ಬೆಂಗಳೂರು, ಡಿ.10 www.bengaluruwire.com : ಸಿಲಿಕಾನ್ ಸಿಟಿ ಬೆಂಗಳೂರಿನ ಐತಿಹಾಸಿಕ ಮಹತ್ವದ ದೊಡ್ಡ ಜಾತ್ರೆಯೆಂದೇ ಪರಿಗಣಿತವಾದ ಕಡಲೆಕಾಯಿ ಪರಿಷೆ ನಾಳೆಯಿಂದ ಬಸವನಗುಡಿಯಲ್ಲಿ ನಡೆಯಲಿದೆ.
ಕಾರ್ತಿಕ ಮಾಸದ ಕೊನೆಯ ಸೋಮವಾರ ದೊಡ್ಡ ಬಸವಣ್ಣ ದೇವಸ್ಥಾನದಲ್ಲಿ ಬಸವಣ್ಣನಿಗೆ ಕಡಲೆಕಾಯಿ ಹಾಗೂ ಪುಷ್ಪಗಳಿಂದ ಅಲಂಕಾರ ಮಾಡಿ ಸಿಂಗರಿಸಲಾಗುತ್ತದೆ. ಕಡಲೆಕಾಯಿಗಳಿಂದ ದೊಡ್ಡಗಣಪತಿಗೆ ಅಭಿಷೇಕ ನಡೆಯಲಿದೆ. ನಾಳೆ ಮತ್ತು ನಾಡಿದ್ದು ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ನಾಳೆ ಬೆಳಿಗ್ಗೆ ಕಡಲೆಕಾಯಿ ಪರಿಷೆಗೆ ಅಧಿಕೃತ ಚಾಲನೆ ನೀಡಲಿದ್ದಾರೆ.
ಎರಡನೇ ಶನಿವಾರವಾದ ಕಾರಣ ನಿನ್ನೆ ರಜೆಯಿತ್ತು. ಹೀಗಾಗಿ ಬಸವನಗುಡಿ ಮುಖ್ಯರಸ್ತೆ, ಅಡ್ಡರಸ್ತೆಗಳಲ್ಲಿ ಕಡಲೆಕಾಯಿ ಪರಿಷೆಯ ಹಬ್ಬದ ಸಂಭ್ರಮ ಕಂಡು ಬಂದಿತ್ತು. ಅದರಲ್ಲೂ ಸಂಜೆಯ ಮೇಲೆ ದೊಡ್ಡಗಣಪತಿ ದೇವಸ್ಥಾನ ಮುಂಭಾಗದ ರಸ್ತೆ, ಬಿಎಂಎಸ್ ಮಹಿಳಾ ಕಾಲೇಜು ಹಾಗೂ ಸುತ್ತಮುತ್ತಲ ರಸ್ತೆಗಳಲ್ಲಿ ಕಡಲೆಕಾಯಿ ವ್ಯಾಪಾರಿಗಳು, ಹಸಿ ಮತ್ತು ಹುರಿದ ಕಡಲೆಕಾಯಿಗಳನ್ನು ಮಾರುತ್ತಿದ್ದರು. ಜನರೂ ತಮ್ಮ ಸ್ನೇಹಿತರು, ಬಂಧು ಬಾಂಧವರೊಂದಿಗೆ ಆಗಮಿಸಿ ರಜೆಯಿದ್ದ ಕಾರಣ ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿದ್ದರು.
