ಬೆಂಗಳೂರು, ನ.5 www.bengaluruwire.com : ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (BBMP) ಯಲಚೇನಹಳ್ಳಿ ಕಂದಾಯ ಉಪವಿಭಾಗದಲ್ಲಿ ಅಧಿಕಾರಿ – ಸಿಬ್ಬಂದಿ ಎರಡು ಅಕ್ರಮ ಎ ಖಾತೆ ಮಾಡಿರುವುದನ್ನು ತನಿಖೆ ಮೂಲಕ ಸಾರ್ವಜನಿಕವಾಗಿ ನ.3ರಂದು ಬಿಚ್ಚಿಟ್ಟಿತ್ತು. ಈ ಸುದ್ದಿಯ ಗಹನತೆ ಬಗ್ಗೆ ಬಿಬಿಎಂಪಿ ಅಧಿಕಾರಿಗಳು ಎಚ್ಚೆತ್ತುಕೊಂಡು ಕ್ರಮಕ್ಕೆ ಮುಂದಾಗಿದೆ. ಇದು ಬೆಂಗಳೂರು ವೈರ್ ಇಂಪ್ಯಾಕ್ಟ್.
ಈ ಸುದ್ದಿಯಿಂದ ಎಚ್ಚೆತ್ತುಕೊಂಡು ಪಾಲಿಕೆ ಕಂದಾಯ ವಿಭಾಗ ವಿಶೇಷ ಆಯುಕ್ತ ಮುನೀಷ್ ಮೌದ್ಗಿಲ್ ನ.3ರಂದೇ ರಾತ್ರಿ ಎಲ್ಲಾ ವಲಯದ ಆಯುಕ್ತರು ಹಾಗೂ ಜಂಟಿ ಆಯುಕ್ತರಿಗೆ ಬೆಂಗಳೂರು ವೈರ್ “BW INVESTIGATION | ಬೋಗಸ್ ಖಾತೆ- ಬಂಡಲ್ ಭ್ರಷ್ಟರು ಭಾಗ-1 | ಬಿಬಿಎಂಪಿ ಯಲಚೇನಹಳ್ಳಿ ಎಆರ್ ಒ ಕಚೇರಿ : ಬ್ರೋಕರ್ – ಡೂಪ್ಲಿಕೇಟ್ ಖಾತಾ ಫ್ಯಾಕ್ಟರಿ : ಬೆಂಗಳೂರು ವೈರ್ ತನಿಖೆಯಲ್ಲಿ ಬಯಲಾಯ್ತು ನಕಲಿ ಖಾತೆಗಳು” ಎಂಬ ಶೀರ್ಷಿಕೆಯಲ್ಲಿ ಪ್ರಕಟಿಸಿದ ಸುದ್ದಿಯನ್ನು ಗಂಭೀರವಾಗಿ ಪರಿಗಣಿಸಿ ಅವುಗಳನ್ನು ರವಾನಿಸಿದ್ದಾರೆ. ಅಲ್ಲದೆ ಇದರ ಹಿಂದೆಯೇ ತುರ್ತಾಗಿ ನ.4ರ ದಿನಾಂಕ ನಮೂದಿಸಿ, ಕೈಬರಹದಲ್ಲೆ ಪತ್ರ ಬರೆದು ಅದೇ ದಿನ ರಾತ್ರಿ, ನ.4ರ ಮಧ್ಯಾಹ್ನ 12 ಗಂಟೆಯೊಳಗೆ ಎಲ್ಲಾ 64 ಸಹಾಯಕ ಕಂದಾಯ ಅಧಿಕಾರಿಗಳ ಕಚೇರಿಯಲ್ಲಿನ ಎ ಮತ್ತು ಬಿ ಸ್ವತ್ತಿನ ಟ್ಯಾಕ್ಸ್ ರಿಜಿಸ್ಟರ್ ಅನ್ನು ಆಯಾ ವಲಯ ಕಚೇರಿಗೆ ತಪ್ಪದೇ ಹಸ್ತಾಂತರಿಸುವಂತೆ ಇದೇ ಮೇಲ್ಕಂಡ ಅಧಿಕಾರಿಗಳಿಗೆ ಖಡಕ್ ಆದೇಶ ಹೊರಡಿಸಿದ್ದರು ಎಂದು ಉನ್ನತ ಮೂಲಗಳು ಖಚಿತಪಡಿಸಿವೆ.
