ನವದೆಹಲಿ, ನ.28 www.bengaluruwire.com : ಹೊಸ ವರ್ಷ ಸಮೀಪಿಸುತ್ತಿರುವ ಬೆನ್ನಲ್ಲೇ ಖಗೋಳ ಶಾಸ್ತ್ರಜ್ಞರು ಬಾನಿನಲ್ಲಿ ವಿಶೇಷ ಖಗೋಳ ವಿಸ್ಮಯವನ್ನು ಗುರುತಿಸಿದ್ದಾರೆ. ‘ಡೆವಿಲ್ ಕಾಮೆಟ್’ (Devil Horn Comet) ಎಂದು ಕರೆಯಲಾಗುವ ಈ ಧೂಮಕೇತು ಇನ್ನು ಕೆಲವೇ ತಿಂಗಳಿನಲ್ಲಿ ಭೂಮಿಯ ಸನಿಹ ಬರಲಿದ್ದು, ಬರಿಕಣ್ಣಿನಲ್ಲಿ ಕಾಣಬಹುದು.
ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ಆಸ್ಟ್ರೋಫಿಸಿಕ್ಸ್(Indian Institute Of Astrophysics – IIA)ನ ಖಗೋಳಶಾಸ್ತ್ರಜ್ಞರು ಇತ್ತೀಚೆಗೆ ಲಡಾಖ್‌ನ ಹಾನ್ಲೆಯಲ್ಲಿರುವ ಹಿಮಾಲಯನ್ ಚಂದ್ರ ಟೆಲಿಸ್ಕೋಪ್ (HCT) ನಿಂದ ‘ಡೆವಿಲ್ ಕಾಮೆಟ್’ ಧೂಮಕೇತು ಅಥವಾ ಪಿ12/ಪೋನ್ಸ್-ಬ್ರೂಕ್ಸ್ (P12/Pons-Brooks) ಎಂದು ಕರೆಯಲಾಗುವ ಧೂಮಕೇತುವಿನ ಛಾಯಾಚಿತ್ರ ತೆಗೆದಿದ್ದಾರೆ. ಈ ಧೂಮಕೇತು ಇತ್ತೀಚೆಗೆ ಬಾಹ್ಯಾಕಾಶ ಆಸಕ್ತಿ ಹೊಂದಿದ ಸಮುದಾಯ ಮತ್ತು ಮಾಧ್ಯಮಗಳಿಂದ ಹೆಚ್ಚು ಗಮನ ಸೆಳೆದಿತ್ತು. ಅನಿಲ ಮತ್ತು ಧೂಳಿನ ಅನೇಕ ಆಸ್ಪೋಟ ಮತ್ತು ಅದರ ಆಕರ್ಷಕ ನೋಟದಿಂದಾಗಿ ‘ಡೆವಿಲ್ ಕಾಮೆಟ್’ ಅಥವಾ ‘ಮಿಲೇನಿಯಮ್ ಫಾಲ್ಕನ್’ ಎಂದೇ ಅನ್ವರ್ಥ ನಾಮವನ್ನು ಹೊಂದಿದೆ. ಈ ಧೂಮಕೇತು ಮುಂಬರುವ ತಿಂಗಳುಗಳಲ್ಲಿ ಪ್ರಕಾಶಮಾನವಾಗುತ್ತಾ ಬರಿಗಣ್ಣಿಗೆ ಕಾಣಲಿದೆ ಎಂದು ಖಗೋಳ ಶಾಸ್ತ್ರಜ್ಞರು ಹೇಳಿದ್ದಾರೆ.
