ಬೆಂಗಳೂರು, ನ.03 www.bengaluruwire.com : ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ಕಂದಾಯ ಇಲಾಖೆಯಲ್ಲಿ ಬೋಗಸ್ ಎ ಖಾತಾಗಳನ್ನು ಮಾಡಲಾಗುತ್ತಿದೆ ಎಂಬ ಬಗ್ಗೆ ಪಾಲಿಕೆ ಪರಿಶೀಲನಾ ಸಮಿತಿಯಿಂದ ಪರಿಶೀಲನೆ ನಡೆಯುತ್ತಿರುವ ಸಂದರ್ಭದಲ್ಲೇ ಬೆಂಗಳೂರು ವೈರ್ ನಡೆಸಿದ ತನಿಖೆಯಲ್ಲಿ ಡೂಪ್ಲಿಕೇಟ್ ಖಾತೆಗಳಿಗೆ ಸ್ವರ್ಗದಂತಿರುವ ಬೊಮ್ಮನಹಳ್ಳಿ ವಲಯದ ಯಲಚೇನಹಳ್ಳಿ ಕಂದಾಯ ಉಪವಿಭಾಗದಲ್ಲಿ ಅಧಿಕಾರಿ – ಸಿಬ್ಬಂದಿ ಸೇರಿಕೊಂಡು ಎರಡು ಅಕ್ರಮ ಎ ಖಾತೆ ಮಾಡಿರುವುದನ್ನು ದಾಖಲೆ ಸಹಿತ ಪತ್ತೆ ಹಚ್ಚಿದೆ.
ಬ್ರೋಕರ್ ಗಳ ಅಡ್ಡೆಯಾಗಿರುವ ಯಲಚೇನಹಳ್ಳಿ ಕಂದಾಯ ಉಪವಿಭಾಗದಲ್ಲಿ ಯಾವಾಗ ನೋಡಿದರೂ, ಸಾರ್ವಜನಿಕರು ದೈನಂದಿನ ಕೆಲಸ ಕಾರ್ಯಗಳಿಗಾಗಿ ಬರುವ ಸಂಖ್ಯೆಗಿಂತ ಮಧ್ಯವರ್ತಿಗಳ ಸಂಖ್ಯೆಯೇ ಹೆಚ್ಚು. ಯಲಚೇನಹಳ್ಳಿ ಉಪ ವಿಭಾಗದಲ್ಲಿ ಪ್ರಮುಖವಾಗಿ ಯಲಚೇನಹಳ್ಳಿ ವಾರ್ಡ್ ಹಾಗೂ ಕೋಣನಕುಂಟೆ ವಾರ್ಡ್ ಗಳು ಬರುತ್ತದೆ. 2007ರಲ್ಲಿ ಪಾಲಿಕೆಗೆ ನೂತನವಾಗಿ ಇಲ್ಲಿನ ಅನೇಕ ಪ್ರದೇಶಗಳು ಸೇರ್ಪಡೆಯಾಗಿದ್ದವು. ಕಂದಾಯ ಭೂಮಿಯೇ ಹೆಚ್ಚಿರುವ ಈ ಸ್ಥಳದಲ್ಲಿ ಭೂಮಿ ಬೆಲೆ ಹೆಚ್ಚಾಗಿ ಇಲ್ಲಿನ ಏರಿಯಾ ಪಾಶ್ ಆಗುತ್ತಿದ್ದಂತೆ ಎ ಖಾತೆಗೆ ಬೇಡಿಕೆ ಹೆಚ್ಚಾಗಿದೆ. ಅದೇ ರೀತಿ ಬೋಗಸ್ ಎ ಖಾತಾ ಎಂಟ್ರಿಗಳು ಹೆಚ್ಚಾಗಿದೆ. ಇದಕ್ಕೆ ತಾಜಾ ಉದಾಹರಣ ಈ ಪ್ರಕರಣವಾಗಿದೆ.
