ಬೆಂಗಳೂರು, ಡಿ.26 www.bengaluruwire.com : ನಗರ ಸ್ಥಳೀಯ ಸಂಸ್ಥೆಯಾದ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ವ್ಯಾಪ್ತಿಯ 8 ವಲಯಗಳಲ್ಲಿ ಒಟ್ಟಾರೆ ಸಾವಿರಾರು ಕುಡಿಯುವ ನೀರು ಶುದ್ಧೀಕರಣ ಘಟಕ (RO Plants) ಗಳನ್ನು ಪಾಲಿಕೆ ವಿವಿಧ ಕೇಂದ್ರ, ರಾಜ್ಯ ಸರ್ಕಾರದ ಅನುದಾನಗಳಿಂದ ಸ್ಥಾಪಿಸಿದೆ. ಆದರೂ ಈ ಘಟಕಗಳನ್ನು ಸ್ಥಳೀಯ ವಾರ್ಡ್ ನಲ್ಲಿನ ಜನಪ್ರತಿನಿಧಿಗಳ ಹಿಂಬಾಲಕರೋ, ಪರಿಚಯಸ್ಥರೋ ನಿರ್ವಹಣೆ ಮಾಡುತ್ತಿದ್ದರೂ, ಪಾಲಿಕೆಗೆ ಇದರ ಮೇಲೆ ಯಾವುದೇ ನಿಯಂತ್ರಣವನ್ನೇ ಹೊಂದಿಲ್ಲ. ಈ ಘಟಕಗಳಿಂದ ಪಾಲಿಕೆಗೆ ನಯಾಪೈಸೆಯೂ ಲಾಭವಿಲ್ಲ.
ಇದೇ ಕಾರಣಕ್ಕೆ ಬಿಬಿಎಂಪಿಯ ಮುಖ್ಯ ಆಯುಕ್ತರಾದ ತುಷಾರ್ ಗಿರಿನಾಥ್ ಎಲ್ಲಾ ವಲಯಗಳ ಆಯುಕ್ತರಿಗೆ ಆಯಾ ವಲಯ ವ್ಯಾಪ್ತಿಯಲ್ಲಿ ಕೇಂದ್ರ ಮತ್ತು ರಾಜ್ಯ ಸರ್ಕಾರ, ಪಾಲಿಕೆ ಅನುದಾನಗಳಿಂದ ಬೋರ್ ವೆಲ್ ಕೊರೆಯಿಸಿ, ನೀರು ಶುದ್ಧೀಕರಣ ಘಟಕ ಸ್ಥಾಪನೆಯಾಗಿರುವುದರ ಬಗ್ಗೆ ನಿಖರ ಮಾಹಿತಿ ಸಂಗ್ರಹಿಸುವಂತೆ ಖಡಕ್ ಸೂಚನೆ ನೀಡಿದ್ದಾರೆ. ಇದಲ್ಲದೆ ಈ ಮಾಹಿತಿಯ ಆಧಾರದ ಮೇಲೆ ಟೆಂಡರ್ ಕರೆದು ಅದರಲ್ಲಿ ಯಶಸ್ವಿಯಾದ ಬಿಡ್ ದಾರರಿಗೆ ನೀರು ಶುದ್ಧೀಕರಣ ಘಟಕದ ಕಾರ್ಯಾಚರಣೆ ಮತ್ತು ನಿರ್ವಹಣೆಯನ್ನು ನೀಡಲು ಆದೇಶಿಸಿದ್ದಾರೆ.
