ಶತ್ರು ಪಾಳೇಯದ ಮೇಲೆ ಅರಿವಿಲ್ಲದಂತೆ ಬೇಹುಗಾರಿಕೆ ನಡೆಸಿ, ಅದರ ಸಂಪೂರ್ಣ ಚಿತ್ರಣ ಹಾಗೂ ದೃಶ್ಯವನ್ನು ಸೇನಾಪಡೆಗೆ ರವಾನಿಸುವಲ್ಲಿ ಬ್ಲಾಕ್ ಹಾರ್ನೆಟ್ ಅತ್ಯಂತ ಪ್ರಮುಖ ಪಾತ್ರವಹಿಸುತ್ತದೆ. ಮೂರ್ತಿ ಚಿಕ್ಕದಾದರೂ ಕೀರ್ತಿ ದೊಡ್ಡದು ಅನ್ನುವಂತೆ ಅಂಗೈಯಗಲದೊಳಗೆ ಹಿಡಿದುಕೊಳ್ಳಬಹುದಾದ ಈ ಪುಟ್ಟ ಹೆಲಿಕಾಪ್ಟರ್ ಅಥವಾ ಮೈಕ್ರೋ ದ್ರೋಣ್ ರಕ್ಷಣಾ ಪಡೆಗೆ ಪ್ರಬಲ ಅಸ್ತ್ರವೆಂದೇ ಹೇಳಬಹುದು.
ವಿಚಕ್ಷಣ, ಕಣ್ಗಾವಲು ಮತ್ತು ಗುಪ್ತಚರ ಉದ್ದೇಶಗಳಿಗಾಗಿ ಒಳಾಂಗಣ ಮತ್ತು ಹೊರಾಂಗಣ ಕಾರ್ಯಾಚರಣೆಗಳನ್ನು ನಿರ್ವಹಿಸಬಲ್ಲ ಕಿರಿದಾದ ಮಾನವ ರಹಿತ ವೈಮಾನಿಕ ವಾಹನ (Nano UAV) ನ್ಯಾನೊ ಯುಎವಿ ಎಂದು ಈ ಬ್ಲಾಕ್ ಹಾರ್ನೆಟನ್ನು ಕರೆಯುತ್ತಾರೆ. ದೇಶದ ರಕ್ಷಣಾ ಪಡೆಗಳು ಸದ್ಯ ಈ ಉಪಕರಣವನ್ನು ಬಳಸುತ್ತಿದೆ. ಈ ಪುಟ್ಟ ದ್ರೋಣ್ ಒಳಾಂಗಣ ಅಥವಾ ಹೊರಾಂಗಣದಲ್ಲಿ ಹಾರಾಟ ನಡೆಸುತ್ತಿದ್ದರೂ, ಇದರಲ್ಲಿನ ರೆಕ್ಕೆಗಳು ಸದ್ದು ಮಾಡದೆ ಶತ್ರು ಪಾಳೇಯದಲ್ಲಿ ವಿಚಕ್ಷಣೆ ನಡೆಸುವ ರೀತಿಯಲ್ಲಿ ಡೆವಲಪ್ ಮಾಡಲಾಗಿದೆ. 2018ರಲ್ಲಿ ಭಾರತವು ರಕ್ಷಣಾ ಪಡೆಯಲ್ಲಿನ ವಿಶೇಷ ತುಕಡಿಯಾದ ರಾಷ್ಟ್ರೀಯ ಭದ್ರತಾ ಪಡೆಗಾಗಿ ಈ ಬ್ಲಾಕ್ ಹಾರ್ನೆಟ್ ಯುಎವಿಯನ್ನು ಖರೀದಿಸಿತ್ತು.