ಬೆಂಗಳೂರು ವೈರ್ ಈ ಕುರಿತಂತೆ ತನಿಖೆ ಕೈಗೊಂಡಾಗ, ಒಬ್ಬನೇ ವ್ಯಕ್ತಿಗೆ ಆತನ ಎರಡು ಸೈಟ್ ಗಳಿಗೆ ಹಿಂದಿನ ಬ್ಯಾಕ್ ಡೇಟ್ ನಲ್ಲಿ ಖಾತಾ ಪ್ರಮಾಣಪತ್ರ ಹಾಗೂ ಖಾತಾ ಎಕ್ಸ್ ಟ್ರಾಕ್ಟ್ (ಮನೆಗಳು ಮತ್ತು ಖಾಲಿ ಜಾಗಗಳ ದಾಖಲೆ ಪುಸ್ತಕ) ನೀಡಿರುವಂತೆ ನಕಲಿ ದಾಖಲೆ ಸೃಷ್ಟಿಸಲಾಗಿದೆ. ಆ ನಕಲಿ ದಾಖಲೆಯ ಅಸಲಿಯತ್ತನ್ನು ಪರಿಶೀಲಿಸದೆ 2023ರ ಆಗಸ್ಟ್ 14 ಮತ್ತು 17 ರಂದು ಯಲಚೇನಹಳ್ಳಿ ಸಹಾಯಕ ಕಂದಾಯ ಅಧಿಕಾರಿ ಸಹಿ ಹಾಕಿ ಖಾತೆದಾರರಿಗೆ ನೀಡಿರುವುದು ದಾಖಲೆಗಳಿಂದ ತಿಳಿದು ಬಂದಿದೆ.
ಯಲಚೇನಹಳ್ಳಿ ವಾರ್ಡಿನ ಕೆ.ಕೆ ನಂಜಪ್ಪ ಎಂಬುವರಿಗೆ ಸೇರಿದ 2,355 ಚದರ ಅಡಿ ವಿಸ್ತೀರ್ಣದ ಖಾತೆ ಸಂಖ್ಯೆ : 40/4 ರ ಸ್ವತ್ತಿಗೆ ಹಾಗೂ 30×40 ಅಳತೆಯ 8/39ರ ಸ್ವತ್ತಿಗೆ 31-03-2016ರಂದು ಖಾತಾ ಪ್ರಮಾಣಪತ್ರ ಹಾಗೂ ಹಾಗೂ ಖಾತಾ ಎಕ್ಸ್ ಟ್ರಾಕ್ಟ್ ಅನ್ನು ಬಿಬಿಎಂಪಿಯ ಯಲಚೇನಹಳ್ಳಿ ಕಂದಾಯ ಉಪವಿಭಾಗದಿಂದ ಹಂಚಿಕೆ ಮಾಡಿದಂತೆ ನಕಲಿ ದಾಖಲೆಗಳನ್ನು ಸೃಷ್ಟಿಸಲಾಗಿದೆ. ಕೊನೆಗೆ ಅದೇ ಆಧಾರದ ಮೇಲೆ 2023ರ ಆಗಸ್ಟ್ 14 ಮತ್ತು 17ರಂದು ಕ್ರಮವಾಗಿ ಎರಡು ದಿನಾಂಕಗಳಲ್ಲಿ ಎಆರ್ ಒ ಶ್ರೀನಿವಾಸಯ್ಯ (ಪ್ರಸ್ತುತ ನಿವೃತ್ತ) ಎಂಬುವರು ಖಾತಾ ಅಸೆಸ್ ಮೆಂಟ್ ರಿಜಿಸ್ಟರ್ ನೋಡಿದ್ದಾರೋ ಅಥವಾ ಇಲ್ಲವೋ, ಅಥವಾ ಅದನ್ನು ಪರಿಶೀಲಿಸುವ ಗೋಜಿಗೆ ಹೋಗದೆ ಕೇಸ್ ವರ್ಕರ್ ರವಿ ಕುಮಾರ್ ತಂದಿಟ್ಟ ಖಾತಾ ಪ್ರಮಾಣ ಪತ್ರ ಹಾಗೂ ಖಾತಾ ಎಕ್ಸ್ ಟ್ರಾಕ್ಟ್ ಗೆ ಕಣ್ಣುಮುಚ್ಚಿ ಸಹಿ ಹಾಕಿದ್ರಾ? ಒಟ್ಟಿನಲ್ಲಿ ಆ ದಿನಾಂಕಗಳಂದು ಕೆ.ಕೆ ನಂಜಪ್ಪ ಎಂಬುವರ ಹೆಸರಿನಲ್ಲಿ ಖಾತಾ ಸರ್ಟಿಫಿಕೇಟ್ ಮತ್ತು ಖಾತಾ ಎಕ್ಸ್ ಟ್ರಾಕ್ಟ್ ನೀಡಲಾಗಿರುವುದು ದಾಖಲೆಗಳಿಂದ ಬಹಿರಂಗವಾಗಿದೆ.
