ಕೊಟ್ಟಕಾರೈ (ಆರೋವಿಲ್ಲೆ, ತಮಿಳುನಾಡು) ನ.8 www.bengaluruwire.com : ಕಾಡಿನಲ್ಲಿ ಸಾಮಾನ್ಯವಾಗಿ ಕಾಣ ಸಿಗುವ ಬಿದಿರು ಇಲ್ಲಿ ಮನೆ ನಿರ್ಮಾಣಕ್ಕೆ ಬಳಸಲಾಗುತ್ತೆ, ಆ ಬಿದಿರ ಸಂಗೀತ ನಿನಾದದಿಂದ ಹೊರಹೊಮ್ಮುವ ಶಬ್ದವೇ ಅನನ್ಯ, ಬಿದಿರಿನ ಗುಡಿಸಲು, ಉಪಕರಣ, ಗಟ್ಟಿಮುಟ್ಟಾದ ಗುಡಿಸಲು ಒಂದಾ ಎರಡಾ….?
ಹೌದು ಬಿದಿರನ್ನು ಹೇಗೆಲ್ಲ ಪರಿಸರ ಸ್ನೇಹಿಯಾಗಿ ಬಳಸಿ ವಿಭಿನ್ನ ಉದ್ದೇಶಕ್ಕೆ ಬಳಸಬಹುದು ಎಂಬುದಕ್ಕೆ ಆರೋವಿಲ್ಲೆಯಲ್ಲಿನ ಲಾಭೋದ್ದೇಶವಿಲ್ಲದ ಬ್ಯಾಂಬೂ ಸೆಂಟರ್ ಎಂಬ ಸಮುದಾಯ ಕೇಂದ್ರ ಉದಾಹರಣೆಯಾಗಿದೆ.
ಬಿದಿರನ್ನು ದೈನಂದಿನ ಜೀವನದ ಭಾಗವಾಗಿಸುವಲ್ಲಿ, ಸದ್ದಿಲ್ಲದೆ ಬಿದಿರಿನ ಕ್ರಾಂತಿ ಕೈಗೊಳ್ಳಲು ದೇಶದದಲ್ಲಿ ಇದಕ್ಕಾಗಿಯೇ ಶಿಕ್ಷಣವನ್ನು ಮೀಸಲಿಟ್ಟ ಅಂತರರಾಷ್ಟ್ರೀಯ ಸಮುದಾಯವಾದ ಆರೋವಿಲ್ಲೆ ಈ ಕ್ರಾಂತಿಗೆ ಸಹಾಯ ಮಾಡಲು ಪರಿಪೂರ್ಣ ಸ್ಥಳವಾಗಿ ಹೊರಹೊಮ್ಮಿದೆ.
ಬಿದಿರು ಪ್ರೇಮಿಗಳು, ಆರ್ಕಿಟೆಕ್ಟ್, ವಿನ್ಯಾಸಗಾರರಿಗೆ ಬಿದಿರು ನಿರ್ಮಾಣ ತರಬೇತಿ, ಬಿದಿರನ್ನು ಉತ್ಪನ್ನಗಳಾಗಿ ಪರಿವರ್ತಿಸುವಲ್ಲಿ ವೃತ್ತಿಪರ ತರಬೇತಿಯ ಅವಕಾಶಗಳನ್ನು ಒದಗಿಸುತ್ತದೆ ಮತ್ತು ವಿಶೇಷ ರೀತಿಯ ಅಲ್ಪಾವಧಿ ಅಥವಾ ದೀರ್ಘಾವಧಿಯ ಕೋರ್ಸ್ ಗಳನ್ನು ಇಲ್ಲಿ ಆಯೋಜಿಸಲಾಗುತ್ತದೆ.
