ಬೆಳಗಾವಿ, ಡಿ.14 www.bengaluruwire.com : ನಾಪತ್ತೆಯಾದ ಮಹಿಳೆ, ಮಕ್ಕಳ ಪತ್ತೆಗೆ ಮುಂಬರುವ ದಿನಗಳಲ್ಲಿ ಬಸ್, ರೈಲ್ವೇ ನಿಲ್ದಾಣಗಳಲ್ಲಿ ಕೃತಕ ಬುದ್ಧಿಮತ್ತೆ (AI) ಅಳವಡಿಸಿ ಸ್ಕ್ಯಾನಿಂಗ್ ಮಾಡುವ ಮೂಲಕ ಮಾನವ ಕಳ್ಳ ಸಾಗಣಿಕೆ (Human Trafficking)ಗೆ ಜಾಲ ಪತ್ತೆಗೆ ಕ್ರಮವಹಿಸಲಾಗುವುದು ಎಂದು ಡಿಸಿಎಂ ಡಿ.ಕೆ.ಶಿವಕುಮಾರ್ ಅವರು ವಿಧಾನಸಭೆಗೆ ಗುರುವಾರ ತಿಳಿಸಿದರು.
ಶಾಸಕ ವಿ.ಸುನೀಲ್ ಕುಮಾರ್ ಅವರ ಗಮನ ಸೆಳೆವ ಸೂಚನೆಗೆ ಗೃಹ ಸಚಿವ ಡಾ ಜಿ ಪರಮೇಶ್ವರ ಅವರ ಪರವಾಗಿ ಉತ್ತರಿಸಿದ ಶಿವಕುಮಾರ್ ಅವರು, “ನಾಪತ್ತೆ ಪ್ರಕರಣಗಳು ವರದಿಯಾದ ತಕ್ಷಣ ರಾಜ್ಯದ ಎಲ್ಲಾ ಪೊಲೀಸ್ ಠಾಣೆಗಳಿಗೆ ಆರೋಪಿಗಳ ಹಾಗೂ ಅಪಹೃತ ಮಗುವಿನ ಬಗ್ಗೆ ಸುಳಿವು ಪಡೆದುಕೊಳ್ಳಲು, ಪೋಷಕರ ಒಪ್ಪಿಗೆ ಮೇರೆಗೆ ಮಾಧ್ಯಮಗಳಲ್ಲಿ ಪ್ರಕಟಣೆ ಹೊರಡಿಸಲಾಗುತ್ತಿದೆ. ಗಡಿ ಪ್ರದೇಶಗಳಲ್ಲಿ ಭಿತ್ತಿ ಪತ್ರಗಳನ್ನು ಅಂಟಿಸಲಾಗುತ್ತಿದೆ” ಎಂದು ಹೇಳಿದರು.
“ದಾಖಲೆಗಳ ಪ್ರಕಾರ 2021 ರಲ್ಲಿ 10,081, 2022 ರಲ್ಲಿ 11,021 ಹಾಗೂ 2023 ರಲ್ಲಿ 11,193 ಮಹಿಳೆಯರು ನಾಪತ್ತೆಯಾಗಿದ್ದಾರೆ. ಇದನ್ನು ತಡೆಗಟ್ಟಲು ನಿರ್ಭಯ ನಿಧಿಯಡಿ (Nirbhaya Fund)ಯಲ್ಲಿ, 35 ಮಾನವ ಕಳ್ಳ ಸಾಗಾಣಿಕಾ ತಡೆ ಘಟಕಗಳನ್ನ ಸ್ಥಾಪಿಸಲಾಗಿದೆ. ಜೊತೆಗೆ ಮಕ್ಕಳ ಮಾರಾಟ ಪ್ರಕರಣಗಳನ್ನೂ ಪತ್ತೆ ಹಚ್ಚಲು ಗಮನಹರಿಸಲಾಗಿದೆ” ಎಂದರು.
ಪತ್ತೆಯಾಗದೆ ಬಾಕಿ ಉಳಿದಿರುವ ಪ್ರಕರಣಗಳ ಬಗ್ಗೆ ಅಧಿಕಾರಿಗಳಿಂದ ಸಂಪೂರ್ಣ ಮಾಹಿತಿ ಪಡೆದು ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದರು.