(ಪ್ರಧಾನ ಚಿತ್ರದ ಚಿತ್ರಕೃಪೆ : ಸ್ವರಾಜ್ಯ ಮ್ಯಾಗಜೀನ್)
ವೈದ್ಯಕೀಯ ರೋಗ ನಿರ್ಣಯದಲ್ಲಿ ಅತ್ಯಂತ ವಿಶ್ವಾಸಾರ್ಹ, ಪರಿಣಾಮಕಾರಿ ಹಾಗೂ ನಿಖರತೆಯ ಸಾಧನವಾಗಿರುವ ಎಂಆರ್ ಐ (MRI – ಮ್ಯಾಗ್ನೆಟಿಕ್ ರೆಸೋನೆನ್ಸ್ ಇಮೇಜಿಂಗ್) ಇಷ್ಟು ವರ್ಷ ವಿದೇಶಗಳ ಮೇಲೆ ಭಾರತ ಅವಲಂಬಿತವಾಗಬೇಕಿತ್ತು. ಆದರೆ ಇನ್ನು ಮುಂದೆ ಸ್ವದೇಶಿ ನಿರ್ಮಿತ ಎಂಆರ್ ಐ ಯಂತ್ರವು ಲಭ್ಯವಾಗಲಿದೆ.
ದೇಹದ ಪ್ರತಿಯೊಂದು ಭಾಗದ 30 ವಿವಿಧ ರೀತಿಯ ಸ್ಕ್ಯಾನಿಂಗ್ ಮಾಡುವ ಸಾಮರ್ಥ್ಯವುಳ್ಳ ಈ ಎಂಆರ್ ಐ ಯಂತ್ರವು ಹೃದಯದಂತೆ ಸಂಕೀರ್ಣ ಮತ್ತು ಮನಸ್ಸಿನಂತೆ ಅಮೂರ್ತವಾದ ಚಿತ್ರ ರಚನೆಯ ಸಾಮರ್ಥ್ಯವನ್ನು ಹೊಂದಿದೆ. ಹೌದು, ನೀವು ಸರಿಯಾಗಿ ಓದಿದ್ದೀರಿ. ಇದು ಹೃದಯದಂತೆ ಸಂಕೀರ್ಣವಾದ ಮತ್ತು ಮನಸ್ಸಿನಂತೆ ಅಮೂರ್ತವಾದ ರಚನೆಗಳನ್ನು ಚಿತ್ರಿಸುವ ಸಾಮರ್ಥ್ಯವನ್ನು ಹೊಂದಿದೆ.
ವಾಕ್ಸೆಲ್ ಗ್ರಿಡ್ಸ್ ಇನೋವೇಶನ್ಸ್ ಎಂಬ ಬೆಂಗಳೂರಿನ (Voxelgrids Innovations) ಸಂಸ್ಥೆಯು ಕಡಿಮೆ ವೆಚ್ಚದಲ್ಲಿ 1.5 ಟೆಸ್ಲಾ ಎಂಆರ್ ಐ ಯಂತ್ರ (1.5 Tesla MRI Mechine)ವನ್ನು ನಿರ್ಮಿಸುತ್ತಿದ್ದು 2024ರ ಇಸವಿಯಲ್ಲಿ ಈ ಉಪಕರಣದಿಂದ ತೆಗೆದ ಮೊದಲ ಚಿತ್ರವು ಪ್ರಿಂಟ್ ಆಗಲಿದೆ. ಬೆಂಗಳೂರು ಮೂಲದ ಕಂಪನಿ ವಾಕ್ಸೆಲ್ ಗ್ರಿಡ್ಸ್ ಇನೋವೇಶನ್ಸ್ 1.5 ಟೆಸ್ಲಾ ಎಂಆರ್ ಐ ಯಂತ್ರವನ್ನು ಪರಿಚಯಿಸಲು ಸಿದ್ಧವಾಗಿದೆ. ಶೈತ್ಯಕಾರಕವಾಗಿ ಎಂಆರ್ ಐ ನಲ್ಲಿ ಬಳಸುವ ಹೀಲಿಯಂನ ಅವಲಂಬನೆಯನ್ನು ಈ ಹೊಸ ಯಂತ್ರ ತಪ್ಪಿಸುತ್ತದೆ. ಆ ರೀತಿಯಲ್ಲಿ ಈ ಯಂತ್ರಗಳನ್ನು ಸಜ್ಜುಗೊಳಿಸಲಾಗಿದೆ ಎಂದು ತಿಳಿದುಬಂದಿದೆ.
