ಬೆಂಗಳೂರು, ಡಿ.30 www.bengaluruwire.com : ರಾಜಧಾನಿಯ ಹೆಚ್.ಬಿ.ಆರ್ ಬಡಾವಣೆಯ 1ನೇ ಹಂತದ ಕಾಚರಕನಹಳ್ಳಿ ಗ್ರಾಮದ ಸರ್ವೆ ನಂ. 181, 182 ಮತ್ತು 183ರಲ್ಲಿ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ (BDA)ಕ್ಕೆ ಸೇರಿರುವ ಜಾಗದಲ್ಲಿ ಅನಧಿಕೃತವಾಗಿ ನಿರ್ಮಾಣವಾಗಿದ್ದ ಕಟ್ಟಡಗಳನ್ನು ಇಂದು ಬೆಳಗ್ಗೆ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರದ ಅಧಿಕಾರಿಗಳು ತೆರವುಗೊಳಿಸಿದರು.
ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರದ ಆಸ್ತಿ ಎಂದು ಕರ್ನಾಟಕ ರಾಜ್ಯ ಸರ್ಕಾರ 1985ರಲ್ಲಿ ಅಂತಿಮ ಅಧಿಸೂಚನೆ ಹೊರಡಿಸಿದ್ದು, ಸುಮಾರು 150 ಕೋಟಿ ರೂ. ಬೆಲೆಬಾಳುವ 2.20 ಎಕರೆ ಜಾಗವನ್ನು ಹಲವು ಅನಧಿಕೃತ ಅಂಗಡಿಗಳು ತಲೆ ಎತ್ತಿದ್ದವು. ಈ ಒತ್ತುವರಿಗಳನ್ನು ತೆರವುಗೊಳಿಸಲು, ಭದ್ರತೆಯ ಹಿತದೃಷ್ಟಿಯಿಂದ 200 ಪೊಲೀಸ್ ಅಧಿಕಾರಿಗಳು, 100 ಜನ ಕಾರ್ಮಿಕರು ಹಾಗೂ 15 ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರದ ಅಧಿಕಾರಿಗಳು ಸಮ್ಮುಖದಲ್ಲಿ ತೆರವುಗೊಳಿಸಿ ಪ್ರಾಧಿಕಾರದ ಸುಪರ್ದಿಗೆ ತೆಗೆದುಕೊಳ್ಳಲಾಯಿತು.

ಅನಧಿಕೃತ ಕಟ್ಟಡಗಳ ತೆರವು ಕಾರ್ಯಕ್ಕೂ ಮುನ್ನ ನೂತನವಾಗಿ ಬಿಡಿಎ ಅಯುಕ್ತರಾದ ಎನ್.ಜಯರಾಂ ಅವರು ಪ್ರಾಧಿಕಾರದ ಕಾನೂನು ಕೋಶದ ಅಧಿಕಾರಿಗಳೊಂದಿಗೆ ಚರ್ಚಿಸಿ, ಸಲಹೆ ಪಡೆದು, ತೆರವು ಕಾರ್ಯಕ್ಕೆ ಅಧಿಕಾರಿಗಳಿಗೆ ಸೂಚನೆ ನೀಡಿ, ಕಾರ್ಯವನ್ನು ವ್ಯವಸ್ಥಿತವಾಗಿ ನಡೆಸಲಾಗಿದೆ.






















