ಬೆಂಗಳೂರು, ಡಿ.27 www.bengaluruwire.com : ಇದೊಂಥರಾ ವಿಚಿತ್ರ ಮತ್ತು ಅಪರೂಪದ ಪ್ರಕರಣ. ರಾಜಧಾನಿ ಬೆಂಗಳೂರಿನಲ್ಲಿ ಕಾರ್ಯನಿರ್ವವಹಿಸುತ್ತಿದ್ದ ತಹಸೀಲ್ದಾರ್ ಅವರನ್ನು 9 ತಿಂಗಳಲ್ಲಿ ಬರೋಬ್ಬರಿ ಐದು ಬಾರಿ ಸಸ್ಪೆಂಡ್ ಮಾಡಲಾಗಿದೆ. ಐಎಎಸ್ ಅಧಿಕಾರಿಗಳ ನಡುವಿನ ಶೀಥಲ ಸಮರದಲ್ಲಿ ಈ ಬಗ್ಗೆ ಹೋರಾಟ ನಡೆಸಿ ಸೋತಿರುವ ತಹಸೀಲ್ದಾರ್ ಕೊನೆಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ದೂರು ನೀಡಿದ್ದಾರೆ.
ಆನೇಕಲ್ ತಾಲೂಕು ಹೇಳಿಕೇಳಿ ಕೋಟ್ಯಾಂತ ರೂಪಾಯಿ ಬೆಲೆ ಬಾಳುವ ಭೂಮಿಗಳನ್ನು ಒಳಗೊಂಡಿರುವ ಸ್ಥಳ. ಇಲ್ಲಿ ಕೆಲಸ ಮಾಡಲು ಸಾಕಷ್ಟು ಡಿಮ್ಯಾಂಡ್ ಇದೆ. ಇಂತಹ ಸ್ಥಳದಲ್ಲಿ ತಹಸೀಲ್ದಾರ್ ಗ್ರೇಡ್-1 ಹುದ್ದೆಯಲ್ಲಿ ಕೆಲಸ ಮಾಡುತ್ತಿದ್ದ ಮಾಜಿ ಸೈನಿಕರೂ ಆಗಿರುವ ಶಿವಪ್ಪ ಲಮಾಣಿ ಹಿರಿಯ ಐಎಎಸ್ ಅಧಿಕಾರಿ ಹಾಗೂ ಬೆಂಗಳೂರು ಪ್ರಾದೇಶಿಕ ಆಯುಕ್ತರಾಗಿರುವ ಖಡಕ್ ಅಧಿಕಾರಿಯೆಂದೇ ಕರೆಯುವ ಅಮ್ಲಾನ್ ಆದಿತ್ಯ ಬಿಸ್ವಾಸ್, ಕಂದಾಯ ಇಲಾಖೆ ಪ್ರಧಾನ ಕಾರ್ಯದರ್ಶಿ ರಾಜೇಂದ್ರ ಕುಮಾರ್ ಕಠಾರಿಯಾ ನಡುವಿನ ಹಳೆಯ ಶೀಥಲ ಸಮರದಿಂದ 12 ಏಪ್ರಿಲ್ 2023 ರಿಂದ ಈ 18ನೇ ತಾರೀಖು ಡಿಸೆಂಬರ್ ವರೆಗಿನ 9 ತಿಂಗಳಲ್ಲಿ ವಿವಿಧ ಕಾರಣಗಳಡಿ ಒಟ್ಟು ಐದು ಬಾರಿ ಅಮಾನತುಗೊಂಡಿದ್ದಾರೆ. ಈ ಮಾಜಿ ಸೈನಿಕರು ತಹಸೀಲ್ದಾರ್ ಹುದ್ದೆಯಿಂದ ನಿವೃತ್ತರಾಗಲು ಕೆಲವೇ ತಿಂಗಳು ಬಾಕಯಿರುವಾಗಲೇ ಸಸ್ಪೆಂಡ್ ಶಿಕ್ಷೆಗೆ ಗುರಿಯಾಗಿದ್ದಾರೆ.