ಬದಲಾದ ಭೌಗೋಳಿಕ ರಾಜಕೀಯ ಪರಿಸ್ಥಿತಿ ಮತ್ತು ಜಾಗತಿಕ ಪೂರೈಕೆ ಸರಪಳಿಯಲ್ಲಿನ ಕೊರತೆಯು ದ್ರವ ಹೀಲಿಯಂ ಅನ್ನು ಅಪರೂಪದ ವಸ್ತುವನ್ನಾಗಿ ಮಾಡಿದೆ. ಇಂತಹ ಕಠಿಣ ಪರಿಸ್ಥಿತಿಯಲ್ಲಿ ಎಂಆರ್ ಐಗೆ ಹೀಲಿಯಂ ಅವಲಂಬನೆಯನ್ನು ಸ್ವದೇಶಿ ಕಂಪನಿಯು ತಪ್ಪಿಸಿದೆ. ಆ ಮೂಲಕ ‘ಅತ್ಯಾಧುನಿಕ ಮತ್ತು ಕೈಗೆಟುಕುವ ದರದಲ್ಲಿ’ ಇರುವ ಈ ಉತ್ಪನ್ನವನ್ನು ನಾನು ಹೆಮ್ಮೆಯಿಂದ ಸ್ವಾಗತಿಸುತ್ತೇನೆ.
ಉಪಗ್ರಹ ಉಡಾವಣೆಯಲ್ಲಿ ಕ್ರಯೋಜೆನಿಕ್ ಇಂಜಿನ್‌ಗಳನ್ನು ತಯಾರಿಸಿ ಚಂದ್ರಯಾನ ಯೋಜನೆಗೆ ಬಳಸಿಕೊಂಡ ರೀತಿಯಲ್ಲಿ ಭಾರತದಲ್ಲಿ ವೈದ್ಯಕೀಯ ಸಲಕರಣೆಗಳ ತಯಾರಿಕೆಯಲ್ಲಿ 1.5 ಟೆಸ್ಲಾ ಎಂಆರ್ ಐ ಯಂತ್ರ ಬಹುದೊಡ್ಡ ಕ್ರಾಂತಿಕಾರಿ ಬದಲಾವಣೆಗೆ ಸಾಕ್ಷಿಯಾಗುತ್ತದೆಂದು ನಿರೀಕ್ಷಿಸಲಾಗಿದೆ.
ತಜ್ಞ ರೆಡಿಯಾಲಜಿಸ್ಟ್ ಗಳಿಗೇನು ಲಾಭವಿದೆ? :
ಎಂಆರ್‌ಐನಲ್ಲಿ ಹೆಚ್ಚು ಅವಕಾಶಗಳು ತೆರೆದುಕೊಳ್ಳುತ್ತದೆ ಅಂದರೆ ಶೈಕ್ಷಣಿಕ ಮತ್ತು ಕ್ಲಿನಿಕಲ್ ಸಂಶೋಧನೆಗೆ ಹೆಚ್ಚಿನ ಅವಕಾಶವನ್ನು ನೀಡುತ್ತದೆ. ಅಲ್ಲದೆ ತ್ವರಿತ, ಹೆಚ್ಚು ವ್ಯಾಪಕವಾಗಿ ಲಭ್ಯವಾಗಬಹುದಾದ ಮತ್ತು ಹೆಚ್ಚು ನಿಖರವಾದ ರೋಗನಿರ್ಣಯ ಮತ್ತು ಚಿಕಿತ್ಸೆಯು ರೋಗಿಗಳಿಗೆ ಸಿಗುವ ನಿರೀಕ್ಷೆಯಿದೆ.