ಈ ಬಗ್ಗೆ ಬೆಂಗಳೂರು ವೈರ್ ಮತ್ತಷ್ಟು ತನಿಖೆ ಕೈಗೊಂಡಾಗ, ಕಂದಾಯ ಇಲಾಖೆಯಲ್ಲಿ ಸ್ವತ್ತಿನ ಮಾಲೀಕರ ಎ ಖಾತಾ ಮೌಲ್ಯಮಾಪನಾ ರಿಜಿಸ್ಟರ್ ನಲ್ಲಿ ವಾಲ್ಯೂಮ್-1ರ ಪುಸ್ತಕದ 94ನೇ ಪೇಜ್ ನಲ್ಲಿ 40/4 ಖಾತೆ ಸಂಖ್ಯೆ ಹಾಗೂ ಆ ಸ್ವತ್ತಿನ ಮಾಲೀಕರಾದ ಕೆ.ಕೆ.ನಂಜಪ್ಪ ಅವರ ಹೆಸರನ್ನು ನಮೂದಿಸಿ ಬಳಿಕ ಅದನ್ನು ಹೊಡೆದು ಹಾಕಲಾಗಿದೆ. ಅದೇ ರೀತಿ ವಾಲ್ಯೂಮ್-1ರ ರಿಜಿಸ್ಟರ್ ಪುಸ್ತಕದ 172 ಪೇಜ್ ನಲ್ಲಿ 8/39 ಕೆ.ಕೆ.ನಂಜಪ್ಪ ಹೆಸರನ್ನು ನಮೂದಿಸಿ ಬಳಿಕ ಅದನ್ನು ಹೊಡೆದು ಹಾಕಲಾಗಿದೆ. ಸಾಮಾನ್ಯವಾಗಿ ಒಮ್ಮೆ ಎ- ಖಾತಾ ರಿಜಿಸ್ಟರ್ ನಲ್ಲಿ ಅಧಿಕೃತವಾಗಿ ಖಾತೆ ಸಂಖ್ಯೆ, ಸ್ವತ್ತಿನ ಮಾಲೀಕರ ಹೆಸರು, ವಿಸ್ತೀರ್ಣ, ಸ್ವತ್ತಿಗೆ ಕಂದಾಯ ಬೇಡಿಕೆ, ಉಪಕರ ಮತ್ತಿತರ ಮಾಹಿತಿಗಳನ್ನು ನಮೂದಿಸಿ ಸಂಬಂಧಿಸಿದ ಎಆರ್ ಒ ತಮ್ಮ ಹೆಸರು, ಕಚೇರಿ ಸೀಲು ಮತ್ತು ದಿನಾಂಕವನ್ನು ನಮೂದಿಸುತ್ತಾರೆ. ಆದರೆ ಈ ಎರಡು ಪ್ರಕರಣಗಳಲ್ಲಿ ಕೇವಲ ಸ್ವತ್ತಿನ ಮಾಲೀಕನಾದ ಕೆಕೆ ನಂಜಪ್ಪ ಹೆಸರನ್ನಷ್ಟೇ ನಮೂದಿಸಲಾಗಿದೆ.