ತಮ್ಮ ಕೈಬರಹದ ಪತ್ರದಲ್ಲಿ ಈ ವಿಚಾರವನ್ನು ಹೇಳುವಾಗ ಅಂಡರ್ ಲೈನ್ ಮಾಡಿ, ಈ ಪ್ರಾಪರ್ಟಿ ರಿಜಿಸ್ಟರ್ ತುರ್ತಾಗಿ ಜೋನಲ್ ಕಚೇರಿಗೆ ನೀಡುವಂತೆ ಹೇಳಿದ್ದಾರೆ. ಅಂದರೆ ಪಾಲಿಕೆ ಪರಿಶೀಲನಾ ಸಮಿತಿಯಿಂದ ಬಿ ಖಾತೆಯಿಂದ ಅಕ್ರಮವಾಗಿ ಎ ಖಾತೆ ಸ್ವತ್ತುಗಳ ಪರಿಶೀಲನೆ ನಡೆಸುತ್ತಿರುವ ಮಧ್ಯೆಯೇ ಮತ್ತೆ ಎಗ್ಗಿಲ್ಲದೆ ಅಕ್ರಮವಾಗಿ ಎ ಖಾತೆ ರಿಜಿಸ್ಟರ್ ಗೆ ಭ್ರಷ್ಟ ಅಧಿಕಾರಿಗಳು ನಮೂದು ಮಾಡುವ ಪ್ರಕರಣಗಳಿಗೆ ಸಾಕ್ಷಿಯಾಗಿ “ಬೆಂಗಳೂರು ವೈರ್” ಪಾಲಿಕೆ ಆಡಳಿತವನ್ನು ಎಚ್ಚರಿಸಿತ್ತು. ಹೀಗಾಗಿ 64 ಎಆರ್ ಒ ಕಚೇರಿಗಳಲ್ಲಿನ ಎಲ್ಲಾ ಎ ಹಾಗೂ ಬಿ ಖಾತೆ ರಿಜಿಸ್ಟರ್ ಗಳನ್ನು ಹಸ್ತಾಂತರಿಸುವ ಉದ್ದೇಶವು ವಿಶೇಷ ಆಯುಕ್ತರ ಆದೇಶ ಮಹತ್ವದ್ದಾಗಿದೆ.
ಇಲ್ಲಿ ಪುನಃ ಪುನಃ ಎ ಖಾತೆ ರಿಜಿಸ್ಟರ್ ನಲ್ಲಿ ಭ್ರಷ್ಟ ಅಧಿಕಾರಿಗಳು ಅಕ್ರಮ ನಮೂದು ಮಾಡುವುದನ್ನು ನಿಲ್ಲಿಸಬೇಕು ಅಂತ ವಿಶೇಷ ಆಯುಕ್ತರು ಈ ಕ್ರಮಕ್ಕೆ ಮುಂದಾಗಿದ್ದಾರೆ. ಈ ಸ್ವತ್ತಿನ ರಿಜಿಸ್ಟರ್ ಪುಸ್ತಕಗಳನ್ನು ಆಯಾ ಸಹಾಯಕ ಕಂದಾಯ ಅಧಿಕಾರಿಗಳ ಕಚೇರಿಯ 3-4 ಮಂದಿ ರೆವೆನ್ಯೂ ಇನ್ಸ್ ಪೆಕ್ಟರ್, ಟ್ಯಾಕ್ಸ್ ಇನ್ಸ್ ಪೆಕ್ಟರ್ ಹಾಗೂ ಸಿಬ್ಬಂದಿಯನ್ನು ಪುಸ್ತಕಗಳನ್ನು ಹಸ್ತಾಂತರಿಸುವಂತೆ ಸೂಚಿಸಿದ್ದಾರೆ. ಆ ಕಾರ್ಯದಲ್ಲಿ ಆಯಾ ವಲಯ ಜಂಟಿ ಆಯುಕ್ತರು ಹಾಗೂ ಕಂದಾಯ ಉಪ ಆಯುಕ್ತರು ಸಂಯೋಜನೆ ನಡೆಸಿ ಉಸ್ತುವಾರಿ ವಹಿಸುವಂತೆ ತಿಳಿಸಿದ್ದಾರೆ. ಪ್ರತಿ ಎಆರ್ ಒ ಕಚೇರಿಯಲ್ಲಿ ಕನಿಷ್ಠ ಎ ಮತ್ತು ಬಿ ರಿಜಿಸ್ಟರ್ ಸೇರಿದಂತೆ 50 ರಿಂದ 90 ರಿಜಿಸ್ಟರ್ ಪುಸ್ತಗಳಿದ್ದು, ಅವುಗಳನ್ನು ನ.4ರ ಮಧ್ಯಾಹ್ನ 12 ಗಂಟೆ ಒಳಗೆ ತಲುಪಿಸುವಂತೆ ಪತ್ರದಲ್ಲಿ ತಿಳಿಸಿದ್ದಾರೆ. ಇದು ಬೆಂಗಳೂರು ವೈರ್ ಸಾಮಾಜಿಕ ಬದ್ಧತೆಯಿಂದ ಪ್ರಕಟಿಸಿದ ವರದಿ ಸಿಕ್ಕ ಫಲಶ್ರುತಿಯಾಗಿದೆ.
ಕುಂಟುತ್ತಾ ಸಾಗಿದ ಇ-ಆಸ್ತಿ ದಾಖಲೆ ಡಿಜಿಟಲ್ ಪ್ರಕ್ರಿಯೆಗೆ ಚುರುಕು :
ಈಗಾಗಲೇ ಹಳೆಯ ಬೆಂಗಳೂರಿನ ಹಳೆ ಪ್ರದೇಶಗಳನ್ನೊಳಗೊಂಡ ಬೆಂಗಳೂರು ಪೂರ್ವ ವಲಯದಲ್ಲಿ ಇ-ಆಸ್ತಿ ದಾಖಲೆ ವ್ಯವಸ್ಥೆಯಡಿ ಆ ವಲಯದ ವ್ಯಾಪ್ತಿಯ ಸ್ವತ್ತಿನ ಖಾತೆ ರಿಜಿಸ್ಟರ್ ಸೇರಿದಂತೆ ವಿವಿಧ ದಾಖಲೆಗಳನ್ನು ಡಿಜಿಟಲ್ ವ್ಯವಸ್ಥೆಯಡಿ ತರಲಾಗಿದೆ. ಆದರೆ ನಗರದ ಉಳಿದ ವಲಯಗಳಲ್ಲಿ ಇನ್ನೂ ಇ-ಆಸ್ತಿ ಸಾಫ್ಟ್ ವೇರ್ ನಡಿ ಡಿಜಿಟಲ್ ವ್ಯವಸ್ಥೆ ಮಾಡಲಾಗಿಲ್ಲ. ರಾಜ್ಯದ ಇತರ ಜಿಲ್ಲೆಗಳಲ್ಲಿ ಇ-ಸ್ವತ್ತು ಅಡಿ ದಾಖಲೆಗಳನ್ನು ಡಿಜಿಟಲ್ ವ್ಯವಸ್ಥೆಗೆ ತಂದಿರುವಾಗ ರಾಜಧಾನಿ ಬೆಂಗಳೂರಿನಲ್ಲಿ ಇನ್ನೂ ಈ ಕಾರ್ಯ ನಡೆದಿಲ್ಲ. ಈ ಹಿನ್ನಲೆಯಲ್ಲಿ ಮೊದಲಿಗೆ ಬಿ ಯಿಂದ ಎ ಖಾತೆಗೆ ಮಾಡಿದ ಹಾಗೂ ಅಕ್ರಮವಾಗಿ ಎ ಖಾತೆಗೆ ಸೇರಿಸಿದ ಸ್ವತ್ತುಗಳನ್ನು ಪುನಃ ಬಿ- ಖಾತೆಗೆ ಸೇರಿಸಿ ಆ ಬಳಿಕ ಸ್ವತ್ತಿನ ರಿಜಿಸ್ಟರ್ ಗಳನ್ನು ಸ್ಕ್ಯಾನಿಂಗ್ ಮಾಡಿ ಬಳಕಿ ಇ-ಆಸ್ತಿ ತಂತ್ರಾಂಶಕ್ಕೆ ಅಳವಡಿಸಲು ಸಾಧ್ಯವಾಗುತ್ತದೆ. ಆದರೆ ಈತನಕ ಎಆರ್ ಒ ಕಚೇರಿಗಳಲ್ಲಿರುವ ಈ ಖಾತಾ ರಿಜಿಸ್ಟರ್ ಗಳನ್ನು ಆಯಾ ವಲಯ ಕಚೇರಿಗೆ ಒಟ್ಟಿಗೆ ತಂದು ಅವುಗಳಲ್ಲಿನ ಲೋಪಗಳನ್ನು ಪತ್ತೆಹಚ್ಚಿ ಬಳಿಕ ಡಿಜಿಟಲ್ ವ್ಯವಸ್ಥೆಯಡಿ ಸ್ಕ್ಯಾನಿಂಗ್ ಮಾಡುವ ಪ್ರಕ್ರಿಯೆ ಆಗಿರಲಿಲ್ಲ. ಹೀಗಾಗಿ ಮ್ಯಾನುವಲ್ ಖಾತಾ ಸರ್ಟಿಫಿಕೇಟ್, ಖಾತ್ ಎಕ್ಸ್ ಟ್ರಾಕ್ಟ್ ಕೊಡುವ ವ್ಯವಸ್ಥೆ ಹಾಗೂ ಆಯಾ ಎಆರ್ ಒ ಕಚೇರಿಯಲ್ಲಿ ಖಾತಾ ಪುಸ್ತಕಗಳು ಲಭ್ಯವಿದೆ. ಹೀಗಾಗಿ ಅಕ್ರಮ ನಡೆಸಲು ಭ್ರಷ್ಟ ಅಧಿಕಾರಿಗಳು ಅನುಕೂಲವಾಗಿತ್ತು.
ತಡರಾತ್ರಿವರೆಗೂ ಪ್ರಾಪರ್ಟಿ ರಿಜಿಸ್ಟರ್ ವಲಯ ಕಚೇರಿಗಳಿಗೆ ಸಲ್ಲಿಕೆ :
ಯಾವಾಗ ಬೆಂಗಳೂರು ವೈರ್ ಯಲಚೇನಹಳ್ಳಿ ಕಂದಾಯ ಉಪವಿಭಾಗದಲ್ಲಿ ಅಧಿಕಾರಿ – ಸಿಬ್ಬಂದಿ ಸೇರಿಕೊಂಡು ಎರಡು ಅಕ್ರಮ ಎ ಖಾತೆ ಮಾಡಿರುವುದನ್ನು ದಾಖಲೆ ಸಹಿತ ವರದಿ ಮಾಡಿತೋ ಅದರಿಂದ ಎಚ್ಚೆತ್ತುಕೊಂಡ ಪಾಲಿಕೆ ಕಂದಾಯ ವಿಭಾಗ, ಎಲ್ಲಾ ವಲಯಗಳ ಎಆರ್ ಒ ಕಚೇರಿ ಸಿಬ್ಬಂದಿ ವಿಶೇಷ ಆಯುಕ್ತ ಮುನೀಷ್ ಮೌದ್ಗಿಲ್ ಸೂಚನೆಯಂತೆ ತುರ್ತಾಗಿ ಶನಿವಾರ ತಡಿರಾತ್ರಿವರೆಗೂ ಆಯಾ ವಲಯ ಕಚೇರಿಗಳಿಗೆ ಎ ಮತ್ತು ಬಿ ಖಾತೆಗಳನ್ನು ನಮೂದಿಸಿದ ಪ್ರಾಪರ್ಟಿ ರಿಜಿಸ್ಟರ್ ಗಳು ಆಯಾ ಜೋನಲ್ ಕಚೇರಿಗಳಿಗೆ ತಲುಪಿಸಿದ್ದಾರೆ. ಇದೀಗ ಭಾನುವಾರವೂ ಜೋನಲ್ ಕಚೇರಿಗಳಲ್ಲಿ ಹಗಲು ರಾತ್ರಿ ಎನ್ನದೆ ಈ ದಾಖಲೆಗಳನ್ನು ಜೋನಲ್ ಕಮೀಷನರ್ ಹಾಗೂ ಜಂಟಿ ಆಯುಕ್ತರ ನೇತೃತ್ವದಲ್ಲಿ ಕಂದಾಯ ಅಧಿಕಾರಿಗಳು, ಸಿಬ್ಬಂದಿ ಪರಿಶೀಲನೆಗೆ ಒಳಪಡಿಸಿದ್ದಾರೆ.
