ತಿರುಪತಿ, ಡಿ.23 www.bengaluruwire.com : ತಿರುಪತಿಯ ದೇಗುಲ ಸೇರಿದಂತೆ ದೇಶಾದ್ಯಂತ ಶ್ರೀ ವೆಂಕಟೇಶ್ವರ ದೇವಸ್ಥಾನದಲ್ಲಿ ವೈಭವದ ವೈಕುಂಠ ಏಕಾದಶಿ ಪ್ರಯುಕ್ತ ವಿಶೇಷ ದರ್ಶನವನ್ನು ಭಕ್ತರು ಪಡೆದುಕೊಳ್ಳುತ್ತಿದ್ದಾರೆ. ವೈಕುಂಠ ಏಕಾದಶಿಯ ದಿನವಾದ ಇಂದು ತಿರುಪತಿ ತಿಮ್ಮಪ್ಪನ ದೇಗುಲವನ್ನು ವಿಧ ವಿಧವಾದ ಫಲಪುಷ್ಪ ಹಾಗೂ ದೀಪಾಲಂಕಾರಗಳಿಂದ ಸಜ್ಜುಗೊಳಿಸಲಾಗಿದೆ. ಮಧ್ಯರಾತ್ರಿ 1.45ರಿಂದಲೇ ದೇಗುಲದಲ್ಲಿ ಪೂಜೆಯ ನಂತರ ಭಕ್ತರು ದೇವರ ದರ್ಶನ ಮಾಡಲು ಅನುವು ಮಾಡಿಕೊಡಲಾಗಿದೆ.
ವೈಷ್ಣವ ಸಂಪ್ರದಾಯದಂತೆ ಇಂದಿನಿಂದ ಜನವರಿ 1ನೇ ತಾರೀಖಿನವರೆಗೆ ಹತ್ತು ದಿನಗಳ ಕಾಲ ತಿರುಮಲದಲ್ಲಿರುವ ಶ್ರೀ ವೆಂಕಟೇಶ್ವರ ಸ್ವಾಮಿಯ ವೈಕುಂಠ ದ್ವಾರವನ್ನು ಭಕ್ತರದರ್ಶನಕ್ಕಾಗಿ ತೆರೆದಿಡಲಾಗುತ್ತದೆ. ಈ ಹತ್ತು ದಿನಗಳಲ್ಲಿ ಸುಮಾರು ಎಂಟು ಲಕ್ಷ ಯಾತ್ರಾರ್ಥಿಗಳು ವೈಕುಂಠ ದ್ವಾರ ದರ್ಶನ ಪಡೆಯುವ ನಿರೀಕ್ಷೆಯಿದೆ. ವೈಕುಂಠ ಏಕಾದಶಿಯ ಪ್ರಯುಕ್ತ ಬೆಳಗ್ಗೆ 9 ರಿಂದ 11 ಗಂಟೆಯ ನಡುವೆ ಮಲಯಪ್ಪ ಸ್ವಾಮಿಯನ್ನು ಅವರ ಪತ್ನಿಯರಾದ ಶ್ರೀದೇವಿ ಮತ್ತು ಭೂದೇವಿಯೊಂದಿಗೆ ಸ್ವರ್ಣ ರಥದಲ್ಲಿ (ಚಿನ್ನದ ರಥ) ಮೆರವಣಿಗೆ ಮಾಡಲಾಯಿತು. ಈ ಸಂದರ್ಭದಲ್ಲಿ ಸಾವಿರಾರು ಭಕ್ತರು ಸ್ವರ್ಣರಥದಲ್ಲಿರುವ ದೇವರನ್ನು ಕಣ್ತುಂಬಿಕೊಂಡು ಜಯ ಘೋಷ ಸಾರಿದರು.
ಮೊದಲ ದಿನವಾದ ಇಂದು ಬೆಳಗ್ಗೆಯಿಂದಲೇ ಸಾವಿರಾರು ಭಕ್ತರು ದೇಶದ ವಿವಿಧ ರಾಜ್ಯಗಳಿಂದ ತಿರುಪತಿ ತಿಮ್ಮಪ್ಪನ ದರ್ಶನವನ್ನು ಪಡೆಯಲು ನೂಕು ನುಗ್ಗಲಲ್ಲಿ ನಿಂತು ದರ್ಶನ ಪಡೆಯುತ್ತಿದ್ದಾರೆ. ವೈಕುಂಠ ದ್ವಾರವನ್ನು ಹತ್ತು ದಿನಗಳವರೆಗೆ ತೆರೆಯುವುದು ಹಿಂದೂ ವಿಶ್ವವಿಜ್ಞಾನದ ಪ್ರಕಾರ “ಸಾಪೇಕ್ಷತಾ ಸಿದ್ಧಾಂತ” ವನ್ನು ಆಧರಿಸಿದೆ. ದೇವಲೋಕದಲ್ಲಿ ಒಂದು ದಿನವು ಭೂಮಿಯ ಮೇಲಿನ ಒಂದು ವರ್ಷಕ್ಕೆ ಸಮ. ದೇವಲೋಕದಲ್ಲಿ ಹಗಲಿನ 12 ಗಂಟೆಗಳು ಉತ್ತರಾಯಣದ 6 ತಿಂಗಳುಗಳಾಗಿದ್ದರೆ, ವೈಕುಂಠದಲ್ಲಿ ರಾತ್ರಿಯ 12 ಗಂಟೆಗಳು ಭೂಮಿಯ ಮೇಲಿನ ದಕ್ಷಿಣಾಯನದ 6 ತಿಂಗಳುಗಳಾಗಿರುತ್ತದೆ. ದೇವಲೋಕದಲ್ಲಿ ಅರುಣೋದಯದ ಸಮಯದಲ್ಲಿನ 120 ನಿಮಿಷಗಳು ಭೂಮಿಯ ಮೇಲಿನ ಧನುರ್ಮಾಸದ 30 ದಿನಗಳವರೆಗೆ ಸಮಾನವಾಗಿರುತ್ತದೆ ಎಂದು ಹಿಂದು ಶಾಸ್ತ್ರಗಳು ತಿಳಿಸುತ್ತದೆ.
ಶ್ರೀ ಮಹಾವಿಷ್ಣುವು ವೈಕುಂಠ ದ್ವಾರದಲ್ಲಿ ಪ್ರತಿದಿನ 40 ನಿಮಿಷಗಳ ಕಾಲ ಎಲ್ಲಾ ದೇವರುಗಳು, ದೇವತೆಗಳು, ಋಷಿಮುನಿಗಳಿಗೆ ದರ್ಶನವನ್ನು ನೀಡುತ್ತಾನೆ (ವೈಕುಂಠದಲ್ಲಿ ದೈನಂದಿನ ಸಂಬಂಧ) ಇದು ಭೂಮಿಯ ಮೇಲಿನ 10 ದಿನಗಳವರೆಗೆ (ಭೂಮಿಯ ಮೇಲಿನ ವಾರ್ಷಿಕ ಸಂಬಂಧ) ಸಮನಾಗಿರುತ್ತದೆ. ಇದರಿಂದಾಗಿ ವೈಷ್ಣವ ದೇವಾಲಯಗಳಲ್ಲಿ ವೈಕುಂಠ ದ್ವಾರ 10 ದಿನಗಳವರೆಗೆ ತೆರೆದಿರುತ್ತದೆ. ಈ 10 ದಿನಗಳಲ್ಲಿ ಯಾವುದೇ ದಿನ ವೈಕುಂಠ ದ್ವಾರ ದರ್ಶನವನ್ನು ಹೊಂದುವುದು ಮಂಗಳಕರವೆಂದು ಪರಿಗಣಿಸಲಾಗಿದೆ. ಈ ಎಲ್ಲಾ 10 ದಿನಗಳಲ್ಲಿ ಪವಿತ್ರತೆ ಒಂದೇ ಆಗಿರುತ್ತದೆ. ಆದ್ದರಿಂದ, ಯಾತ್ರಿಕರು ಹತ್ತು ದಿನಗಳಲ್ಲಿ ಯಾವುದಾದರೂ ಒಂದು ದಿನ ವೈಕುಂಠ ದ್ವಾರ ದರ್ಶನವನ್ನು ಮಾಡಲು ಯೋಜಿಸಬಹುದು ಎಂದು ತಿರುಪತಿ ತಿರುಮಲ ದೇವಸ್ಥಾನ ಟ್ರಸ್ಟ್ (TTD) ಕಾರ್ಯಕಾರಿ ನಿರ್ದೇಶಕರು ಸೂಚಿಸಿದ್ದಾರೆ.
ಕರ್ನಾಟಕ ರಾಜ್ಯ ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಇಂದು ತಿರುಪತಿ ತಿಮ್ಮಪ್ಪನ ದರ್ಶನ ಪಡೆದರು. ತಿರುಪತಿ ದೇವಸ್ಥಾನದ ಅರ್ಚಕರು ಹಾಗೂ ಅಧಿಕಾರಿಗಳು ರಾಜ್ಯಪಾಲರು ಹಾಗೂ ಅವರ ಕುಟುಂಬದವರನ್ನು ಸ್ವಾಗತಿಸಿ, ರಂಗನಾಯಕುಲ ಮಂಟಪದಲ್ಲಿ ಶ್ರೀವಾರಿ ವಸ್ತ್ರ ನೀಡಿ ಗೌರವಿಸಿದರು.