ಬ್ಲ್ಯಾಕ್ ಹಾರ್ನೆಟ್ ನ್ಯಾನೋ ಹೆಲಿಕಾಪ್ಟರ್ ಮೂಲತಃ ನಾರ್ವೆ (Norway) ರಾಷ್ಟ್ರದ ಪ್ರಾಕ್ಸ್ ಡೈನಾಮಿಕ್ಸ್ ಎಎಸ್ (Prox Dynamics AS) ಅಭಿವೃದ್ಧಿಪಡಿಸಿದ ಮಿಲಿಟರಿ ಮೈಕ್ರೋ ದ್ರೋಣ್ ಆಗಿದೆ. ಸದ್ಯ ಈ ಉಪಕರಣವನ್ನು ನಾರ್ವೆ, ಯುನೈಟೆಡ್ ಸ್ಟೇಟ್ಸ್ (United States), ಫ್ರಾನ್ಸ್ (France), ಯುನೈಟೆಡ್ ಕಿಂಗ್‌ಡಮ್ (UK), ಜರ್ಮನಿ (Germany) , ಅಲ್ಜೀರಿಯಾ (Algeria) , ಐರ್ಲೆಂಡ್ (Ireland) , ಆಸ್ಟ್ರೇಲಿಯಾ (Australia), ನೆದರ್ಲ್ಯಾಂಡ್ಸ್ (Netherlands), ಪೋಲೆಂಡ್ (Poland), ನ್ಯೂಜಿಲ್ಯಾಂಡ್ (New Zealand), ಟರ್ಕಿ (Turkey), ದಕ್ಷಿಣ ಆಫ್ರಿಕಾ (South Africa), ಉಕ್ರೇನ್ (Ukraine) ಮತ್ತು ಮೊರಾಕೊ (Morocco) ರಾಷ್ಟ್ರಗಳ ಸಶಸ್ತ್ರ ಪಡೆಗಳಿಂದ ಬಳಕೆಯಲ್ಲಿದೆ.
ಸದ್ಯ ರಷ್ಯಾ- ಉಕ್ರೇನ್ ಯುದ್ಧದಲ್ಲಿ ಉಕ್ರೇನ್ ರಾಷ್ಟ್ರವು ಬ್ಲಾಕ್ ಹಾರ್ನೆಟ್ ದ್ರೋಣ್ ಅನ್ನು ತನ್ನ ವಿರೋಧ ಪಾಳೇಯ ಕಾರ್ಯಾಚರಣೆ ಮೇಲೆ ಕಣ್ಗಾವಲು ಇಡಲು ಹಾಗೂ ಮಿಲಿಟರಿ ಕಾರ್ಯಾಚರಣೆಗೆ ಬಳಸಿಕೊಳ್ಳುತ್ತಿದೆ. ಈ ನಿಟ್ಟಿನಲ್ಲಿ ಆಧುನಿಕ ಯುದ್ಧ ಪದ್ಧತಿಯಲ್ಲಿ ಬ್ಲಾಕ್ ಹಾರ್ನೆಟ್ ಒಂದು ಗೇಮ್ ಚೇಂಜರ್ ಅಂತಾನೇ ಹೇಳಬಹುದು.
ಬ್ಲಾಕ್ ಹಾರ್ನೆಟ್ ಉತ್ಪಾದಿಸುವ ಕಂಪನಿ ಯಾವುದು? :
ಪ್ರಾಕ್ಸ್ ಡೈನಾಮಿಕ್ಸ್ ಎಎಸ್ ಕಂಪನಿಯನ್ನು 2016ರಲ್ಲಿ ಅಮೆರಿಕದ ಕಂಪನಿ ಟೆಲಿಡೈನ್ ಫ್ಲೀರ್ (Teledyne FLIR) 134 ಮಿಲಿಯನ್ ಡಾಲರ್‌ಗಳಿಗೆ ಖರೀದಿಸಿತ್ತು ಹಾಗೂ ಈಗ ಬ್ಲಾಕ್ ಹಾರ್ನೆಟ್ ಅನ್ನು ಆ ಸಂಸ್ಥೆಯೇ ಈಗ ತಯಾರಿಸುತ್ತದೆ. ಟೆಲಿಡೈನ್ ಫ್ಲಿರ್ ಕಂಪನಿಯು ಬ್ಲ್ಯಾಕ್ ಹಾರ್ನೆಟ್‌ನಲ್ಲಿ ಬಳಸಿದಂತಹ ಐಆರ್ ಕ್ಯಾಮೆರಾಗಳ ತಯಾರಿಕೆಯಲ್ಲಿ ವಿಶೇಷ ಪರಿಣಿತಿ ಹೊಂದಿದೆ.
ಮೈಕ್ರೋ ಯುಎವಿ ವಿಶೇಷತೆಯೇನು?:
ಅಂಗೈಯಗಲದೊಳಗೆ ಮುಚ್ಚಿಟ್ಟುಕೊಳ್ಳಬಹುದಾದ ಈ ಪುಟ್ಟ ಹೆಲಿಕಾಪ್ಟರ್ 10x 2.5 ಸೆಂ.ಮೀ ಅಳತೆಯನ್ನು ಹೊಂದಿದೆ. ಬ್ಯಾಟರಿಯೊಂದಿಗೆ ಈ ಉಪಕರಣ ಸುಮಾರು 16 ಗ್ರಾಮ್ ತೂಕವನ್ನು ಹೊಂದಿದೆಯಷ್ಟೆ. ಈ ನ್ಯಾನೋ ದ್ರೋಣ್ ಮೂರು ಸಣ್ಣ ಹಾಗೂ ಅಷ್ಟೇ ಪರಿಣಾಮಕಾರಿಯಾದ ಮೂರು ಕ್ಯಾಮರಾಗಳನ್ನು ಹೊಂದಿದೆ. ಒಂದು ದ್ರೋಣ್ ಹೆಲಿಕಾಪ್ಟರ್ ಮುಂಭಾಗ ಮತ್ತೊಂದು ದ್ರೋಣ್ ಕೆಳಭಾಗ ಹಾಗೂ ಮೂರನೇ ಕ್ಯಾಮರಾ ಕೆಳಗೆ 45 ಡಿಗ್ರಿ ಕೋನದಲ್ಲಿ ಅಳವಡಿಸಲಾಗಿದೆ. ಈ ದ್ರೋಣ್ ನಿಯಂತ್ರಿಸುವ ಆಪರೇಟರ್ ಗೆ, ವಿಡಿಯೋ ಮತ್ತು ಸ್ಟಿಲ್ ಇಮೇಜ್ ಗಳನ್ನು ರವಾನಿಸುವ ಸಾಮರ್ಥ್ಯವನ್ನು ಹೊಂದಿದೆ. ಈ ಬ್ಲಾಕ್ ಹಾರ್ನೆಟ್ ಮತ್ತೊಂದು ವಿಶೇಷತೆಯಂದರೆ, ಯುದ್ಧಭೂಮಿ ಅಥವಾ ಒಳಾಂಗಣ ಅಥವಾ ಹೊರಾಂಗಣ ಸ್ಥಳದಲ್ಲಿ ಕೇವಲ 20 ನಿಮಿಷಗಳಲ್ಲಿ ಬ್ಲ್ಯಾಕ್ ಹಾರ್ನೆಟ್ ಕಾರ್ಯನಿರ್ವಹಿಸಲು ಆಪರೇಟರ್‌ಗೆ ತರಬೇತಿ ನೀಡಬಹುದು.
ಸಮುದ್ರ ಮಟ್ಟದಿಂದ 10 ಸಾವಿರ ಅಡಿ ಎತ್ತರದಲ್ಲಿ ಹಾರಾಟ :
ಬ್ಲ್ಯಾಕ್ ಹಾರ್ನೆಟ್ ಪ್ಯಾಕೇಜ್ ನಲ್ಲಿ ಒಟ್ಟು ಎರಡು ಹೆಲಿಕಾಪ್ಟರ್‌ಗಳನ್ನು ಒಳಗೊಂಡಿರುತ್ತದೆ. ಈ ಮೈಕ್ರೋ ದ್ರೋಣ್ ಶೇ.90ರಷ್ಟು ಚಾರ್ಜ್ ಆಗಲು ಕೇವಲ 20 ರಿಂದ 25 ನಿಮಿಷ ಸಮಯ ಹಿಡಿಯುತ್ತದೆ. ಒಂದು ಮೈಕ್ರೋ ದ್ರೋಣ್ ರೀಚಾರ್ಜ್ ಆಗುತ್ತಿರುವಾಗ ಮತ್ತೊಂದು ಹಾರಲು ಸಿದ್ಧವಾಗಿರುತ್ತದೆ. ಈ ಪುಟ್ಟ ಯುಎವಿ ಸಾಧನ ಹಾರಾಟವು ಗಂಟೆಗೆ 21 ಕಿ.ಮೀ ವೇಗದಲ್ಲಿ ಹಾರಾಟ ನಡೆಸುತ್ತದೆ. ಅಲ್ಲದೆ ಸಮುದ್ರ ಮಟ್ಟದಿಂದ 10 ಸಾವಿರ ಅಡಿ ಮೇಲ್ಭಾಗದಲ್ಲಿ ಕಾರ್ಯಾಚರಣೆ ನಡೆಸುವ ರೀತಿಯಲ್ಲಿ ಇದನ್ನು ಸಿದ್ಧಪಡಿಸಲಾಗಿದೆ.