ಸಾಮಾನ್ಯ ರೋಗಿಗಳಿಗೆ ಏನು ಲಾಭ? :
ಪ್ರಸ್ತುತ ವೈದ್ಯಕೀಯ ಕ್ಷೇತ್ರದಲ್ಲಿ ಎಂಆರ್ ಐ ಸ್ಕ್ಯಾನ್ ಬೆಲೆ 5,000 ರೂ ನಿಂದ 15,000 ರೂ. ತನಕ ಕರ್ಚಾಗುತ್ತದೆ. ಬಡವರು, ಮದ್ಯಮ ವರ್ಗದ ರೋಗಿಗಳಿಗೆ ವೈದ್ಯಕೀಯ ಪರೀಕ್ಷೆಗೆ ಹಣ ಕರ್ಚು ಮಾಡಲು ಕಷ್ಡವಾಗುತ್ತಿದೆ. ದೇಶೀಯವಾಗಿ ನಿರ್ಮಿಸಲಾದ ಹೊಸ 1.5 ಟೆಸ್ಲಾ ಎಂಆರ್ ಐ ಯಂತ್ರ ನಿರ್ಮಾಣವಾಗಿ ಮಾರುಕಟ್ಟೆಯಲ್ಲಿ ಲಭ್ಯವಾದರೆ ಈಗಿರುವ ಸ್ಕ್ಯಾನಿಂಗ್ ಪರೀಕ್ಷಾ ವೆಚ್ಚ ಶೇ.33ರಷ್ಟು ಕಡಿಮೆಯಾಗಲಿದೆ ಎಂದು ಹೇಳಬಹುದು.
ಕೈಗಾರಿಕೆಗಳು ಮತ್ತು ಉದ್ಯಮಿಗಳಿಗೆ ಹೇಗೆ ಅನುಕೂಲಕಾರಿ? :
ಹೊಸ ವಿಧಾನದಲ್ಲಿ ಎಂಆರ್ ಐ ಉತ್ಪಾದನೆ ಮೇಲಿನ ಬಂಡವಾಳ ವೆಚ್ಚದಲ್ಲಿ ಕಡಿತವಾಗಲಿದೆ. ಈ ಎಂಆರ್ ಐ ಉಪಕರಣಗಳನ್ನು ಆಮದು ಮಾಡಿಕೊಳ್ಳಲು ಇಷ್ಟು ದಿನ 6 ರಿಂದ 12 ತಿಂಗಳ ಕಾಯುವ ಸಮಯವು ಕಡಿಮೆಯಾಗಲಿದೆ. ಕಡಿಮೆಗೊಳಿಸಲಾಗುತ್ತದೆ. ಸ್ಥಳೀಯವಾಗಿ ಈ ಸ್ವದೇಶಿ ಉಪಕರಣಗಳ ಲಭ್ಯತೆವಾದರೆ ಹೊಸ ಎಂಆರ್ ಐ ಘಟಕಗಳನ್ನು ಸ್ಥಾಪಿಸಲು ಅನುಕೂಲವಾಗಲಿದೆ. ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ ಒಂದು ಎಂಆರ್ ಐ ಯಂತ್ರದ ಬೆಲೆ 4 ರಿಂದ 5 ಕೋಟಿ ರೂ. ನಷ್ಟಿದೆ. ದೇಶೀಯವಾಗಿ ಉತ್ಪಾದನೆ ಮಾಡುವ 1.5 ಟೆಸ್ಲಾ ಎಂಆರ್ ಐ ಯಂತ್ರ 3 ಕೋಟಿ ರೂ. ಗಳಿಗೆಲ್ಲ ಸಿಗುವ ಸಾಧ್ಯತೆಯಿದೆ.