ಮೂರು ಮೌಂಟ್ ಎವರೆಸ್ಟ್ ಪರ್ವತಕ್ಕಿಂತ ದೊಡ್ಡದಾಗಿರುವ ಈ ಧೂಮಕೇತುವು “ಶೀತ ಜ್ವಾಲಾಮುಖಿ” ಧೂಮಕೇತು ಎಂದು ಕರೆಯಲಾಗುತ್ತದೆ. ಸರಿಸುಮಾರು 18 ಮೈಲುಗಳಷ್ಟು ವ್ಯಾಸವನ್ನು ಹೊಂದಿರುವ ಈ ಕಾಮೆಟ್, ಮಂಜುಗಡ್ಡೆ ಮತ್ತು ಅನಿಲದ ಅಪಯಕಾರಿ ಅಸ್ಪೋಟಕ್ಕೆ ಕುಖ್ಯಾತವಾಗಿದೆ. ಈ ಚಟುವಟಿಕೆಯು ದೆವ್ವದ ಕೊಂಬುಗಳನ್ನು ಹೋಲುವ ಹಾದಿಯ ರೀತಿ ಕಂಡು ಬರುವುದರಿಂದ ಬಾಹ್ಯಾಕಾಶದಲ್ಲಿ ಅತ್ಯಾಕರ್ಷಕವಾಗಿ ಕಂಡು ಬರುತ್ತದೆ.
“ಈ ಧೂಮಕೇತುವು ಈಗಾಗಲೇ ಜುಲೈನಿಂದ ನಾಲ್ಕು ಬಾರಿ ಆಸ್ಪೋಟಿಸಿದೆ. ಪ್ರತಿಯೊಂದೂ ಬಾರಿ ಸ್ಪೋಟವಾದಗಲೂ ಈ ಕಾಮೆಟ್ ನ ಮೇಲ್ಮೈಯಿಂದ ಶತಕೋಟಿ ಕೆಜಿಯಷ್ಟು ಅನಿಲ ಮತ್ತು ಧೂಳನ್ನು ಬಿಡುಗಡೆ ಮಾಡಿತ್ತು. ಇದರಿಂದ ಈ ಡೆವಿಲ್ ಕಾಮೆಟ್ ಸುಮಾರು 100 ಪಟ್ಟು ಹೆಚ್ಚು ಪ್ರಕಾಶಮಾನಗೊಳ್ಳುವಂತೆ ಮಾಡಿದೆ” ಎಂದು ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ಆಸ್ಟ್ರೋಫಿಸಿಕ್ಸ್ನ್ ಖಗೋಳಶಾಸ್ತ್ರಜ್ಞರಾದ ಮಾರ್ಗರಿಟಾ ಸಫೊನೊವಾ ಹೇಳಿದ್ದಾರೆ.
ಈ ಧೂಮಕೇತುವು ಮುಂದಿನ ವರ್ಷ ಏಪ್ರಿಲ್ 21ರಂದು ಸೂರ್ಯನ ಸಮೀಪದಲ್ಲಿ ಹಾದು ಹೋಗಲಿದೆ. 2024ರ ಜೂನ್ 2 ರಂದು ಭೂಮಿಗೆ ಅತ್ಯಂತ ಸಮೀಪದಲ್ಲಿ ಹಾದು ಹೋಗಲಿದೆ. ಅಂದರೆ ಈ ಕೊಂಬಿನ ಆಕಾರದ ಧೂಮಕೇತುವು ನಮ್ಮಿಂದ ಭೂಮಿ ಸೂರ್ಯನ ದೂರಕ್ಕಿಂತ 1.5 ಪಟ್ಟು ದೂರದಲ್ಲಿರುತ್ತದೆ. ಈ ಧೂಮಕೇತುವನ್ನು ಚಿಕ್ಕ ದೂರದರ್ಶಕಗಳು ಅಥವಾ ದುರ್ಬೀನುಗಳಿಂದ ಅಥವಾ ಆ ಸಮಯದಲ್ಲಿ ಬರಿಗಣ್ಣಿನಿಂದ ಸುಲಭವಾಗಿ ನೋಡಬಹುದಾಗಿದೆ ಎಂದು ನಿರೀಕ್ಷಿಸಲಾಗಿದೆ. “ಧೂಮಕೇತುಗಳು ಯಾವಾಗಲೂ ನಮ್ಮೆಲ್ಲರಿಗೂ ಹೆಚ್ಚಿನ ಆಕರ್ಷಣೆಯನ್ನು ಹೊಂದಿವೆ ಮತ್ತು ಮುಂದಿನ ತಿಂಗಳುಗಳಲ್ಲಿ ನಾವು ಈ ಧೂಮಕೇತುವನ್ನು ನಮ್ಮ ದೂರದರ್ಶಕಗಳೊಂದಿಗೆ ಛಾಯಾಚಿತ್ರ ಮಾಡಲಿದ್ದೇವೆ” ಎಂದು ಐಐಎನಲ್ಲಿನ ಔಟ್ ರೀಚ್ ವಿಭಾಗದ ಮುಖ್ಯಸ್ಥ ನೀರುಜ್ ಮೋಹನ್ ರಾಮಾನುಜಮ್ ಹೇಳಿದ್ದಾರೆ.
