ಬೆಂಗಳೂರು, ಫೆ.7 www.bengaluruwire.com : ರಾಜಧಾನಿ ಬೆಂಗಳೂರಿನಲ್ಲಿ ಈ ಬಾರಿಯ ಬೇಸಿಗೆ ಬರುವ ಮುಂಚೆಯೇ ಎಲ್ಲೆಡೆ ಕುಡಿಯುವ ನೀರಿನ ಆಹಾಕಾರ ಕಂಡುಬರುತ್ತಿದೆ. ಬೇಸಿಗೆಯಲ್ಲಿ ನೀರಿನ ಸಮಸ್ಯೆ ಮತ್ತಷ್ಟು ಬಿಗಡಾಯಿಸುವ ಸಾಧ್ಯತೆಯಿದೆ.
ಕಳೆದ ವರ್ಷ ಬೆಂಗಳೂರು ಸೇರುದಂತೆ ರಾಜ್ಯದಲ್ಲಿ ತೀವ್ರ ರೂಪದ ಮಳೆಯ ಕೊರತೆ ಕಂಡುಬಂದಿದ್ದು ಹಲವು ಕಡೆ ಕೆರೆ ಕಟ್ಟೆಗಳು ಬರಿದಾಗಿದ್ದವು. ಇದೀಗ ಬೇಸಿಗೆಯು ಹತ್ತಿರದಲ್ಲಿದೆ. ಅಂತರ್ಜಲ ಮಟ್ಟ ಕುಸಿದಿರುವ ಕಾರಣಕ್ಕೆ ನಗರದಲ್ಲಿ ಈಗಾಗಲೇ ಬಿಬಿಎಂಪಿಯು ಕೊರೆಸಿರುವ ಕೊಳವೆಬಾವಿಗಳು ಸೇರಿದಂತೆ ಬೆಂಗಳೂರು ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ (BWSSB) ನಿರ್ವಹಣೆ ಮಾಡುತ್ತಿರುವ 11,816 ಬೋರ್ ವೆಲ್‌ಗಳಲ್ಲಿ 750ಕ್ಕೂ ಹೆಚ್ಚು ನೀರಿಲ್ಲದೆ ಸ್ಥಗಿತಗೊಂಡಿದೆ. ಉಳಿದವು ಈ ಹಿಂದೆ ನೀರು ಪೂರೈಕೆಗಾಗಿ ಮೋಟಾರ್ ಚಾಲನೆ ಮಾಡಿದರೆ ಎಂಟು ಕಾರ್ಯನಿರ್ವಹಿಸುತ್ತಿದ್ದವು ಈಗ ನಾಲ್ಕು ಗಂಟೆಗೆ ಅದರ ಸಾಮರ್ಥ್ಯ ಇಳಿಕೆಯಾಗಿದೆ.
ಪಾಲಿಕೆ, ಮಂಡಳಿ ಹಾಗೂ ಖಾಸಗಿ ಬೋರ್ ವೆಲ್ ಗಳಿಂದ ಒಟ್ಟಾರೆ ಪ್ರತಿದಿನ ಲಭ್ಯವಾಗುತ್ತಿದ್ದ 600 ದಶಲಕ್ಷ ಲೀ. (Millon Liter Per Day – MLD) ನೀರಿನ ಪೈಕಿ 200 ಎಂಎಲ್ ಡಿ ನೀರು ಕೊರತೆಯಾಗಿದೆ. ಈಗ ಸದ್ಯ ಲಭ್ಯವಿರುವ 400 ಎಂಎಲ್ ಡಿ ಪೈಕಿ 100 ಎಂಎಲ್ ಡಿಯಷ್ಟು ನೀರು ಮುಂಬರುವ ಬೇಸಿಗೆಯಲ್ಲಿ ಕಡಿಮೆಯಾಗಲಿದೆ. ಇದರಿಂದ ಬೆಂಗಳೂರಿನಲ್ಲಿ ಕುಡಿಯುವ ನೀರಿಗೆ ಸಂಕಷ್ಟ ಎದುರಾಗಲಿದೆ. ರಾಜ್ಯ ಸರ್ಕಾರ ಬೆಂಗಳೂರು ನಗರಕ್ಕೆ ಫೆಬ್ರವರಿಯಿಂದ ಜೂನ್ ವರೆಗೆ ಕುಡಿಯುವ ನೀರಿಗಾಗಿ ಕಾವೇರಿಯಿಂದ 10 ಎಂಎಲ್ ಡಿ ನೀರನ್ನು ಮೀಸಲಿಟ್ಟಿದೆ. ಹೀಗಾಗಿ ಇದೊಂದು ಸಮಾಧಾನಕರ ವಿಷಯ.
