 200 ಯೂನಿಟ್‍ವರೆಗಿನ ಬಳಕೆಯ ಮಿತಿಯಲ್ಲಿ ಉಚಿತ ವಿದ್ಯುತ್ ನೀಡಲಾಗುತ್ತಿದೆ. ಮೊದಲು ಪ್ರತಿ ಗ್ರಾಹಕರ ಮಾಸಿಕ ಸರಾಸರಿ ಬಳಕೆಯ (ಆರ್ಥಿಕ ವರ್ಷ 2022-23ರ ಬಳಕೆಯ ಆಧಾರದನ್ವಯ) ಯೂನಿಟ್‍ಗಳ ಮೇಲೆ ಶೇ.10 ರಷ್ಟು ಹೆಚ್ಚಿನ ಬಳಕೆಯ ಮಿತಿಗೆ ಅರ್ಹರಿದ್ದರು.
ರಾಜ್ಯದ ಸರಾಸರಿ ವಿದ್ಯುತ್ ಬಳಕೆ ಪ್ರಮಾಣ 53 ಯೂನಿಟ್ ಗಳಾಗಿದೆ. ಗೃಹ ಬಳಕೆದಾರರಲ್ಲಿ ಸುಮಾರು 69.73 ಲಕ್ಷ ಕುಟುಂಬಗಳು ಪ್ರತಿ ತಿಂಗಳು 48 ಯುನಿಟ್‌ಗಳಿಗಿಂತ ಕಡಿಮೆ ವಿದ್ಯುತ್ ಬಳಕೆ ಮಾಡುತ್ತಿದ್ದಾರೆ. ಸುಮಾರು 30 ಯೂನಿಟ್‌ಗಳನ್ನು ಬಳಸುವ ಬಡ ಕುಟುಂಬಗಳಿಗೆ ಅರ್ಹತಾ ಯೂನಿಟ್‌ಗಳು ಕೇವಲ 33 ಯೂನಿಟ್‌ಗಳಾಗಿರುತ್ತದೆ (30 + ಶೇ.10) ಆದ್ದರಿಂದ, ರಾಜ್ಯದ ಸರಾಸರಿ ಬಳಕೆಗಿಂತ ಕಡಿಮೆ ಬಳಸುವ ಕುಟುಂಬಗಳಿಗೆ ಹೆಚ್ಚುವರಿಯಾಗಿ ಶೇ.10 ರ ಬದಲಾಗಿ ಹೆಚ್ಚುವರಿ 10 ಯೂನಿಟ್‌ಗಳನ್ನು ಅನುಮತಿಸಬೇಕೆಂದು ಮುಖ್ಯಮಂತ್ರಿಗಳ ಅಧ್ಯಕ್ಷತೆಯಲ್ಲಿ ನ.22ರಂದು ನಡೆದ ಪ್ರಗತಿ ಪರಿಶೀಲನಾ ಸಭೆಯಲ್ಲಿ ಅಭಿಪ್ರಾಯ ವ್ಯಕ್ತವಾಗಿತ್ತು. ಇದರಿಂದಾಗಿ, ವಾಸ್ತವವಾಗಿ ಅಗತ್ಯವಿರುವ ಕುಟುಂಬಗಳು ಪ್ರಯೋಜನಗಳನ್ನು ಪಡೆಯಲು ಮತ್ತು ಅವರ ಜೀವನ ಮಟ್ಟವನ್ನು ಹೆಚ್ಚಿಸಲು ಅನುವು ಮಾಡಿಕೊಡುತ್ತದೆ ಎನ್ನಲಾಗಿತ್ತು.
ಹೀಗಾಗಿ “ಗೃಹ ಜ್ಯೋತಿ” ಯೋಜನೆಯಡಿಯಲ್ಲಿನ LT-2 ಪ್ರವರ್ಗದ ಗ್ರಾಹಕರಲ್ಲಿ ಮಾಸಿಕ 48 ಯೂನಿಟ್‌ಗಳಿಗಿಂತ ಕಡಿಮೆ ಬಳಸುವ ಗ್ರಾಹಕರಿಗೆ ಹೆಚ್ಚುವರಿ ಶೇ.10 ರಷ್ಟು ಬದಲಾಗಿ ಹೆಚ್ಚುವರಿ 10 ಯೂನಿಟ್ ಅರ್ಹತಾ ಯೂನಿಟ್‌ಗಳನ್ನು ಉಚಿತವಾಗಿ ನೀಡುವುದು. ಈ ಪರಿಷ್ಕರಣೆಯನ್ನು ಫೆ.1ರಿಂದ ಜಾರಿಗೆ ಬರುವಂತೆ ಮಾಸಿಕ ಬಿಲ್ಲಿಂಗ್ ತಂತ್ರಾಂಶದಲ್ಲಿ ಪರಿಷ್ಕರಣೆ (Billing machine recalibration) ಮಾಡಲು ಆದೇಶಿಲಾಗಿದೆ.
“ಬೆಂಗಳೂರು ವೈರ್” ಡಿಜಿಟಲ್ ವೆಬ್ ನ್ಯೂಸ್ ಪೋರ್ಟೆಲ್ಲಿನ ಸೋಶಿಯಲ್ ಮೀಡಿಯಾ ಪೇಜ್ ಹಾಗೂ Google News ಗಳಿಗೆ ಉಚಿತವಾಗಿ Subscribe ಆಗಲು Facebook, Telegram, Twitter, Youtube, Whatsup Channel ಗೆ ಜಾಯಿನ್ ಆಗಲು ಇವುಗಳ ಲಿಂಕ್ ಮೇಲೆ ಕ್ಲಿಕ್ ಮಾಡಿ.