ಬೆಂಗಳೂರು, ಫೆ.6 www.bengaluruwire.com : ರಾಜ್ಯದಲ್ಲಿ ಸ್ಥಿರಾಸ್ತಿ ಮಾರ್ಗಸೂಚಿ ದರ ಪರಿಷ್ಕರಣೆ ಮಾಡಿ ಬಿಸಿತಟ್ಟಿಸಿದ್ದ ಸರ್ಕಾರ ಆರ್ಥಿಕ ಸಂಪನ್ಮೂಲ ಸಂಗ್ರಹ ಹೆಚ್ಚಿಸಲು ಇದೀಗ ಮುದ್ರಾಂಕ ಶುಲ್ಕವನ್ನು ಕೂಡ ಪರಿಷ್ಕರಣೆ ಮಾಡಿದೆ.
ನೋಂದಣಿ ಮತ್ತು ಮುದ್ರಾಂಕ ಇಲಾಖೆ ಸ್ಥಿರಾಸ್ತಿ ಮಾರ್ಗಸೂಚಿ ದರ ಪರಿಷ್ಕರಣೆ ಮಾಡಿದ ಸಂದರ್ಭದಲ್ಲಿ ನೋಂದಣಿ ಶುಲ್ಕ ಕೂಡ ಹೆಚ್ಚಳವಾಗಿತ್ತು. ಇದೀಗ ಮುದ್ರಾಂಕ ಶುಲ್ಕವನ್ನು ಕೂಡ ಪರಿಷ್ಕರಣೆ ಮಾಡಿದ್ದರಿಂದ ನೋಂದಣಿ ಮತ್ತು ಮುದ್ರಾಂಕ ಶುಲ್ಕಗಳೆರಡು ಹೆಚ್ಚಾದಂತಾಗಿದೆ.
ಕಂದಾಯ ಇಲಾಖೆಯ ಕರ್ನಾಟಕ ಸ್ಟಾಂಪು ತಿದ್ದುಪಡಿ ಅಧಿನಿಯಮ 2023 ಕಾಯ್ದೆಯಂತೆ ಫೆ.3ರಂದು ರಾಜ್ಯಪಾಲರ ಅನುಮೋದನೆಯಂತೆ ರಾಜ್ಯ ಪತ್ರದ ಮೂಲಕ ಮುದ್ರಾಂಕ ಶುಲ್ಕ ಪರಿಷ್ಕರಿಸಲಾಗಿದೆ. ದತ್ತು ಪತ್ರ, ಅಫಿಡವಿಟ್, ಒಪ್ಪಂದ, ದಾಖಲೆ ಪತ್ರ, ಕ್ರಯ ಪತ್ರ, ನೋಂದಣಿ ಸರ್ಟಿಫಿಕೇಟ್, ವಿಚ್ಚೇದನ ಪತ್ರ, ಹಸ್ತಾಂತರ ಪತ್ರ, ಕಂಪನಿ ಸಂಘದ ಜ್ಞಾಪನ ಪತ್ರ, ಡಿಟಿಡಿ ಪಾಲುದಾರರಿಗೆ ಮರು ರಚನೆ, ಸೀಮಿತ ಹೊಣೆಗಾರಿಕೆ, ಪಾಲುದಾರಿಕೆ ಸ್ಟ್ಯಾಂಪ್ ಶುಲ್ಕ ಹೆಚ್ಚಳ ಮಾಡಲಾಗಿದೆ.
ಮಾರ್ಗಸೂಚಿ ದರ ಪರಿಷ್ಕರಣೆ, ಮುದ್ರಾಂಕ ಶುಲ್ಕ ಏರಿಕೆಯಿಂದಾಗಿ ಸಾರ್ವಜನಿಕರಿಗೆ ಹೊರೆಯಾಗಲಿದೆ. ಆಸ್ತಿ ಖರೀದಿ, ಕಟ್ಟಡ ನಿರ್ಮಾಣ 10 ಲಕ್ಷ ರೂ.ವರೆಗಿನ ಡಿಟಿಡಿಗೆ ಶೇ. 0.1 ರಷ್ಟು ಇದ್ದ ಮುದ್ರಾಂಕ ಶುಲ್ಕವನ್ನು ಶೇ. 0.5 ರಷ್ಟು ಏರಿಕೆ ಮಾಡಲಾಗಿದೆ.