ಇಷ್ಟು ವರ್ಷಗಳ ಕಾಲ ಕೋಟ್ಯಾಂತರ ರೂಪಾಯಿ ಹಣ ಕರ್ಚು ಮಾಡಿದರೂ ಎಷ್ಟೋ ಕಡೆಗಳಲ್ಲಿ ಪಾಲಿಕೆ ಹಣ ಕರ್ಚಾಗುತ್ತಿದ್ದರೂ ಸೂಕ್ತ ರೀತಿಯಲ್ಲಿ ಘಟಕಗಳು ನಿರ್ವಹಣೆ ಆಗುತ್ತಿರಲಿಲ್ಲ. ಕೆಲವು ಕಡೆಗಳಲ್ಲಿ ನೀರಿನ ಗುಣಮಟ್ಟದ ಬಗ್ಗೆ ಸಾಕಷ್ಟು ದೂರುಗಳಿದ್ದವು. ಇನ್ನು ಕೆಲವು ಕಡೆಗಳಲ್ಲಿ ಸರ್ಕಾರಿ ದಾಖಲೆ ಗಳಲ್ಲಿ ಮಾತ್ರ ಆರ್ ಪ್ಲಾಂಟ್ ಮಾಡಲಾಗಿತ್ತೇ ವಿನಃ ಭೌತಿಕವಾಗಿ ನೀರು ಶುದ್ಧೀಕರಣ ಘಟಕಗಳು ಅಸಲಿಗೇ ಸ್ಥಾಪನೆಯಾಗುತ್ತಲೇ ಇರಲಿಲ್ಲ. ಎಷ್ಟೋ ಘಟಕಗಳು ನಿರ್ವಹಣೆ ಕೊರತೆಯಿಂದ ಶಾಶ್ವತವಾಗಿ ಮುಚ್ಚಿ ಹೋಗಿವೆ. ಆದರೆ ಈ ಬಗ್ಗೆ ಬಿಬಿಎಂಪಿ ಬಳಿ ಅಧಿಕೃತ ದಾಖಲೆಗಳೇ ಇಲ್ಲ.
ಆರ್ ಒ ಘಟಕ ಅಕ್ರಮಗಳ ಬಗ್ಗೆ ಜಾರಿ ನಿರ್ದೇಶನಾಲಯದಿಂದ ತನಿಖೆ :
ಹೀಗಾಗಿ ಈ ಬಗ್ಗೆ ಬಿಬಿಎಂಪಿ ಆಡಳಿತ ಪಕ್ಷದ ಮಾಜಿ ನಾಯಕ ಎನ್.ಆರ್.ರಮೇಶ್ ಈ ಹಿಂದೆ ಬೆಂಗಳೂರಿನಲ್ಲಿ ಪಾಲಿಕೆ ವ್ಯಾಪ್ತಿಯಲ್ಲಿ ಸರ್ಕಾರ ಮತ್ತು ಪಾಲಿಕೆ ಅನುದಾನದಿಂದ ನಿರ್ಮಾಣವಾಗಿರುವ ನೀರು ಶುದ್ಧೀಕರಣ ಘಟಕ ನಿರ್ಮಾಣ, ನಿರ್ವಹಣೆ ಹಾಗೂ ಗುಣಮಟ್ಟದಲ್ಲಿ ಅಕ್ರಮ ನಡೆದಿರುವ ಬಗ್ಗೆ ಜಾರಿ ನಿರ್ದೇಶನಾಲಯ (Enforcement Directorate- ED) ಕ್ಕೆ ದೂರು ನೀಡಿದ್ದರು. ಈ ಕುರಿತಂತೆ ಬಿಬಿಎಂಪಿ ಮುಖ್ಯ ಪ್ರಧಾನ ಅಭಯಂತರರು ಈ ವರ್ಷದ ವಿಧಾನಸಭೆ ಚುನಾವಣೆಗೆ ಮುನ್ನ ಪಾಲಿಕೆಯ ವ್ಯಾಪ್ತಿಯಲ್ಲಿನ ಆರ್ ಒ ಘಟಕಗಳ ಮಾಹಿತಿಯನ್ನು ಹಾಗೂ ಕೆಲವು ಸಂಬಂಧಿಸಿದ ದಾಖಲೆಗಳನ್ನು ಜಾರಿ ನಿರ್ದೇಶನಾಲಯದ ತನಿಖೆಗಾಗಿ ನೀಡಿದ್ದರು, ಈ ಕುರಿತಂತೆ ಇನ್ನೂ ಕೂಡ ತನಿಖೆ ಮುಂದುವರಿದೆದೆ.
