ವಾರಣಾಸಿ, ಫೆ.06 www.bengaluruwire.com : ಜ್ಞಾನವಾಪಿ ಮಸೀದಿ ನೆಲ ಮಾಳಿಗೆಯಲ್ಲಿ ಪೂಜೆಗೆ ಯಾವುದೇ ನಿರ್ಬಂಧವಿಲ್ಲ, ಎಂದಿನಂತೆ ಪೂಜೆ ಮುಂದುವರೆಯಲಿ ಎಂದು ಹೈಕೋರ್ಟ್ ಆದೇಶ ನೀಡಿದೆ. ಈ ಮೂಲಕ ಅಂಜುಮನ್ ಇಂಟೆಜಾಮಿಯಾ ಮಸೀದಿ ಸಮಿತಿಗೆ ಕಡೆಯವರಿಗೆ ಮತ್ತೆ ಹಿನ್ನೆಡೆಯಾಗಿದೆ.
ಜ್ಞಾನವಾಪಿ ಮಸೀದಿ ಸಂಕೀರ್ಣದ ನೆಲಮಾಳಿಗೆಯೊಳಗೆ ಹಿಂದೂ ಭಕ್ತರಿಗೆ ಪೂಜೆ ಸಲ್ಲಿಸಲು ಅವಕಾಶ ನೀಡಿದ ವಾರಣಾಸಿ ನ್ಯಾಯಾಲಯದ ಆದೇಶದ ವಿರುದ್ಧ ಅರ್ಜಿ ಸಲ್ಲಿಸಿದ್ದ ಅಂಜುಮನ್ ಇಂಟೆಜಾಮಿಯಾ ಮಸೀದಿ ಸಮಿತಿಗೆ ಪರಿಹಾರ ನೀಡಲು ಅಲಹಾಬಾದ್ ಹೈಕೋರ್ಟ್ ನಿರಾಕರಿಸಿದೆ.
ಇದಕ್ಕೂ ಮುನ್ನ ನ್ಯಾಯಮೂರ್ತಿ ರೋಹಿತ್ ರಂಜನ್ ಅಗರ್ವಾಲ್ ಅವರ ಏಕಸದಸ್ಯ ಪೀಠವು ಜ್ಞಾನವಾಪಿ ಮಸೀದಿ ಆವರಣದ ಒಳಗೆ ಮತ್ತು ಹೊರಗೆ ಕಾನೂನು ಸುವ್ಯವಸ್ಥೆ ಕಾಪಾಡುವಂತೆ ಅಡ್ವೊಕೇಟ್ ಜನರಲ್ ಗೆ ಆದೇಶಿಸಿತ್ತು. ಇನ್ನು ಪ್ರಕರಣದ ಮುಂದಿನ ವಿಚಾರಣೆ ಫೆಬ್ರವರಿ 6ಕ್ಕೆ ಮುಂದೂಡಿತ್ತು. ಸದ್ಯ ಪ್ರಕರಣದ ವಿಚಾರಣೆ ನಡೆಸಿದ ನ್ಯಾಯಾಲಯ ಪೂಜೆಗೆ ಯಾವುದೇ ನಿರ್ಬಂಧವಿಲ್ಲ ಎಂದಿದೆ.
ಎಲ್ಲಾ ಮುಚ್ಚಿದ ನೆಲಮಾಳಿಗೆ ಸಮೀಕ್ಷೆ ನಡೆಸಲು ಸಲ್ಲಿಸಿದ ಅರ್ಜಿ ವಿಚಾರಣೆಗೆ ಮಾನ್ಯ :
ಇನ್ನೊಂದೆಡೆ ಜ್ಞಾನವಾಪಿ ಮಸೀದಿ ಸಂಕೀರ್ಣದಲ್ಲಿ ಎಲ್ಲಾ ಮುಚ್ಚಿದ ನೆಲಮಾಳಿಗೆಗಳಲ್ಲಿ, ಭಾರತೀಯ ಪುರಾತತ್ವ ಸರ್ವೇಕ್ಷಣಾ ಇಲಾಖೆ (ASI ಎಎಸ್‌ಐ)ಯ ಸಮೀಕ್ಷೆ ನಡೆಸುವಂತೆ ಕೋರಿ ಸಲ್ಲಿಸಲಾದ ಅರ್ಜಿಯ ವಿಚಾರಣೆಯನ್ನು ವಾರಣಾಸಿ ನ್ಯಾಯಾಲಯವು ಫೆಬ್ರವರಿ 15 ರಂದು ಮಂಗಳವಾರ ನಿಗದಿಪಡಿಸಿದೆ.