ಸಾಮಾನ್ಯವಾಗಿ ಬೆಂಗಳೂರು ಜಲಮಂಡಳಿಯು 575 ಚದ ಕಿ.ಮೀ ವ್ಯಾಪ್ತಿಯಲ್ಲಿ ಪ್ರತಿ ತಿಂಗಳು 1.6 ಎಂಎಲ್ ಡಿಯಷ್ಟು ಕಾವೇರಿ ನೀರನ್ನು ನಗರಕ್ಕೆ ಪೂರೈಸುತ್ತಿದೆ. ಅಂದರೆ ಪ್ರತಿದಿನ 10.15 ಲಕ್ಷ ಮನೆಗಳಿಗೆ 1450 ದಶಲಕ್ಷ ಲೀಟರ್ ಕಾವೇರಿ ನೀರು ಪೂರೈಸುತ್ತಿದ್ದರೆ, ಮಂಡಳಿ ನಿರ್ವಹಣೆ ಮಾಡುತ್ತಿರುವ ಹಾಗೂ ಖಾಸಗಿ ಬೋರ್ ವೆಲ್ ನಿಂದ 600 ದಶಲಕ್ಷ ಲೀ. ನೀರು ನಗರಕ್ಕೆ ಲಭ್ಯವಾಗುತ್ತಿತ್ತು. ಆದರೆ ಈ ಚಿತ್ರಣ ಈಗ ಬದಲಾಗಿದೆ.
2021ರಲ್ಲಿ ಬೆಂಗಳೂರು ಸೇರಿದಂತೆ ರಾಜ್ಯದಲ್ಲಿ ಉತ್ತಮ ಮಳೆಯಾದ ಕಾರಣ ಅಂತರ್ಜಲ ಮಟ್ಟ ಏರಿಕೆಯಾಗಿತ್ತು. ಆದರೆ 2023ರಲ್ಲಿ ಮಳೆ ಕೊರತೆಯಾದ ಕಾರಣ ಬೆಂಗಳೂರು ಪೂರ್ವ, ಉತ್ತರ ಭಾಗ, ನಗರದ ಕೇಂದ್ರಭಾಗಗಳಲ್ಲಿ ಬೋರ್ ವೆಲ್ ನಲ್ಲಿ ಅಂತರ್ಜಲ ಮಟ್ಟ ಕುಸಿದಿದೆ. ಇದನ್ನು ಬೆಂಗಳೂರು ಹೊರವಲಯ ಪ್ರದೇಶದಲ್ಲಿನ ಟ್ಯಾಂಕರ್ ಮಾಫಿಯಾ ಹಣ ಲೂಟಿಗೆ ಬಳಸಿಕೊಳ್ಳಲು ಆರಂಭಿಸಿವೆ.