ಅಸೆಸ್ ಮೆಂಟ್ ರಿಜಿಸ್ಟರ್ ನಲ್ಲಿ ತಿದ್ದು- ಅಳಿಸು- ಅಂಟಿಸು ಕರಾಮತ್ತು :
ಆದರೆ ಈ ಕೆಕೆ ನಂಜಪ್ಪ ಪ್ರಕರಣದಲ್ಲಿ ಪ್ರಥಮ ದರ್ಜೆ ಸಹಾಯಕ ಹಾಗೂ ಕೇಸ್ ವರ್ಕರ್ ರವಿಕುಮಾರ್, ಸ್ವತ್ತಿನ ಮಾಲೀಕರಿಂದ ಬ್ರೋಕರ್ ಗಳ ಮೂಲಕ ಲಕ್ಷಾಂತರ ರೂ. ಹಣ ಪಡೆದು 2016ರಲ್ಲಿ ಇದೇ ಸ್ವತ್ತಿಗೆ ಖಾತಾ ಪ್ರಮಾಣಪತ್ರ, ಖಾತಾ ಎಕ್ಸ್ ಟ್ರಾಕ್ಟ್ ಇದೇ ಕಚೇರಿಯಿಂದ ನೀಡಿದಂತೆ ದಾಖಲಾತಿ ಸೃಷ್ಟಿಸಿ, ಅಕ್ರಮವಾಗಿ ಈ ಎರಡು ಸ್ವತ್ತಿನಲ್ಲಿ ಕೆಕೆ ನಂಜಪ್ಪ ಎಂಬ ಮಾಲೀಕರ ಹೆಸರನ್ನು ನಮೂದಿಸಿದ್ದಾರೆ. ಈ ವಿಚಾರ ಕೊನೆಗೆ ಸಂಬಂಧಿಸಿದ ಮೌಲ್ಯಮಾಪಕ ಗೋವಿಂದಪ್ಪ ಎಂಬುವರಿಗೆ ವಿಷಯ ತಿಳಿದು ಇಬ್ಬರಿಗೂ ಜಗಳವಾಗಿ, ಇದೇ ರಿಜಿಸ್ಟರ್ ಬುಕ್ ನಲ್ಲಿ ಕೆಕೆ ನಂಜಪ್ಪ ಎಂಬುವರ ಹೆಸರನ್ನು ಪೆನ್ನಿನಿಂದ ಹೊಡೆದು ಹಾಕಿದ್ದಾರೆ ಎಂದು ಗೊತ್ತಾಗಿದೆ.
ಬೆಂಗಳೂರು ವೈರ್ ಗೆ ಈ ವಿಚಾರ ತಿಳಿಯುತ್ತಿದ್ದಂತೆ ಎಚ್ಚೆತ್ತು ಕೊಂಡ ದುಷ್ಟ ಪಟಾಲಮ್, ಒಂದೊಮ್ಮೆ ಯಾರಾದರೂ ಮೇಲಧಿಕಾರಿಗಳು ತಮ್ಮನ್ನ ಪ್ರಶ್ನಿಸಿದರೆ, ಸಬೂಬು ಹೇಳಲು, 2016ರ ನಕಲಿ ಖಾತಾ ಎಕ್ಸ್ ಟ್ರಾಕ್ಟ್ ಅನ್ನು ಈ ಹಿಂದೆಯೇ ನೀಡಲಾಗಿತ್ತು ಎಂದು ತಿಳಿಸಲೆಂದು ಇದೇ ರಿಜಿಸ್ಟರ್ ನಲ್ಲಿ ಆ ಖಾತಾ ಎಕ್ಸ್ ಟ್ರಾಕ್ಟ್ ಅಂಟಿಸಿದ್ದಾರೆ ಎಂದು ತಿಳಿದು ಬಂದಿದೆ. ಈ ಸುದ್ದಿ ತಿಳಿದ ಬಳಿಕ ಆ ದಾಖಲೆಯನ್ನು ಕಿತ್ತು ಹಾಕಿದರೂ ಆಶ್ಚರ್ಯವಿಲ್ಲ ಬಿಡಿ.