ಹೊಸ ಮಾದರಿಯ ಎಂಆರ್ ಐನಿಂದ ಸಮಾಜಕ್ಕಾಗುವ ಅನುಕೂಲಗಳೇನು?:
ಎಂಜಿನಿಯರಿಂಗ್ ಮತ್ತು ಆರೋಗ್ಯ ಕ್ಷೇತ್ರಗಳಲ್ಲಿ ಹೆಚ್ಚು ನೇರ ಮತ್ತು ಪರೋಕ್ಷ ಉದ್ಯೋಗ ಸೃಷ್ಟಿಯಾಗಲಿದೆ. ವೈದ್ಯಕೀಯ ಉಪಕರಣ ತಯಾರಕರು ಮತ್ತು ವೈದ್ಯಕೀಯ ಸಾಫ್ಟ್‌ವೇರ್ ಡೆವಲಪರ್‌ಗಳ ನಡುವಿನ ಸಹಯೋಗವು ನವೀನ ಮತ್ತು ಪರಿಣಾಮಕಾರಿ ಉತ್ಪನ್ನಗಳಿಗೆ ಕಾರಣವಾಗುತ್ತದೆ. ಸ್ಥಳೀಯ ವೈದ್ಯಕೀಯ ಇಮೇಜಿಂಗ್ ಕ್ಷೇತ್ರದಲ್ಲಿ ಕೆಲಸ ಮಾಡುವವರಿಗೆ ಕೃತಕ ಬುದ್ಧಿಮತ್ತೆ (Artificial intelligence medical imaging) ವೈದ್ಯಕೀಯ ರಂಗದಲ್ಲಿ ಫಲವತ್ತಾದ ನೆಲವನ್ನು ಒದಗಿಸುತ್ತದೆ.
ಪ್ರಥಮ ಸ್ವದೇಶಿ ಎಂಆರ್ ಐ ಉಪಕರಣ :
ಸ್ವದೇಶಿ ಎಂಆರ್ ಐ ತಯಾರಿಕಾ ಕಾರ್ಯ ರಾಷ್ಟ್ರದಲ್ಲೇ ಮೊದಲು!! ವೈದ್ಯಕೀಯ ಉಪಕರಣಗಳ ಆಮದು ರಾಷ್ಟ್ರಕ್ಕೆ ಗಣನೀಯವಾಗಿ ವೆಚ್ಚಕ್ಕೆ ಕಾರಣವಾಗುತ್ತದೆ. ಸ್ವದೇಶಿ ನಿರ್ಮಿತ ಉಪಕರಣ ಉತ್ಪಾದನೆಯಿಂದ ವಿದೇಶಿ ವಿನಿಮಯ ಉಳಿತಾಯವಾಗುತ್ತದೆ. ಸ್ಥಳೀಯ ಉತ್ಪಾದನೆಯೊಂದಿಗೆ, ಆಮದು ಕಡಿಮೆಯಾಗುತ್ತದೆ. ಇತರ ಏಷ್ಯನ್ ಮತ್ತು ಆಫ್ರಿಕನ್ ದೇಶಗಳಿಗೆ ರಫ್ತು ಮಾಡಲು ಮಾರ್ಗಗಳನ್ನು ತೆರೆಯುತ್ತದೆ. ಇದು ನಮ್ಮ ವಿದೇಶಿ ವಿನಿಮಯ ಸಂಗ್ರಹವನ್ನು ಹೆಚ್ಚಿಸಲು ಸಹಾಯ ಮಾಡುತ್ತದೆ. ಅಂತಿಮವಾಗಿ, ಸ್ಥಳೀಯ ತಯಾರಕರು ತೆರಿಗೆ ವಂಚನೆಗೆ ಒಳಗಾಗುವ ಸಾಧ್ಯತೆ ಕಡಿಮೆ!! ಭಾರತದಲ್ಲಿ ತೆರಿಗೆ ವಂಚನೆಯ ಆರೋಪಗಳನ್ನು ಎದುರಿಸುತ್ತಿರುವ ಕೆಲವು ಮೊಬೈಲ್ ಫೋನ್ ತಯಾರಕರ ಹಿನ್ನೆಲೆಯಲ್ಲಿ ಇದು ವಿಶೇಷ ಮಹತ್ವವನ್ನು ಪಡೆಯುತ್ತದೆ.
“2024 ಇಸವಿಯಲ್ಲಿ ಭಾರತದಲ್ಲಿ ತಯಾರಿಸಿದ ಎಂಆರ್ ಐಯಿಂದ ಮೊದಲ ಎಂಆರ್ ಐ ಚಿತ್ರವನ್ನು ನೋಡಲು ನಾನು ಕುತೂಹಲದಿಂದ ಕಾಯುತ್ತಿದ್ದೇನೆ!!”
ಲೇಖನ ಬರಹ : – ಡಾ.ಮಾಧವ ಹೆಗಡೆ, ಅಂಕಣಕಾರರು ಮತ್ತು ಹಿರಿಯ ರೇಡಿಯಾಲಜಿಸ್ಟ್