ಬೆಂಗಳೂರು, ಡಿ.13 www.bengaluruwire.com : ಸಮಾಜದಲ್ಲಿ ಹೆಣ್ಣುಮಕ್ಕಳ ಸಂಖ್ಯೆಯನ್ನು ವೃದ್ಧಿಸಲು, ಬಡತನ ರೇಖೆಗಿಂತ ಕೆಳಗಿರುವ ಕುಟುಂಬದಲ್ಲಿ ಹೆಣ್ಣು ಮಗುವಿನ ಜನನ ಉತ್ತೇಜಿಸಲು ರಾಜ್ಯ ಸರ್ಕಾರ 2006-07ನೇ ಇಸವಿಯಲ್ಲಿ ಜಾರಿಗೆ ತಂದಿದ್ದೇ “ಭಾಗ್ಯಲಕ್ಷ್ಮಿ ಬಾಂಡ್” ಎಂಬ ಯಶಸ್ವೀ ಕಾರ್ಯಕ್ರಮ.
ಈ ಯೋಜನೆಯ ಆರ್ಥಿಕ ಸೌಲಭ್ಯವನ್ನು ಹೆಣ್ಣು ಮಗುವಿಗೆ ಅದರ ತಾಯಿ, ತಂದೆ ಅಥವಾ ಪೋಷಕರ ಮೂಲಕ ಕೆಲವು ನಿಬಂಧನೆಗಳನ್ನು ಪೂರೈಸಿದಲ್ಲಿ ನೀಡಲಾಗುತ್ತಿದೆ. ಈ ಹಿಂದೆ ಯೋಜನೆ ಆರಂಭವಾದಾಗ 2006-07 ರಿಂದ 2019-20 ನೇ ಸಾಲಿನವರೆಗೆ ಭಾರತೀಯ ಜೀವ ವಿಮಾ ನಿಗಮವು ಪಾಲುದಾರ ಹಣಕಾಸು ಸಂಸ್ಥೆಯಾಗಿತ್ತು. ಆದರೆ 2020-21ನೇ ಸಾಲಿನಿಂದ ಆಡಳಿತಾತ್ಮಕ ಕಾರಣಗಳಿಂದ ಭಾಗ್ಯಲಕ್ಷ್ಮಿ ಯೋಜನೆಯನ್ನು ಅಂಚೆ ಇಲಾಖೆಯ ಸುಕನ್ಯಾ ಸಮೃದ್ಧಿ ಖಾತೆ ಯೋಜನೆಯ ಮೂಲಕ ಅನುಷ್ಠಾನಗೊಳಿಸಲಾಗಿದೆ.
ಭಾಗ್ಯಲಕ್ಷ್ಮಿ ಸುಕನ್ಯಾ ಸಮೃದ್ಧಿ ಖಾತೆ ಯೋಜನೆ ಬಗ್ಗೆ :
ಭಾಗ್ಯಲಕ್ಷ್ಮಿ ಯೋಜನೆಯ ಹೆಸರು, ಮತ್ತು ಫಲಾನುಭವಿಗಳ ನೋಂದಣಿಗೆ ಷರತ್ತುಗಳು ಹಿಂದಿನಂತೆಯೇ ಮುಂದುವರೆಯುತ್ತವೆ. ಯೋಜನೆಯಡಿ ಬಿಪಿಎಲ್ ಕುಟುಂಬದ ಇಬ್ಬರು ಹೆಣ್ಣು ಮಕ್ಕಳಿಗೆ ಪ್ರತಿ ಮಗುವಿನ ಹೆಸರಿನಲ್ಲಿ ವಾರ್ಷಿಕ 3,000 ರೂ.ನಂತೆ 18 ವರ್ಷಗಳವರೆಗೆ ಒಟ್ಟು ರೂ.45,000 ರೂ. ಗಳನ್ನು ಸರ್ಕಾರದಿಂದ ಠೇವಣಿ ಹೂಡಲಾಗುತ್ತದೆ. 21 ವರ್ಷ ಅವಧಿ ಪೂರ್ಣಗೊಂಡ ನಂತರ ಅಂದಾಜು ಪರಿಪಕ್ವ ಮೊತ್ತ ಹಾಗೂ ಪ್ರಸ್ತುತ ಬಡ್ಡಿ ಸೇರಿದಂತೆ 1.27 ಲಕ್ಷ ರೂ. ನೀಡಲಾಗುತ್ತದೆ. ಆ ಬಾಲಕಿಯು 10ನೇ ತರಗತಿ ನಂತರ ಉನ್ನತ ವಿದ್ಯಾಭ್ಯಾಸಕ್ಕೆ ಅಗತ್ಯವಾದರೆ ತನ್ನ ಖಾತೆಯಲ್ಲಿರುವ ಮೊತ್ತದ ಶೇ.50ರಷ್ಟು ಭಾಗವನ್ನು ಹಿಂಪಡೆಯಲು ಅವಕಾಶವಿರುತ್ತದೆ.
