ಬೆಂಗಳೂರು, ಡಿ.14 www.bengaluruwire.com : ಅಂತರಾಷ್ಟ್ರೀಯ ಮಟ್ಟದಲ್ಲಿ ದೇಶದ ಐಟಿ ರಾಜಧಾನಿ ಬೆಂಗಳೂರಿನಲ್ಲಿ ನಾಗರೀಕರ ಸಮಸ್ಯೆಗಳ ಪರಿಹಾರ, ದೂರು ದಾಖಲಿಸಲು ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ಪ್ರಾರಂಭಿಸಿದ “ಸಹಾಯ 2.0” (Sahaaya 2.0) ಆಂಡ್ರಾಯ್ಡ್ ಮೊಬೈಲ್ ಆಪ್ (Android Mobile App) ಗೆ ಅಕ್ಷರಶಃ ಅಪ್ ಡೇಟ್ ಇಲ್ಲದೆ ಹೊಸ ವರ್ಶನ್ ಮೊಬೈಲ್ ಹೊಂದಿದ ನಾಗರೀಕರ ಬಳಕೆಗೆ ಲಭ್ಯವಾಗ್ತಿಲ್ಲ.
ಬಿಎಂಪಿಯ ಕೇಂದ್ರ ಕಚೇರಿಯಲ್ಲಿ ಎಲ್ಲಾ ಇಲಾಖೆಗಳ ಜೊತೆ ಸಂಯೋಜನೆ ನಡೆಸಿ ನಾಗರೀಕರ ಸಾರ್ವಜನಿಕರ ಸೇವೆಗಳಲ್ಲಿನ ಸಮಸ್ಯೆಗಳ ಪರಿಹಾರಕ್ಕೆಂದು ಬೆಂಗಳೂರಿಗೊಂದು ಕೇಂದ್ರೀಕೃತ ಇಂಟಿಗ್ರೇಟೆಡ್ ಕಮಾಂಡ್ ಅಂಡ್ ಕಂಟ್ರೋಲ್ ಸೆಂಟರ್ (Integrated Command And Control Center – ICCC) ರೂಪಿಸಿದೆ. ಆ ವ್ಯವಸ್ಥೆಯಿನ್ನೂ ಪ್ರಾಯೋಗಿಕ ಹಂತದಲ್ಲಿದೆ.
ಈ ಮಧ್ಯೆ ಪಾಲಿಕೆಯ ಸಹಾಯ ಕೇಂದ್ರದ ನಿಯಂತ್ರಣ ಕೊಠಡಿಗೆ 1533 ಟೋಲ್ ಫ್ರೀ ನಂಬರ್, 9480685700 ವಾಟ್ಸಪ್ ನಂಬರ್, 24×7 ಹೆಲ್ಪ್ ಲೈನ್ ನಂಬರ್: +91-80-2266-0000 ಹಾಗೂ ಆಯಾ ವಲಯಗಳಲ್ಲಿನ ನಿಯಂತ್ರಣ ಕೊಠಡಿಗಳನ್ನು ಹೊಂದಿದೆ. ಅದೇ ರೀತಿ “ಸಹಾಯ 2.0” ಎಂಬ ಆಂಡ್ರಾಯ್ಡ್ ಮೊಬೈಲ್ ಆಪ್ ಅನ್ನು ನಾಗರೀಕರು ಘನತ್ಯಾಜ್ಯ, ರಸ್ತೆ ಗುಂಡಿ, ಪ್ರಾಣಿಗಳ ಹಾವಳಿ, ಉದ್ಯಾನವನ, ಕೆರೆ ಸೇರಿದಂತೆ 25 ವಿವಿಧ ವರ್ಗಗಳಡಿ ನಾಗರೀಕರು ದೂರು ನೀಡಲೆಂದು ಪಾಲಿಕೆ ಐಟಿ ವಿಭಾಗವು 2020ರ ಫೆಬ್ರವರಿ 8ರಂದು ಆಪ್ ಡೆವಲಪ್ ಮಾಡಿದೆ. ಆಂಡ್ರಾಯ್ಡ್ ಲೇಟೆಸ್ಟ್ ವರ್ಶನ್ ಮೊಬೈಲ್ ಹೊಂದಿದ ನಾಗರೀಕರು ಈ “ಸಹಾಯ 2.0” ಅನ್ನು ಡೌನ್ ಲೋಡ್ ಮಾಡಿಕೊಳ್ಳಲಾಗುತ್ತಿಲ್ಲ. ಕಾರಣ ಆಂಡ್ರಾಯ್ಡ್ 5.0 ಮತ್ತು ಹಾಗೂ ಅದಕ್ಕಿಂತ ಮೇಲಿನ ಆಪರೇಟಿಂಗ್ ಸಿಸ್ಟಮ್ ಹೊಂದಿದ ಹಳೆ ವರ್ಶನ್ ಇದೆ. ಇದನ್ನು ಆಂಡ್ರಾಯ್ಡ್ 5.1 ವರ್ಶನ್ ಗೆ ಅಪಗ್ರೇಡ್ ಮಾಡುವ ಕೆಲಸ ಪಾಲಿಕೆ ಐಟಿ ವಿಭಾಗದಿಂದ ಇನ್ನೂ ಕೂಡ ಆಗಿಲ್ಲ. ಹೀಗಾಗಿ ಆಂಡ್ರಾಯ್ಡ್ ಪ್ಲೇ ಸ್ಟೋರ್ ನಲ್ಲಿ “ಸಹಾಯ 2.0” (ನಮ್ಮ ಬೆಂಗಳೂರು) ಆಪ್ ಕಾಣದಂತೆ ಮಾಯವಾಗಿದೆ.
ಇದಲ್ಲದೆ ನಗರದಲ್ಲಿ ಸುಲಭವಾಗಿ ನಾಗರೀಕ ಸಮಸ್ಯೆಗಳ ಬಗ್ಗೆ ತಮ್ಮ ಕೈಯಲ್ಲಿನ ಮೊಬೈಲ್ ನಿಂದ ಆಪ್ ಡೌನ್ ಲೋಡ್ ಮಾಡಿಕೊಂಡು ಬಿಬಿಎಂಪಿ ಸಹಾಯ್ ಆಪ್ ನಲ್ಲಿ ದೂರು ನೀಡುವ ಪ್ರಕ್ರಿಯೆಗೆ ಅಡ್ಡಿಯುಂಟಾಗಿದೆ. ಇದಲ್ಲದೆ ಇಂತದ್ದೊಂದು ಸಹಾಯ್ 2.0 ಆಪ್ ಇದೆ ಎಂಬುದೇ ನಗರದ ಹೆಚ್ಚಿನ ನಾಗರೀಕರಿಗೆ ತಿಳಿಯದಾಗಿದೆ. ಇದರ ಬಗ್ಗೆ ಪಾಲಿಕೆಯು ಹೆಚ್ಚು ಪ್ರಚಾರ ನೀಡುವ ಗೋಜಿಗೂ ಹೋಗಿಲ್ಲ.
“ಪಾಲಿಕೆಯ ಸಹಾಯ್ ಗ್ರಾಹಕರ ದೂರು ಪರಿಹಾರ ವ್ಯವಸ್ಥೆಯಲ್ಲಿ ಹಲವು ಮೂಲಗಳಿಂದ ವಾರಕ್ಕೆ ಒಂದು ಸಾವಿರಕ್ಕೂ ಹೆಚ್ಚು ದೂರುಗಳು ದಾಖಲಾಗುತ್ತವೆ. ಅವುಗಳ ಪೈಕಿ ಸರಾಸರಿಯಾಗಿ 600 ದೂರುಗಳು ಪರಿಹಾರವಾಗುತ್ತದೆ. ಮುಖ್ಯಮಂತ್ರಿಗಳ ಜನಸ್ಪಂದನ, ಉಪಮುಖ್ಯಮಂತ್ರಿಗಳ ಕಚೇರಿಯ ಬಿಬಿಎಂಪಿಗೆ ವ್ಯಾಪ್ತಿಗೆ ಸಂಬಂಧಿಸಿದ ದೂರುಗಳನ್ನು ಇದೇ ಬಿಬಿಎಂಪಿ ಸಹಾಯ ಗ್ರಾಹಕರ ಕುಂದು ಕೊರತೆ ನಿವಾರಣಾ ವ್ಯವಸ್ಥೆಗೆ ವರ್ಗಾಯಿಸಲಾಗುತ್ತದೆ. ಸಹಾಯ್ ಮೊಬೈಲ್ ಆಪ್ ನಲ್ಲಿ ದಾಖಲಾಗುವ ದೂರುಗಳನ್ನು ತ್ವರಿತವಾಗಿ ಪರಿಹರಿಸಲು ಕ್ರಮ ಕೈಗೊಳ್ಳಲಾಗುತ್ತದೆ. ಸಹಾಯ್ 2.0 ಆಪ್ ತಂತ್ರಾಂಶ ಅಪಗ್ರೇಡ್ ಮಾಡುವ ಕೆಲಸ ಪ್ರಗತಿಯಲ್ಲಿದೆ” ಎಂದು ಬಿಬಿಎಂಪಿ ಆಡಳಿತ ವಿಭಾಗದ ಉಪ ಆಯುಕ್ತ ಮಂಜುನಾಥ ಸ್ವಾಮಿ ಬೆಂಗಳೂರು ವೈರ್ ಗೆ ತಿಳಿಸಿದ್ದಾರೆ.
ಸಹಾಯ್ ವ್ಯವಸ್ಥೆಯಡಿ 1.07 ಲಕ್ಷ ದೂರು ದಾಖಲು :
ಬಿಬಿಎಂಪಿ ಸಹಾಯ್ ವ್ಯವಸ್ಥೆಯಡಿ 2023ರ ಜನವರಿ ಒಂದನೇ ತಾರೀಖಿನಿಂದ ಇಲ್ಲಿಯ ತನಕ (ಡಿಸೆಂಬರ್ 14ರ ವರೆಗೆ) ಒಟ್ಟಾರೆಯಾಗಿ 1,14,050 ವಿವಿಧ ರೀತಿಯ ದೂರುಗಳು ದಾಖಲಾಗಿವೆ. ಆ ಪೈಕಿ 1,07,636 ದೂರುಗಳನ್ನು ಪರಿಹರಿಸಲಾಗಿದೆ. ಕೆಲವು ವೇಳೆ ಎರಡು ಮೂರು ಬಾರಿ ದಾಖಲಾದ ಒಂದೇ ಪ್ರಕರಣಗಳಿರುವ 2,053 ದೂರುಗಳನ್ನು ತಿರಸ್ಕರಿಸಲಾಗಿದೆ. 1,362 ಧೀರ್ಘಾವಧಿ ಸಮಯ ತೆಗೆದುಕೊಳ್ಳುವ ದೂರುಗಳನ್ನು ದಾಖಲಿಸಿಕೊಳ್ಳಲಾಗಿದೆ. ಪ್ರಸ್ತುತ 2,950 ದೂರುಗಳು ಪಾಲಿಕೆಯ 8 ವಿವಿಧ ವಲಯಗಳಿಂದ ಬಿಬಿಎಂಪಿ ಕುಂದುಕೊರತೆ ಪರಿಹಾರ ವ್ಯವಸ್ಥೆಯಲ್ಲಿ ದಾಖಲಾಗಿದೆ. 96 ದೂರುಗಳ ಬಗ್ಗೆ ಅಧಿಕಾರಿಗಳ ಹಂತದಲ್ಲಿ ಪರಿಹಾರಕ್ಕೆ ಕ್ರಮ ಕೈಗೊಳ್ಳಲಾಗುತ್ತಿದೆ ಎಂದು ಪಾಲಿಕೆ ಅಧಿಕಾರಿಯೊಬ್ಬರು ವಿವರಿಸಿದ್ದಾರೆ.
ಸಹಾಯ ಎಂಬ ವೇದಿಕೆಯನ್ನು ಬಿಬಿಎಂಪಿ ನಾಗರೀಕರ ಕುಂದು ಕೊರತೆ ನಿವಾರಣಾ ವ್ಯವಸ್ಥೆಗೆಂದೇ ಸೃಷ್ಟಿಸಿದೆ. ಹೀಗಾಗಿ 1533 ಅಥವಾ ಕಾಲ್ ಸೆಂಟರ್, ಮುಖ್ಯಮಂತ್ರಿಗಳ ಕಚೇರಿ, ಇ-ಜನಸ್ಪಂದನ, ಇಮೇಲ್, ಇಂದಿರಾ ಕ್ಯಾಂಟೀನ್ ಆಪ್, ನಮ್ಮ ಬೆಂಗಳೂರು ಆಪ್ ಅರ್ಥಾತ್ ಸಹಾಯ-2.0, ಪತ್ರಿಕೆಗಳು, ಸಾಮಾಜಿಕ ಮಾಧ್ಯಮಗಳು, ಸ್ವಚ್ಛತಾ-ಎಂಒಯುಡಿ, ವಾಟ್ಸಪ್ ಇಷ್ಟು ಮೂಲಗಳಿಂದ ಬರುವ ದೂರುಗಳನ್ನು ಸಂಬಂಧಿಸಿದ ಪಾಲಿಕೆ ಇಲಾಖೆ, ವಲಯ ಹಾಗೂ ಅಧಿಕಾರಿಗೆ ವರ್ಗಾಯಿಸಲಾಗುತ್ತದೆ.