ಅರ್ಜಿಯ ಪ್ರಕಾರ, ನೆಲಮಾಳಿಗೆಯ ಒಳಗೆ “ರಹಸ್ಯ ನೆಲಮಾಳಿಗೆ”ಗಳಿವೆ ಮತ್ತು ಜ್ಞಾನವಾಪಿ ಮಸೀದಿಯ ಸಂಪೂರ್ಣ ಸತ್ಯವನ್ನು ಬಹಿರಂಗಪಡಿಸಲು ಅವುಗಳನ್ನು ಸಮೀಕ್ಷೆ ಮಾಡುವುದು ಅವಶ್ಯಕ ಎಂದು ಅರ್ಜಿಯಲ್ಲಿ ಕೋರಲಾಗಿದೆ.
ಹಂಗಾಮಿ ಜಿಲ್ಲಾ ನ್ಯಾಯಾಧೀಶ ಅನಿಲ್ ಕುಮಾರ್ ಅವರು ಅರ್ಜಿಯ ಮುಂದಿನ ವಿಚಾರಣೆಯನ್ನು ಫೆಬ್ರವರಿ 15 ರಂದು ನಿಗದಿಪಡಿಸಿದ್ದಾರೆ ಎಂದು ವಕೀಲ ಮದನ್ ಮೋಹನ್ ಯಾದವ್ ಹೇಳಿದರು.
ಅರ್ಜಿದಾರರಾದ ರಾಖಿ ಸಿಂಗ್ ಅವರು ವಿಶ್ವ ವೈದಿಕ ಸನಾತನ ಸಂಘ (Vishwa vedic Sanatan Sangh)ದ ಸ್ಥಾಪಕ ಸದಸ್ಯರಾಗಿದ್ದಾರೆ ಮತ್ತು ಮಾ ಶೃಂಗಾರ್ ಗೌರಿ ಪ್ರಕರಣದ ಕಕ್ಷಿದಾರರಲ್ಲಿ ಒಬ್ಬರಾಗಿದ್ದಾರೆ. ಇವರ ಈ ಅರ್ಜಿಯಿಂದಾಗಿ ಎಎಸ್ ಐ ಮೂಲಕ ಈ ಜ್ಞಾನವಾಪಿ ಸಂಕೀರ್ಣದ ಸಮೀಕ್ಷೆಗೆ ಕಾರಣವಾಯಿತು.
ಅರ್ಜಿಯಲ್ಲಿ, ಕಾಶಿ ವಿಶ್ವನಾಥ ದೇವಸ್ಥಾನದ ಪಕ್ಕದಲ್ಲಿರುವ ಜ್ಞಾನವಾಪಿ ಮಸೀದಿ ಸಂಕೀರ್ಣದಲ್ಲಿರುವ ಎಲ್ಲಾ ಮುಚ್ಚಿದ ನೆಲಮಾಳಿಗೆಗಳನ್ನು ಎಎಸ್‌ಐ ಮೂಲಕ ಸಮೀಕ್ಷೆ ನಡೆಸುವಂತೆ ಅವರು ಕೋರಿದ್ದಾರೆ ಎಂದು ಅವರ ವಕೀಲ ಅನುಪಮ್ ದ್ವಿವೇದಿ ಹೇಳಿದರು.