ಪಿ12 ಅಥವಾ ಪೂನ್ಸ್ ಬ್ರೂಕ್ಸ್ ಧೂಮಕೇತುವನ್ನು 1812 ಇಸವಿಯಲ್ಲಿ ಮೊತ್ತ ಮೊದಲಿಗೆ ಕಂಡುಹಿಡಿಯಲಾಯಿತು. ಬಳಿಕ ಈ ಧೂಮಕೇತುವು 1883 ಹಾಗೂ 1953ರಲ್ಲಿ ಅಗಸದಲ್ಲಿ ಕಾಣಿಸಿಕೊಂಡಿತ್ತು. ಈ ಡೆವಿಲ್ ಕಾಮೆಟ್ ಸೂರ್ಯನನ್ನು ಒಂದು ಬಾರಿ ಸುತ್ತಲು ಬರೋಬ್ಬರಿ 71 ವರ್ಷವನ್ನು ತೆಗೆದುಕೊಳ್ಳುತ್ತದೆ. ಖಗೋಳಶಾಸ್ತ್ರಜ್ಞರು ಈ ಹಿಂದೆ ಸೂರ್ಯನನ್ನು ಸುತ್ತುತ್ತಿರುವ ಸಂದರ್ಭದಲ್ಲಿ ಈ ಕಾಮೆಟ್ ಕೇಂದ್ರ ಕೋಶದಿಂದ ಅನಿಲ ಮತ್ತು ಧೂಳಿನ ಅನೇಕ ಹೊರಸೂಸುವಿಕೆಯನ್ನು ಗಮನಿಸಿದ್ದರು. ಇದರಿಂದ ಡೆವಿಲ್ ಕಾಮೆಟ್ ಪ್ರಾಣಿಯ ಕೊಂಬಿನ ಹೋಲಿಕೆಯಂತೆ ತೋರುತ್ತಿತ್ತು ಎಂದು ಬಣ್ಣಿಸಿದ್ದರು. “ನವೆಂಬರ್ 14ರಂದು ಗಮನಿಸಿದಂತೆ ಇತ್ತೀಚಿಗೆ ಈ ಡೆವಿಲ್ ಕಾಮೆಟ್ ನಲ್ಲಿನ ಹೆಪ್ಪುಗಟ್ಟಿದ ಹಿಮವು ಸೂರ್ಯನ ಬೆಳಕಿನಿಂದ ಬಿಸಿಯಾಗಿ ಅನಿಲ ಸ್ಪೋಟಗಳು ನಡೆದು ಧೂಮಕೇತುವಿನ ಹೊರಪದರದಲ್ಲಿ ಬಿರುಕುಗಳು ನಿರ್ಮಾಣವಾಗಿರಬಹುದು ಎಂದು ಬಾಹ್ಯಾಕಾಶ ತಜ್ಞರು ತಿಳಿಸಿದ್ದಾರೆ. .