ಬೇಸಿಗೆಯಲ್ಲಿ ನೀರಿನ ಸಮಸ್ಯೆ ಮತ್ತಷ್ಟು ಹೆಚ್ಚಾಗಲಿದೆ :
“ಬೆಂಗಳೂರಿನಲ್ಲಿ ಕುಡಿಯುವ ನೀರಿನ ಸಂಕಷ್ಟ ಎದುರಾಗಿದೆ. ಬೇಸಿಗೆಯಲ್ಲಿ ಪರಿಸ್ಥಿತಿ ಮತ್ತಷ್ಟು ವಿಕೋಪಕ್ಕೆ ಹೋಗಲಿದೆ. ಈಗಾಗಲೇ ಬಿಡಬ್ಲ್ಯುಎಸ್ ಎಸ್ ಬಿ ಹಾಗೂ ಖಾಸಗಿ ಕೊಳವೆಬಾವಿಗಳಲ್ಲಿ 200 ಎಂಎಲ್ ಡಿ ನೀರು ಕಡಿಮೆಯಾಗಿದೆ. ಈಗ ಲಭ್ಯವಿರುವ 400 ಎಂಎಲ್ ಡಿಯಲ್ಲಿ ಮುಂದೆ 100 ದಶಲಕ್ಷ ಲೀ. ನೀರು ಮತ್ತಷ್ಟು ಕಡಿಮೆಯಾಗುವ ಸಾಧ್ಯತೆಯಿದೆ. ಇದನ್ನು ನಿಭಾಯಿಸಲು ನಗರದಲ್ಲಿ ಸಾರ್ವಜನಿಕರಿಗೆ ಕುಡಿಯುವ ನೀರಿಗೆ ಆದ್ಯತೆ ನೀಡಿ, ಕೈಗಾರಿಕೆಗಳಿಗೆ ಪುನರ್ಬಳಕೆ ನೀರನ್ನು ಮಾತ್ರ ನೀಡಲು ನಿರ್ಧರಿಸಿದ್ದೇವೆ” ಎಂದು ಬೆಂಗಳೂರು ಜಲಮಂಡಳಿ ಅಧ್ಯಕ್ಷ ರಾಮ್ ಪ್ರಸಾತ್ ಮನೋಹರ್ ಬೆಂಗಳೂರು ವೈರ್ ಗೆ ತಿಳಿಸಿದ್ದಾರೆ.
“ಜನರು ಆದಷ್ಟು ನೀರನ್ನು ಅನಗತ್ಯವಾಗಿ ಪೋಲು ಮಾಡದೆ ಮಿತವ್ಯಯಕಾರಿಯಾಗಿ ಬಳಸಬೇಕು. ನಗರದಲ್ಲಿ ನೀರಿನ ಸಮಸ್ಯೆ ಎದುರಾಗುವ 200 ಕ್ಲಸ್ಟರ್ ಗಳನ್ನು ಗುರ್ತಿಸಿದ್ದೇವೆ. ಇಲ್ಲೆಲ್ಲಾ ಬೇಸಿಗೆಯಲ್ಲಿ ಖಾಸಗಿಯವರಿಂದ ಖಾಲಿ ಟ್ಯಾಂಕರ್ ಗಳನ್ನು ಬಾಡಿಗೆಗೆ ಪಡೆದು ಜಲಮಂಡಳಿಯಿಂದ ಅಲ್ಲಿನ ಜನರಿಗೆ ಉಚಿತವಾಗಿ ನೀರು ಪೂರೈಸಲು ಕ್ರಮ ಕೈಗೊಳ್ಳುತ್ತೇವೆ” ಎಂದು ಅವರು ಹೇಳಿದ್ದಾರೆ.
