ಬೆಂಗಳೂರು, ಜ.29 www.bengaluruwire.com : ಅಂತೂ ಇಂತೂ ಬಿಗ್ಬಾಸ್ ಕನ್ನಡ ಸೀಸನ್ 10 (BBK10) ಮುಗಿದಿದೆ. ಹಲವು ಕಠಿಣ ಸ್ಪರ್ಧೆಗಳ ನಡುವೆ ಕಾರ್ತಿಕ್ ಮಹೇಶ್ ಅವರಿಗೆ ವಿಜಯಲಕ್ಷ್ಮಿ ಒಲಿದಿದ್ದಾಳೆ.
ಬಿಗ್ ಬಾಸ್ ಮನೆಯಲ್ಲಿನ 112 ದಿನಗಳ ಸುದೀರ್ಘ ಪಯಣ ಭಾನುವಾರಕ್ಕೆ ಅಂತ್ಯವಾಗಿದೆ. ಬಿಗ್ಬಾಸ್ (BiggBoss) ಗೆಲ್ಲಲು 16 ಮಂದಿಯಿಂದ ಪ್ರಾರಂಭವಾದ ಸ್ಪರ್ಧೆಯಲ್ಲಿ ಫೈನಲ್ ಆಗಿ ಕಾರ್ತಿಕ್ ಮಹೇಶ್ ಗೆಲವು ಸಾಧಿಸಿದ್ದಾರೆ.
ಕಾರ್ತಿಕ್ ಅವರು ಅಂತಿಮ ಕ್ಷಣದಲ್ಲಿ ಬಿಗ್ಬಾಸ್ ಮನೆಗೆ ಬರಲು ತೆಗೆದುಕೊಂಡ ನಿರ್ಧಾರ ಅವರ ಕೈಹಿಡಿದಿದೆ. ಹಲವು ಏಳು ಬೀಳುಗಳಿದ್ದ ಪ್ರಯಣದಲ್ಲಿ ಕಾರ್ತಿಕ್ ಮಹೇಶ್ ಗುರಿ ತಲುಪಿದ್ದಾರೆ. ಅವರು ಒಟ್ಟು 2,97,39,904 ಮತ ಗಳಿಸಿದ್ದಾರೆ. ಬಿಗ್ ಬಾಸ್ ಮನೆಯಲ್ಲಿ ವಿವಿಧ ಸಂದರ್ಭದಲ್ಲಿ ನೋವು, ಬೇಸರ, ಖುಷಿಗಳನ್ನು ಸಹ ಕಂಡಿದ್ದ ಡ್ರೋನ್ ಪ್ರತಾಪ್ ರನ್ನರ್ ಅಪ್ ಆಗಿದ್ದಾರೆ.
ಈ ಬಗ್ಗೆ ಕಾರ್ತಿಕ್ ಮಹೇಶ್ ಹೇಳಿಕೊಂಡಿರುವಂತೆ ಬಿಗ್ಬಾಸ್ಗೆ ಬರುವ ನಿರ್ಧಾರವನ್ನು ಒಂದೇ ದಿನದಲ್ಲಿ ತೆಗೆದುಕೊಂಡು ಅವರು ಬಿಗ್ಬಾಸ್ಗೆ ಬಂದಿರುವುದಂತೆ. ಆ ಆತುರದ ನಿರ್ಧಾರ ಅವರಿಗೆ ಗೆಲುವು ತಂದುಕೊಟ್ಟಿದೆ. ಆರನೇ ಕಂಟೆಸ್ಟೆಂಟ್ ಆಗಿ ಕಷ್ಟದಲ್ಲೇ ಕಾರ್ತಿಕ್ ಮಹೇಶ್ ಫಿನಾಲೆ ವಾರಕ್ಕೆ ಬಂದಿದ್ದರು. ಫಿನಾಲೆ ವಾರದಲ್ಲಿ ಯಾರು ಮನೆಯಿಂದ ಹೊರಗೆ ಹೋಗುತ್ತಾರೆ ಎಂದಾಗ ಬಹುತೇಕರು ಹೇಳಿದ್ದಿದ್ದು ಕಾರ್ತಿಕ್ ಹೆಸರನ್ನು ಆದರೆ ಅದೆಲ್ಲವನ್ನು ಅವರು ಸುಳ್ಳಾಗಿಸಿದ್ದಾರೆ.