ಸುಧೀರ್ಘ ಕಾನೂನು ಹೋರಾಟದಿಂದ ಬೇಸೆತ್ತ ತಹಸೀಲ್ದಾರ್ ಶಿವಪ್ಪ ಲಮಾಣಿ ಅನಿವಾರ್ಯವಾಗಿ ತಮಗೆ ಆಗುತ್ತಿರುವ ಅನ್ಯಾಯ ಹಾಗೂ ಕಿರುಕುಳ ತಪ್ಪಿಸುವಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ನವರಿಗೆ ಡಿ.21ರಂದು ಸುಧೀರ್ಘ ಪತ್ರ ಬರೆದು ದೂರು ಸಲ್ಲಿಸಿದ್ದಾರೆ. ಇದು ಸಾಲದೆಂಬಂತೆ ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್, ಕಂದಾಯ ಸಚಿವ ಕೃಷ್ಣಭೈರೇಗೌಡ, ಮುಖ್ಯ ಕಾರ್ಯದರ್ಶಿ ರಜನೀಶ್ ಗೋಯಲ್, ಕರ್ನಾಟಕ ಅನುಸೂಚಿತ ಜಾತಿ ಮತ್ತು ಅನಸೂಚಿತ ಪಂಗಡಗಳ ಆಯೋಗ ಮತ್ತು ರಾಜ್ಯ ಮಾನವ ಹಕ್ಕುಗಳ ಆಯೋಗಗಳ ಆಯುಕ್ತರಿಗೂ ಈ ಸಂಬಂಧ ದೂರು ನೀಡಿದ್ದಾರೆ.
ಮುಖ್ಯಮಂತ್ರಿಗಳಿಗೆ ಬರೆದ ಸುಧೀರ್ಘ ಪತ್ರದಲ್ಲಿ ಲಮಾಣಿಯವರು, “ಈ ಹಿಂದೆ ಬಳ್ಳಾರಿ ಜಿಲ್ಲೆ, ಸಂಡೂರು ತಾಲ್ಲೂಕು ತಹಶೀಲ್ದಾರ್ ಆಗಿ ಕರ್ತವ್ಯ ನಿರ್ವಹಿಸುತ್ತಿರುವಾಗ ಹಾಲಿ ಪ್ರಾದೇಶಿಕ ಆಯುಕ್ತರು ಬೆಂಗಳೂರು ವಿಭಾಗದಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಅಮ್ಲಾನ್ ಆದಿತ್ಯ ಬಿಸ್ಮಾಸ್ ರವರು ಬಳ್ಳಾರಿ ಜಿಲ್ಲಾಧಿಕಾರಿಗಳಾಗಿ ಕಾರ್ಯನಿರ್ವಹಿಸುತ್ತಿದ್ದಾಗಿನಿಂದಲು ನನ್ನನ್ನು ಹೀನಾಯವಾಗಿ ಜಾತಿ ನಿಂದನೆ ಮಾಡಿ ಬೈದು ನಿಂದಿಸುತ್ತಿದ್ದು ವಿನಾಕಾರಣ ಉದ್ದೇಶಪೂರ್ವಕವಾಗಿ ತೊಂದರೆ ಕೊಡುತ್ತಿರುತ್ತಾರೆ.”
“ರಾಜೇಂದರ್ ಕುಮಾರ್ ಕಟಾರಿಯಾ ರವರು ಸರ್ಕಾರದ ಪ್ರಧಾನ ಕಾರ್ಯದರ್ಶಿಗಳು ಕಂದಾಯ ಇಲಾಖೆ ರವರುಗಳು ಸಹ ಉದ್ದೇಶಪೂರ್ವಕವಾಗಿ ತೊಂದರೆ ಕೊಡುತ್ತಿರುತ್ತಾರೆ. ವಿನಾಕಾರಣ ನನಗೆ ಮತ್ತು ನನ್ನ ಕುಟುಂಬಕ್ಕೆ ಮಾನಸಿಕ ಹಿಂಸೆಯಿಂದ ಏನಾದರು ಅಹಿತಕರ ಘಟನೆಗಳು ನಡೆದರೆ ಇವರಿಬ್ಬರೇ ನೇರ ಹೊಣೆಗಾರರಾಗಿರುತ್ತಾರೆ” ಎಂದು ಅಮಾನತುಗೊಂಡಿರುವ ಶಿವಪ್ಪ ಲಮಾಣಿ ಸಿಎಂಗೆ ನೀಡಿರುವ ದೂರಿನಲ್ಲಿ ತಿಳಿಸಿದ್ದಾರೆ.
