ಬೆಂಗಳೂರು, ಫೆ.04 www.bengaluruwire.com : ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (BBMP)ಯ ಪೂರ್ವ ವಲಯದಲ್ಲಿ ಮಾತ್ರ ಜಾರಿಯಲ್ಲಿದ್ದ ಇ-ಆಸ್ತಿ ತಂತ್ರಾಂಶ ಪದ್ಧತಿಯನ್ನು ರಾಜರಾಜೇಶ್ವರಿ ನಗರ ವಲಯದ ಹೆಮ್ಮಿಗೆಪುರ ವಾರ್ಡ್ ನಲ್ಲಿ ಫೆ.3ರಿಂದ ಜಾರಿಗೆ ತರಲಾಗಿದೆ. ಬಳಿಕ ಹಂತ ಹಂತವಾಗಿ ಇತರ ವಾರ್ಡ್ ಗಳಲ್ಲಿ ಇದನ್ನು ಜಾರಿಗೆ ತರಲಾಗುತ್ತದೆ.
ಪಾಲಿಕೆಯ ಹೆಮ್ಮಿಗೆಪುರ ವಾರ್ಡ್ (198) ವ್ಯಾಪ್ತಿಗೆ ಕಗ್ಗಲೀಪುರ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಮಲ್ಲಸಂದ್ರ ಗ್ರಾಮ ಮತ್ತು ಉತ್ತರಹಳ್ಳಿ ಮನವರ್ತೆಕಾವಲ್ ಗ್ರಾಮದ ಭಾಗಶಃ ಪ್ರದೇಶಗಳ ಸರ್ವೆ ನಂಬರ್‌ಗಳನ್ನು ಪಾಲಿಕೆ ಆಡಳಿತ ವ್ಯಾಪ್ತಿಗೆ ಸೇರ್ಪಡೆಗೊಳಿಸಲಾಗಿರುತ್ತದೆ. ಈ ಪ್ರದೇಶವನ್ನು ಹೆಮ್ಮಿಗೆಪುರ ವಾರ್ಡ್‌ನಲ್ಲಿ ಇ-ಆಸ್ತಿ ತಂತ್ರಾಂಶವನ್ನು ಫೆ.3ರಿಂದ ಜಾರಿಗೆ ಬರುವಂತೆ ಸಂಪೂರ್ಣವಾಗಿ ಅನುಷ್ಠಾನಗೊಳಿಸಲಾಗಿದೆ ಎಂದು ಮುಖ್ಯ ಆಯುಕ್ತ ತುಷಾರ್ ಗಿರಿನಾಥ್ ಆದೇಶಿಸಿದ್ದಾರೆ.
ಈ ಹಿನ್ನಲೆಯಲ್ಲಿ ಇನ್ನು ಮುಂದೆ ಕಡ್ಡಾಯವಾಗಿ ಸ್ವತ್ತುಗಳ ಖಾತೆ ನೋಂದಾವಣೆ, ಖಾತೆ ವರ್ಗಾವಣೆ, ನಮೂನೆ-ಎ (Form-A) ಅಥವಾ ನಮೂನೆ-ಬಿ (Form-B) ವಹಿಯ ಪ್ರತಿಗಳನ್ನು ಕೋರಿ ಸಲ್ಲಿಸಲಾಗುವ ಅರ್ಜಿಗಳನ್ನು ಇ-ಆಸ್ತಿ ತಂತ್ರಾಂಶದಲ್ಲಿಯೇ ನಿರ್ವಹಿಸಿ ಸಕ್ಷಮ ಪ್ರಾಧಿಕಾರದ ಅಧಿಕಾರಿಗಳ ಡಿಜಿಟಲ್ ಸಹಿಯುಳ್ಳ ನಮೂನೆ -ಎ ಅಥವಾ ನಮೂನೆ ಬಿ ನ್ನು ಕಡ್ಡಾಯವಾಗಿ ತಂತ್ರಾಂಶದಿಂದ ತೆಗೆದು ತೆರಿಗೆದಾರರಿಗೆ ನೀಡುವಂತೆ ಕಚೇರಿ ಆದೇಶದಲ್ಲಿ ಸಂಬಂಧಿಸಿದ ಅಧಿಕಾರಿಗಳಿಗೆ ತಿಳಿಸಿದ್ದಾರೆ.
ಇನ್ನು ಮುಂದೆ ಕೈಬರಹದ ಖಾತಾ ಪ್ರಮಾಣ ಪತ್ರ ಮತ್ತು ಉದೃತ ಭಾಗವನ್ನು ನೀಡುವುದನ್ನು ಫೆ.3ರಿಂದ ಸಂಪೂರ್ಣವಾಗಿ ನಿಷೇಧಿಸಿದೆ. ಹೀಗಾಗಿ ಇ-ಆಸ್ತಿ ತಂತ್ರಾಂಶದಲ್ಲಿ ಹೊಸದಾಗಿ ನಮೂನೆ-ಎ / ನಮೂನೆ ಬಿ ಸೃಜಿಸುವವರೆಗೂ ಸಕಾಲ ತಂತ್ರಾಂಶದ ಮೂಲಕ ಎಲ್ಲಾ ಖಾತಾ ಸೇವೆಗಳಿಗೆ ಕೈಬರಹದ ಮೂಲಕ ಉತ್ತರ ಪತ್ರವನ್ನು ಮಾತ್ರ ನೀಡತಕ್ಕದ್ದು. ತದನಂತರ ಇಂತಹ ಸ್ವತ್ತುಗಳ ವಿವರಗಳನ್ನು ಕಡ್ಡಾಯವಾಗಿ ಇ ಆಸ್ತಿ ತಂತ್ರಾಂಶದಲ್ಲಿ ನಮೂದಿಸಿ ನಮೂನೆ-ಎ / ನಮೂನೆ – ಬಿ ವಿತರಿಸಬೇಕು. ಇನ್ನುಳಿದ ವಾರ್ಡ್‌ಗಳಲ್ಲಿ ಹಂತಹಂತವಾಗಿ ಈ ಪದ್ಧತಿಯನ್ನು ಜಾರಿಗೊಳಿಸಲಾಗುವುದು.
ಒಂದು ವೇಳೆ ಫೆ.2 ರ ನಂತರ ಕೈ ಬರಹದ ಸಹಿಯುಳ್ಳ ಹಿಂಬರಹವನ್ನು ತೆರಿಗೆದಾರರಿಗೆ ವಿತರಿಸಿರುವುದು ಕಂಡುಬಂದಲ್ಲಿ ಸಂಬಂಧಪಟ್ಟ ಅಧಿಕಾರಿಗಳ ವಿರುದ್ಧ ನಿರ್ದಾಕ್ಷಣ್ಯವಾಗಿ ನಿಯಮಾನುಸಾರ ಕ್ರಮ ಕೈಗೊಳ್ಳಲಾಗುವುದು ಎಂದು ಮುಖ್ಯ ಆಯುಕ್ತರು ಖಡಕ್ ಆದೇಶ ಮಾಡಿದ್ದಾರೆ.
ಸರ್ಕಾರದ ಆದೇಶದಲ್ಲಿ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (BBMP)ಯ ಕಂದಾಯ ಇಲಾಖೆಯು ನೀಡಲಾಗುತ್ತಿರುವ ಸೇವೆಗಳನ್ನು ಸರಳೀಕರಣಗೊಳಿಸುವ ಉದ್ದೇಶದಿಂದ ಪಾಲಿಕೆ ವ್ಯಾಪ್ತಿಯಲ್ಲಿ ಇ-ಆಸ್ತಿ ತಂತ್ರಾಂಶವನ್ನು ಅನುಷ್ಠಾನಗೊಳಿಸಿ, ನೊಂದಣಿ ಮತ್ತು ಮುದ್ರಾಂಕ ಇಲಾಖೆಯ ಕಾವೇರಿ ತಂತ್ರಾಂಶದೊಂದಿಗೆ ಸಂಯೋಜಿಸಲು ಸೂಚಿಸಲಾಗಿರುತ್ತದೆ.
ಬಿಬಿಎಂಪಿ ಹಾಗೂ ರಾಷ್ಟ್ರೀಯ ಸೂಚನಾ ವಿಜ್ಞಾನ ಕೇಂದ್ರದ ಸಹಯೋಗದೊಂದಿಗೆ ಪಾಲಿಕೆಯ ಕಾಯ್ದೆ ಹಾಗೂ ನಿಯಮಾವಳಿಗೆ ಅನ್ವಯವಾಗುವಂತೆ ಇ-ಆಸ್ತಿ ತಂತ್ರಾಂಶವನ್ನು (E-Aasthi Software) ಅಭಿವೃದ್ಧಿಪಡಿಸಲಾಗುತ್ತಿರುತ್ತದೆ.