ಇಂದಿನ ತಿರುಮಲೆ, ಮಾಗಡಿ ಕ್ಷೇತ್ರವು ಬ್ರಹ್ಮಾಂಡ ಪುರಾಣದಲ್ಲಿ ಉಲ್ಲೇಖಿಸಿರುವಂತೆ ಸ್ವರ್ಣಾಚಲ-ಸ್ವರ್ಣಾದ್ರಿ ಪರ್ವತ- ಮಾಂಡವ್ಯಕುಟಿ-ಮಾಕುಟ-ಮಾಗುಡಿ ಎಂಬುದಾಗಿ ಕರೆಯಲ್ಪಟ್ಟ ಪುಣ್ಯ ಪವಿತ್ರ ಕ್ಷೇತ್ರ. ಇಲ್ಲಿನ ಶ್ರೀ ಕ್ಷೇತ್ರವು ಅಷ್ಟತೀರ್ಥಗಳಿಂದಲೂ, ಅಷ್ಟ ಪರ್ವತಗಳಿಂದಲೂ, ಪವಿತ್ರ ಕಣ್ವಾನದಿ ಹಾಗೂ ಸುಂದರಗಿರಿ ಕಾನನಗಳಿಂದ ಕೂಡಿದ ದಿವ್ಯ ಕ್ಷೇತ್ರ, ಮಾಂಡವ್ಯ, ಕಣ್ವ, ವಶಿಷ್ಠ, ಪುರಂಜಯ, ಶಾಪಾತಪ, ಪ್ರಹ್ಲಾದ-ಮುಂತಾದ ತಪಸ್ವಿಗಳ ತಪೋಭೂಮಿ.
ಮಾಂಡವ್ಯ ಋಷಿಗಳು ಶ್ರೀ ಶ್ರೀನಿವಾಸ ದೇವರ ದರ್ಶನಕ್ಕಾಗಿ ತಿರುಪತಿ ಕ್ಷೇತ್ರಕ್ಕೆ ಯಾತ್ರೆ ಮಾಡಲು ಅಪೇಕ್ಷೆ ಪಟ್ಟು ಹೊರಟಿದ್ದರು, ಆದರೆ ಶ್ರೀ ದೇವರ ದರ್ಶನವಾಗದೇ ಮನನೊಂದಾಗ ಶ್ರೀ ಶ್ರೀನಿವಾಸ ದೇವರ ಅಶರೀರವಾಣಿಯ ಆಜ್ಞೆಯಂತೆ ಮಾಂಡವ್ಯ ಋಷಿಗಳು ಈಗಿನ ಮಾಗಡಿಯಲ್ಲಿನ ತಿರುಮಲೆಯ ಸ್ವರ್ಣಾದ್ರಿ ಕ್ಷೇತ್ರದಲ್ಲಿ ಕುಟೀರವನ್ನು ಕಟ್ಟಿಕೊಂಡು ತಪಸ್ಸು ಮಾಡಿದರು. ಆಗ ಒಂದು ದಿನ ಸ್ವಪ್ನದಲ್ಲಿ ಶ್ರೀನಿವಾಸ ದೇವರು ಕಾಣಿಸಿಕೊಂಡು “ಉದ್ಭವ ಸಾಲಿಗ್ರಾಮ”ದ ರೂಪದಲ್ಲಿ ದರ್ಶನ ನೀಡಿ, ಸಾಲಿಗ್ರಾಮ ರೂಪಿಯಾದ ನನ್ನನ್ನು ನಿತ್ಯವೂ ಆರಾಧಿಸಿದರೆ ಇಷ್ಟಾರ್ಥ ಸಿದ್ದಿಯಾಗಿ ಮೋಕ್ಷವು ದೊರಕುವುದು ಎಂದು ಹೇಳಿದಂತಾಯಿತು. ಅದರಂತೆಯೇ “ಉದ್ಭವ ಸಾಲಿಗ್ರಾಮ”ವನ್ನು ಆರಾಧಿಸುತ್ತಿದ್ದರು. ನಂತರ ಪಶ್ಚಿಮಾಭಿಮುಖವಾಗಿ ಭಕ್ತಿಪ್ರದ ವಿಮಾನದಲ್ಲಿ ಶ್ರೀ ವೆಂಕಟಾಚಲಪತಿ ಸ್ವಾಮಿ ಹಾಗೂ ಪೂರ್ವದಿಕ್ಕಿಗೆ ಸರೋಜಲತಿಕಾ ರೂಪದಿಂದ ಲಕ್ಷ್ಮೀದೇವಿಯನ್ನು ಪಾಂಚರಾತ್ರಾಗಮ ರೀತಿಯಲ್ಲಿ ಪ್ರತಿಷ್ಠಾಪಿಸಿ ವಶಿಷ್ಠ ಮಹರ್ಷಿಗಳ ಜೊತೆಗೂಡಿ ಆರಾಧಿಸಿ ಮುಕ್ತಿಯನ್ನು ಪಡೆದರೆಂದು ಹೇಳಲಾಗಿದೆ.