ಟ್ಯಾಂಕರ್ ನೀರಿಗೆ ಯಾವ್ಯಾವ ಕಡೆ ಎಷ್ಟು ದರ? :
ಕೆ.ಆರ್.ಪುರಂ ಸುತ್ತಮುತ್ತ ಒಂದು ಟ್ಯಾಂಕರ್ ನೀರಿಗೆ ಪ್ರಸ್ತುತ 900 ರೂ. ಇದೆ. ಅದು ಬೇಸಿಗೆಯಲ್ಲಿ 1000 ದಿಂದ 1,300 ರೂ. ತನಕ ಹೆಚ್ಚಾಗಬಹುದು. ಯಲಹಂಕ ಜಾಲ ಹೋಬಳಿಯಲ್ಲಿ ಈಗ 400-500 ರೂ. ಇದ್ದು ಬೇಸಿಗೆಯಲ್ಲಿ 800-900 ರೂ. ಏರಿಕೆಯಾಗಬಹುದು. ವೈಟ್ ಫೀಲ್ಡ್ ಸುತ್ತಮುತ್ತ ಸದ್ಯ 700-800 ರೂ. ಇದ್ದು ಬೇಸಿಗೆಯಲ್ಲಿ 1,200 ರೂ. ನಿಂದ 1,600 ರೂ. ತನಕ ಹೆಚ್ಚು ಮಾಡುತ್ತಾರೆ. ಬಿಟಿಎಮನ ಲೇಔಟ್ ಪ್ರದೇಶದಲ್ಲಿ ಒಂದು ಟ್ಯಾಂಕರ್ ನೀರು 600 ರೂ. ಇದ್ದು ಬೇಸಿಗೆಯಲ್ಲಿ 1,000 ರೂನಿಂದ 1,200ರೂ. ತನಕ ಏರಿಕೆಯಾಗಲಿದೆ. ವಾಟರ್ ಟ್ಯಾಂಕರ್ ನಲ್ಲಿ ನೀರು ಪೂರೈಸುವ ಖಾಸಗಿಯವರು ಯಾವುದೇ ಲಂಗು ಲಗಾಮಿಲ್ಲದೆ ದರ ಹೆಚ್ಚು ಮಾಡುತ್ತಾರೆ.
ನಗರದ ಐದು ತಾಲೂಕುಗಳ ಪೈಕಿ ನಾಲ್ಕರಲ್ಲಿ ಅಂತರ್ಜಲ ಇಳಿಕೆ :
ಬೆಂಗಳೂರು ನಗರ ಜಿಲ್ಲೆಯ ಐದು ತಾಲ್ಲೂಕುಗಳ ಪೈಕಿ ನಾಲ್ಕು ತಾಲ್ಲೂಕುಗಳಲ್ಲಿ ಅಂತರ್ಜಲ ಮಟ್ಟವು ಕಳೆದ ವರ್ಷಕ್ಕೆ ಹೋಲಿಸಿದರೆ ಗಮನಾರ್ಹ ಕುಸಿತವನ್ನು ದಾಖಲಿಸಿದೆ. ಬೆಂಗಳೂರಿನ ಅಂತರ್ಜಲ ನಿರ್ದೇಶನಾಲಯದ ಇತ್ತೀಚಿನ ಅಂತರ್ಜಲ ಮಟ್ಟದ ಏರಿಳಿತ ವರದಿಯ ಪ್ರಕಾರ, ಬೆಂಗಳೂರು ದಕ್ಷಿಣ, ಆನೇಕಲ್, ಬೆಂಗಳೂರು ಉತ್ತರ ಮತ್ತು ಯಲಹಂಕ ತಾಲ್ಲೂಕುಗಳಲ್ಲಿ ಅಂತರ್ಜಲ ಮಟ್ಟವು ನೆಲಮಟ್ಟದಿಂದ 4 ಮೀಟರ್‌ಗಿಂತ ಹೆಚ್ಚು ಕುಸಿದಿದೆ. ನಾಲ್ಕು ತಾಲ್ಲೂಕುಗಳ ಪೈಕಿ (ಆನೇಕಲ್) ಒಂದರಲ್ಲಿ ಮಾತ್ರ ಈ ಪ್ರಮಾಣದ ನೀರಿನ ಮಟ್ಟದಲ್ಲಿ ಕುಸಿತ ದಾಖಲಾಗಿದೆ.