ಭಾನುವಾರ ಜನಜಂಗುಳಿ ಹೆಚ್ಚಳ ನಿರೀಕ್ಷೆ :
ಸೋಮವಾರ ಪರಿಷೆಗೆ ಬರಲಾಗದವರು ರಜಾದಿನವಾದ ಭಾನುವಾರವಾದ ಇಂದೂ ಸಹ ಬಸವನಗುಡಿಯತ್ತ ಜನಸಾಗರ ಹರಿದು ಬರುವ ನಿರೀಕ್ಷೆಯಿದೆ. ಶನಿವಾರದಿಂದಲೇ ಪರಿಷೆ ನಡೆಯುವ ಸ್ಥಳದ ಸುತ್ತಮುತ್ತ ಬೀದಿ ಬದಿ ವ್ಯಾಪಾರಿಗಳ ರಸ್ತೆ ಮಧ್ಯೆ, ಇಕ್ಕೆಲಗಳಲ್ಲಿ ಕಡಲೆಕಾಯಿ, ದಿನ ಬಳಕೆಯ ವಸ್ತುಗಳು, ಬಲೂನು, ಆಟಿಕೆ ಸಾಮಾನುಗಳು, ಗೃಹೋಪಯೋಗಿ ವಸ್ತುಗಳು, ಅಲಂಕಾರಿಕೆ ವಸ್ತುಗಳ ಮಳಿಗೆ, ಬಗೆ ಬಗೆಯ ತಿಂಡಿ-ತಿನಿಸುಗಳ ಮಳಿಗೆಗಳು ತೆರೆದ ಕಾರಣ ವ್ಯಾಪಾರವೂ ಬಿರುಸುಗೊಂಡಿತ್ತು. ರಸ್ತೆ ಮಧ್ಯೆ ಜನ ಸಂಚಾರ ಹೆಚ್ಚಾದ ಕಾರಣ ವಾಹನ ಸಂಚಾರಕ್ಕೆ ತೊಡಕಾಗಿತ್ತು. ಹೀಗಾಗಿ ಈ ರಸ್ತೆಗಳಲ್ಲಿ ವಾಹನಗಳನ್ನು ಪರ್ಯಾಯ ರಸ್ತೆಗಳತ್ತ ಸಂಚಾರಿ ಪೊಲೀಸರು ಬಿಟ್ಟು ಜನರ ಓಡಾಟಕ್ಕೆ ಅನುವು ಮಾಡಿಕೊಡುತ್ತಿದ್ದರು.
ಗ್ರಾಹರನ್ನು ಸೆಳೆಯಲು ಸಾವಯವ ಬೆಲ್ಲದಿಂದ ಅಲಂಕಾರ :
ಪರಿಷೆಯಲ್ಲಿ ಭದ್ರತೆಗಾಗಿ ಆಯಕಟ್ಟಿನ ಸ್ಥಳದಲ್ಲಿ ಸಿಸಿಟಿ ಕ್ಯಾಮೆರಾವನ್ನು ಅಳವಡಿಸಿಲಾಗಿದೆ. ಸಂಚಾರಿ ಮತ್ತು ಸಿವಿಲ್ ಪೊಲೀಸರನ್ನು ಕರ್ತವ್ಯಕ್ಕೆ ನಿಯೋಜಿಸಲಾಗಿದೆ. ದೊಡ್ಡಗಣಪತಿ ದೇವಸ್ಥಾನದ ಮುಂಭಾಗದ ದ್ವಾರದಲ್ಲಿ ಸಾವಯವ ಬೆಲ್ಲದ ಸ್ಟಾಲ್ ನಲ್ಲಿ ತರಹೇವಾರಿ ಬೆಲ್ಲದ ಅಚ್ಚು ಹಾಗೂ ಪುಡಿ ಬೆಲ್ಲದಿಂದ ಆಲದ ಮನೆ, ವಿವಿಧ ಪ್ರತಿಕೃತಿ, ಕಡಲೆಕಾಯಿ ಹಾಗೂ ಬೆಲ್ಲದಿಂದ ಬಸವಣ್ಣನನ್ನು ಅಲಂಕಾರ ಮಾಡಲಾಗಿದೆ. ಇದು ನೋಡುಗರನ್ನು ಸೆಳೆಯುತ್ತಿದೆ.
ಕಡಲೆಕಾಯಿ ಪರಿಷೆಗೆ ಮಾಗಡಿ, ದೊಡ್ಡಬಳ್ಳಾಪುರ, ಕನಕಪುರ ರಾಮನಗರ, ಚಿಕ್ಕಬಳ್ಳಾಪುರ, ತುಮಕೂರು, ಕೋಲಾರ ಮಂಡ್ಯ ಮೈಸೂರು, ತಮಿಳುನಾಡು ಸೇರಿದಂತೆ ಹಲವು ಕಡೆಗಳಿಂದ ವ್ಯಾಪಾರಿಗಳು ವಿವಿಧ ಬಗೆಯ ಕಡಲೆಕಾಯಿಗಳನ್ನು ತಂದು ಮಾರಾಟ ಮಾಡುತ್ತಿದ್ದಾರೆ. ಕಡಲೆಕಾಯಿ ಲೀಟರ್ ಗೆ 45 ರಿಂದ 50 ರೂ. ಹಾಗೂ ಒಂದು ಸೇರಿಗೆ 20 ರಿಂದ 25 ರೂ. ಸರಾಸರಿಯಾಗಿ ಮಾರಾಟ ಮಾಡಲಾಗುತ್ತಿದೆ.
