ಬೆಂಗಳೂರು, ನ.6 www.bengaluruwire.com : ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ(BBMP) ವ್ಯಾಪ್ತಿಯಲ್ಲಿ 2023-24ನೇ ಸಾಲಿನಲ್ಲಿ ಪ್ರಸ್ತುತ 3,000 ಕೋಟಿ ರೂ.ಆಸ್ತಿ ತೆರಿಗೆ ಸಂಗ್ರಹವಾಗಿದೆ. ಪಾಲಿಕೆಯು ಬಾಕಿ ಆಸ್ತಿತೆರಿಗೆ ಹೊಂದಿರುವ ಮಾಲೀಕರುಗಳಿಗೆ ಎಸ್ ಎಂಎಸ್ ಮೂಲಕ ಸಂದೇಶ ಮತ್ತು ನೋಟಿಸ್‌ಗಳನ್ನು ಕಳುಹಿಸುತ್ತಿದ್ದು, ಆನ್ ಲೈನ್ ಮೂಲಕ ಸುಲಭವಾಗಿ ಆಸ್ತಿ ತೆರಿಗೆ ಪಾವತಿಸುವಂತೆ ತಿಳಿಸಿದೆ.
ಬೆಂಗಳೂರಿನಲ್ಲಿ ಘನ ತ್ಯಾಜ್ಯ ನಿರ್ವಹಣೆ, ರಸ್ತೆ ನಿರ್ವಹಣೆ ಮತ್ತು ಆಸ್ತಿ-ಸಂಬಂಧಿತ ಸೇವೆಗಳಂತಹ ಅಗತ್ಯ ಸೇವೆಗಳ ಸಮರ್ಥ ವಿತರಣೆ ಹಾಗೂ ಪರಿಣಾಮಕಾರಿ ನಗರ ಆಡಳಿತಕ್ಕೆ ನಿರ್ಣಾಯಕವಾಗಿದೆ. ಈ ನಿಟ್ಟಿನಲ್ಲಿ ಆಸ್ತಿ ತೆರಿಗೆಯು ನಗರ ಪಾಲಿಕೆಯ ಪ್ರಾಥಮಿಕ ಮತ್ತು ಪ್ರಮುಖ ಆದಾಯದ ಮೂಲವಾಗಿದೆ ಮತ್ತು ಬಿಬಿಎಂಪಿಯ ಕಾರ್ಯನಿರ್ವಹಣೆ ಮತ್ತು ಅದರ ಸೇವೆಯ ವಿತರಣೆಗೆ ನಿರ್ಣಾಯಕವಾಗಿದೆ. ಹೀಗಾಗಿ ಎಲ್ಲಾ ಮಾಲೀಕರು ತಮ್ಮ ಸ್ವತ್ತಿಗೆ ಆಸ್ತಿತೆರಿಗೆಯನ್ನು ತ್ವರಿತವಾಗಿ ಪಾವತಿಸಲು ನಾವು ಮನವಿ ಮಾಡಿರುವುದಾಗಿ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದೆ.
ಆಸ್ತಿತೆರಿಗೆಯನ್ನು ಸುಲಭವಾಗಿ ಪಾವತಿಸಲು ನಾಗರಿಕರು ಆನ್‌ಲೈನ್ ಲಿಂಕ್ https://bbmptax.karnataka.gov.in ಅನ್ನು ಬಳಸಬಹುದು. ಸ್ವತ್ತಿನ ಯಾವುದೇ ಪ್ರಶ್ನೆಗಳನ್ನು ಹೊಂದಿದ್ದರೆ ಅಥವಾ ಮಾಹಿತಿಯು ಅಗತ್ಯವಿದ್ದರೆ, ಪಾಲಿಕೆ ಸಹಾಯವಾಣಿ 1533 ಸಂಖ್ಯೆಗೆ ಕರೆ ಮಾಡಿ. ಸಹಾಯ ಮಾಡಲು ಮತ್ತು ಸ್ಪಷ್ಟೀಕರಣವನ್ನು ಒದಗಿಸಲು ನಾವು ಸದಾ ಸಿದ್ದರಿದ್ದೇವೆ ಎಂದು ಕಂದಾಯ ವಿಭಾಗದ ವಿಶೇಷ ಆಯುಕ್ತರಾದ ಮುನೀಶ್ ಮೌದ್ಗಿಲ್ ರವರು ತಿಳಿಸಿದ್ದಾರೆ.
ನಮ್ಮ ಪ್ರೀತಿಯ ನಗರದ ಅಭಿವೃದ್ಧಿಗಾಗಿ, ನಾಗರೀಕರು ಮತ್ತು ಬಿಬಿಎಂಪಿಯು ಒಂದಾಗಿ ಕೈಜೋಡಿಸಿ ಕುಟುಂಬವಾಗಿ ಕೆಲಸ ಮಾಡಿ ನಮ್ಮ ಜವಾಬ್ದಾರಿಗಳನ್ನು ಪೂರೈಸೋಣ. ಕಳೆದ ವರ್ಷ ಪಾಲಿಕೆಯು 3,300 ಕೋಟಿ ರೂನಷ್ಟು ಆಸ್ತಿತೆರಿಗೆ ಸಂಗ್ರಹಿಸಿದೆ. ಈ ವರ್ಷ 4,500 ಕೋಟಿ ರೂ. ಗುರಿಯನ್ನು ತಲುಪಲಿದ್ದೇವೆ ಎಂದು ಅವರು ಹೇಳಿದ್ದಾರೆ.