4.23 ಲಕ್ಷ ಉಚಿತ ಸರ್ವ ದರ್ಶನ ಟೋಕನ್ ಇಲ್ಲಿ ಲಭ್ಯ :
ಉಚಿತ ಸಮಯದ ಸ್ಲಾಟ್ ಸರ್ವ ದರ್ಶನಂ ಟೋಕನ್‌ಗಳನ್ನು ಹೊಂದಿರುವ ಭಕ್ತರು ತಿರುಮಲದಲ್ಲಿ ವೈಕುಂಠ ದ್ವಾರ ದರ್ಶನಕ್ಕಾಗಿ ದೀರ್ಘ ಗಂಟೆಗಳ ಕಾಲ ಸರತಿ ಸಾಲಿನಲ್ಲಿ ಕಾಯಬೇಕಾಗಿಲ್ಲ. ಒಟ್ಟಾರೆಯಾಗಿ 10 ದಿನಗಳ ದರ್ಶನಕ್ಕಾಗಿ 4,23,500 ಟೋಕನ್‌ಗಳನ್ನು ಮೊದಲ ಬಂದವರಿಗೆ ಆದ್ಯತೆ ಮೇಲೆ ಟೋಕನ್ ಗಳನ್ನು ನೀಡಲಾಗುತ್ತದೆ. ಸರ್ವದರ್ಶನ್ ಟೋಕನ್‌ಗಳು ತಿರುಪತಿಯ ಈ ಮುಂದಿನ 9 ಸ್ಥಳಗಳಲ್ಲಿ ನೀಡಲಾಗುತ್ತದೆ. ಈ ಒಂಭತ್ತು ಸ್ಥಳಗಳಲ್ಲಿ ಒಟ್ಟಾರೆ 90 ಟಿಕೆಟ್ ಕೌಂಟರ್ ಗಳನ್ನು ತೆರೆಯಲಾಗಿದೆ. (1) ಅಲಿಪಿರಿಯ ಭೂದೇವಿ ಸಂಕೀರ್ಣದಲ್ಲಿ (2) ರೈಲ್ವೆ ನಿಲ್ದಾಣದ ಎದುರು ವಿಷ್ಣು ನಿವಾಸ, (3) RTC ಕೇಂದ್ರ ಬಸ್ ನಿಲ್ದಾಣದ ಎದುರು ಶ್ರೀನಿವಾಸಂ ಕಾಂಪ್ಲೆಕ್ಸ್ (4) ಇಂದಿರಾ ಮೈದಾನಂ (5) ಜೀವಕೋನದಲ್ಲಿರುವ ZP ಪ್ರೌಢಶಾಲೆ (6) ರಾಮ ನಾಯ್ಡುನಲ್ಲಿ ಲಭ್ಯವಿದೆ. ಬೈರಾಗಿಪಟ್ಟೇಡದಲ್ಲಿ ಪುರಸಭೆಯ ಪ್ರೌಢಶಾಲೆ (7) M.R. ಪಲ್ಲೆಯಲ್ಲಿ ZP ಪ್ರೌಢಶಾಲೆ (8) ರಾಮಚಂದ್ರ ಪುಷ್ಕರಿಣಿ (9) ಶ್ರೀ ಗೋವಿಂದರಾಜ ಸ್ವಾಮಿ ಚೌಲ್ಟ್ರೀಸ್ [2 ನೇ NC) ನಲ್ಲಿ ಉಚಿತ ಸರ್ವ ದರ್ಶನ ಟೋಕನ್ ಗಳನ್ನು ಡಿ.22ರ ಮಧ್ಯಾಹ್ನ 2 ಗಂಟೆಯಿಂದ ನೀಡಲು ಆರಂಭಿಸಲಾಗಿದ್ದು ಜ.1ರ ತನಕ ಈ ಟಿಕೆಟ್ ಗಳನ್ನು ನೀಡಲಾಗುತ್ತದೆ.
ದರ್ಶನ ಟೋಕನ್ ಮತ್ತು ಟಿಕೆಟ್ ಇದ್ದವರಿಗೆ ಮಾತ್ರ ದೇವರ ದರ್ಶನ :
ಟೋಕನ್‌ಗಳನ್ನು ಹೊಂದಿರುವ ಭಕ್ತರಿಗೆ ಮಾತ್ರ ಅವರಿಗೆ ತಿರುಪತಿ ತಿಮ್ಮಪ್ಪನ ದರ್ಶನ ಹಂಚಿಕೆಯ ದಿನದಂದು ತಿರುಮಲದಲ್ಲಿನ ದರ್ಶನ ‘ಕ್ಯೂ’ ಲೈನ್‌ಗಳನ್ನು ಪ್ರವೇಶಿಸಲು ಅನುಮತಿ ನೀಡಲಾಗುತ್ತದೆ. ಟೋಕನ್‌ಗಳು ಅಥವಾ ಟಿಕೆಟ್‌ಗಳನ್ನು ಹೊಂದಿರದ ಯಾತ್ರಾರ್ಥಿಗಳನ್ನು ತಿರುಮಲಕ್ಕೆ ಬರಬಹುದು ಆದರೆ ದೇವರ ದರ್ಶನಕ್ಕೆ ಅನುಮತಿಸಲಾಗುವುದಿಲ್ಲ ಎಂದು ಟಿಟಿಡಿ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದೆ.