ಖಾತಾ ಪ್ರಮಾಣಪತ್ರ ನೀಡಿ ತಪ್ಪಾಗಿದೆ ಎಂದ ಕೆ.ಶ್ರೀನಿವಾಸ್ :
ಈ ಡೂಪ್ಲಿಕೇಟ್ ಖಾತಾ ನಮೂದಿನ ಬಗ್ಗೆ ನಿರ್ಗಮಿತ ಎಆರ್ ಒ ಕೆ.ಶ್ರೀನಿವಾಸಯ್ಯ ಅವರನ್ನು ಪ್ರಶ್ನಿಸಿದಾಗ, “ಕೆ.ಕೆ.ನಂಜಪ್ಪ ಎಂಬುವರ ಸ್ವತ್ತಿಗೆ ಎ- ಖಾತಾ ರಿಜಿಸ್ಟರ್ ನಲ್ಲಿ ಅಕ್ರಮವಾಗಿ ನಮೂದು ಮಾಡಿರುವುದು ತಪ್ಪು. ಆನಂತರ ಆ ಹೆಸರನ್ನು ಹೊಡೆದು ಹಾಕಲಾಗಿದೆ. ಈ ಬಗ್ಗೆ ತಾವು ಪರಿಶೀಲನೆ ನಡೆಸದೆ ಈ ವರ್ಷದ ಆಗಸ್ಟ್ 14 ಮತ್ತು 17ರಂದು ಖಾತಾ ಪ್ರಮಾಣಪತ್ರ ಹಾಗೂ ಖಾತಾ ಎಕ್ಸ್ ಟ್ರಾಕ್ಟ್ ಸಹಿ ಹಾಕಿ ನೀಡಿದ್ದೇನೆ. ಈ ನಕಲಿ ಖಾತಾ ತಾವು ಮಾಡಿಲ್ಲ” ಎಂದಷ್ಟೇ ಹೇಳಿದ್ದಾರೆ.
ನಿವೃತ್ತಿ ವಯಸ್ಸು ಬರೋ ತನಕವಷ್ಟು ದಿನವೂ ಪಾಲಿಕೆಯಲ್ಲಿ ಕಂದಾಯ ಇಲಾಖೆಯಲ್ಲಿ ಸೇವೆ ಸಲ್ಲಿಸಿದ ನಿರ್ಗಮಿತ ಕೆ.ಶ್ರೀನಿವಾಸಯ್ಯ ಅವರಿಗೆ ಡೂಪ್ಲಿಕೇಟ್ ಖಾತೆ ಯಾವುದು? ಅದು ಹೇಗೆ ಮಾಡ್ತಾರೆ? ಎಂಬುದರ ಅರಿವಿಲ್ಲವೇನೋ ಪಾಪ. ಖಾತಾ ಪ್ರಮಾಣಪತ್ರ ಮತ್ತು ಖಾತಾ ಎಕ್ಸ್ ಟ್ರಾಕ್ಟ್ ಸೈನ್ ಮಾಡಿ ವಿತರಿಸುವಾಗ ಸಾಕಷ್ಟು ಅನುಭವಿರುವ ಅಧಿಕಾರಿಗೆ, ಕನಿಷ್ಠ ಪರಿಶೀಲಿಸುವ ಗೋಜಿಗೆ ಹೋಗದಿರುವುದು ಸಾಕಷ್ಟು ಅನುಮಾನಕ್ಕೆ ಕಾರಣವಾಗಿದೆ. ಇದು ಅವರ ಕರ್ತವ್ಯ ಲೋಪವನ್ನು ಎತ್ತಿ ತೋರಿಸುತ್ತದೆ.