ಪ್ರಸ್ತುತ ಯೋಜನೆಯ ಸೌಲಭ್ಯಕ್ಕಾಗಿ ನಿಗದಿತ ಅರ್ಹತೆಗಳು :
‘ಆಹಾರ ಮತ್ತು ನಾಗರೀಕ ಸರಬರಾಜು ಇಲಾಖೆ ಗುರುತಿಸಿ ಶಾಶ್ವತ ಬಿಪಿಎಲ್ ಕಾರ್ಡ್ ಅಥವಾ ಆದ್ಯತಾ ಕುಟುಂಬ ಪಡಿತರ ಚೀಟಿ ಹೊಂದಿರುವ ಬಡತನ ರೇಖೆಗಿಂತ ಕೆಳಗಿರುವ ಕುಟುಂಬದಲ್ಲಿ ಜನಿಸಿದ ಎರಡು ಹೆಣ್ಣು ಮಕ್ಕಳು ಯೋಜನೆಯಡಿ ನೋಂದಣಿ ಮಾಡಲು ಅರ್ಹರಿರುತ್ತಾರೆ. ಕುಟುಂಬದಲ್ಲಿ ಮಕ್ಕಳ ಸಂಖ್ಯೆ ಎರಡನ್ನು ಮೀರಿರಬಾರದು.
ಈ ಕುಟುಂಬವು ಮಗುವಿನ ತಂದೆ ಅಥವಾ ತಾಯಿ ಯಾರಾದರೊಬ್ಬರು ಶಾಶ್ವತ ಕುಟುಂಬ ಯೋಜನೆಯ ಪದ್ಧತಿಯನ್ನು ಅಳವಡಿಸಿಕೊಂಡಿರಬೇಕು. ವಿಶೇಷ ಪ್ರಕರಣಗಳಲ್ಲಿ ಅಂದರೆ ಮೊದಲನೇ ಹೆರಿಗೆಯಲ್ಲಿ ಅವಳಿ, ತ್ರಿವಳಿ ಹೆಣ್ಣು ಮಕ್ಕಳು ಜನಿಸಿದ್ದಲ್ಲಿ ಹಾಗೂ ಎರಡನೇ ಹೆರಿಗೆಯಲ್ಲಿ ಅವಳಿ ಅಥವಾ ತ್ರಿವಳಿ ಹೆಣ್ಣು ಮಕ್ಕಳು ಜನಿಸಿದ್ದಲ್ಲಿ ಈ ಎಲ್ಲಾ ಹೆಣ್ಣು ಮಕ್ಕಳಿಗೂ “ಭಾಗ್ಯಲಕ್ಷ್ಮಿ ಸುಕನ್ಯಾ ಸಮೃದ್ಧಿ” ಸೌಲಭ್ಯ ನೀಡುವುದು. ಈ ಸೌಲಭ್ಯವನ್ನು ಎರಡು ಹೆರಿಗೆಗೆ ಮಾತ್ರ ಮಿತಿಗೊಳಿಸಲಾಗಿರುತ್ತದೆ. ಇಂತಹ ಪ್ರಕರಣಗಳಲ್ಲಿ ಮಾತ್ರ ಕುಟುಂಬದ ಮಕ್ಕಳ ಸಂಖ್ಯೆ ಎರಡನ್ನು ಮೀರಿರಬಾರದು ಎಂಬ ನಿಯಮವನ್ನು ಸಡಿಲಿಸಲಾಗಿದೆ.
ನಗರ ಮತ್ತು ಗ್ರಾಮಾಂತರ ಪ್ರದೇಶಗಳಲ್ಲಿ ನೋಂದಣಿ :
ಈ ಯೋಜನೆಯನ್ನು ಗ್ರಾಮಾಂತರ ಮತ್ತು ನಗರ ಪ್ರದೇಶಗಳಲ್ಲೂ ಅನುಷ್ಠಾನಗೊಳಿಸಲಾಗಿದೆ. ಅಂಗನವಾಡಿ ಕೇಂದ್ರಗಳು ಇಲ್ಲದೆ ಇರುವ ಪ್ರದೇಶಗಳಲ್ಲಿ ವಾಸಿಸುವ ಪೋಷಕರು ತಮ್ಮ ಸಮೀಪದ ಅಂಗನವಾಡಿ ಕೇಂದ್ರದಲ್ಲಿ ನೋಂದಣಿ ಮಾಡಿಸಬಹುದು. ಮಗುವಿನ ಜನನವನ್ನು ಕಡ್ಡಾಯವಾಗಿ ನೋಂದಾಯಿಸಿರಬೇಕು ಹಾಗೂ ಜನನ ಪ್ರಮಾಣ ಪತ್ರವನ್ನು ಹೊಂದಿರಬೇಕು ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ತನ್ನ ಮಾರ್ಗಸೂಚಿಯಲ್ಲಿ ತಿಳಿಸಿದೆ.