10 ಲಕ್ಷ ರೂ. ಮೇಲ್ಪಟ್ಟು ಶೇಕಡ 0.2ರಷ್ಟು ರಿಂದ ಶೇಕಡ 0.5 ರಷ್ಟು, ಸ್ವಾಧೀನ ರಹಿತ ಕರಾರು ಪತ್ರ ಶೇಕಡ 0.1 ರಿಂದ 0.5 ರಷ್ಟು, ವಿಲ್ 500 ರೂ.ನಿಂದ ಒಂದು ಸಾವಿರ ರೂ., ಪ್ರಮಾಣಪತ್ರ 20 ರೂ. ನಿಂದ 100 ರೂ., ಪವರ್ ಆಫ್ ಅಟಾರ್ನಿ 100 ರೂ.ನಿಂದ 500 ರೂಪಾಯಿಗೆ ಹೆಚ್ಚಳವಾಗಿದೆ.
ವಿಭಾಗ ಪತ್ರ ನೋಂದಣಿಗೂ ಮುದ್ರಾಂಕ ಶುಲ್ಕ ಏರಿಕೆ ಮಾಡಲಾಗಿದೆ. ನಗರಸಭೆ, ಪುರಸಭೆ ವ್ಯಾಪ್ತಿಯ ಆಸ್ತಿ ವಿಭಾಗ ಪತ್ರ ನೋಂದಣಿಗೆ ಒಂದು ಸಾವಿರ ರೂಪಾಯಿಯಿಂದ 5000 ರೂ.ಗೆ ಏರಿಕೆ ಮಾಡಲಾಗಿದೆ. ಪಂಚಾಯಿತಿಗಳ ವ್ಯಾಪ್ತಿಯಲ್ಲಿ ಆಸ್ತಿಗೆ 500 ರೂ.ನಿಂದ 3000ರೂ., ಕೃಷಿ ಭೂಮಿಗೆ 250 ರೂ.ನಿಂದ ಒಂದು ಸಾವಿರ ರೂಪಾಯಿ, ಚರಾಸ್ತಿ ನೋಂದಣಿಗೆ 250 ರೂ.ನಿಂದ ಒಂದು ಸಾವಿರ ರೂಪಾಯಿ, ಪಾಲುದಾರಿಕೆ ನೋಂದಣಿಗೆ ಮುದ್ರಾಂಕ ಶುಲ್ಕ ಶೇಕಡ 3ರಿಂದ ಶೇಕಡ 5ರಷ್ಟು ಹೆಚ್ಚಳ ಮಾಡಲಾಗಿದೆ. ವಿಚ್ಛೇದನ ಪತ್ರಗಳ ಮೇಲಿನ ಸ್ಟ್ಯಾಂಪ್ ಡ್ಯೂಟಿ ಕೂಡ 100 ರಿಂದ 500 ರೂ.ಗೆ ಹೆಚ್ಚಾಗಲಿದೆ. ಪ್ರಮಾಣೀಕೃತ ಪ್ರತಿಗಳಿಗೆ, ಸ್ಟ್ಯಾಂಪ್ ಸುಂಕವನ್ನು 5 ರಿಂದ 20ಕ್ಕೆ ಏರಿಕೆ ಮಾಡಲಾಗಿದೆ. ಅಲ್ಲದೇ ಟ್ರಸ್ಟ್‌ಗಳನ್ನು ನೋಂದಾಯಿಸುವುದು ಸಹ ದುಬಾರಿಯಾಗಲಿದೆ.