ಪಾಲಿಕೆಯ ವಲಯ ವ್ಯಾಪ್ತಿಯ ಸಂಬಂಧಿಸಿದ ಎಂಜಿನಿಯರ್ ಗಳು ಆಮೆಗತಿಯಲ್ಲಿ ನೀರಿನ ಘಟಕಗಳ ಮಾಹಿತಿ, ದಾಖಲೆಗಳನ್ನು ಹಲವು ತಿಂಗಳುಗಳಿಂದ ಇನ್ನು ಜಾರಿ ನಿರ್ದೇಶನಾಲಯಕ್ಕೆ ನೀಡುತ್ತಲೇ ಇದ್ದಾರೆ. ನಗರದಲ್ಲಿ ಬಿಬಿಎಂಪಿ ವ್ಯಾಪ್ತಿಯಲ್ಲಿ ಪಾಲಿಕೆ ವಿವಿಧ ಅನುದಾನಗಳಿಂದ ನಿರ್ವಹಿಸಿದ ಆರ್ ಒ ಪ್ಲಾಂಟ್ ಗಳ ಕುರಿತಂತೆ ಪಾಲಿಕೆ ಮುಖ್ಯ ಅಭಿಯಂತರ ಪ್ರಹ್ಲಾದ್ ಅವರಿಗೆ ಈ ಬಗ್ಗೆ ಪೂರ್ಣ ಮಾಹಿತಿಯೇ ಇಲ್ಲದಿರುವುದು ನಿಜಕ್ಕೂ ದುರಂತ.
ಆರ್ ಒ ಘಟಕ ಪಾಲಿಕೆ ನಿಯಂತ್ರಣಕ್ಕೆ ಪಡೆಯಲು ಆರ್ ಆರ್ ನಗರ ವಲಯ ಪ್ರಯತ್ನ :
ಇನ್ನೊಂದೆಡೆ 8 ವಲಯಗಳ ಪೈಕಿ ರಾಜರಾಜೇಶ್ವರಿ ನಗರ ವ್ಯಾಪ್ತಿಯಲ್ಲಿ ಜಾಲಹಳ್ಳಿ, ಜೆಪಿ ಪಾರ್ಕ್, ಯಶವಂತಪುರ, ಎಚ್ಎಂಟಿ, ಲಕ್ಷ್ಮಿದೇವಿನಗರ, ಲಗ್ಗೆರೆ, ಕೊಟ್ಟಿಗೆಪಾಳ್ಯ, ಜ್ಞಾನಭಾರತಿ, ರಾಜರಾಜೇಶ್ವರಿನಗರ, ದೊಡ್ಡಬಿದರಕಲ್ಲು, ಹೇರೋಹಳ್ಳಿ, ಉಲ್ಲಾಳು, ಕೆಂಗೇರಿ ಹಾಗೂ ಹೆಮ್ಮಿಗೆಪುರ ವಾರ್ಡ್ ಗಳ ವ್ಯಾಪ್ತಿಯಲ್ಲಿರುವ 153 ನೀರು ಶುದ್ಧೀ ಕರಣ ಘಟಕಗಳ ವಾರ್ಷಿಕ ಕಾರ್ಯಾಚರಣೆ ಮತ್ತು ನಿರ್ವಹಣೆಯನ್ನು ಆಯಾ ವಾರ್ಡ್ ನಿವಾಸಿಯಾದವರಿಗೆ ವಹಿಸಲು ದರಪಟ್ಟಿ (ಕೊಟೇಶನ್) ಕರೆಯಲಾಗಿದೆ. ಇಷ್ಟು ದಿನಗಳ ವರೆಗೆ ಸರ್ಕಾರದ ಹಣದಲ್ಲಿ ನಿರ್ಮಿಸಿರುವ ಆರ್ ಒ ಪ್ಲಾಂಟ್ ಗಳು ಕೆಟ್ಟು ಹೋದರು, ಅಲ್ಲಿ ಗುಣಮಟ್ಟದ ನೀರು ಬರದಿದ್ದರೂ ಅದನ್ನು ನಿರ್ವಹಿಸುತ್ತಿದ್ದವರು ತಲೆ ಕೆಡೆಸಿಕೊಳ್ಳುತ್ತಿರಲಿಲ್ಲ. ಏಕೆಂದರೆ ಪಾಲಿಕೆ ಬಳಿ ಆ ನೀರು ಶುದ್ಧೀಕರಣ ಘಟಕ ನಡೆಸುತ್ತಿದ್ದವರನ್ನು ನಿಯಂತ್ರಿಸಲು ಸೂಕ್ತ ಮಾರ್ಗಸೂಚಿ, ನಿಯಮಗಳಿರಲಿಲ್ಲ.
ಆದರೆ ಇದೀಗ ಬಿಬಿಎಂಪಿ ವ್ಯಾಪ್ತಿಯಲ್ಲಿನ ಸಾರ್ವಜನಿಕ ಆರ್ ಓ ಪ್ಲಾಂಟ್ ಅನ್ನು ಪಾಲಿಕೆ ಟೆಂಡರ್ ಕರೆದು ಸೂಕ್ತ ಷರತ್ತು, ಮಾರ್ಗಸೂಚಿಗಳನ್ನು ವಿಧಿಸಿ ಅರ್ಹರಾದವರಿಗೆ ಗುತ್ತಿಗೆ ನೀಡುವ ಮೂಲಕ ಹಳಿತಪ್ಪಿದ ವ್ಯವಸ್ಥೆಯನ್ನು ಸರಿದಾರಿಗೆ ತರುವಲ್ಲಿ ರಾಜರಾಜೇಶ್ವರಿ ನಗರ ವಲಯದ ಮೊತ್ತ ಮೊದಲ ಹೆಜ್ಜೆಯಿಟ್ಟಿದೆ. ಆದರೆ ಉಳಿದ ವಲಯಗಳಲ್ಲಿ ಹಳೆ ವ್ಯವಸ್ಥೆಯಿನ್ನೂ ಮುಂದುವರೆದಿದೆ. ಆರ್ ಆರ್ ನಗರ ವಲಯದಲ್ಲಿ 153 ಆರ್ ಒ ಪ್ಲಾಂಟ್ ಗಳ ವಿಳಾಸವನ್ನು ಭೌಗೋಳಿಕ ಮಾಹಿತಿ ಆಧಾರಿತ ವ್ಯವಸ್ಥೆಯ ಮೂಲಕ ತೆಗೆದುಕೊಳ್ಳಲಾಗಿದ್ದು, ಮುಂದಿನ ದಿನಗಳಲ್ಲಿ ಸಾಮಾನ್ಯ ಜನರು ತಮ್ಮ ಹತ್ತಿರದ ಆರ್ ಒ ಪ್ಲಾಂಟ್ ಗಳನ್ನು ಸುಲಭವಾಗಿ ಗುರುತಿಸಲು ಸಾಧ್ಯವಾಗುವಂತೆ ಆ ಮಾಹಿತಿಯನ್ನು ಪಾಲಿಕೆಯು ತನ್ನ ವೆಬ್ ಸೈಟ್ ನಲ್ಲಿ ನೀಡಲಿದೆ. ಆ ನಿಟ್ಟಿನಲ್ಲಿ ಆರ್ ಆರ್ ನಗರ ವಲಯ ಆಯುಕ್ತರು ಕ್ರಮ ವಹಿಸಿದ್ದಾರೆ.