ಮುನೀಷ್ ಮೌದ್ಗಿಲ್ ಆದೇಶ ಭ್ರಷ್ಟರಿಗೆ ನುಂಗಲಾರದ ತುಪ್ಪ :
ಪ್ರತಿ ಪ್ರಾಪರ್ಟಿ ರಿಜಿಸ್ಟರ್ ಪ್ರಾರಂಭ ಪುಟ ಹಾಗೂ ಅಂತಿಮ ಪುಟದ ಸಂಖ್ಯೆ, ಎ ಅಥವಾ ಬಿ ಖಾತಾ ರಿಜಿಸ್ಟರ್ ನಲ್ಲಿ ನಮೂದು ಮಾಡಿ ಒಟ್ಟು ಸ್ವತ್ತುಗಳು, ಬಳಕೆಯಾಗದ ಪುಟಗಳೆಷ್ಟು ಎಂಬುದೆಲ್ಲದರ ವಿವರಗಳನ್ನು ಪ್ರತ್ಯೇಕವಾಗಿ ದಾಖಲಿಸಿ ಅವುಗಳನ್ನು ಸಂಬಂಧಿಸಿದ ಎಆರ್ ಒ ಅಥವಾ ಅಧಿಕಾರಿಗಳು ಸಹಿ ಮತ್ತು ಸೀಲು ಹಾಗೂ ಪ್ರಾಮಾಣಿಕರಿಸುವ ಕೆಲಸ ಆರಂಭವಾಗಿದೆ. ಬಹಳ ದಿನಗಳ ಹಿಂದೆಯೇ ಬಿಬಿಎಂಪಿಯು ಕಿಯೋನಿಕ್ಸ್ ಸರ್ಕಾರೇತರ ಸಂಸ್ಥೆಗೆ ಪಾಲಿಕೆ ವ್ಯಾಪ್ತಿಯಲ್ಲಿನ 64 ಎಆರ್ ಒ ಕಚೇರಿಗಳ ಸ್ವತ್ತಿನ ಖಾತಾ ರಿಜಿಸ್ಟರ್ ಪುಸ್ತಕಗಳನ್ನು ಸ್ಕ್ಯಾನಿಂಗ್ ಮಾಡಲು ಕಾರ್ಯಾದೇಶ ನೀಡಲಾಗಿತ್ತು. ಆದರೆ ಈ ಸ್ಕ್ಯಾನಿಂಗ್ ಮಾಡಲು ಅಗತ್ಯವಾದ ರಿಜಿಸ್ಟರ್ ಪುಸ್ತಕಗಳು ಮಾತ್ರ ಇನ್ನು ಆಯಾ ಎಆರ್ ಒ ಕಚೇರಿಯಿಂದ ಆಚೇ ಬಂದಿರಲಿಲ್ಲ. ಇವು ಅಕ್ರಮ ಎಸಗಲು ಬ್ರೋಕರ್ ಗಳು, ಅಸೆಸರ್, ಕೇಸ್ ವರ್ಕರ್, ಆರ್ ಐ, ಎಆರ್ ಒ ಮತ್ತಿತರಿಗೆ ಸಾಕಷ್ಟು ಅವಕಾಶ ಕಲ್ಪಸಿತ್ತು. ಇದೀಗ ಬಿಬಿಎಂಪಿಯ ವಿಶೇಷ ಆಯುಕ್ತ ಮುನೀಷ್ ಮೌದ್ಗಿಲ್ ಅವರ ಕ್ರಮವು ಭ್ರಷ್ಟರ ಪಾಲಿಗೆ ನುಂಗಲಾರದ ಬಿಸಿ ತುಪ್ಪವಾಗಿದೆ.