ಲಮಾಣಿ ಅಮಾನತು ಪ್ರಕರಣ ಹೀಗಿದೆ :
12-04-2023 ಸೇವೆಯಿಂದ ಅಮಾನತು ಇದನ್ನು ಪ್ರಶ್ನಿಸಿ ಹೈಕೋರ್ಟ್ ನಲ್ಲಿ ಮೇಲ್ಮನವಿ ಸಲ್ಲಿಸಿದ್ದು, ನ್ಯಾಯಾಲಯ ವಿಚಾರಣೆ ನಡೆಸಿ 10-08-2023ರಂದು ಶಿವಪ್ಪ ಲಮಾಣಿ ಅಮಾನತು ಆದೇಶಕ್ಕೆ ತಡೆಯಾಜ್ಞೆ ನೀಡುತ್ತೆ.
ಮತ್ತೊಂದು ಪ್ರಕರಣದಲ್ಲಿ ಸರ್ಕಾರದ 28-07-2023ರ ಅಮಾನತು ಆದೇಶಕ್ಕೆ ಪುನಃ ಲಮಾಣಿಯವರು ಹೈಕೋರ್ಟ್ ಮೆಟ್ಟಿಲೇರಿದಾಗ 29-09-2023ರಂದು ಕೋರ್ಟ್ ತಡೆಯಾಜ್ಞೆ ಕೊಟ್ಟಿದೆ. ಆ ಬಳಿಕ ಆನೇಕಲ್ ತಾಲೂಕಿನ ಗ್ರೇಡ್-1 ತಹಸೀಲ್ದಾರ್ ಶಿವಪ್ಪ ಎಚ್.ಲಮಾಣಿ ಸರ್ಕಾರದ ಆದೇಶಕ್ಕೆ ತಡೆಯಾಜ್ಞೆ ಸಿಕ್ಕಿದ ದಿನವೇ ಅಂದರೆ 29-09-2023ರಂದೇ ಪ್ರಭಾರ ತಹಸೀಲ್ದಾರ್ ಕೆಲಸಕ್ಕೆ ವರದಿ ಮಾಡಿಕೊಳ್ಳುತ್ತಾರೆ.
ಹೀಗೆ ಕೆಲಸಕ್ಕೆ ವರದಿ ಮಾಡಿಕೊಂಡ ಬಗ್ಗೆ ಕಂದಾಯ ಇಲಾಖೆ ಪ್ರಧಾನ ಕಾರ್ಯದರ್ಶಿ ರಾಜೇಂದ್ರ ಕುಮಾರ್ ಕಠಾರಿಯಾ, ಬೆಂಗಳೂರು ವಿಭಾಗದ ಪ್ರಾದೇಶಿಕ ಆಯುಕ್ತರಾದ ಆಮ್ಲಾನ್ ಆದಿತ್ಯ ಬಿಸ್ವಾಸ್, ಜಿಲ್ಲಾಧಿಕಾರಿ ದಯಾನಂದ್, ಬೆಂಗಳೂರು ದಕ್ಷಿಣ ಉಪವಿಭಾಗಾಧಿಕಾರಿಗಳಿಗೆ ಸಿಟಿಸಿಯ ಪ್ರತಿಯನ್ನು ನೀಡಿ ಸ್ವೀಕೃತಿ ಪತ್ರ ಪಡೆಯುತ್ತಾರೆ. ಅದಾದ ಕೇವಲ 13 ದಿನಗಳಲ್ಲಿ ಅಂದರೆ 11-10-2023ರಂದು ಹಳೆಯ ಪ್ರಕರಣವೊಂದಕ್ಕೆ ಸಂಬಂಧಿಸಿದಂತೆ ಸರ್ಕಾರ ಪುನಃ ಇವರನ್ನು ಅಮಾನತುಗೊಳಿಸುತ್ತೆ.