ಬಿದಿರು ಹಾಗೂ ಅದರ ಸಂಬಂಧಿತ ಹೆಚ್ಚುವರಿ ವಸ್ತುಗಳನ್ನು ಬಳಸಿ ಭಾಗಶಃ ಅಥವಾ ಸಂಪೂರ್ಣ ಕಟ್ಟಡ ನಿರ್ಮಿಸಲು ನವೀನ ಮಾದರಿಯ ವಿನ್ಯಾಸ, ಮಾದರಿ ಹಾಗೂ ಪರಿಹಾರಗಳನ್ನು ಈ ಕೇಂದ್ರದಲ್ಲಿ ಕೈಗೊಳ್ಳಲಾಗುತ್ತಿದೆ. ವಿಶ್ವದ ವಿವಿಧ ರೀತಿಯ ಬುಡಕಟ್ಟು ಸಮುದಾಯಗಳು ಬಿದಿರು ಬಳಸಿ ಕೈಗೊಂಡ ವಿಭಿನ್ನ ಮಾದರಿಯ ಗುಡಿಸಲು, ದೈನಂದಿನ ಜೀವನಕ್ಕೆ ಅಗತ್ಯವಾದ ಉಪಕರಣಗಳು, ಬಿದಿರಿನ ಕಾಂಕ್ರಿಟ್ ಕಾಲಮ್ ಗಳು, ಸೈಕಲ್, ಆಟೋ ಹೀಗೆ ನಾನಾ ವಿಧವಾದ ವಸ್ತುಗಳ ಪುಟ್ಟ ಸಂಗ್ರಹಾಲಯವೂ ಇಲ್ಲಿದೆ.
ಮೋಹನಂ ಸಮುದಾಯ ಕೇಂದ್ರದ ಚಟುವಟಿಕೆಯಾಗಿ ಬಾಲು ಅವರಿಂದ 2009 ರಲ್ಲಿ ಸ್ಥಾಪಿಸಲಾಯಿತು. ಭಾರತದ ತಮಿಳುನಾಡಿನ ಆರೋವಿಲ್ಲೆಯಲ್ಲಿ ಕೊಟ್ಟಕರೈನಲ್ಲಿದೆ. ಆರೋವಿಲಿಯನ್ ಆಗಿರುವ ಬಾಲು ಮೋಹನಂ ಈ ಬ್ಯಾಂಬೂ ಸೆಂಟರ್ ಸಮುದಾಯ ಕೇಂದ್ರವನ್ನು 2009 ರಲ್ಲಿ ಸ್ಥಾಪಿಸಿದರು.
ಆರೋವಿಲ್ಲೆ ಎಂಬ ಪಟ್ಟಣದ ವಿಶೇಷತೆ :
ಆರೋವಿಲ್ಲೆ ಒಂದು ಪ್ರಾಯೋಗಿಕ ಪಟ್ಟಣವಾಗಿದ್ದು, ಇದು ಆಧ್ಯಾತ್ಮಿಕ ಕವಿ, ಕ್ರಾಂತಿಕಾರಿ ಮತ್ತು ಋಷಿ ಶ್ರೀ ಅರಬಿಂದೋ ಅವರ ತತ್ವಶಾಸ್ತ್ರವನ್ನು ಆಧರಿಸಿದೆ. ಹಾಗೂ ಅವರ ಸಹಯೋಗಿ, ತಾಯಿಯ ದೃಷ್ಟಿಕೋನ ಹಾಗೂ ಮಾರ್ಗದರ್ಶನದಲ್ಲಿ ನಿರ್ಮಿಸಿದ ಪಟ್ಟಣವಾಗಿದೆ. ಇದನ್ನು ಯುನೆಸ್ಕೋ ಅನುಮೋದಿಸಿದೆ ಮತ್ತು ಮಾನವ ಏಕತೆಯ ಆದರ್ಶಕ್ಕೆ ಈ ಪಟ್ಟಣವನ್ನು ಸಮರ್ಪಿಸಲಾಗಿದೆ. ಇದು ಎಲ್ಲದರ ಜೊತೆಗೆ ಒಳಗೊಳ್ಳುವ ಪರಿಕಲ್ಪನೆಗೆ ಸಾಕ್ಷಿಯಂತಿದೆ.
