ಬೆಂಗಳೂರು, ಜ.29 www.bengaluruwire.com : ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರದ ನೂತನ ಅಧ್ಯಕ್ಷರಾಗಿ ಎನ್.ಎ. ಹ್ಯಾರಿಸ್ ಅವರು ಸೋಮವಾರ ಅಧಿಕಾರ ಸ್ವೀಕರಿಸಿದರು.
ಇದೇ ಸಂದರ್ಭದಲ್ಲಿ ಮಾತನಾಡಿದ ಅವರು, ಬೆಂಗಳೂರಿನ ಜನಕ್ಕೆ ಅನುಕೂಲವಾಗುವ ರೀತಿ ಕೆಲಸ ಮಾಡಲು ನನ್ನ ಪ್ರಯತ್ನ ಮತ್ತು ಶ್ರಮ ಇರುತ್ತದೆ, ಅಲ್ಲದೇ ಮುಖ್ಯಮಂತ್ರಿಗಳು ಹಾಗೂ ಉಪ ಮುಖ್ಯಮಂತ್ರಿಗಳು ನನ್ನ ಮೇಲೆ ನಂಬಿಕೆಯಿಟ್ಟು ಅವಕಾಶ ಕೊಟ್ಟಿದ್ದಾರೆ. ಆ ನಂಬಿಕೆಗೆ ಚ್ಯುತಿ ಬಾರದಂತೆ ಶೇ. 100 ರಷ್ಟು ಕಾರ್ಯವನ್ನು ಪೂರೈಸುತ್ತೇನೆ ಎಂದು ತಿಳಿಸಿದರು.
ಇಲ್ಲಿ ಯಾವುದಾದರೂ ಸಮಸ್ಯೆಗಳೇನಾದರೂ ಇದ್ದರೆ ಅದನ್ನು ಇನ್ನೆರಡು ಮೂರು ದಿನಗಳಲ್ಲಿ ಅಧಿಕಾರಿಗಳ ಜೊತೆ ಸಭೆ ನಡೆಸಿ ಆದಷ್ಟು ಬೇಗ ಪರಿಹಾರ ಕಂಡುಕೊಳ್ಳುವ ಪ್ರಯತ್ನ ಮಾಡುತ್ತೇನೆ ಎಂದು ಭರವಸೆ ನೀಡಿದರು.
ಆದರೆ ನೂತನ ಬಿಡಿಎ ಅಧ್ಯಕ್ಷರ ಮುಂದೆ ಹಲವು ಸಮಯದಿಂದ ಬಾಕಿ ಉಳಿದಿರುವ ಪೆರಿಫಿರಿಯಲ್ ರಿಂಗ್ ರಸ್ತೆ ನಿರ್ಮಾಣ, ಕೆಂಪೇಗೌಡ ಬಡಾವಣೆ ಭೂಸ್ವಾಧೀನ, ಡಾ.ಶಿವರಾಮಕಾರಂತ ಬಡಾವಣೆ ನಿರ್ಮಾಣ ಪೂರ್ಣಗೊಳಿಸಿ ರೈತರು, ಭೂಮಿ ಕಳೆದುಕೊಂಡವರಿಗೆ ಪರಿಹಾರ ಹಾಗೂ ಸಾರ್ವಜನಿಕರಿಗೆ ನಿವೇಶನ ಹಂಚಿಕೆಯನ್ನು ಪೂರ್ಣಗೊಳಿಸುವ ಮಹತ್ವದ ಜವಾಬ್ದಾರಿಯಿದೆ. ಅದೇ ರೀತಿ ಬಹು ಕಾಲದಿಂದ ನಗರಕ್ಕೆ ಸೂಕ್ತವಾದ ಸಮಗ್ರವಾದ ಪರಿಷ್ಕೃತ ಮಹಾ ಯೋಜನೆ ಜಾರಿಗೆ ತರಬೇಕೆನ್ನುವ ಬೇಡಿಕೆಯಿದೆ. ಈ ಹಿಂದೆ ಬಿಡಿಎ ತಯಾರಿಸಿದ್ದ ಬಿಡಿಎ ಪರಿಷ್ಕ್ರತ ಮಹಾಯೋಜನೆ-2031 (RMP 2031) ಹಲವು ದೋಷಗಳಿದ್ದ ಕಾರಣಕ್ಕೆ ರಾಜ್ಯ ಸರ್ಕಾರ ತಿರಸ್ಕರಿಸಿತ್ತು.
ಅಧಿಕಾರ ಸ್ವೀಕಾರ ಮಾಡುವ ಸಂದರ್ಭದಲ್ಲಿ ಉಪ ಮುಖ್ಯಮಂತ್ರಿಗಳು ಮತ್ತು ಜಲ ಸಂಪನ್ಮೂಲ ಸಚಿವರು ಹಾಗೂ ಬೆಂಗಳೂರು ನಗರಾಭಿವೃದ್ಧಿ ಸಚಿವರಾದ ಡಿ.ಕೆ. ಶಿವಕುಮಾರ್ ಹಾಗೂ ಸಚಿವರಾದ ಕೃಷ್ಣ ಭೈರೇಗೌಡ, ರಹೀಂ ಖಾನ್, ಜಮೀರ್ ಅಹಮದ್ ಖಾನ್ ಮತ್ತು ಶಾಸಕರಾದ ರಿಜ್ವಾನ್ ಅರ್ಷದ್, ಪ್ರಿಯಾಕೃಷ್ಣ ರವರುಗಳು ಉಪಸ್ಥಿತರಿದ್ದರು.