ಅಂದಹಾಗೆ ಪ್ರಾಕ್ಟ್ ಡೈನಮಿಕ್ಸ್ 2014ರ ಅಕ್ಟೋಬರ್ ನಲ್ಲಿ ಪಿಡಿ-100 ಬ್ಲಾಕ್ ಹಾರ್ನೆಟ್ ಆವೃತ್ತಿಯನ್ನು ರಾತ್ರಿ ದೃಷ್ಟಿ ಸಾಮರ್ಥ್ಯದೊಂದಿಗೆ ಅನಾವರಣಗೊಳಿಸಿತ್ತು. ಅಲ್ಲದೆ ಈ ಸಾಧನವು ದೀರ್ಘ-ತರಂಗ ಅತಿಗೆಂಪು (Long wave infrared)ಮತ್ತು ಡೇ ವಿಡಿಯೋ ಸಂವೇದಕಗಳೊಂದಿಗೆ 1.6 ಕಿಮೀ ವ್ಯಾಪ್ತಿಯಲ್ಲಿ ಡಿಜಿಟಲ್ ಡೇಟಾ ಲಿಂಕ್ ಮೂಲಕ ವಿಡಿಯೊ ಅಥವಾ ಹೆಚ್ಚಿನ ರೆಸಲ್ಯೂಶನ್ ಸ್ಟಿಲ್ ಚಿತ್ರಗಳನ್ನು ರವಾನಿಸುವ ಸಾಮರ್ಥ್ಯವನ್ನು ಹೊಂದಿತ್ತು. ಆದರೆ ಕಾಲ ಕಾಲಕ್ಕೆ ಇದರ ಸಾಮರ್ಥ್ಯವನ್ನು ಅಪಗ್ರೇಡ್ ಮಾಡುತ್ತಾ ಬರಲಾಗುತ್ತಿದೆ.
ಬ್ಲಾಕ್ ರೆಕಾನ್ 2025 ಇಸವಿಗೆ ಮಾರುಕಟ್ಟೆಯಲ್ಲಿ ಲಭ್ಯ :
ಐದು ವರ್ಷಗಳ ಅಭಿವೃದ್ಧಿಯ ನಂತರ 2023 ರಲ್ಲಿ ದೊಡ್ಡ ಬ್ಲ್ಯಾಕ್ ರೆಕಾನ್ ಮಾದರಿಯನ್ನು ಸಿದ್ದಪಡಿಸಲಾಯಿತು. ಬ್ಲ್ಯಾಕ್ ಹಾರ್ನೆಟ್ ಅನ್ನು ಆಧರಿಸಿ ತಯಾರಿಸಲಾದ ಬ್ಲಾಕ್ ರೆಕಾನ್, ಸೇನಾ ಸಿಬ್ಬಂದಿಗೆ ಉತ್ತಮ ಸಾಂದರ್ಭಿಕ ಅರಿವನ್ನು ನೀಡಲು ಶಸ್ತ್ರಸಜ್ಜಿತ ವಾಹನಗಳಿಂದ ಈ ಮಿನಿ ದ್ರೋಣ್ ಅನ್ನು ಕಾರ್ಯಾಚರಣೆ ನಡೆಸಲು ಸಾಧ್ಯವಾಗುವಂತೆ ವಿನ್ಯಾಸಗೊಳಿಸಲಾಗಿದೆ. ಬ್ಲ್ಯಾಕ್ ರೀಕಾನ್ ವೆಹಿಕಲ್ ರೆಕಾನೈಸೆನ್ಸ್ ಸಿಸ್ಟಮ್ (VRS) ಮೂರು ಯುಎವಿ ದ್ರೋಣ್ ಗಳನ್ನು ಒಳಗೊಂಡ, ನೆಲದ ವಾಹನದ ಚಾಸಿಸ್‌ಗೆ ಅಳವಡಿಸಿದ 80 ಕೆಜಿ ತೂಕದ ಪೆಟ್ಟಿಗೆಯಾಗಿದೆ.
ವಾಹನದ ಒಳಭಾಗದಿಂದಲೇ ಸುರಕ್ಷಿತವಾಗಿ ಈ ಸಾಧನವನ್ನು ನಿಯಂತ್ರಿಸಬಹುದು. ಪ್ರತಿ ಬ್ಲ್ಯಾಕ್ ರೆಕಾನ್ 350 ಭಾರವಾಗಿದ್ದು, 45 ನಿಮಿಷಗಳ ಕಾಲ ನಿರಂತರವಾಗಿ ಕಾರ್ಯನಿರ್ವಹಿಸುತ್ತಾ, ಉಡಾವಣಾ ವಾಹನದಿಂದ 6 ಕಿಮೀ ದೂರದ ತನಕ ಕಾರ್ಯಾಚರಣೆ ನಡೆಸುವ ರೀತಿಯಲ್ಲಿ ಬ್ಲಾಕ್ ರೆಕಾನ್ ದ್ರೋಣ್ ಅನ್ನು ತಯಾರಿಸಲಾಗಿದ್ದು, 2025ರಲ್ಲಿ ಈ ಮಾಡೆಲ್ ರಕ್ಷಣಾ ಮಾರುಕಟ್ಟೆಯಲ್ಲಿ ಲಭ್ಯವಾಗಲಿದೆ.