ಕಂದಾಯ ಡಿಸಿ ಡಿ.ಕೆ.ಬಾಬು ಅವರಿಗೆ ದಾಖಲೆ ಪರಿಶೀಲನೆಗೆ ಟೈಮ್ ಕೂಡಿ ಬಂದಿಲ್ಲ :
ಈ ಎರಡು ಪ್ರಕರಣಗಳ ಬಗ್ಗೆ ಏನು ಕ್ರಮ ಕೈಗೊಳ್ಳುವಿರಿ ಎಂದು ಬೊಮ್ಮನಹಳ್ಳಿ ಕಂದಾಯ ಉಪ ಆಯುಕ್ತ ಡಿ.ಕೆ.ಬಾಬು ಅವರನ್ನು ಬೆಂಗಳೂರು ವೈರ್ ಸಂಪರ್ಕಿಸಿದಾಗ, “ಯಲಚೇನಹಳ್ಳಿ ಉಪವಿಭಾಗದಲ್ಲಿ ಅಕ್ರಮವಾಗಿ ಎ-ಖಾತಾ ಮಾಡಿಕೊಡಲಾಗಿದೆ ಎಂಬುದರ ವಿಚಾರದ ಬಗ್ಗೆ ಸ್ಥಳಕ್ಕೆ ಹೋಗಿ ದಾಖಲೆ ಪರಿಶೀಲಿಸಿ ತಿಳಿಸುತ್ತೇನೆ” ಎಂದು ಹೇಳಿದ ಆ ಅಧಿಕಾರಿ ಈ ತನಕ ಕ್ರಮ ಕೈಗೊಂಡಿಲ್ಲ. ಬೋಗಸ್ ಖಾತೆಗಳು ಮತ್ತು ಬ್ರೋಕರ್ ಗಳ ಅಡ್ಡವಾಗಿರುವ ಸ್ಥಳದಲ್ಲಿ ಇದೆಲ್ಲಾ ಕಾಮನ್ ಅಂತ ಸುಮ್ಮನಾಗಿರಬೇಕು. ಈ ಯಲಚೇನಹಳ್ಳಿ ಬಿಬಿಎಂಪಿ ಕಚೇರಿಯಲ್ಲಿ ಬ್ರೋಕರ್ ಗಳ ಹಾವಳಿ ಮತ್ತು ಪ್ರಭಾವ ಎಷ್ಟಿದೆ ಎಂದರೆ, ಇವರು ಬಂದರೆ ಇಲ್ಲಿ ರಾಜ ಮರ್ಯಾದೆ, ಕೂರಲು ಪ್ರತ್ಯೇಕ ಚೇರ್, ಯಾವುದೇ ಮುಲಾಜಿಲ್ಲದೆ ಯಾವಾಗ ಬೇಕಾದರೂ ಖಾತಾ ಅಸೆಸ್ ಮೆಂಟ್ ರಿಜಿಸ್ಟರ್ ಚೆಕ್ ಮಾಡಿ ನೋಡುವ ಸವಲತ್ತುಗಳಿವೆ ಎಂದು ಸಾರ್ವಜನಿಕರು ದೂರಿದ್ದಾರೆ.
ಡೂಪ್ಲಿಕೇಟ್ ಖಾತಾ ಮಾಡಿಸಿದಲ್ಲಿ ತೊಂದರೆ ತಪ್ಪಿದ್ದಲ್ಲ :
ನಗರದಾದ್ಯಂತ 19 ಲಕ್ಷಕ್ಕೂ ಹೆಚ್ಚು ಸ್ವತ್ತುಗಳು ಪಾಲಿಕೆ ವ್ಯಾಪ್ತಿಯಲ್ಲಿದೆ. ಬಿ –ಖಾತಾ ಸೈಟ್ ಅಥವಾ ಆಸ್ತಿಗಳೆಂದರೆ ಬ್ಯಾಂಕಿನಲ್ಲಿ ಸರಿಯಾಗಿ ಸಾಲ ಸಿಗುವುದಿಲ್ಲ ಹಾಗೂ ಆ ಸ್ವತ್ತಿನ ಮೌಲ್ಯವು ಎ-ಖಾತಾ ಸ್ವತ್ತಿಗಿಂತ ಕಡಿಮೆಯಿರುತ್ತದೆ. ಹೀಗಾಗಿ ಸ್ವತ್ತಿನ ಮಾಲೀಕರು ಬ್ರೋಕರ್ ಹಾಗೂ ಭ್ರಷ್ಟ ಕಂದಾಯ ಅಧಿಕಾರಿಗಳ ಮೊರೆ ಹೋಗಿ ಒಂದೊಂದು ಖಾತೆಗೂ ಲಕ್ಷಾಂತರ ರೂಪಾಯಿ ಕರ್ಚು ಮಾಡಿ ಎ-ಖಾತಾ ಎಂಬ ಬೋಗಸ್ ಸುಳಿಯಲ್ಲಿ ಸಿಲುಕಿಕೊಳ್ಳುತ್ತಿದ್ದಾರೆ. ಒಂದೊಮ್ಮೆ ಪಾಲಿಕೆಯು ಸಂಪೂರ್ಣವಾಗಿ ಇಂತಹ ಅಕ್ರಮಗಳನ್ನು ಪತ್ತೆ ಹಚ್ಚಿ ಎ- ಖಾತೆಯಲ್ಲಿ ಡೂಪ್ಲಿಕೇಟ್ ಎಂಟ್ರಿಗಳನ್ನು ಬಿ- ವಹಿಗೆ ಪುನಃ ವರ್ಗಾಯಿಸಿದಲ್ಲಿ, ಲಕ್ಷಾಂತರ ರೂಪಾಯಿ ಕೊಟ್ಟು ಎ-ಖಾತಾ ಮಾಡಿಸಿಕೊಂಡವರು ಸಿಡಿದೆದ್ದು, ಕೋರ್ಟ್, ಪ್ರತಿಭಟನೆ, ಹೋರಾಟ ಎಂಬುದರತ್ತ ಮುಖ ಮಾಡದಿದ್ದರೆ ಆಶ್ಚರ್ಯವಿಲ್ಲ.
ಮುನೀಷ್ ಮೌದ್ಗಿಲ್ ಈ ಬಗ್ಗೆ ಕ್ರಮ ಕೈಗೊಳ್ತಾರಾ? :
ಎ- ಖಾತೆ ಆಸೆಗಾಗಿ ಇತ್ತ ಲಕ್ಷಾಂತರ ರೂಪಾಯಿ ಹಣ ಕಳೆದು ಕೊಂಡಿದ್ದಾರೆ ಎನ್ನಲಾದ ಕೆಕೆ ನಂಜಪ್ಪನವರಿಗೆ ಎಫ್ ಡಿಎ ರವಿ ಕುಮಾರ್ ಮತ್ತು ಕಂದಾಯ ಮೌಲ್ಯ ಮಾಪಕ ಗೋವಿಂದಪ್ಪನವರ ನಡುವಿನ ಜಗಳದಲ್ಲಿ ಹಾಗೂ ನಿರ್ಗಮಿತ ಎಆರ್ ಒ ಕೆ.ಶ್ರೀನಿವಾಸಯ್ಯ ಅವರ ಕರ್ತವ್ಯ ಲೋಪ ಆ ಕಡೆ ಹಣ ಮತ್ತು ಈ ಕಡೆ ಖಾತೆಯೂ ಇಲ್ಲದೆ ನರಳುವ ಪರಿಸ್ಥಿತಿ. ಇದು ಯಲಚೇನಹಳ್ಳಿ ಸಹಾಯಕ ಕಂದಾಯ ಅಧಿಕಾರಿಗಳ ಕಚೇರಿ ಬೋಗಸ್ ಖಾತೆಗೆ ಹಿಡಿದ ಕೈಗನ್ನಡಿ. ಈ ಪ್ರಕರಣದ ವಿಚಾರದಲ್ಲಿ ಇತ್ತೀಚೆಗಷ್ಟೇ ಬಿಬಿಎಂಪಿಯ ಕಂದಾಯ ವಿಭಾಗಕ್ಕೆ ವಿಶೇಷ ಆಯುಕ್ತರಾಗಿ ಬಂದಿರುವ ಖಡಕ್ ಅಧಿಕಾರಿ ಮುನೀಷ್ ಮೌದ್ಗಿಲ್ ತುರ್ತಾಗಿ ತನಿಖೆಗೆ ಆದೇಶಿಸಿ ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳುವರಾ ಎಂದು ಕಾದು ನೋಡಬೇಕಾಗಿದೆ.