ಆದರೆ, ನಾಲ್ಕು ಗ್ರಾಮಾಂತರ ತಾಲ್ಲೂಕುಗಳು ಉತ್ತಮವಾಗಿವೆ. ಹೊಸಕೋಟೆಯಲ್ಲಿ ಅಂತರ್ಜಲ ಮಟ್ಟವು ನೆಲಮಟ್ಟದಿಂದ 4 ಮೀಟರ್‌ಗಳಷ್ಟು ಕೆಳಕ್ಕೆ ಬಂದಿದ್ದರೆ, ದೊಡ್ಡಬಳ್ಳಾಪುರ ಮತ್ತು ದೇವನಹಳ್ಳಿಯಲ್ಲಿ ಸುಮಾರು 2 ಮೀಟರ್‌ಗಳಷ್ಟು ನೀರಿನ ಮಟ್ಟ ಮೇಲ್ಮಟ್ಟಕ್ಕೆ ಬಂದು ಪರಿಸ್ಥಿತಿ ಸುಧಾರಿಸಿದೆ. ವರದಿಯ ಪ್ರಕಾರ, ಬಹುತೇಕ ತಾಲೂಕುಗಳಲ್ಲಿ ಅಂತರ್ಜಲವು ಈಗ ನೆಲಮಟ್ಟದಿಂದ 20-30 ಮೀಟರ್ ಕೆಳಗೆ ಲಭ್ಯವಿದೆ. ಬೆಂಗಳೂರು ಪೂರ್ವ ಮತ್ತು ಆನೇಕಲ್‌ನಲ್ಲಿ ಮಾತ್ರ ನೆಲಮಟ್ಟದಿಂದ 30-40 ಮೀಟರ್ ಕೆಳಗೆ ತಲುಪಿದೆ.
ಕ್ಷಿಪ್ರ ನಗರೀಕರಣದಿಂದಾಗಿ ನೀರು ಒಳನುಸುಳದ ಮೇಲ್ಮೈಗಳ ಹೆಚ್ಚಳದಿಂದಾಗಿ ನಗರ ತಾಲ್ಲೂಕುಗಳಲ್ಲಿ ಅಂತರ್ಜಲ ಮಟ್ಟ ಕುಸಿಯಲು ಪ್ರಮುಖ ಕಾರಣ ಎಂದು ತಜ್ಞರು ಹೇಳುತ್ತಾರೆ.
ಸರೋವರಗಳು ಅಂತರ್ಜಲವನ್ನು ಮರುಪೂರಣಗೊಳಿಸುತ್ತಿರುವಾಗ, ಜಲಮೂಲಗಳ ಸುತ್ತ ಎತ್ತರದ ನಿರ್ಮಿತ ಪ್ರದೇಶದಿಂದಾಗಿ ಈ ಅಂಶವು ಸಹ ರಾಜಿಯಾಗುತ್ತದೆ.
ಅತಿಯಾದ ಕಾಂಕ್ರಿಟೀಕರಣ ಅಂತರ್ಜಲ ಕುಸಿತಕ್ಕೆ ಕಾರಣ :
“ನಾವು ನಗರ ವ್ಯವಸ್ಥೆಗಳಲ್ಲಿ ಹೆಚ್ಚು ಹೆಚ್ಚು ಜಾಗಗಳನ್ನು ಕಾಂಕ್ರೀಟೀಕರಣ ಮಾಡುತ್ತಿದ್ದೇವೆ ಮತ್ತು ನೆಲದಡಿಯಿಂದ ನೀರನ್ನು ಅತಿಯಾಗಿ ಹೊರತೆಗೆಯುತ್ತೇವೆ. ಉದಾಹರಣೆಗೆ ಬೆಂಗಳೂರು ಉತ್ತರ ತಾಲೂಕು ಅಂತರ್ಜಲವನ್ನು ಬಳಸಿಕೊಂಡು ನಿರ್ಮಾಣ ಚಟುವಟಿಕೆಗಳಲ್ಲಿ ತೊಡಗಿದೆ. ಇಂತಹ ಮಾನವ ಚಟುವಟಿಕೆಗಳು ಈ ಪ್ರದೇಶದಲ್ಲಿ ಅಂತರ್ಜಲವನ್ನು ಕುಸಿಯುವಂತೆ ಮಾಡುತ್ತದೆ. ನಾವು ಅಂತರ್ಜಲ ನೀರನ್ನು ಹೆಚ್ಚು ಹಿಂತೆಗೆದುಕೊಳ್ಳುವುದರಿಂದ ಮತ್ತು ಕಡಿಮೆ ರೀಚಾರ್ಜ್ ಮಾಡುತ್ತಿರುವುದರಿಂದ, ಸಮತೋಲನವು ಕ್ರಮೇಣ ಕುಸಿಯುತ್ತದೆ, ”ಎಂದು ನಗರ ಮೂಲದ ಪರಿಸರಶಾಸ್ತ್ರಜ್ಞರೊಬ್ಬರು ಹೇಳಿದ್ದಾರೆ.