ಮಾಂಡವ್ಯ ಋಷಿಗಳನ್ನು ಅನುಗ್ರಹಿಸಿ, ಆಶೀರ್ವದಿಸಿದ್ದರಿಂದ ಶ್ರೀ ಪಶ್ಚಿಮ ವೆಂಕಟಾಚಲಪತಿ ಸ್ವಾಮಿಯು ಮಾಂಡವ್ಯನಾಥನೆಂಬುದಾಗಿ ಹಾಗೂ ರೂಢಿಯಲ್ಲಿ ಶ್ರೀ ರಂಗನಾಥಸ್ವಾಮಿ ಎಂಬುದಾಗಿ ಈ ಕ್ಷೇತ್ರವು ಪ್ರಸಿದ್ದಿ ಪಡೆಯಿತು. ಇಲ್ಲಿರುವ “ಉದ್ಭವ ಸಾಲಿಗ್ರಾಮಕ್ಕೆ ಎಷ್ಟೇ ಕೊಡ ತೀರ್ಥವನ್ನು ಅಭಿಷೇಕ ಮಾಡಿದರೂ ಇಂದು ಹನಿಯೂ ಸಿಗದಂತೆ ಭೂಮಿಯಲ್ಲಿ ಇಂಗಿ ಹೋಗುತ್ತದೆ. ಅದು ಎಲ್ಲಿಗೆ ಹೋಗುತ್ತದೆ ಎಂದು ಇಲ್ಲಿಯವರೆಗೆ ತಿಳಿಯದೇ ಇರುವುದು ಇಂದು ಪವಾಡ. ಯಾರಿಗೆ ತಿರುಪತಿ ತಿಮ್ಮಪನ ದರ್ಶನ ಮಾಡಲು ಸಾಧ್ಯವಾಗುವುದಿಲ್ಲವೋ ಅಂತಹವರು ಈ ಕ್ಷೇತ್ರದಲ್ಲಿ ಉದ್ಭವ ಸಾಲಿಗ್ರಾಮ ಮತ್ತು ಶ್ರೀ ಪಶ್ಚಿಮ ವೆಂಕಟಾವಲಪತಿಯನ್ನು ದರ್ಶಿಸಿದರೆ ಅಲ್ಲಿಯಷ್ಟೇ ಪುಣ್ಯ, ಇಷ್ಟಾರ್ಥ ಫಲ ಸಿದ್ಧಿಸುವುದೆಂದು ಹೇಳಲಾಗಿದೆ. ಈ ಉದ್ಭವ ಸಾಲಿಗ್ರಾಮವನ್ನು ಶ್ರೀದೇವರ ಪಾದದ ಮುಂಭಾಗದ ಕೆಳಗೆ ಕಾಣಬಹುದಾಗಿದೆ.”
