ಬೆಂಗಳೂರು, ಜ.20 www.bengaluruwire.com : ಬೆಂಗಳೂರು ನಗರ ಜಿಲ್ಲೆಯ ಐದು ಮತ್ತು ಬೆಂಗಳೂರು ಗ್ರಾಮಾಂತರ ಜಿಲ್ಲೆಯ ನಾಲ್ಕು ತಾಲ್ಲೂಕು ಕಚೇರಿಗಳ ಮೇಲೆ ಶನಿವಾರ ಏಕಕಾಲಕ್ಕೆ ದಾಳಿ ಮಾಡಿರುವ ಲೋಕಾಯುಕ್ತದ ಪೊಲೀಸ್ ಮತ್ತು ನ್ಯಾಯಾಂಗ ವಿಭಾಗದ ಅಧಿಕಾರಿಗಳು ಶೋಧ ನಡೆಸುತ್ತಿದ್ದು ಸೋಮವಾರವೂ ಪರಿಶೀಲನೆ ಮುಂದುವರೆಯಲಿದೆ.
ಭ್ರಷ್ಟಾಚಾರ, ದುರಾಡಳಿತ, ಅವ್ಯವಹಾರಗಳು, ತಹಸೀಲ್ದಾರ್ ಗಳು ಮಧ್ಯವರ್ತಿಗಳ ಮೂಲಕ ಕೆಲಸ ಮಾಡುತ್ತಿದ್ದಾರೆ, ಜಾತಿ, ಆದಾಯ ಪ್ರಮಾಣಪತ್ರ ವಿತರಿಸುವಲ್ಲಿ ವಿಳಂಬ, ಆರ್ ಆರ್ ಟಿ (ಪಹಣಿ ತಿದ್ದುಪಡಿ) ಪ್ರಕರಣಗಳಲ್ಲಿ ವಿವಾದ ಬಗೆಹರಿಸುವಲ್ಲಿ ಎರಡು ಮೂರು ವರ್ಷವಾದರೂ ಪೂರ್ಣಗೊಳಿಸುತ್ತಿಲ್ಲ, ಖಾತೆ ಬದಲಾವಣೆ, ಪೌತಿ ಖಾತೆ ಬದಲಾವಣೆ ಹೀಗೆ ನಾನಾ ವಿಚಾರಗಳ ಬಗ್ಗೆ ಸಾರ್ವಜನಿಕರಿಂದ ಸಾಕಷ್ಟು ದೂರುಗಳಿದ್ದವು.
ಈ ದೂರುಗಳನ್ನು ಆಧರಿಸಿ ಲೋಕಾಯುಕ್ತ ಕಚೇರಿಯಲ್ಲಿ 9 ತಂಡಗಳನ್ನು ರಚಿಸಿ, ಒಂಭತ್ತು ಜನ ಜಿಲ್ಲಾ ನ್ಯಾಯಾಧೀಶರು, 9 ಎಸ್ ಪಿ ಹಾಗೂ ಡಿವೈಎಸ್ ಪಿ, ಇನ್ಸ್ ಪೆಕ್ಟರ್ ಸೇರಿದಂತೆ ಅಂದಾಜು ನೂರು ಜನ ಸಿಬ್ಬಂದಿ ಶನಿವಾರ ಮಧ್ಯಾಹ್ನ 12 ಗಂಟೆಯಿಂದ ಈ ಶೋಧ ಕಾರ್ಯ ಕೈಗೊಂಡಿದ್ದಾರೆ. ಎರಡೂ ಜಿಲ್ಲೆಗಳ ತಾಲ್ಲೂಕು ಕಚೇರಿಗಳ ಅಧಿಕಾರಿಗಳ ವಿರುದ್ಧ ಲೋಕಾಯುಕ್ತದಲ್ಲಿ 599 ಪ್ರಕರಣಗಳು ವಿಚಾರಣಾ ಹಂತದಲ್ಲಿವೆ. ಈ ಕಚೇರಿಗಳಲ್ಲಿ ಅವ್ಯವಹಾರ, ಭ್ರಷ್ಟಾಚಾರ ನಡೆಯುತ್ತಿರುವ ಕುರಿತು ಲೋಕಾಯುಕ್ತದ ಪೊಲೀಸರು ಗೋಪ್ಯ ತಪಾಸಣೆ ನಡೆಸಿ ಮಾಹಿತಿ ಸಂಗ್ರಹಿಸಿದ್ದರು.