ಡಿ.11ರ ಕಡೆ ಕಾರ್ತಿಕ ಸೋಮವಾರ ಸಂಜೆ 6ಕ್ಕೆ ಕೆಂಪಾಂಬುಧಿ ಕೆರೆಯಲ್ಲಿ ತೆಪ್ಪೋತ್ಸವ ನಡೆಯಲಿದೆ. ಅದೇ ದಿನ ಸಂಜೆ ಕಹಳೆಬಂಡೆ ಉದ್ಯಾನವನದಲ್ಲಿ ಮೇಖಲಾ ಅಗ್ನಿಹೋತ್ರಿ ತಂಡದವರಿಂದ ನಾದ-ನಿನಾದ ಕಾರ್ಯಕ್ರಮ ನಡೆಯಲಿದೆ. ನರಸಿಂಹಸ್ವಾಮಿ ಉದ್ಯಾನವನದಲ್ಲಿ ಸಿರಿಕಲಾ ಮೇಳ ತಂಡದಿಂದ ಯಕ್ಷಗಾನ ಆಯೋಜಿಸಲಾಗಿದೆ.
ಡಿ.12 ಮಂಗಳವಾರ ಸಂಜೆ ಕಹಳೆ ಬಂಡೆಯಲ್ಲಿ ನಾಟ್ಯ ಭೈರವಿ ಶಾಲೆ ತಂಡದಿಂದ ನೃತ್ಯ, ನರಸಿಂಹ ಸ್ವಾಮಿ ಉದ್ಯಾನವನದಲ್ಲಿ ಸೀತಾರಾಮ ಮುನಿಕೋಟಿ ಅವರಿಂದ ಹರಿಕಥೆ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಗ್ರಾಮೀಣ ಸೊಗಡಿನ ಈ ಹಬ್ಬವನ್ನು ಪ್ಲಾಸ್ಟಿಕ್ ಮುಕ್ತವಾಗಿ ಆಚರಿಸಲು ಬಿಬಿಎಂಪಿ ನಿರ್ಧರಿಸಿದೆ. ಹಾಗೂ ಪರಿಷೆಯಲ್ಲಿ ಉತ್ಪತ್ತಿಯಾಗುವ ಕಸವನ್ನು ಆಗಾಗ್ಗೆ ತೆಗೆಯಲು ಈಗಾಗಲೇ ಪಾಲಿಕೆ ಪೌರಕಾರ್ಮಿಕರನ್ನು ನಿಯೋಜಿಸಲಾಗಿದೆ.
ಕಳೆದ ವರ್ಷ ಸಾರ್ವತ್ರಿಕ ಚುನಾವಣೆಯಿದ್ದ ಕಾರಣ ರಾಜಕಾರಣಿಗಳ ಓಡಾಟ ಹೆಚ್ಚಾಗಿತ್ತು. ಆದರೆ ಈ ಬಾರಿ ರಾಜಕಾರಣಿಗಳ ಹಾವಳಿ ಕಡಿಮೆಯಿರುವ ಸಾಧ್ಯತೆಯಿದೆ. ಬಿಬಿಎಂಪಿಯಿಂದಲೂ ಮೇಯರ್ ಆಡಳಿತವಿದ್ದಾಗ ಕಡಲೆಕಾಯಿ ಪರಿಷೆಗೆ ತೋರುತ್ತಿದ್ದ ಆಸಕ್ತಿ ಈ ಬಾರಿ ಕಡಿಮೆ ಇರುವಂತೆ ತೋರುತ್ತಿದೆ ಎಂದು ಕಡಲೆಕಾಯಿ ಪರಿಷೆಗೆ ಪ್ರತಿವರ್ಷ ತಪ್ಪದೆ ಭೇಟಿಕೊಡುವ ಶ್ರೀನಗರದ ನಿವಾಸಿ ರಮೇಶ್ ಹೇಳುತ್ತಾರೆ.