ಚೋಳರ ಆಳ್ವಿಕೆ ಸಂದರ್ಭ 11-12ನೇ ಶತಮಾನದಲ್ಲಿ ಸ್ಥಾಪನೆ :
ಚೋಳರ ಕಾಲದಲ್ಲಿ 11-12ನೇ ಶತಮಾನದಲ್ಲಿ ದ್ರಾವಿಡ ಶೈಲಿಯಲ್ಲಿ ದೇವಸ್ಥಾನವನ್ನು ನಿರ್ಮಿಸಲಾಗಿದೆ. ಮುಂದೆ ಹೊಯ್ಸಳರು, ವಿಜಯನಗರದ ಅರಸರು, ಕೆಂಪೇಗೌಡರ ವಂಶಸ್ಥರು, ಮೈಸೂರಿನ ಅರಸರ ಆಳ್ವಿಕೆಗಳಲ್ಲಿ ದಾನ-ದತ್ತಿ- ಕೊಡುಗೆಗಳಿಂದ ದೇವಸ್ಥಾನದ ಪೂಜಾ ಕೈಂಕರ್ಯಗಳು ವಿಜೃಂಭಣೆಯಿಂದ ನೆರವೇರುತ್ತಿತ್ತೆಂದು ಶಾಸನಗಳಲ್ಲಿ ಹೇಳಲಾಗಿದೆ. ಶಾಸನಗಳಲ್ಲಿ ಶ್ರೀ ಸ್ವಾಮಿಯನ್ನು “ತಿರುವೇಂಗಡನಾಥ” ಎಂದೂ ಕರೆಯಲಾಗಿದೆ. ಶ್ರೀದೇಗುಲದ ಪ್ರಾಕಾರದಲ್ಲಿ ಗರುಡ, ಆಂಜನೇಯ, ಸರೋಜಲತಿಕಾ ಲಕ್ಷ್ಮೀದೇವಿ ಅಮ್ಮನವರು, ಸೀತಮ್ಮನವರು, ಶ್ರೀರಾಮ, ಶ್ರೀ ಗೋಪಾಲಕೃಷ್ಣ, ಶ್ರೀ ಬೆಳೆಯೋ ರಂಗ, ಶ್ರೀ ಸುದರ್ಶನ ಆಳ್ವಾರ್, ಶ್ರೀ ವೈಷ್ಣವ ಪರಂಪರೆಯ ಆಳ್ವಾರ್ ಆಚಾರ್ಯರ ಪ್ರತ್ಯೇಕ ಗುಡಿಗಳಿವೆ.
ಯಾವ್ಯಾವ ರೀತಿಯ ಪೂಜೆ- ಪುನಸ್ಕಾರಗಳು ಇಲ್ಲಿ ನಡೆಯುತ್ತೆ? :
ಶ್ರೀ ರಂಗನಾಥನ ದೇವಸ್ಥಾನದಲ್ಲಿ ಪ್ರತಿನಿತ್ಯ ಅರ್ಚನೆ, ವಿಶೇಷ ಹೂವಿನ ಅಲಂಕಾರಗಳು, ಪ್ರಸಾದ ಸೇವೆಗಳು, ಅಭಿಷೇಕ, ಪ್ರತ್ಯೇಕ/ಸಾಮೂಹಿಕ ಕಲ್ಯಾಣೋತ್ಸವ, ತಿರುಬೀದಿ ಉತ್ಸವ, ದೊಡ್ಡ ಗರುಡೋತ್ಸವ, ಹುಣ್ಣಿಮೆಯಲ್ಲಿ ಸುದರ್ಶನ ಹೋಮ, ಪವಿತ್ರೋತ್ಸವ, ಶ್ರಾವಣ ಮಾಸದಲ್ಲಿ ವಿಶೇಷ ಪೂಜಾ ಕೈಂಕರ್ಯಗಳು, ಧನುರ್ಮಾಸದಲ್ಲಿ ವಿಶೇಷ ಕೊಠಾರೋತ್ಸವ ಪೂಜೆ ಅನಾದಿ ಕಾಲದಿಂದಲೂ ನಡೆದುಕೊಂಡು ಬರುತ್ತಿದೆ. ವೈಕುಂಠ ಏಕಾದಶಿ, ಲಕ್ಷದೀಪೋತ್ಸವ, ಶ್ರೀ ಸ್ವಾಮಿಯವರ ಜಾತ್ರೆ ಮತ್ತು ಬ್ರಹ್ಮರಥೋತ್ಸವವು ಪ್ರತೀ ವರ್ಷ ಚೈತ್ರಮಾಸದಲ್ಲಿ ಹುಣ್ಣಿಮೆಗೆ ಮುಂಚೆ ಉತ್ತರಾ ನಕ್ಷತ್ರದಲ್ಲಿ ಬಹಳ ವಿಜೃಂಭಣೆಯಿಂದ ನಡೆಯುತ್ತದೆ. ಜಾತ್ರೆ ಹಾಗೂ ಬ್ರಹ್ಮರಥೋತ್ಸವದ ಸಮಯದಲ್ಲಿ ಒಂದು ವಾರದ ಕಾಲ ದನ-ರಾಸುಗಳ ದೊಡ್ಡಜಾತ್ರೆ ಮತ್ತು ಎಲ್ಲಾ ಸಮುದಾಯದ ಭಕ್ತರು ಅರವಂಟಿಕೆಗಳಲ್ಲಿ ಅನ್ನಸಂತರ್ಪಣೆ ಮಾಡುತ್ತಾರೆ.