ಆರ್ ಒ ಪ್ರತಿ ಲೀ. ನೀರಿನ ದರ 5 ರೂ.ಗೆ ನಿಗದಿ :
ಬೆಂಗಳೂರಿನ ರಾಜಾಜಿನಗರ, ವಿಜಯನಗರ, ಮಹಾಲಕ್ಷ್ಮಿ ಲೇಔಟ್ ಸೇರಿದಂತೆ ಹಲವು ವಿಧಾನಸಭಾ ಕ್ಷೇತ್ರಗಳಲ್ಲಿ ನೀರು ಶುದ್ಧೀಕರಣ ಘಟಕಗಳಿಂದ ಪಡೆಯುವ ನೀರಿನ ದರವನ್ನು ಜುಲೈ 15ರಿಂದ ಬೆಲೆ ಏರಿಕೆ ಮಾಡಲಾಗಿದ್ದು, 5 ರೂ. ನ ಎರಡು ನಾಣ್ಯಗಳನ್ನು ಬಳಸಿ 20 ಲೀಟರ್ ನೀರು ತುಂಬಿಸಿಕೊಳ್ಳಬೇಕಾದ ಸ್ಥಿತಿ ನಿರ್ಮಾಣವಾಗಿದೆ. ಆರಂಭದಲ್ಲಿ 2 ರೂಪಾಯಿ ನಿಗದಿ ಮಾಡಲಾಗಿತ್ತು. ಅಂದರೆ 2 ರೂಪಾಯಿ ನಾಣ್ಯ ಹಾಕಿ 20 ಲೀಟರ್ ನೀರು ತುಂಬಿಸಿಕೊಳ್ಳಬೇಕಿತ್ತು. ನಂತರ 5 ರೂಪಾಯಿಗೆ ಏರಿಸಲಾಯಿತು. ಆದರೆ ಜುಲೈ 15ರಂದ ಏಕಾಏಕಿ 10ರೂಪಾಯಿಗೆ ಹೆಚ್ಚಳ ಮಾಡಲಾಗಿದೆ. ಈ ಮಧ್ಯೆ ರಾಜರಾಜೇಶ್ವರಿ ನಗರ ವಲಯದಲ್ಲಿ 5 ವಾರ್ಡ್ ಗಳಲ್ಲಿನ 80 ಆರ್ ಒ ಪ್ಲಾಂಟ್ ಗೆ ಕರೆದಿರುವ ಟೆಂಡರ್ ನಲ್ಲಿ ಪಾಲಿಕೆಯಿಂದ ಶುದ್ಧ ನೀರಿನ ದರವನ್ನು ಪ್ರತಿ ಲೀಟರ್ ಗೆ 25 ಪೈಸೆಯನ್ನು ನಿಗದಿಮಾಡಲಾಗಿದ್ದು, 20 ಲೀಟರ್ ನೀರಿಗೆ 5 ರೂ. ದರವಿರಲಿದೆ.