ಸಹಾಯ ಮೂಲಗಳ ವಾರು ದೂರುಗಳ ವರದಿ
ಅವಧಿ 01-01-2023 ರಿಂದ 14-12-2023 ರ ತನಕ | |||
ಕ್ರ.ಸಂ. | ಮೂಲಗಳು | ಒಟ್ಟಾರೆ ಸ್ವೀಕರಿಸಿದ ದೂರುಗಳು | ಪರಿಹರಿಸಲಾದ ಸಂಖ್ಯೆ |
1) | 1533/ ಕಾಲ್ ಸೆಂಟರ್ | 64,548 | 62,017 |
2) | ನಮ್ಮ ಬೆಂಗಳೂರು ಆಪ್ (ಸಹಾಯ್ 2.0) | 37,918 | 35,315 |
3) | ವಾಟ್ಸಪ್ | 10,148 | 9,120 |
4) | ಸಾಮಾಜಿಕ ಜಾಲತಾಣ | 708 | 592 |
5) | ಮುಖ್ಯಮಂತ್ರಿಗಳ ಕಚೇರಿ | 452 | 381 |
6) | ದಿನ ಪತ್ರಿಕೆಗಳು | 205 | 157 |
7) | ಇ-ಜನಸ್ಪಂದನ | 29 | 19 |
8) | ಸ್ವಚ್ಛತಾ-ಎಂಒಯುಡಿ | 19 | 18 |
9) | ಇಂದಿರಾ ಕ್ಯಾಂಟೀನ್ ಆಪ್ | 14 | 9 |
10) | ಇಮೇಲ್ | 9 | 8 |
ಒಟ್ಟಾರೆ | 1,14,050 | 1,07,636 |
ಬಿಬಿಎಂಪಿ ಸಹಾಯ ವೇದಿಕೆಯಲ್ಲಿ ವಿವಿಧ ಮೂಲಗಳಿಂದ ದಾಖಲಾಗುವ ದೂರುಗಳಲ್ಲಿ 1533 ದೂರವಾಣಿಗೆ ಕರೆ ಮಾಡಿ ದಾಖಲಿಸುವ ದೂರುಗಳ ಸಂಖ್ಯೆಯೇ ಪ್ರಥಮ ಸ್ಥಾನ ಪಡೆದಿದೆ. ನಂತರದ ಸ್ಥಾನ ಸಹಾಯ 2.0 (ನಮ್ಮ ಬೆಂಗಳೂರು) ಆಪ್ ನಿಂದ ನೀಡುವ ದೂರುಗಳದ್ದಾಗಿದೆ. ಮೂರನೆಯ ಸ್ಥಾನ ವಾಟ್ಸಪ್ ನಂಬರ್ ಮೂಲಕ ದಾಖಲಿಸುವ ನಾಗರೀಕ ದೂರುಗಳಾಗಿದೆ. ಹೀಗಿದ್ದರೂ ಬಿಬಿಎಂಪಿಯ ಐಟಿ ವಿಭಾಗ ಸಹಾಯ 2.0 ಆಂಡ್ರಾಯ್ಡ್ ಆಪ್ ಅನ್ನು ಕಾಲ ಕಾಲಕ್ಕೆ ಅಪಡೇಟ್ ಮಾಡುವ ಕಾರ್ಯಕ್ಕೆ ಯಾಕೆ ಆಸಕ್ತಿ ತೋರುತ್ತಿಲ್ಲ? ಎಂಬ ಪ್ರಶ್ನೆ ಮೂಡಿದೆ. ಒಟ್ಟಾರೆ ಸಹಾಯ ವೇದಿಕೆಯಲ್ಲಿ ದಾಖಲಾಗುವ ದೂರಿನಲ್ಲಿ ರಸ್ತೆ ನಿರ್ವಹಣೆ, ಘನತ್ಯಾಜ್ಯ ನಿರ್ವಹಣೆ, ಉದ್ಯಾನವನ ಹಾಗೂ ಆಟದ ಮೈದಾನ, ಬೀದಿ ದೀಪಗಳು, ಆರೋಗ್ಯ, ನಗರ ಯೋಜನೆ ವಿಷಯಗಳು ಹೆಚ್ಚಾಗಿವೆ.
ಸಹಾಯ್ 2.0 ಆಪ್ ನಲ್ಲಿದೆ ಹಲವು ಲೋಪದೋಷಗಳು :
ಸಹಾಯ್ 2.0 ಆಪ್ ನಲ್ಲಿ ವಲಯ ನಿಯಂತ್ರಣ ಕೊಠಡಿಗಳಿಂದ ಹಾಗೂ ವಲಯ ಕಚೇರಿಗಳಿಗೆ ನೇರವಾಗಿ ಬಂದು ನಾಗರೀಕರು ನೀಡುವ ದೂರುಗಳನ್ನು ಈ ಸಹಾಯ್ ಆಪ್ ಗೆ ಸೇರಿಸಲಾಗುತ್ತಿಲ್ಲ. ಒಂದೊಮ್ಮೆ ಅಂತಹ ದೂರುಗಳನ್ನು ಸೇರಿಸಿದಲ್ಲಿ ದೂರುಗಳ ಕುರಿತಂತೆ ಕೈಗೊಳ್ಳಲಾಗುವ ಕ್ರಮಗಳ ಬಗ್ಗೆ ಸೂಕ್ತ ಗಮನ ಹರಿಸಲು ಸಾಧ್ಯವಾಗುತ್ತದೆ. ಈ ಆಂಡ್ರಾಯ್ಡ್ ಆಪ್ ನಲ್ಲಿ ಕೆಲವೊಮ್ಮೆ ನಾಗರೀಕರು ತಾವು ನೀಡಿದ ದೂರಿನ ಬಗ್ಗೆ ತೃಪ್ತಿಯಾಗಿದಿದ್ದಲ್ಲಿ ಅಥವಾ ಸೂಕ್ತ ರೀತಿ ಸಂಬಂಧಿಸಿದ ಅಧಿಕಾರಿಗಳು ಸರಿಯಾಗಿ ಸ್ಪಂದಿಸದೆ ದೂರನ್ನು ಅರ್ಧಕ್ಕೆ ಕೈಬಿಟ್ಟಲ್ಲಿ ಅವುಗಳನ್ನು ಮೇಲಿನ ಹಂತದ ಅಧಿಕಾರಿಗಳ ತನಕ ಕೊಂಡೊಯ್ಯುವ ಅವಕಾಶವನ್ನು ಈ ಆಪ್ ನಲ್ಲಿ ನೀಡಿಲ್ಲ.
ಆಪ್ ಒಳಗೆ ದೂರುದಾರರು ಫೀಡ್ ಬ್ಯಾಕ್ ಅಥವಾ ತಮ್ಮ ಅಭಿಪ್ರಾಯ ತಿಳಿಸಲು ಅವಕಾಶ ಕಲ್ಪಿಸಿಲ್ಲ, ಡ್ಯಾಷ್ ಬೋರ್ಡ್ ಬಳಕೆದಾರರ ಸ್ನೇಹಿಯಾಗಿ ಅಭಿವೃದ್ಧಿಪಡಿಸಬೇಕಿದೆ. ಪ್ರಮುಖವಾಗಿ ನಾಗರೀಕರಿಂದ ಇರುವ ದೂರು ಮತ್ತು ಟೀಕೆಯೆಂದರೆ, ತಾವು ದಾಖಲಿಸಿದ ದೂರು ಪರಿಹಾರವಾಗದಿದ್ದರೂ, ಈ ಆಪ್ ನಲ್ಲಿ ತನ್ನಿಂದ ತಾನೇ ದೂರು ಪರಿಹಾರವಾಗಿದೆ ಎಂದು ಸಂದೇಶ ಬರುತ್ತದೆ ಎಂದು. ಈ ಬಗ್ಗೆ ಬಿಬಿಎಂಪಿ ಐಟಿ ವಿಭಾಗದ ಅಧಿಕಾರಿಗಳು ಗಮನಹರಿಸಬೇಕಿದೆ.