ಬಿಬಿಎಂಪಿ ಆಡಳಿತವನ್ನು ಸಕಾಲದಲ್ಲಿ ಎಚ್ಚರಿಸಿದ ತನಿಖಾ ವರದಿ :
ಬೆಂಗಳೂರು ವೈರ್ ತನಿಖಾ ವರದಿ ಬೆನ್ನಲ್ಲಾ ಇಡೀ ಬಿಬಿಎಂಪಿ ವ್ಯಾಪ್ತಿಯ ಎಲ್ಲಾ 64 ಎಆರ್ ಒ ಕಚೇರಿಗಳಲ್ಲಿ ಸಂದಿಗೊಂದಿಗಳಲ್ಲಿ, ಬೀರುಗಳಲ್ಲಿ, ಕಪಾಟುಗಳಲ್ಲಿಟ್ಟ ಪ್ರಾಪರ್ಟಿ ರಿಜಿಸ್ಟರ್ ಪುಸ್ತಕಗಳು ಇದೀಗ ಆಯಾ ಬಿಬಿಎಂಪಿ ವಲಯ ಕಚೇರಿಗಳಿಗೆ ಸಲ್ಲಿಕೆಯಾಗಿದೆ. ಇದು ಪಾರದರ್ಶಕ ವ್ಯವಸ್ಥೆಯಡಿ ಇ-ಸ್ವತ್ತು ಅಳವಡಿಸಿಕೊಳ್ಳುವ ನಿಟ್ಟಿನಲ್ಲಿ ಪಾಲಿಕೆಯ ಪ್ರಮುಖ ಹೆಜ್ಜೆಯಾಗಿದೆ. ಕೇಂದ್ರೀಕೃತ ಸುದ್ದಿಗಳಿಗೆ ಆದ್ಯತೆಯಿಟ್ಟುಕೊಂಡು, ಜನಸಾಮಾನ್ಯರ ಆಸಕ್ತಿ ಹಾಗೂ ಹಿತಾಸಕ್ತಿಗಳನ್ನು ಗಮನದಲ್ಲಿಟ್ಟುಕೊಂಡು ಸರ್ಕಾರ ಹಾಗೂ ಸ್ಥಳೀಯ ಆಡಳಿತವನ್ನು ಸದಾ ಎಚ್ಚರಿಸುವ ಕೆಲಸದಲ್ಲಿ ನಿರತರಾಗಿರುವ ನಿಮ್ಮ ಬೆಂಗಳೂರು ವೈರ್ ಕಾರ್ಯಕ್ಕೆ ಈ ವರದಿ ಫಲಶ್ರುತಿ ಒಂದು ಕೈಗನ್ನಡಿಯಾಗಿದೆ. ಈ ಸಾಮಾಜಿಕ ಕಾರ್ಯವನ್ನು ನಾವು ಮುಂದುವರೆಸಿಕೊಂಡು ಹೋಗುತ್ತೇವೆ. ಇದಕ್ಕೆ ಓದುಗರಾದ ನಿಮ್ಮ ಸಹಕಾರ ಸದಾ ಇರಲಿ ಎಂದು ಆಶಿಸುತ್ತೇವೆ.