ಟೆಂಡರ್ ದಾಖಲೆಯಲ್ಲೇನಿದೆ? :
ಟೆಂಡರ್ ದಾಖಲೆಯಲ್ಲಿ, ಆರ್ ಒ ಘಟಕದ ಕಾರ್ಯಾಚರಣೆ ಮತ್ತು ನಿರ್ವಹಣೆಯನ್ನು ಆಯಾ ವಾರ್ಡ್ ಸ್ಥಳೀಯ ನಿವಾಸಿಯಾಗಿದ್ದು, ಆತ ಶಾಶ್ವತವಾಗಿ ಕರ್ನಾಟಕದಲ್ಲಿ ನೆಲಸಿರಬೇಕು, ನೀರು ಘಟಕದ ಬಗ್ಗೆ ಬಿಬಿಎಂಪಿಯಲ್ಲಿ ದೂರು ದಾಖಲಾದ 4 ಗಂಟೆಯ ಒಳಗೆ ಅದನ್ನು ನಿರ್ವಹಿಸದಿದ್ದರೆ, ಪ್ರತಿ ದೂರುಗಳಿಗೆ ಪ್ರತಿಸ್ಪಂದಿಸದ ಪ್ರಕರಣಗಳಿಗೆ ತಲಾ 500 ರೂ. ದಂಡ ವಿಧಿಸಲು ಟೆಂಡರ್ ಷರತ್ತುಗಳನ್ನು ತಿಳಿಸಲಾಗಿದೆ. ದಿನದ 24 ಗಂಟೆಯೂ ಮೂರು ಶಿಫ್ಟ್ ಗಳಲ್ಲಿ ಈ ಘಟಕಗಳು ರಿಪೇರಿ ಮಾಡುವ ಬಗ್ಗೆ ಕ್ರಮವಹಿಸಬೇಕು. ಪ್ರತಿ ತಿಂಗಳು ಆಯಾ ಘಟಕಗಳ ಯಶಸ್ವಿ ಬಿಡ್ ದಾರರು ನೀರಿನ ಗುಣಮಟ್ಟದ ಬಗ್ಗೆ ಪ್ರಯೋಗಾಲಯದಿಂದ ಪರೀಕ್ಷೆ ನಡೆಸಿ ಆರ್ ಆರ್ ನಗರ ವಲಯ ಸಂಬಂಧಿಸಿದ ಎಂಜಿನಿಯರ್ ಗಳಿಗೆ ಸಲ್ಲಿಸಬೇಕು. ಅಲ್ಲದೆ ಆರ್ ಪ್ಲಾಂಟ್ ಸೂಕ್ತ ರೀತಿ ಕಾರ್ಯನಿರ್ವಹಿಸಿ, ಗುಣಮಟ್ಟ ಹಾಗೂ ಸುರಕ್ಷಿತ ನೀರು ಸಾರ್ವಜನಿಕರಿಗೆ ವಿತರಿಸಲು ಅನುವಾಗವಂತೆ ವೈಜ್ಞಾನಿಕವಾಗಿ ನೀರು ಶುದ್ಧೀಕರಣ ಘಟಕವನ್ನು ಕಾರ್ಯಾಚರಣೆ ಮತ್ತು ನಿರ್ವಹಣೆ ಮಾಡುವ ನಿಟ್ಟಿನಲ್ಲಿ ಅಮೂಲಾಗ್ರವಾಗಿ ಷರತ್ತುಗಳನ್ನು ವಿಧಿಸಲಾಗಿದೆ. ಡಿ.27ರಿಂದ ಬಿಡ್ ದಾಖಲೆಗಳನ್ನು ವಿತರಿಸುತ್ತಿದ್ದು, ಜನವರಿ 4ರಂದು ಕೊಟೇಶನ್ ದಾಖಲೆ ಸಲ್ಲಿಸಲು ಕೊನೆಯ ದಿನಾಂಕವನ್ನು ನಿಗದಿಪಡಿಸಲಾಗಿದೆ. ಜ.5ರಂದು ಟೆಂಡರ್ ಬಿಡ್ ತೆರೆಯಲಾಗುತ್ತದೆ.