08-01-2021 ರಂದು ಸರ್ಕಾರ ನೀಡಿದ ಆದೇಶದ ವಿರುದ್ಧ ಲಮಾಣಿಯವರು ಹೈಕೋರ್ಟ್ ನಲ್ಲಿ ಮೇಲ್ಮನವಿ ಸಲ್ಲಿಸಿದ್ದರು, ಈ ಪ್ರಕರಣದ ಬಗ್ಗೆ ವಿಚಾರಣೆ ನಡೆದು ನ್ಯಾಯಾಲಯವು 17-03-2021ರಂದು ಸರ್ಕಾರದ ಆದೇಶವನ್ನು ರದ್ದುಪಡಿಸಿರುತ್ತೆ. ಆದರೆ ಹೈಕೋರ್ಟ್ ಆದೇಶವನ್ನು ಪರಿಗಣಿಸದೇ ಲಮಾಣಿಯವರನ್ನು ಟಾರ್ಗೆಟ್ ಮಾಡಿ ಹಳೆಯ ಪ್ರಕರಣವನ್ನು ಪುನಃ ನೆಪವಾಗಿಟ್ಟುಕೊಂಡು 11-10-2023 ಅವರನ್ನು ಸೇವೆಯಿಂದ ಸಸ್ಪೆಂಡ್ ಮಾಡುತ್ತಾರೆ.
ಸರ್ಕಾರದ ಈ ನಡುವಳಿಕೆ ಖಂಡನೀಯ, ಈ ಬಗ್ಗೆ ಪರಿಶೀಲಿಸುವಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಬರೆದ ಪತ್ರದಲ್ಲಿ ಮನವಿ ಮಾಡಿದ್ದಾರೆ. ಇಷ್ಟಕ್ಕೆ ಸುಮ್ಮನಾಗದ ಶಿವಪ್ಪ ಲಮಾಣಿ, 11-10-2023ರಂದು ಸರ್ಕಾರ ಅಮಾನತು ಮಾಡಿದ ಆದೇಶದ ವಿರುದ್ಧ ಮತ್ತೆ ಕರ್ನಾಟಕ ಆಡಳಿತ ನ್ಯಾಯಮಂಡಳಿ (KAT) ಕದ ತಟ್ಟುತ್ತಾರೆ. ಅಲ್ಲಿ ಅವರು ಸಲ್ಲಿಸಿದ ಮೇಲ್ಮನವಿ ಬಗ್ಗೆ ವಿಚಾರಣೆ ನಡೆಸಿದ ನ್ಯಾಯಾಲಯ 17-10-2023 ರಂದು ಕೆಎಟಿ ಸರ್ಕಾರದ ಅಮಾನತು ಆದೇಶಕ್ಕೆ ತಡೆಯಾಜ್ಞೆ ನೀಡಿತ್ತು. ಅದೇ ದಿನವೇ ಲಮಾಣಿ ಆನೇಕಲ್‌ನಲ್ಲಿನ ಗ್ರೇಡ್-1 ತಹಸೀಲ್ದಾರ್ ಹುದ್ದೆ ವಹಿಸಿಕೊಳ್ತಾರೆ.
ಸಸ್ಪೆಂಡ್ ಮೇಲೆ ಸಸ್ಪೆಂಡ್ ಶಿಕ್ಷೆ :
ಆದರೆ ದುರದೃಷ್ಟವಶಾತ್ ಲಮಾಣಿ ಅವರ ಟೈಮ್ ಚೆನ್ನಾಗಿರಲಿಲ್ಲ ಅನ್ಸುತ್ತೆ. ಕಂದಾಯ ಇಲಾಖೆ ಅಧೀನ ಕಾರ್ಯದರ್ಶಿ ಮೇಲಿನ ಅಧಿಕಾರಿ ಫರ್ಮಾನಿನ ಮೇರೆಗೆ 18-12-2023ರಂದು ಮತ್ತೆ ಸಸ್ಪೆಂಡ್ ಮಾಡುತ್ತಾರೆ. ಈ ಬಗ್ಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಬರೆದ ಪತ್ರದಲ್ಲಿ ಉಲ್ಲೇಖಿಸಿರುವ ತಹಸೀಲ್ದಾರ್ ಶಿವಪ್ಪ ಲಮಾಣಿ, “ಸರ್ಕಾರದ ನೋಟಿಸ್ ಗೆ ಯಾವುದೇ ಸಮಜಾಯುಷಿ ನೀಡದೆ, ಸರ್ಕಾರದ ಲಿಖಿತ ಸೂಚನೆಗಳನ್ನು ಧಿಕ್ಕರಿಸಿ, ತಾತ್ಸಾರ ಮನೋಭಾವನೆ ಹಾಗೂ ನಿರ್ಲಕ್ಷತೆ ಹೊಂದಿರುವ ಸದರಿ ಅಧಿಕಾರಿಯು ಕರ್ತವ್ಯ ಪಾಲನೆಯಲ್ಲಿ ನಿರ್ಲಕ್ಷ್ಯವನ್ನು ರೂಢಿಗತವಾಗಿ ಮುಂದುವರೆಸಿಕೊಂಡು ಬಂಧಿರುವ ಆರೋಪಕ್ಕೆ ಸಂಬಂಧಿಸಿದಂತೆ ಕರ್ನಾಟಕ ಸೇವಾ (ವರ್ಗೀಕರಣ ನಿಯಂತ್ರಣ ಮತ್ತು ಮೇಲ್ಮನವಿ) ನಿಯಮಾವಳಿ 1957 ರ ನಿಯಮ 10(ಡಿ) ಅನ್ವಯ ಇಲಾಖಾ ವಿಚಾರಣೆ ಕಾಯ್ದಿರಿಸಿ ತಕ್ಷಣದಿಂದ ಜಾರಿಗೆ ಬರುವಂತೆ ಸೇವೆಯಿಂದ ಅಮಾನತುಗೊಳಿಸಿ ಆದೇಶಿಸಿರುತ್ತಾರೆ” ಎಂದು ಪತ್ರದಲ್ಲಿ ಉಲ್ಲೇಖಿಸಿದ್ದಾರೆ.
ಶಿವಪ್ಪ ಲಮಾಣಿ ನಿಜಕ್ಕೂ ಹರಕೆಯ ಕುರಿಯಾದ್ರಾ? :
ಈ ವಿಚಾರದಲ್ಲಿ ಶಿವಪ್ಪ ಲಮಾಣಿ ನಿಜಕ್ಕೂ ಹರಕೆಯ ಕುರಿಯಾ? ಅಥವಾ ಖಡಕ್ ಐಎಎಸ್ ಅಧಿಕಾರಿಗಳಾದ ಅಮ್ಲಾನ್ ಆದಿತ್ಯ ಬಿಸ್ವಾಸ್ ಹಾಗೂ ಸರ್ಕಾರಕ್ಕೆ ಹಲವು ತನಿಖೆಗಳಲ್ಲಿ ಪರಿಣಾಮಕಾರಿ ವರದಿಗಳನ್ನು ನೀಡಿ ಹೆಸರುವಾಸಿಯಾಗಿರುವ ರಾಜೇಂದ್ರ ಕುಮಾರ್ ಕಟಾರಿಯಾ, ಲಮಾಣಿ ವಿರುದ್ಧ ನೈಜ ಆರೋಪಗಳು, ಭ್ರಷ್ಟಾಚಾರ, ಕರ್ತವ್ಯ ಲೋಪದ ಹಿನ್ನಲೆಯಲ್ಲಿ ಕ್ರಮ ಕೈಗೊಂಡಿದ್ದಾರಾ ಎಂಬ ಬಗ್ಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ತನಿಖೆಗೆ ಆದೇಶಿಸಿದಲ್ಲಿ ಸತ್ಯ ಹೊರಬರಬಹುದಾದ ಸಾಧ್ಯೆತೆಯಿದೆ.
ಈ ಪ್ರಕರಣ ಕುರಿತಂತೆ ಕಂದಾಯ ಸಚಿವ ಕೃಷ್ಣಭೈರೇಗೌಡ ಹಾಗೂ ಕಂದಾಯ ಇಲಾಖೆ ಪ್ರಧಾನ ಕಾರ್ಯದರ್ಶಿ ರಾಜೇಂದ್ರ ಕುಮಾರ್ ಕಠಾರಿಯಾ ಅವರನ್ನು ಸಂಪರ್ಕಿಸಲು ಪ್ರಯತ್ನಿಸಿದರೂ ಪ್ರತಿಕ್ರಿಯೆಗೆ ಲಭ್ಯರಾಗಲಿಲ್ಲ.