ಅಕ್ರಮ ಬೋರ್ ವೆಲ್ ಮತ್ತು ಅತಿಯಾದ ಬೋರ್ ವೆಲ್ ನೀರಿನ ಬಳಕೆ, ಸಮಸ್ಯೆಗೆ ಕಾರಣ :
ಬೋರ್‌ವೆಲ್‌ಗಳ ನಿರಂತರ ಅಗೆಯುವಿಕೆ, ಅಂತರ್ಜಲ ನೀರಿನ ಮಟ್ಟ ಅತಿಯಾದ ಬಳಕೆಗೆ ಕಾರಣವಾಗುತ್ತದೆ. ಇದು ಸಮಸ್ಯೆಯನ್ನು ಮತ್ತಷ್ಟು ಹೆಚ್ಚಿಸುತ್ತದೆ. ತಜ್ಞರು ಕಳೆದ ಕೆಲವು ವರ್ಷಗಳಿಂದ ವೈಟ್‌ಫೀಲ್ಡ್ ಪ್ರದೇಶದಾದ್ಯಂತ ಅಕ್ರಮ ಬೋರ್‌ವೆಲ್ ಕೊರೆಯುವಿಕೆಯನ್ನು ಒತ್ತಿಹೇಳಿದ್ದಾರೆ.
“ಬೆಂಗಳೂರಿನಲ್ಲಿ ಅಂತರ್ಜಲ ಅತಿಯಾದ ಶೋಷಣೆಯ ವಲಯವಾಗಿರುವುದರಿಂದ ವಾಣಿಜ್ಯ ಬೋರ್‌ವೆಲ್‌ಗಳಿಗೆ ಯಾವುದೇ ಅನುಮತಿ ನೀಡಲಾಗಿಲ್ಲ ಮತ್ತು ದೇಶೀಯ ಬೋರ್‌ವೆಲ್‌ಗಳನ್ನು ಪಡೆಯುವುದು ಕಷ್ಟ. ಆದರೆ ಬೋರ್‌ವೆಲ್ ಕೊರೆಯುವ ಕಾರ್ಯ ವರ್ಷಗಟ್ಟಲೆ ಎಡೆಬಿಡದೆ ನಡೆಯುತ್ತಿದೆ. ಅಕ್ರಮ ಪಿಜಿ ಕಟ್ಟಡಗಳಿಂದಾಗಿ ಕೊಳವೆಬಾವಿ ಕೊರೆಯುವಿಕೆ ಹೆಚ್ಚಾಗಿದೆ. ಈ ಸೈಟ್ ಮಾಲೀಕರ ವಿಶಿಷ್ಟ ವಿಧಾನವೆಂದರೆ ಅನುಮತಿಯಿಲ್ಲದೆ ಅನೇಕ ಬೋರ್‌ವೆಲ್‌ಗಳನ್ನು ಕೊರೆಯುವುದು ಮತ್ತು ನಂತರ ನೀರನ್ನು ನಿರ್ಮಾಣಕ್ಕೆ ಬಳಸುತ್ತಾರೆ” ಎಂದು ವೈಟ್‌ಫೀಲ್ಡ್ ನಿವಾಸಿಯೊಬ್ಬರು ಹೇಳಿದ್ದಾರೆ.
