ಮಂಡ್ಯ, ಡಿ.24 www.bengaluruwire.com : ಈ ಕ್ಷೇತ್ರಕ್ಕೆ ಕಾಲಿರಿಸಿದರೆ ಏನೋ ದಿವ್ಯ ಅನುಭವ. ಹನುಮಾನ್ ಜಯಂತಿಯಂದು 550 ವರ್ಷಗಳ ಪುರಾತನ ದೇವಸ್ಥಾನದಲ್ಲಿ ವಾಯುಪುತ್ರನಿಗೆ ವಿಶೇಷ ಅಲಂಕಾರದೊಂದಿಗೆ ಭಾನುವಾರ ವಿಶೇಷ ಪೂಜೆ ನಡೆಯಿತು.
ಮಂಡ್ಯ ಜಿಲ್ಲೆಯ ಮದ್ದೂರಿನ ಶಿಂಷಾ ನದಿ ದಂಡೆಯ ಮೇಲಿರುವ ಆಂಜನೇಯ ದೇವಸ್ಥಾನ “ಹೊಳೆ ಆಂಜನೇಯ” ಕ್ಷೇತ್ರ ಎಂದೇ ಪ್ರಸಿದ್ಧಿ ಪಡೆದಿದೆ. ಶ್ರೀಪಾದರಾಜರು ಮತ್ತು ವ್ಯಾಸರಾಜರು ಈ ಮೂರ್ತಿಯನ್ನು ಪ್ರತಿಷ್ಠಾಪಿಸಿ ಪೂಜಿಸಿದ ಕಾರಣದಿಂದಾಗಿ ಈ ಕ್ಷೇತ್ರ ಪ್ರಖ್ಯಾತವಾಗಿದೆ. ಹನುಮಾನ್ ಜಯಂತಿ ಹಿನ್ನಲೆಯಲ್ಲಿ ಇಂದು ಪ್ರಾತಃಕಾಲದಿಂದಲೇ ಭಕ್ತರ ದಂಡು ದೇವಸ್ಥಾನಕ್ಕೆ ಆಗಮಿಸಿ ಆಂಜನೇಯನ ಕೃಪಾಶಿರ್ವಾದ ಪಡೆಯುತ್ತಿದ್ದಾರೆ.
ನಾಡಿನ ಎಲ್ಲೆಡೆ ಸಂಭ್ರಮದಿಂದ ಹನುಮ ಜಯಂತಿ ಪ್ರಯುಕ್ತ ವಿಧ ವಿಧವಾದ ಧಾರ್ಮಿಕ ಕಾರ್ಯಕ್ರಮಗಳನ್ನು ಆಂಜನೇಯನ ದೇವಸ್ಥಾನಗಳಲ್ಲಿ ನೆರವೇರಿಸಲಾಗುತ್ತಿದೆ.
ಹೊಳೆ ಆಂಜನೇಯ ದೇವಸ್ಥಾನ ಸುಮಾರು 550 ವರ್ಷಗಳ ಹಿಂದೆ ವಿಜಯನಗರ ಅರಸರ ಕಾಲದಲ್ಲಿ ನಿರ್ಮಾಣವಾಯಿತು ಎನ್ನಲಾಗಿದೆ. ಈ ಕ್ಷೇತ್ರದಲ್ಲಿ ಪ್ರಾಣದೇವರು ಜಾಗೃತರಾಗಿ ನೆಲೆಸಿದ್ದಾರೆ ಎಂಬ ನಂಬಿಕೆಯಿದೆ. ಆಂಜನೇಯ ರಾಮಾಯಣ ಕಾಲದಲ್ಲಿ ಹನುಮನಾಗಿ, ಮಹಾಭಾರತದ ಕಾಲದಲ್ಲಿ ಭೀಮನಾಗಿ ಮತ್ತು ಕಲಿಯುಗದಲ್ಲಿ ಮಧ್ವಾಚಾರ್ಯರಾಗಿ ಅವತಾರ ಎತ್ತಿದನೆಂದು ಈ ಮೂರ್ತಿಯಲ್ಲಿ ಬಿಂಬಿಸಲಾಗಿದೆ.
ಇಲ್ಲಿರುವ ಹನುಮನ ಮೂರ್ತಿಯ ಎರಡು ಬೆರಳು ಉದ್ದ ಇದ್ದು ಇವು ಮಧ್ವಾಚಾರ್ಯರು ಪ್ರತಿಪಾದಿಸಿದ ದ್ವೈತ ಸಿದ್ಧಾಂತವನ್ನು ಸಂಕೇತಿಸುತ್ತದೆ. ಆಂಜನೇಯ ತನ್ನ ಕೈಯಲ್ಲಿ ಸೌಗಂಧಿಕಾ ಪುಷ್ಪ ಹಿಡಿದಿರುವುದು ಭೀಮನ ಅವತಾರವನ್ನು ಪ್ರತಿನಿಧಿಸುತ್ತದೆ. ಆಂಜನೇಯನ ತಲೆಯ ಭಾಗದಲ್ಲಿ ಸೂರ್ಯಚಂದ್ರರಿದ್ದಾರೆ. ಇಲ್ಲಿ ಆಂಜನೇಯನಿಗೆ ಜುಟ್ಟು ಇದ್ದು ಬಾಲದಲ್ಲಿ ಗಂಟೆ ಇದೆ. ಇದು ಈ ದೇವಸ್ಥಾನ ವಿಶೇಷವಾಗಿದೆ.
ಇನ್ನು ದೇವಸ್ಥಾನದ ಅರ್ಚಕರಾದ ಹೇಳುವಂತೆ 2004 ರಲ್ಲಿ ರಾಮನವಮಿಯ ದಿನ ದೇವಸ್ಥಾನದ ಬಾಗಿಲು ಹಾಕಿದ್ದರೂ ಒಳಗಿಂದ ಜಾಗಟೆ-ನಗಾರಿಯ ಶಬ್ದ ಕೇಳಿದ ಅನುಭವ ಅನೇಕರಿಗೆ ಆಗಿದೆ. ಅದೇ ರೀತಿ 2011ರಲ್ಲಿ ಚಂದ್ರಗ್ರಹಣ ಸಮಯದಲ್ಲೂ ದೇವಳದ ಮುಚ್ಚಿದ ಬಾಗಿಲೊಳಗಿಂದ ಶಂಖ-ಜಾಗಟೆ ಬಾರಿಸಿದ ಶಬ್ದದ ಅನುಭವವಾಗಿದೆ. ಇಲ್ಲಿ ನಡೆವ ಪೂಜೆಯೂ ವಿಶಿಷ್ಟವಾದುದು. ಇಲ್ಲಿ ಬರುವ ಭಕ್ತಾದಿಗಳು ಕೈಯಲ್ಲಿ ರೂ.1.25 (ಒಂದೂಕಾಲು ರೂಪಾಯಿ) ಹಿಡಿದು ಸಂಕಲ್ಪ ಮಾಡಿಕೊಂಡು ಪೂಜೆ ಮಾಡಿಸಿದರೆ ಇಷ್ಟಾರ್ಥ ನೆರವೇರುತ್ತದೆ ಎಂಬ ನಂಬಿಕೆಯಿದೆ.