ಮೈಸೂರು, ಅ.24 www.bengaluruwire.com : ಮೈಸೂರು ದಸರಾದ ಕೇಂದ್ರ ಬಿಂದುವಾದ ಜಂಬೂ ಸವಾರಿ ಇಂದು ನಡೆಯಲಿದೆ. 414ನೇ ನಾಡಹಬ್ಬ ದಸರಾದ ಕೊನೆಯ ದಿನವಾದ ವಿಜಯದಶಮಿಯಂದು ಜಂಬೂಸವಾರಿ ನೇರಪ್ರಸಾರ ನಿಮ್ಮ ಬೆಂಗಳೂರು ವೈರ್ ಮೂಲಕ ಕಣ್ತುಂಬಿಕೊಳ್ಳಬಹುದು.
ಈಗಾಗಲೇ ಅರಮನೆಯ ಬಲರಾಮ ದ್ವಾರದಲ್ಲಿ ಮಧ್ಯಾಹ್ನ 1.46ರಿಂದ 2.08ರೊಳಗೆ ನಂದಿಧ್ವಜಕ್ಕೆ ಪೂಜೆ ನೆರವೇರಿತು.
ಸಂಜೆ 4.40ರಿಂದ 5 ಗಂಟೆ ನಡುವೆ ಸಲ್ಲುವ ಶುಭ ಲಗ್ನದಲ್ಲಿ ಚಿನ್ನದ ಅಂಬಾರಿಯ ಜಂಬೂ ಸವಾರಿಗೆ ಪುಷ್ಪಾರ್ಚನೆ ಮೂಲಕ ಮುಖ್ಯಮಂತ್ರಿ ಸಿದ್ದರಾಮಯ್ಯ ಚಾಲನೆ ನೀಡಲಿದ್ದಾರೆ.
ಇನ್ನು ವಿಶ್ವವಿಖ್ಯಾತ ದಸರಾ ಜಂಬೂಸವಾರಿಯಲ್ಲಿ ಸತತ ಮೂರು ಬಾರಿ 750 ಕೆ.ಜಿ. ಚಿನ್ನದ ಅಂಬಾರಿ ಹೊತ್ತು ಹ್ಯಾಟ್ರಿಕ್ ಸಾಧಿಸಿರುವ ಅಭಿಮನ್ಯು ಆನೆ ಈಗ 4ನೇ ಬಾರಿಗೆ ಅಂಬಾರಿ ಹೊತ್ತು ಸಾಗಲಿದೆ. ಈ ಆನೆಯು ರಾಜಮಾರ್ಗದಲ್ಲಿ ಸಾಗಲು 14 ಇತರ ಆನೆಗಳು ಸಹ ಜೊತೆಯಾಗಲಿದೆ. ಈ ಅಮೋಘ ಕ್ಷಣಗಳನ್ನು ಕಣ್ತುಂಬಿಕೊಳ್ಳಲು ಲಕ್ಷಾಂತರ ಜನ ಕಾತುರದಿಂದ ಕಾಯುತ್ತಿದ್ದಾರೆ. ರಾಜ್ಯ ಹೆಮ್ಮೆಯ ಚಂದನ ಟಿವಿಯಲ್ಲಿ ಜಂಬೂಸವಾರಿಯ ನೇರಪ್ರಸಾರದ ಲಿಂಕ್ ನಿಮ್ಮ ಬೆಂಗಳೂರು ವೈರ್ ನಲ್ಲಿ ಕಾಣಬಹುದು.
ದಸರಾ ಜಂಬೂಸವಾರಿಗೆ ಮೆರಗು ನೀಡಲು 36 ವಿವಿಧ ರೀತಿಯ ಸ್ತಬ್ಧಚಿತ್ರಗಳು ಕೂಡ ಸಾಗಲಿವೆ. ರಾಜ್ಯದ 31 ಜಿಲ್ಲಾ ಪಂಚಾಯಿತಿಗಳು ಹಾಗೂ 5 ವಿವಿಧ ಇಲಾಖೆಯ ಸ್ತಬ್ಧಚಿತ್ರ ಸೇರಿದಂತೆ ಒಟ್ಟು 36 ಟ್ಯಾಬ್ಲೋಗಳು ಪ್ರದರ್ಶನ ನೀಡಲು ಅಣಿಯಾಗಿವೆ. ಚಾಮುಂಡೇಶ್ವರಿ ವಿದ್ಯುತ್ ಸರಬರಾಜು ನಿಗಮವು ರಾಜ್ಯ ಸರಗಕಾರದ ಗೃಹಜ್ಯೋತಿ ಸ್ತಬ್ಧಚಿತ್ರ ಪ್ರದರ್ಶನ ಮಾಡಲಿದ್ದರೆ, ಕೃಷಿ ಪಂಪ್ ಸೆಟ್ ಗಳಿಕೆ ಸೋಲಾರ್ ವಿದ್ಯುತ್ ಬಳಕೆ ಕುರಿತ ಟ್ಯಾಬ್ಲೊಗಳು ಮೆರವಣಿಗೆಯಲ್ಲಿ ಸಾಗಲಿವೆ.
ಇದಕ್ಕೂ ಮುನ್ನ ಮಂಗಳವಾರ ಬೆಳಗ್ಗೆ, ತಮ್ಮ ನಿವಾಸದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿಕನ್ನಡ ನಾಡಿನ ಜನರಿಗೆ ದಸರಾ ಮಹೋತ್ಸವ ವಿಜಯದಶಮಿಯ ಶುಭಾಶಯಗಳನ್ನು ಕೋರಿದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ರಾಜ್ಯದಲ್ಲಿ ಮಳೆ ಬೆಳೆಯಾಗಿ, ರಾಜ್ಯ ಸುಭೀಕ್ಷವಾಗಲಿ ಎಂದು ಚಾಮುಂಡೇಶ್ವರಿ ತಾಯಿಯನ್ನು ಪ್ರಾರ್ಥಿಸುವುದಾಗಿ ತಿಳಿಸಿದರು.
ಜಂಬೂಸವಾರಿಯ ಅಂಬಾರಿ ಮೆರವಣಿಗೆ ಪ್ರಾರಂಭವಾಗಲಿದೆ. ಮೆರವಣಿಗೆ ಬನ್ನಿಮಂಟಪಕ್ಕೆ ತಲುಪಿದ ನಂತರ ಪಂಜಿನ ಮೆರವಣಿಗೆ ರಾತ್ರಿ 8 ರವರೆಗೆ ನಡೆಯಲಿದೆ. ಮಳೆಯ ಅಭಾವ, ವಿದ್ಯುತ್ ಕೊರತೆಯಿಂದ ರೈತರಿಗೆ ತೊಂದರೆಯಾಗಿದೆ. ರಾಜ್ಯದಲ್ಲಿ ಮಳೆಯಾಗಿ, ರೈತರು ಬೆಳೆದ ಬೆಳೆಗಳು ಉಳಿಯುವಂತಾಗಲಿ ಎಂದು ಹಾರೈಸಿದರು.