“ಆನಂತರ, ಅವರು ನೂರಾರು ನಿವಾಸಿಗಳ ಅಗತ್ಯಗಳನ್ನು ಪೂರೈಸಲು ಬೋರ್‌ವೆಲ್‌ಗಳನ್ನು ಬಳಸುತ್ತಾರೆ. ಮೇಲಿನ ನೀರಿನ ಕಳ್ಳತನ ಮತ್ತು ವಾಣಿಜ್ಯ ಶೋಷಣೆಯ ಪರಿಣಾಮವಾಗಿ, ಹೆಚ್ಚಿನ ಸಾರ್ವಜನಿಕ ಬೋರ್‌ವೆಲ್‌ಗಳು ಮತ್ತು ಮನೆಯ ಬೋರ್‌ವೆಲ್‌ಗಳು ಈಗ ಒಣಗಿವೆ ಮತ್ತು ಅನೇಕ ಪ್ರದೇಶಗಳು ಸಾರ್ವಜನಿಕ ನೀರು ಪೂರೈಕೆಯಿಲ್ಲದೆ ಉಳಿದಿವೆ ” ಎಂದು ವಾಸ್ತವ ಪರಿಸ್ಥಿತಿಯನ್ನು ವಿವರಿಸಿದ್ದಾರೆ.
ಇದಲ್ಲದೆ, ತಜ್ಞರು, ನೀರಿನ ಟ್ಯಾಂಕರ್ ಮಾಫಿಯಾದಿಂದಾಗಿ ಅಂತರ್ಜಲ ಅತಿಯಾಗಿ ಬಳಕೆಯಾಗುತ್ತಿದೆ. ನೀರನ್ನು ಅತಿಯಾಗಿ ಭೂಮಿಯಿಂದ ಹೊರತೆಗೆಯುತ್ತಿರುವುದರಿಂದ ಅಂತರ್ಜಲ ಒಣಗುತ್ತಿದೆ. ಎಷ್ಟರ ಮಟ್ಟಿಗೆಂದರೆ ವಾರ್ಡ್ ಸಮಿತಿ ಸಭೆಗಳಲ್ಲಿ ಬತ್ತಿದ ಸಾರ್ವಜನಿಕ ಬೋರ್‌ವೆಲ್‌ಗಳ ಬಗ್ಗೆಯೇ ಅತಿಯಾಗಿ ಚರ್ಚೆಯಾಗುತ್ತಿದೆ. ನಿವಾಸಿಗಳು ವಾರ್ಡ್ ಸಮಿತಿ ಗುಂಪಿನಲ್ಲಿ ಬೋರ್‌ವೆಲ್ ಕೊರೆಯುವಿಕೆಯನ್ನು ವರದಿ ಮಾಡಲು ಪ್ರಾರಂಭಿಸಿದ್ದಾರೆ ಮತ್ತು ಅವುಗಳನ್ನು ನಿಲ್ಲಿಸಲು ಬಿಡಬ್ಲ್ಯೂಎಸ್‌ಎಸ್‌ಬಿ ಮತ್ತು ಕೆಜಿಡಬ್ಲ್ಯೂಎ ಮೇಲೆ ಒತ್ತಡ ಹೇರಲು ಪ್ರಾರಂಭಿಸಿದ್ದಾರೆ, ಆದರೆ ಕೆಜಿಡಬ್ಲ್ಯೂಎ, ನಿರ್ದಿಷ್ಟವಾಗಿ ಕಾರ್ಯನಿರ್ವಹಿಸಲು ಬಹಳ ನಿಧಾನವಾಗಿದೆ, ”ಎಂದು ವೈಟ್ ಫೀಲ್ಡ್ ನ ಸ್ಥಳೀಯ ನಿವಾಸಿ ಮುರುಳಿ ಹೇಳಿದ್ದಾರೆ.