ತಿಮ್ಮಪ್ಪನ ಭಕ್ತಾದಿಗಳು ಎಸ್‌ವಿಬಿಸಿ ಮತ್ತು ಟಿಟಿಡಿ ವೆಬ್‌ಸೈಟ್: www.tirumala.org ಮತ್ತು ಇತರ ಮಾಧ್ಯಮಗಳ ಮೂಲಕ ಟಿಕೆಟ್‌ಗಳ ಲಭ್ಯತೆಯ ಮಾಹಿತಿಯನ್ನು ಪಡೆದ ನಂತರವೇ ತಮ್ಮ ಪ್ರಯಾಣದ ಬಗ್ಗೆ ಯೋಜಿಸಬೇಕು. ತಿರುಮಲದಲ್ಲಿ ಕೊಠಡಿಗಳು ಸೀಮಿತವಾಗಿರುವುದರಿಂದ ಭಕ್ತರು ಕೊಠಡಿಗಳನ್ನು ಆಯ್ಕೆ ಮಾಡಿಕೊಳ್ಳುವಂತೆಯೂ ಟಿಟಿಡಿ ಕೋರಿದೆ. ಈ ಹಿಂದೆಯೇ 300 ರೂ. ವಿಶೇಷ ದರ್ಶನ ಟಿಕೆಟ್ ಗಳನ್ನು ವಿತರಿಸಿದೆ. ಶ್ರೀವಾನಿ ಟ್ರಸ್ಟ್ ಸಂಬಂಧಿತ ವಿಐಪಿ ಬ್ರೇಕ್ ದರ್ಶನ್ ಟಿಕೆಟ್ ಗಳನ್ನು ಈಗಾಗಲೇ ಹಂಚಿಕೆ ಮಾಡಿದೆ. ಪ್ರೋಟೋಕಾಲ್ ಪಟ್ಟಿಯಲ್ಲಿರುವ ವಿಐಪಿಗಳಿಗೆ ಸೀಮಿತ ಸಂಖ್ಯೆಯಲ್ಲಿ ಮಾತ್ರ ಬ್ರೇಕ್ ದರ್ಶನವನ್ನು ನೀಡಲಾಗುತ್ತದೆ ಮತ್ತು ಯಾವುದೇ ಶಿಫಾರಸು ಪತ್ರಗಳನ್ನು ಸ್ವೀಕರಿಸುವುದಿಲ್ಲ ಎಂದು ಟಿಟಿಡಿ ಹೇಳಿದೆ.
ವೈಕುಂಠದ್ವಾರ ದರ್ಶನದ ಪ್ರಭಾವವು ಎಲ್ಲಾ ಹತ್ತು ದಿನಗಳ ಕಾಲ ಇರುವುದರಿಂದ, ವೈಕುಂಠ ಏಕಾದಶಿಯ ದಿನದಂದು ವೈಕುಂಠದ್ವಾರ ದರ್ಶನವನ್ನು ಪಡೆಯಲು ವಿಐಪಿಗಳು ಮತ್ತು ಇತರ ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸುವ ಅವಶ್ಯಕತೆಯಿಲ್ಲ. ಈ ಹತ್ತು ದಿನಗಳಲ್ಲಿ ಯಾವುದಾದರೂ ಒಂದು ದಿನ ಸುಖಕರವಾದ ದರ್ಶನವನ್ನು ಹೊಂದಲು ಯೋಜನೆಗಳನ್ನು ಮಾಡಬಹುದು ಎಂದು ತಿಳಿಸಲಾಗಿದೆ.
“ಬೆಂಗಳೂರು ವೈರ್” ಡಿಜಿಟಲ್ ವೆಬ್ ನ್ಯೂಸ್ ಪೋರ್ಟೆಲ್ಲಿನ ಸೋಶಿಯಲ್ ಮೀಡಿಯಾ ಪೇಜ್ ಹಾಗೂ Google News ಗಳಿಗೆ ಉಚಿತವಾಗಿ Subscribe ಆಗಲು Facebook, Telegram, Twitter, Youtube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.