ಒಟ್ಟಿನಲ್ಲಿ ತಮಗೆ ಬೇಕಾದಂತೆ ಕಾನೂನು ರೂಪಿಸಿಕೊಂಡು ಶುದ್ಧ ಕುಡಿಯು ನೀರಿನ ವಿಷಯದಲ್ಲಿ ಬೇಕಾ ಬಿಟ್ಟಿ ನಿರ್ಧಾರ ತೆಗೆದುಕೊಳ್ಳುತ್ತಿದ್ದ ಖಾಸಗಿ ಏಜನ್ಸಿ ಮತ್ತು ವ್ಯಕ್ತಿಗಳಿಗೆ ಆರ್ ಒ ಪ್ಲಾಂಟ್ ಕಾರ್ಯಾಚರಣೆ ಮತ್ತು ನಿರ್ವಹಣೆ ವಿಚಾರದಲ್ಲಿ ಬಿಬಿಎಂಪಿ ಆರ್ ಆರ್ ನಗರ ಶಿಸ್ತುಬದ್ಧ ನಿಯಮಗಳನ್ನು ರೂಪಿಸಿ, ಟೆಂಡರ್ ಕರೆದಿದೆ. ಆ ಮೂಲಕ ಇತರ ಬಿಬಿಎಂಪಿ ವಲಯಗಳಲ್ಲೂ ಇದೇ ಮಾದರಿಯು ಆದಷ್ಟು ಶೀಘ್ರವೇ ಅನುಷ್ಠಾನಗೊಂಡರೆ, ಶುದ್ಧ ಕುಡಿಯುವ ನೀರು ಕಡಿಮೆ ದರದಲ್ಲಿ ಬಡವರು, ಮಧ್ಯಮ ವರ್ಗದವರು, ಸಣ್ಣ ಹೋಟೆಲ್, ಉದ್ಯಮ ನಡೆಸುತ್ತಿರುವವರಿಗೆ ಅನುಕೂಲವಾಗಲಿದೆ.
ಆರ್ ಒ ಘಟಕಗಳ ಏಜನ್ಸಿ ನಿಯಂತ್ರಣಕ್ಕೆ ಕ್ರಮ :
“ಶುದ್ಧ ಕುಡಿಯುವ ನೀರು ಘಟಕವನ್ನು ಸರ್ಕಾರದ ಅನುದಾನಗಳಿಂದ ಸ್ಥಾಪಿಸುತ್ತಿದ್ದರೂ, ಅದರ ನಿರ್ವಹಣೆ ಮತ್ತು ಕಾರ್ಯಾಚರಣೆ ನಡೆಸುತ್ತಿದ್ದ ಖಾಸಗಿ ಏಜನ್ಸಿ ಅಥವಾ ವ್ಯಕ್ತಿಗಳ ಮೇಲೆ ಬಿಬಿಎಂಪಿ ಯಾವುದೇ ನಿಯಂತ್ರಣ ಹಾಗೂ ಉಸ್ತುವಾರಿ ವಹಿಸಲು ಆಗುತ್ತಿರಲಿಲ್ಲ. ಹೀಗಾಗಿ ಆರ್ ಆರ್ ನಗರ ವಲಯದಲ್ಲಿನ ವಿವಿಧ ವಾರ್ಡ್ ಗಳ 153 ಆರ್ ಒ ಘಟಕಗಳ ಕಾರ್ಯಾಚರಣೆ ಮತ್ತು ನಿರ್ವಹಣೆಯನ್ನು ಅರ್ಹರಾದವರಿಗೆ ನೀಡಲು ಕೊಟೇಶನ್ ಕರೆಯಲಾಗಿದೆ. ಈ ಮೂಲಕ ನೀರು ಘಟಕಗಳ ನಿರ್ವಹಣೆ, ನೀರಿನ ಗುಣಮಟ್ಟ ಕಾಯ್ದುಕೊಳ್ಳುವ ನಿಟ್ಟಿನಲ್ಲಿ ಅರ್ಹ ಗುತ್ತಿಗೆದಾರರಿಗೆ ಗುತ್ತಿಗೆ ಕಾರ್ಯ ನೀಡಿ ಪಾಲಿಕೆಯು ಕ್ರಮ ವಹಿಸಲಿದೆ. “
ಸುರಾಳ್ಕರ್ ವಿಕಾಸ್ ಕಿಶೋರ್, ವಲಯ ಆಯುಕ್ತರು, ಬಿಬಿಎಂಪಿ ಆರ್ ಆರ್ ನಗರ ವಲಯ