ಮಳೆನೀರು ಕೊಯ್ಲು + ಕೆರೆ ಸರಪಳಿ ಸಂಪರ್ಕ ಕಲ್ಪಿಸಿದರೆ ಸಮಸ್ಯೆ ಬಗೆಹರಿಯುತ್ತೆ :
“ನಗರದಲ್ಲಿ ಮಳೆ ನೀರು ಕೊಯ್ಲು ಮಾಡಿದರೆ ನೀರು ಸಮಸ್ಯೆ ಎದುರಾಗಲ್ಲ. ಖಾಸಗಿ ಕಟ್ಡಡಗಳು ಈ ವಿಚಾರದಲ್ಲಿ ನಿರ್ಲಕ್ಷ್ಯ ತೋರಿಸುತ್ತಾರೆ. ನಗರದಲ್ಲಿ ಒಂದೂವರೆ ಲಕ್ಷ ಕಟ್ಟಡಗಳಲ್ಲಿ ಮಳೆ ನೀರು ಕೊಯ್ಲು ಮಾತ್ರವಿದೆ. ಯಲಹಂಕದಲ್ಲಿನ ರೈಲು ಗಾಲಿ ಕಾರ್ಖಾನೆ, ಬಿಐಎಎಲ್ ಏರ್ ಪೋರ್ಟ್ ಕಟ್ಟಡಗಳಲ್ಲಿ ಈ ಪದ್ಧತಿ ಅಳವಡಿಸಿಕೊಂಡ ಕಾರಣಕ್ಕೆ ಅಲ್ಲಿ ಅಂತರ್ಜಲ ಮಟ್ಟ ಏರಿಕೆಯಾಗಿದೆ. ನಗರದಲ್ಲಿನ ಕೆರೆಗಳ ಸರಪಳಿಗಳಿಗೆ (ಒಂದು ಸರಪಳಿಯಲ್ಲಿ 30 ಕೆರೆಗಳಿರುತ್ತವೆ) ಪುನಃ ಸಂಪೂರ್ಣವಾಗಿ ಸಂಪರ್ಕ ಕಲ್ಪಿಸಿದರೆ ಕೆರೆಗಳಲ್ಲಿನ ಅಂತರ್ಜಲ ಮಟ್ಟ ಏರಿಕೆಯಾಗುತ್ತೆ. ಕೆರೆಗಳ ಪುನರುತ್ಥಾನ ಹಾಗೂ ಮಳೆ ನೀರು ಕೊಯ್ಲು ಸರಿಯಾಗಿ ಅನುಷ್ಠಾನ ಮಾಡಿದರೆ ಜಲಮಂಡಳಿ ಈಗ ಪೂರೈಸುತ್ತಿರುವ ಕಾವೇರಿ ನೀರಿನಷ್ಟೆ ಪ್ರಮಾಣ ನಗರದಲ್ಲಿ ಈ ಎರಡು ಕೆಲಸಗಳಿಂದ ಲಭ್ಯವಾಗುತ್ತೆ. ನೀರಿನ ಮಿತವ್ಯಯ, ಮಳೆ ನೀರು ಸಂಗ್ರಹಕ್ಕೆ ಒತ್ತು ಕೊಡಬೇಕು. ಬಸವನಗುಡಿಯ ಬ್ಯೂಗಲ್ ರಾಕ್ ಆಶ್ರಮ ಸುತ್ತಮುತ್ತ ನೆಲಮಟ್ಟದಿಂದ 10-15 ಅಡಿಗೆಲ್ಲಾ ನೀರು ಸಿಗುತ್ತೆ.”
– ಮುಕುಂದ್, ಅಧ್ಯಕ್ಷರು, ಬೆಂಗಳೂರು ಪ್ರಜಾವೇದಿಕೆ
“ಬೆಂಗಳೂರು ವೈರ್” ಡಿಜಿಟಲ್ ವೆಬ್ ನ್ಯೂಸ್ ಪೋರ್ಟೆಲ್ಲಿನ ಸೋಶಿಯಲ್ ಮೀಡಿಯಾ ಪೇಜ್ ಹಾಗೂ Google News ಗಳಿಗೆ ಉಚಿತವಾಗಿ Subscribe ಆಗಲು Facebook, Telegram, Twitter, Youtube, Whatsup Channel ಗೆ ಜಾಯಿನ್ ಆಗಲು ಇವುಗಳ ಲಿಂಕ್ ಮೇಲೆ ಕ್ಲಿಕ್ ಮಾಡಿ.