ಕಾರ್ತಿಕ್ರ ಬಿಗ್ಬಾಸ್ ಪ್ರಯಾಣ ಹಲವು ಮಜಲುಗಳನ್ನು ಒಳಗೊಂಡಿತ್ತು. ಆರಂಭದಲ್ಲಿ ಅವರು ಅಸಮರ್ಥರಾಗಿ ಮನೆಗೆ ಪ್ರವೇಶ ಮಾಡಿದ್ದರು. ಆರಂಭದಲ್ಲಿ ಸಂಗೀತಾ ಜೊತೆ ಗೆಳೆತನ ಮಾಡಿ ಬೆನ್ನೆಲುಬಾಗಿದ್ದರು. ಸಂಗೀತಾ ಹಾಗೂ ಕಾರ್ತಿಕ್ ಒಳ್ಳೆಯ ಬಾಂಧವ್ಯ ಹೊಂದಿದ್ದರು. ಜೊತೆಗೆ ತನಿಷಾ ಸಹ ಕಾರ್ತಿಕ್ಗೆ ಒಳ್ಳೆಯ ಗೆಳೆಯರಾಗಿದ್ದರು. ಆರಂಭದ ಹಲವು ದಿನ ಮನೆಯ ಗಟ್ಟಿ ಸ್ಪರ್ಧಿಯಾಗಿದ್ದ ವಿನಯ್ಗೆ ಪ್ರಬಲ ಎದುರಾಳಿಯಾಗಿ ಆಡಿದ್ದರು ಕಾರ್ತಿಕ್. ವಿನಯ್ ‘ಗ್ಯಾಂಗ್’ ಅನ್ನು ಸಂಗೀತಾ ಪ್ರಬಲವಾಗಿ ಎದುರಿಸಲು ಕಾರ್ತಿಕ್ ಸಹ ಕಾರಣವಾಗಿದ್ದರು.
ಆದರೆ ಆಮೇಲೆ ಸಂಗೀತಾ ಕಾರ್ತಿಕ್ರಿಂದ ದೂರವಾದರು. ಕಾರ್ತಿಕ್ ವಿರುದ್ಧ ನಂಬಿಕೆ ದ್ರೋಹದ ಆರೋಪ ಬಂತು. ಜೊತೆಗಿದ್ದ ತನಿಷಾ ಸಹ ದೂರ ಉಳಿದರು. ನಮ್ರತಾ ಜೊತೆ ಹತ್ತಿರವಾದರೂ ಅವರ ಸ್ನೇಹ ಸಂಬಂಧವೂ ಅಲ್ಲಿ ಕಳಚಿಬಿತ್ತು. ಮನೆಯಲ್ಲಿ ಒಂಟಿಯಾಗಿದ್ದ ಕಾರ್ತಿಕ್ ಕೆಲ ವಾರ ಸ್ವಲ್ಪ ಮಂಕಾಗಿ ಹೋಗಿದ್ದರು.
ಸುದೀಪ್ ಅವರು ಸಹ ಕಾರ್ತಿಕ್ಗೆ ಈ ಬಗ್ಗೆ ಎಚ್ಚರಿಕೆ ಕೊಟ್ಟಿದ್ದರು. ಅದಾದ ಬಳಿಕ ತಮ್ಮ ಆಟ ಸುಧಾರಿಸಿಕೊಂಡ ಕಾರ್ತಿಕ್ ಫಿನಾಲೆ ವಾರಕ್ಕೆ ಮುನ್ನ ಮತ್ತೆ ಚಿಗುರಿ ನಿಂತು ವಿಜಯ ಸಾಧಿಸಿದ್ದಾರೆ. ತನ್ನ ತಾಯಿಗಾಗಿ ಒಂದು ಮನೆ ಕಟ್ಟಿಕೊಡಬೇಕು ಎಂಬ ಆಸೆಯನ್ನು ಕಾರ್ತಿಕ್ ವ್ಯಕ್ತಪಡಿಸಿದ್ದರು. ಅಂತೆಯೇ ಈಗ 50 ಲಕ್ಷ ರೂ. ಹಣ ಗೆದ್ದಿದ್ದಾರೆ. ಜೊತೆಗೆ ಒಂದು ಬ್ರಿಜಾ ಕಾರು ಸಹ ಅವರದಾಗಿದೆ. ಆರಂಭದಿಂದಲೂ ಚೆನ್ನಾಗಿಯೇ ಆಡಿಕೊಂಡು ಬಂದಿದ್ದ ಡ್ರೋನ್ ಪ್ರತಾಪ್ ಎರಡನೇ ಸ್ಥಾನ ಲಭಿಸಿದೆ.