ಪರಿಪಕ್ವ ಮೊತ್ತ ಪಡೆಯಲು ಕನಿಷ್ಠ 8ನೇ ತರಗತಿ ಓದಿರಬೇಕು :
ಪರಿಪಕ್ಷ ಮೊತ್ತವನ್ನು ಪಡೆಯಲು ಫಲಾನುಭವಿಯಾದ ಹೆಣ್ಣುಮಗುವು ಕನಿಷ್ಠ 8ನೇ ತರಗತಿಯವರೆಗೆ ವಿದ್ಯಾಭ್ಯಾಸವನ್ನು ಪಡೆದಿರಬೇಕು. ಆದರೆ ವಿಕಲಚೇತನ ಮಕ್ಕಳಿಗೆ ವಿನಾಯಿತಿ ನೀಡಲಾಗಿದೆ. ಇಂತಹ ಮಕ್ಕಳು 1 ರಿಂದ 5ನೇ ತರಗತಿವರೆಗೆ ವ್ಯಾಸಂಗ ಮಾಡಿರಬೇಕು ಎಂದು ನಿಬಂಧನೆ ವಿಧಿಸಲಾಗಿದೆ. ಒಂದು ವೇಳೆ ವಿಕಲಚೇತನ ಮಕ್ಕಳು ತೀವ್ರತರವಾದ ವಿಕಲತೆಯಿಂದ ಬಳಲುತ್ತಿದ್ದಲ್ಲಿ ಸಂಬಂಧಪಟ್ಟ ಜಿಲ್ಲಾ ಉಪನಿರ್ದೇಶಕರು ಪ್ರತಿ ಪ್ರಕರಣಗಳ ಸಾಧಕ-ಬಾಧಕಗಳನ್ನು ಪರಿಶೀಲಿಸಿ ಈ ಷರತ್ತನ್ನು ಸಹ ಸಡಿಲಿಸಲು ಅಧಿಕಾರ ನೀಡಲಾಗಿದೆ.
5ನೇ ಮತ್ತು 8ನೇ ಉತ್ತೀರ್ಣರಾಗಿರುವ ಬಗ್ಗೆ ಸಂಬಂಧಿಸಿದ ಶಾಲೆಯ ಮುಖ್ಯೋಪಾಧ್ಯಾಯರಿಂದ ದೃಢೀಕರಣ ಪಡೆದು ಸಲ್ಲಿಸಬೇಕಾಗುತ್ತದೆ. ಬಾಲಕಾರ್ಮಿಕ ನಿಷೇಧ ಕಾಯ್ದೆ 1986ರಂತೆ ಬಾಲ ಕಾರ್ಮಿಕಳಾಗಿರತಕ್ಕದ್ದಲ್ಲ. 18 ವರ್ಷ ಪೂರೈಸುವ ಮೊದಲು ವಿವಾಹವಾಗತಕ್ಕದ್ದಲ್ಲ.
ಆಯ್ಕೆಯಾದ ಫಲಾನುಭವಿಯು ಮೇಲೆ ತಿಳಿಸಿದ ಅರ್ಹತೆಯ ಮಾನದಂಡಗಳಲ್ಲಿನ ಯಾವುದೇ ಒಂದು ಷರತ್ತನ್ನು ಪೂರೈಸದಿದ್ದಲ್ಲಿ ಸೌಲಭ್ಯವನ್ನು ಸರ್ಕಾರ ಮುಟ್ಟುಗೋಲು ಹಾಕಿಕೊಳ್ಳುತ್ತದೆ. ಈ ಬಗ್ಗೆ ಮಕ್ಕಳ ಪೋಷಕರು ಎಚ್ಚರವಹಿಸಬೇಕಿದೆ.
ಭಾಗ್ಯಲಕ್ಷ್ಮಿ ಸುಕನ್ಯಾ ಸಮೃದ್ಧಿ ಖಾತೆ ಯೋಜನೆಯ ಬಗ್ಗೆ ಹೆಚ್ಚಿನ ಮಾಹಿತಿಗಾಗಿ ಈ ಮುಂದಿನ ವೆಬ್ ಪೋರ್ಟಲ್ ಗೆ ಭೇಟಿ ನೀಡಬಹುದು : http://blakshmi.kar.nic.in:8080/First.jsp