ಶ್ರೀ ದೇವರ ಅಮೂಲ್ಯ ಆಭರಣಗಳು ತಾಲೂಕು ಖಜಾನೆಯಲ್ಲಿ ಭದ್ರ :
“ಮಾಗಡಿಯ ತಿರುಮಲೆ ಕ್ಷೇತ್ರದಲ್ಲಿನ ಶ್ರೀ ರಂಗನಾಥಸ್ವಾಮಿ ದೇವಸ್ಥಾನಕ್ಕೆ ರಾಜ ಮಹಾರಾಜರುಗಳು ನೀಡಿದ ಅಮೂಲ್ಯ ಚಿನ್ನ ಮತ್ತು ವಜ್ರದ ಆಭರಣಗಳನ್ನು ವಿಶೇಷ ದಿನಗಳಂದು ಮಾಗಡಿ ತಾಲೂಕು ತಹಸೀಲ್ದಾರ್ ಅವರ ಅನುಮತಿಯ ಮೇರೆಗೆ ತಾಲೂಕು ಖಜಾನೆಯಿಂದ ಶ್ರೀ ಕ್ಷೇತ್ರಕ್ಕೆ ತಂದು ಶ್ರೀದೇವರಿಗೆ ಹಾಕಿ ಅಲಂಕಾರ ಮಾಡಲಾಗುತ್ತದೆ. ಉಳಿದ ಸಂದರ್ಭದಲ್ಲಿ ಬಿಗಿಭದ್ರತೆಯಲ್ಲಿ ತಾಲೂಕು ಖಜಾನೆಯಲ್ಲಿ ಈ ಆಭರಣಗಳನ್ನು ಇಡಲಾಗುತ್ತದೆ” ಎಂದು ದೇವಸ್ಥಾನದ ಕಾರ್ಯನಿರ್ವಾಹಕ ಅಧಿಕಾರಿ ಜಗದೀಶ್ ಗೌಡ ಬೆಂಗಳೂರು ವೈರ್ ಗೆ ತಿಳಿಸಿದ್ದಾರೆ.
ಈ ದೇವಸ್ಥಾನದ ಹಿಂಭಾಗ ಸ್ಥಂಭಗಿರಿ ಎಂಬ ಬೆಟ್ಟದಲ್ಲಿ ಶ್ರೀ ಕಂಭದ ಯೋಗಾನರಸಿಂಹಸ್ವಾಮಿಯನ್ನು ಶ್ರೀಮನ್ನಾರಾಯಣನ ಪರಮಭಕ್ತನಾದ ಪ್ರಹ್ಲಾದನೇ ಪ್ರತಿಷ್ಠಾಪಿಸಿ, ಪೂಜಿಸಿದ್ದಾರೆಂದು ಬ್ರಹ್ಮಾಂಡ ಪುರಾಣದಲ್ಲಿ ಹೇಳಲಾಗಿದೆ. ಹೀಗೆ ಪುರಾಣ ಪ್ರಸಿದ್ಧ ಹಾಗೂ ಪ್ರಾಚೀನ ಶ್ರೀ ರಂಗನಾಥಸ್ವಾಮಿಯನ್ನು ದರ್ಶಿಸಿ, ಪೂಜಿಸಿದರೆ ಭಕ್ತರ ಮನೋಕಾಮನೆಗಳು ನೆರವೇರುವುದು ಎಂಬ ಪ್ರತೀತಿಯಿದೆ.
“ಬೆಂಗಳೂರು ವೈರ್” ಡಿಜಿಟಲ್ ವೆಬ್ ನ್ಯೂಸ್ ಪೋರ್ಟೆಲ್ಲಿನ ಸೋಶಿಯಲ್ ಮೀಡಿಯಾ ಪೇಜ್ ಹಾಗೂ Google News ಗಳಿಗೆ ಉಚಿತವಾಗಿ Subscribe ಆಗಲು Facebook, Telegram, Twitter, Youtube, Whatsup Channel ಗೆ ಜಾಯಿನ್ ಆಗಲು ಇವುಗಳ ಲಿಂಕ್ ಮೇಲೆ ಕ್ಲಿಕ್ ಮಾಡಿ.