ಕೌಶಲ್ಯ ಮತ್ತು ಆಸಕ್ತಿಗಳನ್ನು ಅವಲಂಬಿಸಿ ಎಲ್ಲರಿಗೂ ಸ್ವಯಂಸೇವಕ ಮತ್ತು ಇಂಟರ್ನ್‌ಶಿಪ್ ಅವಕಾಶವನ್ನು ಕಲ್ಪಿಸಲಾಗಿದೆ.
2018ರ ವರದಿಯೊಂದರ ಪ್ರಕಾರ ವಿಶ್ವದಲ್ಲಿ ಒಟ್ಟಾರೆ 49,000ಕ್ಕೂ ಹೆಚ್ಚು ವೈವಿದ್ಯ ಸಸ್ಯ ಜಾತಿಗಳಿವೆ. ಆ ಪೈಕಿ ಶೇ.11.5ರಷ್ಟು ಭಾರತದಲ್ಲಿ ಲಭ್ಯವಿದೆ. ಇತ್ತೀಚಿನ ಮಾಹಿತಿಯೊಂದರ ಪ್ರಕಾರ ಏಷ್ಯಾದ ಅತಿ ಹಳೆಯ ಬಿದಿರಿನ ಪಳೆಯುಳಿಕೆ ನಮ್ಮ ದೇಶದಲ್ಲಿ ಕಂಡುಬಂದಿದೆ ಎನ್ನಲಾಗಿದೆ. ಅಸ್ಸಾಮ್ ನಲ್ಲಿ ಉತ್ಖನನ ನಡೆಸುವ ಸಂದರ್ಭದಲ್ಲಿ 25 ದಶಲಕ್ಷ ವರ್ಷಗಳ ಹಿಂದೆಯಿದ್ದ ಎರಡು ಬಿದಿರಿನ ಪಳೆಯುಳಿಕೆಗಳು ಪತ್ತೆಯಾಗಿದೆ. ವಿಶ್ವದಾದ್ಯಂತ 1,400ಕ್ಕೂ ಅಧಿಕ ಬಿದಿರಿನ ತಳಿಗಳಿವೆ.
ತಮಿಳುನಾಡಿನ ಸ್ಥಳೀಯ ಆಸಕ್ತ ಜನರ ಸುಸ್ಥಿರ ಜೀವನೋಪಾಯವನ್ನು ಒದಗಿಸಲು ಚಿಲ್ಲರೆ ಮತ್ತು ಸಗಟು ವ್ಯಾಪಾರಕ್ಕಾಗಿ ಬಿದಿರಿನ ಉತ್ಪನ್ನಗಳನ್ನು ಸಂಶೋಧಿಸಲು ಮತ್ತು ವಿನ್ಯಾಸಗೊಳಿಸುವ ಕಾರ್ಯದಲ್ಲಿ ಈ ಸಂಸ್ಥೆಯು ನಿರತವಾಗಿದೆ. ಅಲ್ಲದೆ ಬಿದಿರಿನ ಬಳಕೆಯನ್ನು ಉತ್ತೇಜಿಸಲು ಸಹಾಯ ಮಾಡುವ ಬಿದಿರು ಮತ್ತು ಹೆಚ್ಚುವರಿ ವಸ್ತುಗಳನ್ನು ಬಳಸಿಕೊಂಡು ನಿರ್ಮಾಣಕ್ಕಾಗಿ ಆಸಕ್ತಕ ಆಲೋಚನೆಗಳನ್ನು ಕಾರ್ಯಗತಗೊಳಿಸುವ ಹುಮ್ಮಸ್ಸಿನಲ್ಲಿದೆ. ಹೆಚ್ಚಿನ ಮಾಹಿತಿಗೆ ಸಂಪರ್ಕಿಸಿ : [email protected]