ಪೊಲೀಸರ ವರದಿಯನ್ನು ಆಧರಿಸಿ ಈ ಕಚೇರಿಗಳ ಮೇಲೆ ದಿಢೀರ್ ದಾಳಿಮಾಡಿ ಶೋಧ ನಡೆಸುವಂತೆ ಲೋಕಾಯುಕ್ತ ನ್ಯಾಯಮೂರ್ತಿ ಬಿ.ಎಸ್. ಪಾಟೀಲ್ ಆದೇಶಿಸಿದ್ದರು.
ಲೋಕಾಯುಕ್ತ ಬಿ.ಎಸ್. ಪಾಟೀಲ ಅವರು ಕಂದಾಯ ಭವನದಲ್ಲಿರುವ ಬೆಂಗಳೂರು ಉತ್ತರ, ದಕ್ಷಿಣ ತಾಲ್ಲೂಕು ಹಾಗೂ ಯಲಹಂಕ ಕಚೇರಿಗಳಲ್ಲಿ ಕಾರ್ಯಾಚರಣೆ ಪರಿಶೀಲಿಸಿದರು.
“ಈ ಸಂದರ್ಭದಲ್ಲಿ ಬೆಂಗಳೂರು ಉತ್ತರ ತಹಸೀಲ್ದಾರ್ ಹತ್ತು ದಿನವಾದರೂ ಕೆಲಸಕ್ಕೆ ಹಾಜರಾಗಿರಲಿಲ್ಲ. ಕಚೇರಿಯಲ್ಲಿ ಸಿಬ್ಬಂದಿ ಕೇಳಿದರೆ, ಕೋರ್ಟ್ ಹೋಗಿದ್ದಾರೆ ಎಂದಿದ್ದರು. ಸಕಾಲ ಅರ್ಜಿ ಬಾಕಯಿತ್ತು, ಹಲವು ಕಡತಗಳು ಹತ್ತು ದಿನವಾದರೂ ಈ ಕಚೇರಿಯಲ್ಲಿ ಸಹಿಗೆ ಬಾಕಿಯಿತ್ತು” ಎಂದು ಲೋಕಾಯುಕ್ತ ಬಿ.ಎಸ್.ಪಾಟೀಲ್ ತಿಳಿಸಿದ್ದಾರೆ.
ಕೆಲಸದ ಅವಧಿಯಲ್ಲಿ ಯಲಹಂಕ ತಹಸೀಲ್ದಾರ್ ಕಚೇರಿ ಸಿಬ್ಬಂದಿ ಕ್ರಿಕೆಟ್- ಮೋಜು ಮಸ್ತಿ :
“ಬೆಂಗಳೂರು ದಕ್ಷಿಣ ತಹಸೀಲ್ದಾರ್ ಕಚೇರಿಯಲ್ಲಿ ಎರಡು ಸಾವಿರಕ್ಕಿಂತ ಹೆಚ್ಚು ಆರ್ ಆರ್ ಟಿ ಪ್ರಕರಣ ಬಾಕಿಯಿದ್ದು, ಯಲಹಂಕದಲ್ಲಿ ಅರ್ಧಕ್ಕರ್ಧ ಸಿಬ್ಬಂದಿಯಿರಲಿಲ್ಲ. ಗ್ರೇಡ್-2 ನಾಲ್ಕು ಜನ ಪೈಕಿ ಒಬ್ಬ ಅಧಿಕಾರಿಯೂ ಇರಲಿಲ್ಲ. ಗ್ರೇಡ್-2 ಒಬ್ಬರು ರಜೆ, ಮತ್ತೊಬ್ಬರು ಸರಿತಾ ಎಂಬ ಅಧಿಕಾರಿ ಮಧ್ಯಾಹ್ನದ ಮೇಲೆ ಕೆಲಸಕ್ಕೆ ಬಂದಿದ್ದರು. ಇನ್ನೊಂದೆಡೆ ತಹಸೀಲ್ದಾರ್ ಕಚೇರಿಯವರು ಕೆಲಸದ ಅವಧಿಯಲ್ಲಿ ಕ್ರಿಕೆಟ್ ಪಂದ್ಯಾವಳಿ ಆಡುತ್ತಿದ್ದರು. ಪ್ರೋಟ್ ಕಾಲ್ ನೆಪಹೇಳಿ ಯಲಹಂಕ ತಹಸೀಲ್ದಾರ್ ಕಚೇರಿಗೆ ಬಂದಿರಲಿಲ್ಲ. ಇಲ್ಲಿ 2423 ಗಿಂತ ಹೆಚ್ಚು ಆರ್ ಆರ್ ಟಿ ಪ್ರಕರಣ ಬಾಕಿಯಿದೆ. ಈ ಬಗ್ಗೆ ಇಲಾಖಾವಾರು, ಯೋಜನೆವಾರು ಬಾಕಿಯಿರುವ ಪ್ರಕರಣಗಳ ಬಗ್ಗೆ ಪೂರ್ಣವಾಗಿ ಕೂಲಂಕುಷವಾಗಿ ಪರಿಶೀಲನೆ ಮಾಡುತ್ತೇವೆ” ಎಂದು ಅವರು ಹೇಳಿದ್ದಾರೆ.
ಬೆಂಗಳೂರು ಉತ್ತರ, ದಕ್ಷಿಣ, ಪೂರ್ವ, ಯಲಹಂಕ ತಹಸೀಲ್ದಾರ್ ಕಚೇರಿ ವಿರುದ್ದ ಲೋಕಾಯುಕ್ತರಿಂದ ಈಗಾಗಲೇ ಸ್ವಯಂಪ್ರೇರಿತ ದೂರು ದಾಖಲಾಗಿದೆ. ಬೆಂಗಳೂರು ದಕ್ಷಿಣ ತಹಸೀಲ್ದಾರ್ ಕಚೇರಿಯಲ್ಲಿ ನೂರಕ್ಕೂ ಸಾರ್ವಜನಿಕರು ಕೆಲಸ ಆಗಿಲ್ಲ ಅಂತ ಲೋಕಾಯುಕ್ತಕ್ಕೆ ಸ್ಥಳದಲ್ಲೇ ದೂರು ನೀಡಿದರು.
ಉಪಲೋಕಾಯುಕ್ತರಾದ ಕೆ.ಎನ್.ಫಣೀಂದ್ರ ದೊಡ್ಡಬಳ್ಳಾಪುರ ಹಾಗೂ ದೇವನಹಳ್ಳಿ ತಹಸೀಲ್ದಾರ್ ಕಚೇರಿಗೆ ಭೇಟಿ ನೀಡಿ ಪರಿಶೀಲಿಸಿದರು. ಸೋಮವಾರವೂ ಲೋಕಾಯುಕ್ತ ಅಧಿಕಾರಿಗಳಿಂದ ಈ 9 ತಾಲೂಕು ಕಚೇರಿಗಳಲ್ಲಿ ಪರಿಶೀಲನೆ ನಡೆಯಲಿದೆ. ಲೋಕಾಯುಕ್ತರ ಕಚೇರಿ ಭೇಟಿಯ ವೇಳೆ ಲೋಕಾಯುಕ್ತ ಕಾರ್ಯದರ್ಶಿ ಹಾಗೂ ಹಿರಿಯ ಸಿವಿಲ್ ನ್ಯಾಯಾಧೀಶರಾದ ಶ್ರೀನಾಥ್.ಕೆ ಜೊತೆಗಿದ್ದರು.